ಪಕ್ಷಕ್ಕಿಂತ ರಾಷ್ಟ್ರೀಯ ಭದ್ರತೆ ದೊಡ್ಡದು’ ಎಂದಿದ್ದ ಶಶಿ ತರೂರ್ ಅವರನ್ನು ಕಾಂಗ್ರೆಸ್ ಸದಸ್ಯರೆಂದು ಪರಿಗಣಿಸುವುದಿಲ್ಲ ಎಂದಿದ್ದ ಕೇರಳದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಕೆ. ಮುರಳೀಧರನ್ ಹೇಳಿಕೆಗೆ ತಿರುಗೇಟು ನೀಡಿರುವ ತರೂರ್, ‘ಪಕ್ಷದಲ್ಲಿ ಅವರ ಸ್ಥಾನವಾದರೂ ಏನು’ ಎಂದು ಕೇಳಿದ್ದಾರೆ.
ನವದೆಹಲಿ: ‘ಪಕ್ಷಕ್ಕಿಂತ ರಾಷ್ಟ್ರೀಯ ಭದ್ರತೆ ದೊಡ್ಡದು’ ಎಂದಿದ್ದ ಶಶಿ ತರೂರ್ ಅವರನ್ನು ಕಾಂಗ್ರೆಸ್ ಸದಸ್ಯರೆಂದು ಪರಿಗಣಿಸುವುದಿಲ್ಲ ಎಂದಿದ್ದ ಕೇರಳದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಕೆ. ಮುರಳೀಧರನ್ ಹೇಳಿಕೆಗೆ ತಿರುಗೇಟು ನೀಡಿರುವ ತರೂರ್, ‘ಪಕ್ಷದಲ್ಲಿ ಅವರ ಸ್ಥಾನವಾದರೂ ಏನು’ ಎಂದು ಕೇಳಿದ್ದಾರೆ.
‘ತರೂರ್ ತಮ್ಮ ನಿಲುವನ್ನು ಬದಲಾಯಿಸಿಕೊಳ್ಳುವ ತನಕ ಅವರನ್ನು ನಮ್ಮವರಲ್ಲಿ ಒಬ್ಬರೆಂದು ಪರಿಗಣಿಸುವುದಿಲ್ಲ. ಜತೆಗೆ, ತಿರುವನಂತಪುರಂನಲ್ಲಿ ನಡೆಯುವ ಪಕ್ಷದ ಕಾರ್ಯಕ್ರಮಗಳಿಗೂ ಆಹ್ವಾನಿಸುವುದಿಲ್ಲ’ ಎಂದು ಮುರಳೀಧರನ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ತರೂರ್, ‘ಹೀಗೆ ಹೇಳುವವರು ಒಂದು ಆಧಾರವನ್ನಿಟ್ಟುಕೊಂಡು ಮಾತಾಡಬೇಕು. ಯಾರವರು? ಪಕ್ಷದಲ್ಲಿ ಅವರ ಸ್ಥಾನವೇನು? ನನಗದು ತಿಳಿಯಬೇಕು’ ಎಂದು ವ್ಯಂಗ್ಯವಾಗಿ ನುಡಿದಿದ್ದಾರೆ.
ರಾಷ್ಟ್ರೀಯ ಭದ್ರತೆಗೆ ಆದ್ಯತೆ ನೀಡಬೇಕು’
ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರದ ನಡೆಗಳನ್ನು ಬೆಂಬಲಿಸುತ್ತಿದ್ದ ಕಾರಣಕ್ಕೆ ತಮಗೆ ಪಕ್ಷನಿಷ್ಠೆಯ ಪಾಠ ಹೇಳಿದ ಸ್ವಪಕ್ಷದ ನಾಯಕರಿಗೆ ಕಾಂಗ್ರೆಸ್ ಸಂಸದ ಶಶಿ ತರೂರ್, ‘ರಾಜಕೀಯ ಪಕ್ಷಕ್ಕಿಂತ ರಾಷ್ಟ್ರೀಯ ಭದ್ರತೆಗೆ ಆದ್ಯತೆ ನೀಡಬೇಕು’ ಎಂದು ತಿರುಗೇಟು ನೀಡಿದ್ದಾರೆ.
ಕೇರಳದ ಕೊಚ್ಚಿಯಲ್ಲಿ ಏರ್ಪಡಿಸಲಾಗಿದ್ದ ಸಂವಾದದಲ್ಲಿ ತರೂರ್ ಮತ್ತು ಕಾಂಗ್ರೆಸ್ ನಡುವಿನ ಸಂಬಂಧದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ, ‘ಒಂದು ಪಕ್ಷದಲ್ಲಿ ಗುರುತಿಸಕೊಂಡಾಗಲೂ ನಮಗೆ ನಮ್ಮದೇ ಆದ ಕೆಲ ಮೌಲ್ಯಗಳು ಮತ್ತು ನಂಬಿಕೆಗಳು ಇರುತ್ತವೆ. ಆದರೆ ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ನಾವು ಇತರ ಪಕ್ಷಗಳೊಂದಿಗೆ ಸಹಕರಿಸಬೇಕು’ ಎಂದರು.
ಇದೇ ವೇಳೆ ಕಾಂಗ್ರೆಸ್‌ಗೂ ಪರೋಕ್ಷವಾಗಿ ಬಿಸಿ ಮುಟ್ಟಿಸಿ, ‘ಕೆಲವೊಮ್ಮೆ ನಮ್ಮ ಪಕ್ಷನಿಷ್ಠಯನ್ನು ಪ್ರಶ್ನಿಸಲಾಗುತ್ತದೆ. ಆದರೆ ನನ್ನ ಪ್ರಕಾರ ದೇಶ ಮೊದಲು. ಪಕ್ಷಗಳಿರುವುದು ದೇಶವನ್ನು ಉತ್ತಮಗೊಳಿಸಲು. ನಾವು ಯಾವ ಪಕ್ಷದಲ್ಲಿದ್ದರೂ, ಗುರಿ ಮಾತ್ರ ಭಾರತದ ಉದ್ಧಾರವಾಗಿರಬೇಕು’ ಎಂದು ಹೇಳಿದ್ದಾರೆ.
ನದಿಯಲ್ಲಿ ವರದಿ ವೇಳೆ ಬಾಲಕಿ ಶವದ ಮೇಲೆ ಕಾಲಿಟ್ಟ ಪತ್ರಕರ್ತ!
ಬ್ರೆಜಿಲಿಯಾ: ನದಿಯಲ್ಲಿ ಬಾಲಕಿ ಮುಳುಗಿರುವ ಬಗ್ಗೆ ನೀರಿಗಿಳಿದು ವರದಿ ಮಾಡುವಾಗ ಆಕಸ್ಮಿಕವಾಗಿ ವರದಿಗಾರ ಹೆಣದ ಮೇಲೆಯೇ ಕಾಲಿಟ್ಟ ಆಘಾತಕಾರಿ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ರೈಯಿಸ್ಸಾ ಎಂಬ 13 ವರ್ಷದ ಬಾಲಕಿ ನದಿಯಲ್ಲಿ ಈಜಾಡುತ್ತಿರುವಾಗ ಮುಳುಗಿ ಕಾಣೆಯಾಗಿದ್ದಳು. ಈ ಘಟನೆಗೆ ಸಂಬಂಧಿಸಿದಂತೆ ಲೆನಿಲ್ಡೋ ಫ್ರಾಜೋ ಎಂಬ ವರದಿಗಾರ ನದಿಗೆ ಇಳಿದು ನೀರಿನ ಆಳ ಮತ್ತು ಸೆಳೆತದ ಬಗ್ಗೆ ವರದಿ ಮಾಡುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ನದಿಯಿಂದ ತಟ್ಟನೆ ಮೇಲೆದ್ದು, ‘ನಾನು ಯಾವುದೋ ದೇಹದ ಮೇಲೆ ಕಾಲಿಟ್ಟೆ. ಅದು ಬಾಲಕಿಯ ದೇಹವೇ ಇರಬಹುದು’ ಎಂದು ವರದಿ ಮಾಡಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ರಕ್ಷಣಾ ಸಿಬ್ಬಂದಿ ಮತ್ತೆ ನದಿಗಿಳಿದಿದ್ದಾರೆ. ಆಶ್ಚರ್ಯವೆಂಬಂತೆ ವರದಿಗಾರ ನಿಂತ ಸ್ಥಳದಲ್ಲಿಯೇ ದೇಹ ಪತ್ತೆಯಾಗಿದೆ.
ಮೈಂಡ್ ರೀಡರ್ ಸುಹಾನಿ ಶಾಗೆ ಜಾದೂಗಾರರ ಆಸ್ಕರ್ ಪ್ರಶಸ್ತಿ ಪ್ರಕಟ
ನವದೆಹಲಿ: ಎದುರಿಗಿರುವವರ ಮನಸ್ಸಿನಲ್ಲಿರುವುದನ್ನು ಸ್ಪಷ್ಟವಾಗಿ ಪತ್ತೆ ಮಾಡಿ ಅಚ್ಚರಿ ಮೂಡಿಸುವಲ್ಲಿ ಪರಿಣಿತರಾಗಿರುವ ಮೈಂಡ್ ರೀಡರ್ ಸುಹಾನಿ ಶಾ ಅವರಿಗೆ ‘ಬೆಸ್ಟ್ ಮ್ಯಾಜಿಕ್ ಕ್ರಿಯೇಟರ’ ಪ್ರಶಸ್ತಿ ಒಲಿದಿದೆ. ಇದನ್ನು ಪಡೆದ ಮೊದಲ ಭಾರತ ಪ್ರಜೆ ಎಂಬ ಖ್ಯಾತಿಗೆ ಶಾ ಪಾತ್ರರಾಗಿದ್ದಾರೆ. ಅಂತಾರಾಷ್ಟ್ರೀಯ ಮ್ಯಾಜಿಕ್ ಸೊಸೈಟೀಸ್ ಒಕ್ಕೂಟ(ಎಫ್‌ಐಎಸ್‌ಎಂ) ಆಯೋಜಿಸಿದ್ದ ಸ್ಪರ್ಧೆಯಲ್ಲಿ, ಅಪರಿಚಿತರ ಫೋನ್ ಪಾಸ್‌ವರ್ಡ್, ಕ್ರಶ್‌ಗಳನ್ನು ನಿಖರವಾಗಿ ಗುರುತಿಸುವ ಮೂಲಕ, ಸುಹಾನಿ ಅವರು ಜಾದೂಗಾರರ ಆಸ್ಕರ್ ಎಂದೇ ಕರೆಯಲಾಗುವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಶಾ ಅವರು ರಾಜಸ್ಥಾನದ ಉದಯಪುರ ಮೂಲದವರು.
