ಕಳೆದ 2023-24ರಿಂದ 2025-26 ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾದ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನದಲ್ಲಿ ಐದು ಗ್ಯಾರಂಟಿ ಯೋಜನೆಗಳಿಗೆ 24,832.18 ಕೋಟಿ ರು. ವೆಚ್ಚ ಮಾಡಿದೆ ಎಂದು ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ವಿಧಾನ ಪರಿಷತ್ (ಡಿ.13): ರಾಜ್ಯ ಸರ್ಕಾರ ಕಳೆದ 2023-24ರಿಂದ 2025-26 ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾದ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನದಲ್ಲಿ ಐದು ಗ್ಯಾರಂಟಿ ಯೋಜನೆಗಳಿಗೆ 24,832.18 ಕೋಟಿ ರು. ವೆಚ್ಚ ಮಾಡಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ. ಬಿಜೆಪಿಯ ಹೇಮಲತಾ ನಾಯಕ್ ಅವರು ‘ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಡಾ. ಬಾಬು ಜಗಜೀವನ ರಾಮ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ 2023-24ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಹಣ ಬಿಡುಗಡೆ ಮಾಡಿಲ್ಲ. ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಭೂ ಒಡೆತನ ಅಡಿ ಕೇವಲ 3 ಸಾಧನೆ ಮಾಡಿದೆ. ಮೈಕ್ರೊ ಕ್ರೆಡಿಟ್ ವಿಷಯದಲ್ಲಿ ಬಹುತೇಕ ನಿಗಮಗಳು ಸಾಧನೆ ಸರಿಯಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿರುವ ಅವರು, ‘2025-26ನೇ ಸಾಲಿನಲ್ಲಿ 23,35,197 ಪರಿಶಿಷ್ಟ ಜಾತಿ, 9,14,025 ಪ.ಪಂಗಡದವರು ಗೃಹ ಲಕ್ಷ್ಮೀ ಫಲಾನುಭವಿಗಳಾಗಿದ್ದಾರೆ. ಅನ್ನ ಭಾಗ್ಯದಡಿ ಪ.ಜಾತಿಯ 65,54,530, ಪ.ಪಂ.ನ 28,75,924, ಯುವ ನಿಧಿಗೆ ಪ.ಜಾತಿಯ 42,872, ಪ.ಪಂ.ದ 17,566 ಫಲಾನುಭವಿಗಳಿದ್ದಾರೆ. ಗೃಹ ಜ್ಯೋತಿ ಮತ್ತು ಶಕ್ತಿ ಫಲಾನುಭವಿಗಳ ಅಂಕಿ-ಅಂಶಕ್ಕಾಗಿ ಇಂಧನ ಹಾಗೂ ಸಾರಿಗೆ ಇಲಾಖೆಯನ್ನು ಕೋರಲಾಗಿದೆ ಎಂದು ಸಚಿವರು ತಿಳಿಸಿದರು. ಈ ಮಧ್ಯ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತಿತರರು ವಿಷಯ ಗಂಭೀರವಾಗಿರುವುದರಿಂದ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಅದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಒಪ್ಪಿದರು.
ಅರಣ್ಯ ಹಕ್ಕು ತೊಂದರೆ ಕುರಿತು ಸದನದಲ್ಲಿ ಶಾಸಕ ಹೆಬ್ಬಾರ್ ಚರ್ಚೆ
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಹಕ್ಕು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿರುವ ಲಕ್ಷಾಂತರ ಜನರು ಅರಣ್ಯ ಹಕ್ಕುಗಳ ಮಂಜೂರಾತಿ ಪಟ್ಟಿ ಪಡೆಯುವಲ್ಲಿ ಎದುರಿಸುತ್ತಿರುವ ತೊಂದರೆ ಕುರಿತು ಶಾಸಕ ಶಿವರಾಮ ಹೆಬ್ಬಾರ್ ಅವರು ಗುರುವಾರ ಸದನದ ಗಮನ ಸೆಳೆದರು. ವಿಧಾನಸಭೆಯ ಕಲಾಪದ ಪ್ರಶ್ನೋತ್ತರ ಸಂದರ್ಭದಲ್ಲಿ ಈ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕಾನೂನು ಅನುಕೂಲಕರವಾಗಿದ್ದರೂ ಅಧಿಕಾರಿಗಳ ಅಸಡ್ಡೆಯಿಂದಾಗಿ ಈ ವರೆಗೂ ಅರಣ್ಯವಾಸಿಗಳು ತೊಂದರೆಗೆ ಸಿಲುಕಿದ್ದಾರೆ. ಆದ್ದರಿಂದ ಸರ್ಕಾರ ಇದನ್ನು ಗಂಭೀರವಾಗಿ ಸ್ವೀಕರಿಸಿ, ಸಮಸ್ಯೆಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
2006ರಲ್ಲಿ ಮನಮೋಹನ ಸಿಂಗ್ ಅವರ ಅಧಿಕಾರದಲ್ಲಿ ಬುಡಕಟ್ಟು ಇಲಾಖೆಯಿಂದ ಅರಣ್ಯ ಅತಿಕ್ರಮಣದಾರರಿಗೆ ಅತಿಕ್ರಮಣ ಭೂಮಿ ಮಂಜೂರಿ ಮಾಡುವಂತೆ ಕಾನೂನು ತರಲಾಯಿತು. 2006ರಿಂದ ಈ ವರೆಗೆ ಲಕ್ಷಾಂತರ ಜನ ಭೂಮಿ ಮಂಜೂರಿಗಾಗಿ ಕಾಯುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 88,453 ಅತಿಕ್ರಮಣದಾರರು ಅರ್ಜಿ ಹಾಕಿದ್ದು, 73,859 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಈ ಎಲ್ಲ ಅರ್ಜಿಗಳನ್ನು ತಿರಸ್ಕಾರ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬುದನ್ನು ಎತ್ತಿ ಹೇಳಿದರು. ಅರಣ್ಯ ಸಚಿವರು ಉನ್ನತ ಮಟ್ಟದ ಸಭೆ ಕರೆದು ಸೂಕ್ತ ನಿರ್ಣಯ ಮಾಡದೇ ಹೋದರೆ ಈ ತೊಂದರೆ ಸದಾ ಮುಂದುವರಿಯುತ್ತದೆ.
ಇದಕ್ಕೆ ಪರಿಹಾರ ಕಂಡುಕೊಳ್ಳದೇ ಹೋದರೆ ಉತ್ತರ ಕನ್ನಡದ ಒಂದು ಲಕ್ಷಕ್ಕೂ ಹೆಚ್ಚು ಕುಟುಂಬ ಅನಾಥವಾಗುವ ಪರಿಸ್ಥಿತಿ ಬರುತ್ತದೆ. ಆ ನಿಟ್ಟಿನಲ್ಲಿ ನಾಲ್ಕೈದು ಸಭೆಗಳು, ಸಾವಿರಾರು ಹೋರಾಟಗಳು ನಡೆದಿವೆ. ಆದರೆ ಇದುವರೆಗೂ ಪರಿಹಾರ ದೊರೆತಿಲ್ಲ. ಅರ್ಜಿ ತಿರಸ್ಕಾರ ಮಾಡಿರುವುದು ಜನರಿಗೆ ಮಾಡಿದ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಮಸ್ಯೆ ಇರುವುದು ಅರಣ್ಯ ಇಲಾಖೆಯಲ್ಲಿ, ಹಾಗೆಯೇ ಇದನ್ನು ಮಂಜೂರಿ ಮಾಡುವ ನೋಡಲ್ ಏಜೆನ್ಸಿ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಅವರದ್ದು. ಈ ಎರಡೂ ಮಂತ್ರಿಗಳೂ ಸೇರಿ ಅರಣ್ಯ ಇಲಾಖೆಯ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡುತ್ತೇನೆ ಎಂದರು.

