‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಿಂದ ರೈತರ ಬದಲಿಗೆ ಖಾಸಗಿ ವಿಮಾ ಕಂಪನಿಗಳಿಗೆ 10,000 ಕೋಟಿ ರು., ಲಾಭವಾಗುತ್ತಿದೆ’ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಗಂಭೀರ ಆರೋಪ ಮಾಡಿದರು.

ವಿಧಾನ ಪರಿಷತ್ತು (ಡಿ.13): ‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಿಂದ ರೈತರ ಬದಲಿಗೆ ಖಾಸಗಿ ವಿಮಾ ಕಂಪನಿಗಳಿಗೆ 10,000 ಕೋಟಿ ರು., ಲಾಭವಾಗುತ್ತಿದೆ’ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಗಂಭೀರ ಆರೋಪ ಮಾಡಿದರು. ರೈತರಿಗೆ ಪರಿಹಾರ ವಿತರಣೆಯಲ್ಲಿ ವಿಳಂಬದ ಬಗ್ಗೆ ಮಾತನಾಡಿದ ಸಚಿವರು,‘ಉದ್ದೇಶಿತ ಫಸಲ್ ಭೀಮಾ ಯೋಜನೆ ಅಡಿ ರೈತರು ಶೇ.2ರಷ್ಟು ಕಂತು ಪಾವತಿಸಿದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ಶೇ.11ರಷ್ಟು ಕಂತು ಪಾವತಿಸುತ್ತವೆ. ಇದರಿಂದ ಖಾಸಗಿ ವಿಮಾ ಕಂಪನಿಗಳಿಗೆ 2016-24ರವರೆಗೆ ಪ್ರತಿ ವರ್ಷ 10 ಸಾವಿರ ಕೋಟಿ ರು. ಲಾಭ ಆಗಿದೆ. ಇದೊಂದು ಗೋಲ್‌ಮಾಲ್ ಯೋಜನೆ ಆಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಂಪನಿಗಳು ಫೋನ್ ಎತ್ತೋಲ್ಲ, ಲಿಂಕ್‌ ತೆರೆಯಲ್ಲ: ಬೆಳೆ ನಷ್ಟವಾದ ಸಂದರ್ಭದಲ್ಲಿ ಸ್ಥಳೀಯ ವಿಪತ್ತು ಅಂತ ವಿಮೆ ಪರಿಹಾರ ಕೇಳಿದರೆ, ವಿಪತ್ತು ಸಂಭವಿಸಿದ 3 ದಿನಗಳಲ್ಲೇ ವೆಬ್ ಲಿಂಕ್ ಅಥವಾ ಫೋನ್ ಕರೆ ಮೂಲಕ ಬೆಳೆಹಾನಿ ಮಾಹಿತಿ ನೀಡಬೇಕು ಎಂದು ಕಂಪನಿ ಹೇಳುತ್ತದೆ. ಆ 3 ದಿನಗಳಲ್ಲಿ ಕಂಪನಿ ಪ್ರತಿನಿಧಿಗಳ ಫೋನ್ ಸ್ವಿಚ್ಡ್ ಆಫ್ ಆಗಿರುತ್ತದೆ. ವೆಬ್ ಲಿಂಕ್ ಕೂಡ ಕಾರ್ಯನಿರ್ವಹಿಸುತ್ತಿರುವುದಿಲ್ಲ ಎಂದು ದೂರಿದರು.

ದೇಶಾದ್ಯಂತ ಕೇವಲ 8-10 ಕಂಪನಿ: ಈ ಯೋಜನೆ ಅಡಿ ರೂಪಿಸಿರುವ ಮಾರ್ಗಸೂಚಿಗಳನ್ನು ಮಾರ್ಪಡಿಸುವ ಅಗತ್ಯವಿದೆ. ಈ ಸಂಬಂಧ ಕೃಷಿ ಇಲಾಖೆಯಿಂದ ಕೇಂದ್ರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಕೆಯಾಗಿದೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ಇಡೀ ದೇಶಕ್ಕೆ 8-10 ಕಂಪನಿಗಳನ್ನು ಆಯ್ಕೆ ಮಾಡಲಾಗಿರುತ್ತದೆ. ಅವು ಜಿಲ್ಲೆಗಳನ್ನು ಹಂಚಿಕೆ ಮಾಡಿಕೊಂಡಿರುತ್ತವೆ. ಒಟ್ಟಾರೆಯಾಗಿ ಯೋಜನೆ ಅಡಿ ಮಾರ್ಗಸೂಚಿಗಳಲ್ಲಿ ನೂನ್ಯತೆಗಳಿದ್ದು, ಅವುಗಳ ಬದಲಾವಣೆ ಕೇಂದ್ರ ಸರ್ಕಾರದಿಂದಲೇ ಆಗಬೇಕಿದೆ ಎಂದರು.

ಇದಕ್ಕೆ ದನಿಗೂಡಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಬೆಳೆಹಾನಿಗೆ ಸಂಬಂಧಿಸಿದಂತೆ ವಿಮಾ ಕಂಪನಿಗಳು ತೆಗೆದುಕೊಳ್ಳುವ ಜಮೀನಿನ ಕಟಾವು ಮಾದರಿ ಪ್ರಮಾಣ ಹೆಚ್ಚಿಸುವ ಅವಶ್ಯಕತೆ ಇದೆ. ಈಗಿರುವ ವ್ಯವಸ್ಥೆಯಲ್ಲಿ ರೈತರಿಗೆ ಪರಿಹಾರ ಸಿಗುವುದೇ ಇಲ್ಲ ಎಂದು ಹೇಳಿದರು. ಪ್ರತಿಪಕ್ಷ ಬಿಜೆಪಿಯ ಸಿ.ಟಿ. ರವಿ ಮಾತನಾಡಿ, ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ ಉದ್ದೇಶ ಒಳ್ಳೆಯದಿದೆ. ಆದರೆ, ಅದರ ಅನುಷ್ಠಾನದಲ್ಲಿ ಲೋಪ ಇದೆ. ಕೇಂದ್ರದ ಯೋಜನೆಯಾದರೂ, ಕಂಪನಿಗಳ ಆಯ್ಕೆ ರಾಜ್ಯದ್ದೇ ಆಗಿದೆ. ಕಂಪನಿ ಆಯ್ಕೆ ಮಾಡುವಾಗ ನಿಗದಿಪಡಿಸಲಾಗುವ ಷರತ್ತು ಅಥವಾ ನಿಬಂಧನೆಗಳು ಬದಲಾಗಬೇಕು ಎಂದು ಒತ್ತಾಯಿಸಿದರು.

ಪ್ರತಿ ವರ್ಷ ಸಾವಿರ ರೈತರು ಆತ್ಮ*ಹತ್ಯೆ: ಕೇಶವ

ರಾಜ್ಯದಲ್ಲಿ ಪ್ರತಿವರ್ಷ ಒಂದು ಸಾವಿರ ರೈತರು ಆತ್ಮ*ಹತ್ಯೆ ಮಾಡಿಕೊಳ್ಳುತ್ತಿದ್ದು, ದೇಶದಲ್ಲಿ ರೈತರ ಆತ್ಮ*ಹತ್ಯೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಬಿಜೆಪಿಯ ಕೇಶವ್ ಪ್ರಸಾದ್ ಆರೋಪಿಸಿದರು. ಕಳೆದ ಹತ್ತು ವರ್ಷಗಳಲ್ಲಿ 10,371 ರೈತರು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ಪ್ರತಿವರ್ಷ ಸರಾಸರಿ ಸಾವಿರ ರೈತರು ಆತ್ಮ*ಹತ್ಯೆಗೆ ಶರಣಾಗುತ್ತಿದ್ದಾರೆ. ಆದರೆ, ಕರ್ನಾಟಕಕ್ಕೆ ಹೋಲಿಸಿದರೆ, ಹಿಂದುಳಿದ ರಾಜ್ಯಗಳಾದ ಬಿಹಾರ, ಪಶ್ಚಿಮ ಬಂಗಾಳ, ಒಡಿಸ್ಸಾ, ಜಾರ್ಖಂಡ್, ಲಕ್ಷದ್ವೀಪ ಮತ್ತಿತರ ಕಡೆಗಳಲ್ಲಿ ರೈತರ ಆತ್ಮ*ಹತ್ಯೆಗಳೇ ಇಲ್ಲ. ಅಲ್ಲಿ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಆಗ್ರಹಿಸಿದರು.