ಬೆಂಗಳೂರು, ಡಿ.09): ಉಪಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್​ ಅಭ್ಯರ್ಥಿಯ ಗೆಲುವಿನಿಂದ ಉಪಮುಖ್ಯಮಂತ್ರಿ ಲಕ್ಷ್ಮಣ್​ ಸವದಿಗೆ ರಾಜಕೀಯ ಪುನರ್ಜನ್ಮ ಸಿಗುವ ದಾರಿ ಗೋಚರಿಸುತ್ತಿದೆ. 

ಉಪಚುನಾವಣೆಯ ಫಲಿತಾಂಶದಲ್ಲಿ ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಗೆದ್ದರೂ ಉಪಮುಖ್ಯಮಂತ್ರಿ ಲಕ್ಷ್ಮಣ್​ ಸವದಿಗೆ ಅದೃಷ್ಟ ಒಲಿದಿದ್ದು, ಕಾಂಗ್ರೆಸ್​ ಅಭ್ಯರ್ಥಿ ಬೈ ಎಲೆಕ್ಷನ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಸವದಿ ಉಪಮುಖ್ಯಮಂತ್ರಿಯ ಹಾದಿ ಸುಗಮ ಮಾಡಿಕೊಟ್ಟಿದ್ದಾರೆ. ಎಂಬ ಮಾತುಗಳು ರಾಜ್ಯ ರಾಜಕಾರಣದಲ್ಲಿ ಜೋರಾಗಿ ಕೇಳಿಬರುತ್ತಿವೆ.

ಉಪಚುನಾವಣೆ ನಿಗದಿ: ಬಿಜೆಪಿಯಲ್ಲಿ ಬೇಗುದಿ, ಸಂಕಷ್ಟದಲ್ಲಿ ಲಕ್ಷ್ಮಣ್ ಸವದಿ..!

ಶಿವಾಜಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ರಿಜ್ವಾನ್​ ಅರ್ಷದ್​ ಗೆಲುವು ದಾಖಲಿಸಿದ್ದು, ಈ ಮೂಲಕ ರಿಜ್ವಾನ್​ ಅರ್ಷದ್​ ವಿಧಾನಪರಿಷತ್‌ನಿಂದ ವಿಧಾನಸಭೆಗೆ ಪ್ರವೇಶ ಮಾಡಿದರು.

ಈ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸದಸತ್ವ ಸ್ಥಾನಕ್ಕೆ ರಿಜ್ವಾನ್​ ಅರ್ಷದ್ ರಾಜೀನಾಮೆ ನೀಡಬೇಕಾಗುತ್ತದೆ. ಇದರಿಂದ ತೆರವಾಗುವ ಪರಿಷತ್​ ಸದಸ್ಯ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ್​ ಸವದಿಯವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

ಸವದಿಗೆ ಡಿಸಿಎಂ ಸ್ಥಾನ : ಯಡಿಯೂರಪ್ಪಗೆ ಶಾಕ್‌

ಈ ಮೂಲಕ ಸವದಿ ಡಿಸಿಎಂ ಆಗಿ ಮುಂದುವರಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಸವದಿ ಅಥಣಿ ಉಪಚುನಾವಣೆಯ ಟಿಕೆಟ್​ ಆಕಾಂಕ್ಷೆಯಾಗಿದ್ದರು. ಆದರೆ, ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಮಹೇಶ್​ ಕುಮಟಳ್ಳಿಗೆ ಟಿಕೆಟ್ ನೀಡಿದ್ದು, ಈಗ ಕುಮಟಳ್ಳಿ ಗೆಲುವು ಸಾಧಿಸಿದ್ದಾರೆ.

ಹೀಗಾಗಿ ಪರಿಷತ್​ ಸದಸ್ಯ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆಗಳು ಇವೆ.  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಲಕ್ಷ್ಮಣ್​ ಸವದಿ ಮಹೇಶ್​ ಕುಮಟಳ್ಳಿ ವಿರುದ್ಧ ಸೋಲಿನ ಕಹಿ ಉಂಡಿದ್ದರು. 

ಆದರೂ ಕೂಡ ರಾಜ್ಯ ರಾಜಕೀಯದಲ್ಲಿ ನಡೆದ ನಾಟಕೀಯ ಬೆಳವಣಿಗೆಯ ನಡುವೆ ಸಿಎಂ ಬಿಎಸ್​ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಸೋತರು ಕೂಡ ಡಿಸಿಎಂ ಮಾಡಲಾಗಿದೆ ಎಂಬ ವಿರೋಧದ ಮಾತುಗಳ ಪಕ್ಷದ ಒಳಗಡೆಯೇ ಕೇಳಿಬಂದಿತ್ತು.

'ಚುನಾವಣೆ ದೃಷ್ಟಿಯಿಂದಲೇ ಸವದಿಗೆ ಮಂತ್ರಿ ಪಟ್ಟ'

ಎಲ್ಲವೂ ಅಂದುಕೊಂಡಂತೆ ಆದ್ರೆ, 6 ತಿಂಗಳಲ್ಲಿ ಪರಿಷತ್ ಇಲ್ಲವೇ ವಿಧಾನಸಭೆಗೆ ಆಯ್ಕೆಯಾಗಿ ಉಪಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಬೇಕಿದ್ದ ಸವದಿಗೆ ರಾಜಕೀಯದಲ್ಲಿ ಪುನರ್ಜನ್ಮ ಸಿಕ್ಕಂತಾಗುತ್ತದೆ.

ಚುನಾವಣೆಯಲ್ಲಿ ಎದುರಾಳಿ ಅಭ್ಯರ್ಥಿ ಗೆದ್ದರೂ ಕೆಲವೊಂದು ಸಲ ವರದಾನವಾಗುತ್ತೆ ಎನ್ನುವುದಕ್ಕೆ ಇದೊಂದು ಸ್ಪಷ್ಟ ಉದಾಹರಣೆಯಾಗಗಿದೆ.

ಸವದಿಯವರನ್ನ ಸಂಪುಟಕ್ಕೆ ಸೇರಿಸಿಕೊಂಡಿದ್ದು ಏಕೆ? 
ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಯ ಹಲವು ನಾಯಕರಿದ್ದಾರೆ. ಆದರೆ, ಲಕ್ಷ್ಮಣ ಸವದಿಯವರನ್ನ ಸಂಪುಟಕ್ಕೆ ಸೇರಿಸಿಕೊಂಡಿದ್ದು ಏಕೆ? ಎಂಬುದು ಹಲವು ಬಿಜೆಪಿ ನಾಯಕರ ಪ್ರಶ್ನೆಯಾಗಿತ್ತು. ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ ಮತ್ತು ಲಿಂಗಾಯತ ಮತಬ್ಯಾಂಕ್ ಮಹಾರಾಷ್ಟ್ರದಲ್ಲಿ ಗಣನೀಯ ಸಾಧನೆ ಮಾಡಬೇಕು ಎನ್ನುವ ಮೂಲ ಉದ್ದೇಶವನ್ನು ಇಟ್ಟುಕೊಂಡೇ, ಲಕ್ಷ್ಮಣ್ ಸವದಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು ಎಂದು ಹೇಳಲಾಗಿತ್ತು.

ಆದ್ರೆ, ಅವರಿಗೆ ಡಿಸಿಎಂ ಹುದ್ದೆ ಕೊಟ್ಟಿದ್ಯಾಕೆ ಎನ್ನುವುದು ಸವದಿಗೆ ಉಪಮುಖ್ಯಮಂತ್ರಿ ಹುದ್ದೆ ಕೊಟ್ಟಿರುವರಿಗೆ ಮಾತ್ರ ಗೊತ್ತಿದೆ ಹೊರೆತು, ಮಿಕ್ಕಿದವರಿಗೆ ಇದುವರೆಗೂ ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಸವದಿ ಹಾದಿಯಲ್ಲಿ ಕಲ್ಲು ಮುಳ್ಳು ತಪ್ಪಿಲ್ಲ...!
ಹೌದು....ವಿಧಾನ ಪರಿಷತ್ ಸ್ಥಾನಕ್ಕೇರಲು ಸವದಿ ಹಾದಿ ಅಷ್ಟು ಸುಲಭವಾಗಿಲ್ಲ. ತೆರವಾಗುವ ಒಂದು ವಿಧಾನ ಪರಿಷತ್ ಸ್ಥಾನಕ್ಕೆ ವಿಶ್ವನಾಥ್‌ ಅವರನ್ನು ನೇಮಕ ಮಾಡಿದರೂ ಅಚ್ಚರಿ ಪಡಬೇಕಿಲ್ಲ.

 ಹುಣಸೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಸೋಲುಕಂಡಿದ್ದು, ಕಾಂಗ್ರೆಸ್‌ನ ಮಂಜುನಾಥ್ ಗೆಲುವಿನ ನಗೆ ಬೀರಿದ್ದಾರೆ. ಆದ್ರೆ, ವಿಶ್ವನಾಥ್‌ಗೆ ಮಂತ್ರಿ ಸಿಗುವ ಸಾಧ್ಯತೆಗಳು ಹೆಚ್ಚಿವೆ. ರಿಜ್ವಾನ್ ಅರ್ಷದ ರಾಜೀನಾಮೆಯಿಂದ ತೆರವಾಗು ವಿಧಾನಪರಿಷತ್ ಸ್ಥಾನಕ್ಕೆ ವಿಶ್ವನಾಥ್‌ ಅವರನ್ನು ನೇಮಕ ಮಾಡುವ ಚಿಂತನೆಗಳು ಬಿಜೆಪಿ ವಲಯದಲ್ಲಿ ಚರ್ಚೆಗಳು ಶುರುವಾಗಿವೆ. 

ಒಂದು ವೇಳೆ ವಿಶ್ವನಾಥ್‌ಗೆ ರಿಜ್ವಾನ್ ಅರ್ಷದ್ ಸ್ಥಾನ ಒಲಿದರೆ, ಸವದಿ ರಾಜಕೀಯ ಹಾದಿ ಮತ್ತೆ ಅದೇ ಕಲ್ಲು ಮುಳ್ಳಿನಿಂದ ಕೂಡಲಿದ್ದು, ಡಿಸಿಎಂ ಹುದ್ದೆಗೆ ಕುತ್ತು ಬರಲಿದೆ.

ಒಟ್ಟಿನಲ್ಲಿ  ತೆರವಾಗು ಒಂದು ವಿಧಾನ ಪರಿಷತ್ ಸ್ಥಾನಕ್ಕೆ ಪ್ರಮುಖವಾಗಿ ಮೇಲ್ನೋಟಕ್ಕೆ ವಿಶ್ವನಾಥ್ ಹಾಗೂ ಸವದಿ ಹೆಸರು ಕೇಳಿಬರುತ್ತಿದ್ದು, ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

ಡಿಸೆಂಬರ್ 09ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: