ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ನೀಡಿ ಎಂಬುದನ್ನು ಸಮಯ ಬಂದಾಗ ಕೇಳುವೆ, ಆದರೆ ಎಲ್ಲೊ ನಿಂತು ಮಾಧ್ಯಮದವರ ಮುಂದೆ ಇದನ್ನ ಪ್ರಶ್ನಿಸಲಾಗಲ್ಲ. ಕಾಲ ಕೂಡಿ ಬಂದಾಗ ಎಲ್ಲವೂ ಆಗುತ್ತೆ ಎಂದು ಸಚಿವ ಮಹದೇವಪ್ಪ ಹೇಳಿದರು.

ಕೊಳ್ಳೇಗಾಲ (ಡಿ.06): ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ನೀಡಿ ಎಂಬುದನ್ನು ಸಮಯ ಬಂದಾಗ ಕೇಳುವೆ, ಆದರೆ ಎಲ್ಲೊ ನಿಂತು ಮಾಧ್ಯಮದವರ ಮುಂದೆ ಇದನ್ನ ಪ್ರಶ್ನಿಸಲಾಗಲ್ಲ. ಕಾಲ ಕೂಡಿ ಬಂದಾಗ ಎಲ್ಲವೂ ಆಗುತ್ತೆ ಎಂದು ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಹೇಳಿದರು. ಪಟ್ಟಣದಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಎಂಬುದೆಲ್ಲವೂ ಉಹಾಪೋಹ, ಕಲ್ಪನೆಗಳು, ಈ ಬಗ್ಗೆ ಸಾಕಷ್ಟು ಗೊಂದಲಗಳಿವೆ, ಆದರೆ ಇಲ್ಲಿ ಯಾವ ಬದಲಾವಣೆಗಳು ಇಲ್ಲ, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಎಬಿಸಿಡಿ ಗೊತ್ತಿಲ್ಲದವರು ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ,

ಸಂವಿಧಾನದ ಬಗ್ಗೆ ಅವರಿಗೇನೂ ಗೊತ್ತು ಎಂದು ಛಲವಾದಿ ನಾರಾಯಣಸ್ವಾಮಿ ಹೇಸರೆಳದೆ ಟೀಕಿಸಿದರು.ಸಂವಿಧಾನ ರಕ್ಷಕರು ಯಾರು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ದಲಿತರಿಗೆ ಸಿಎಂ ಹುದ್ದೆ ಬೇಕು ಎಂಬುದು ಕಾಲ ಬಂದಾಗ ಎಲ್ಲವೂ ಆಗುತ್ತೆ, ಆದರೆ ಈ ಕುರಿತು ಎಲ್ಲೆಂದರಲ್ಲಿ ಮಾತನಾಡಲು ಆಗಲ್ಲ ಎಂದರು. ಶಾಸಕ ಎ. ಆರ್‌. ಕೃಷ್ಣಮೂರ್ತಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರಮೇಶ್, ರೇಖಾ ರಮೇಶ್, ಸ್ವಾಮಿ ನಂಜಪ್ಪ , ಆಲಹಳ್ಳಿ ತೋಟೇಶ್, ಆನಂದಮೂರ್ತಿ, ಸಿಗ್ ಬತ್ ಉಲ್ಲಾ, ಮಂಜುನಾಥ್,ರಾಘವೇಂದ್ರ, ಸಿದ್ದಾರ್ಥ, ಮಹದೇವಪ್ಪ, ಚೇತನ್ ದೊರೈರಾಜು, ಹೊಂಗನೂರು ಚೇತನ್, ಮಹದೇವಪ್ಪ ಇನ್ನಿತರಿದ್ದರು.

ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಆಗ್ರಹ

ರಾಜ್ಯದಲ್ಲಿ ಈಗಿನ ಮುಖ್ಯಮಂತ್ರಿ ನಂತರ ಯಾರು ಎಂಬ ಬಗ್ಗೆ ಕಿತ್ತಾಟ ನಡೆದಿದೆ. ಒಂದು ವೇಳೆ ಅವರು ಕೆಳಗಿಳಿದಲ್ಲಿ ದಲಿತರನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸಬೇಕು ಎಂದು ಕರ್ನಾಟಕ ದಲಿತ ಚಳವಳಿ ನವನಿರ್ಮಾಣ ವೇದಿಕೆ ಅಧ್ಯಕ್ಷ ಹರಿಹರ ಆನಂದಸ್ವಾಮಿ ಆಗ್ರಹಿಸಿದರು. ದೇಶದ ಒಟ್ಟಾರ ಜನಸಂಖ್ಯೆಯಲ್ಲಿ ಅತಿ ಹೆಚ್ಚಿನವರಾಗಿದ್ದರೂ ದಲಿತರಿಗೆ ಅಧಿಕಾರ ವೇಳೆ ವಂಚನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಡಾ.ಜಿ. ಪರಮೇಶ್ವರ ಅವರು ಎಂದೋ ಮುಖ್ಯಮಂತ್ರಿ ಆಗಬೇಕಾಗಿತ್ತು. ಅದನ್ನು ತಪ್ಪಿಸಲಾಗಿದೆ. ವೋಟಿಗಾಗಿ ಮಾತ್ರ ದಲಿತರನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ, ಅಧಿಕಾರದ ವಿಷಯ ಬಂದಾಗ ಅನ್ಯಾಯ ಮಾಡಲಾಗುತ್ತಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಬಹುಸಂಖ್ಯಾತ ದಲಿತರಿಗೆ ಇಲ್ಲಿಯವರೆಗೂ ಮುಂಚೂಣಿ ನಾಯಕತ್ವ ದಕ್ಕದಿರುವುದು ದುರಂತ. ಎಲ್ಲಾ ರಾಜಕೀಯ ಪಕ್ಷಗಳು ಶೋಷಿತ ಸಮುದಾಯಗಳನ್ನು ತಮ್ಮ ಬಳಕೆ ವಸ್ತುಗಳನ್ನಾಗಿ ಮಾಡಿಕೊಂಡು ಅಧಿಕಾರದ ಲಾಲಸೆ ಯಶಸ್ವಿಗೊಳಿಸಿಕೊಳ್ಳುತ್ತಿವೆ. ಈ ಮರ್ಮವನ್ನು ದಲಿತರು ಅರಿಯಬೇಕು ಎಂದರು. ಹೀಗಾಗಿ, ದಲಿತರು, ದಲಿತ ಸಂಘಟನೆಗಳು ಒಡಕು ಮರೆತು ರಾಜ್ಯದಲ್ಲಿ ಡಾ.ಜಿ. ಪರಮೇಶ್ವರ, ಕೆ.ಎಚ್. ಮುನಿಯಪ್ಪ ಅಥವಾ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಮುಖ್ಯಮಂತ್ರಿ ಆಗಿಸುವ ನಿಟ್ಟಿನಲ್ಲಿ ಸಂಘಟಿತ ಹೋರಾಟ ಮಾಡಬೇಕು ಎಂದು ಅವರು ಕರೆ ನೀಡಿದರು. ಮುಖಂಡರಾದ ದೇವಗಳ್ಳಿ ಸೋಮಶೇಖರ್, ಬದನವಾಳು ಬಸವಣ್ಣ, ಸತೀಶ್ ಪಡುವಾರಹಳ್ಳಿ, ಸೋಮಯ್ಯ ಮಲೆಯೂರು, ಮಲ್ಲೇಶ್ ಇದ್ದರು.