ಎಲ್ಲದರಲ್ಲೂ ರಾಜಕೀಯ ಬೆರೆಸುವ ಬಿಜೆಪಿ: ಸಚಿವ ಕೃಷ್ಣ ಬೈರೇಗೌಡ
ಬಿಜೆಪಿಯವರು ತಮ್ಮ ಮನೆಯ ಹುಳುಕು ಮುಚ್ಚಿಕೊಳ್ಳಲು ಪ್ರತಿಯೊಂದರಲ್ಲೂ ರಾಜಕೀಯ ಬೆರೆಸುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಕಲಬುರಗಿ (ಆ.02): ಬಿಜೆಪಿಯವರು ತಮ್ಮ ಮನೆಯ ಹುಳುಕು ಮುಚ್ಚಿಕೊಳ್ಳಲು ಪ್ರತಿಯೊಂದರಲ್ಲೂ ರಾಜಕೀಯ ಬೆರೆಸುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಸರ್ಕಾರ ಜನರ ನಾಡಿ ಮಿಡಿತ ಅರಿತು ಕೆಲಸ ಮಾಡುತ್ತಿದೆ. ಆದರೆ ಅಧಿಕಾರ ಕಳೆದುಕೊಂಡಿರುವ ಬಿಜೆಪಿಯವರು ಹತಾಶರಾಗಿದ್ದಾರೆ. ತಮ್ಮ ಮನೆ ಹುಳುಕು ಸರಿಪಡಿಸಿಕೊಳ್ಳಲಾಗದೆ ಇತರರ ವಿಚಾರದಲ್ಲಿ ರಾಜಕೀಯ ಬೆರೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ಅತಿವೃಷ್ಟಿವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಟೀಕೆಗೆ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಸರ್ಕಾರ ಜನಪರವಾಗಿ ಕಾರ್ಯನಿರ್ವಹಿಸುತ್ತಿದೆ. ಆದಾಗ್ಯೂ ಬಿಜೆಪಿ ತನ್ನ ವೈಫಲ್ಯಗಳನ್ನು ಮರೆಮಾಚಿಕೊಳ್ಳಲು ಸರ್ಕಾರದ ವಿರುದ್ಧ ರಾಜಕೀಯ ಪ್ರೇರಿತ ಆರೋಪ ಮಾಡುತ್ತಿದೆ ಎಂದು ದೂರಿದರು. ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡು ಎರಡೂವರೆ ತಿಂಗಳಾದರೂ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಬಿಜೆಪಿಗೆ ಪ್ರತಿ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಆಗಿಲ್ಲ.
ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆ ಕುಸಿತ: ಸಿದ್ದರಾಮಯ್ಯ ಕಿಡಿ
ಅವರ ಮನೆ ಹುಳುಕು ಮುಚ್ಚಿಕೊಳ್ಳಲು ಪ್ರಚಾರಕ್ಕೆ ಮುಂದಾಗಿದ್ದಾರೆ. ಪ್ರತಿ ಪಕ್ಷ ನಾಯಕ ಯಾರೆಂಬುದು ಜನ ಕೇಳಲು ಮುಂದಾಗಿದ್ದಾರೆ. ಬಜೆಟ್ ಪಾಸ್ ಆದರೂ ಪ್ರತಿ ಪಕ್ಷದ ನಾಯಕನ ಆಯ್ಕೆ ಮಾಡಿಲ್ಲ ಎಂದು ಲೇವಡಿ ಮಾಡಿದರು. ಇಡೀ ಭಾರತದಲ್ಲೇ ಕರ್ನಾಟಕ ವಿಧಾನಮಂಡಲಕ್ಕೆ ಒಳ್ಳೆಯ ಹೆಸರಿದೆ. ಆದರೂ ರಾಜ್ಯ ವಿಧಾನ ಮಂಡಲದ ಅಧಿವೇಶನದಲ್ಲಿ ಹಾಗೂ ರಾಜ್ಯಪಾಲರು ಮಾಡಿದ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚಿಸುವುದಕ್ಕೂ ಉಭಯ ಸದನಗಳಲ್ಲಿ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲಾಗದಷ್ಟುಬಿಜೆಪಿ ಅಯೋಗ್ಯವಾಗಿದೆ ಎಂದರು.
ಆನ್‌ಲೈನ್ ಗೇಮಲ್ಲಿ ಗೆಲ್ಲುವ ಹಣಕ್ಕೂ ಜಿಎಸ್‌ಟಿ?: ಆನ್‌ಲೈನ್ ಗೇಮಿಂಗ್ ಸಂಸ್ಥೆಗಳ ಮೇಲೆ ಶೇ. 28 ಜಿಎಸ್‌ಟಿ ವಿಧಿಸುವುದರ ಜತೆಗೆ ಆಟವಾಡಿ ಹಣ ಗೆಲ್ಲುವವರ ಮೇಲೂ ಜಿಎಸ್‌ಟಿ ವಿಧಿಸುವ ಕುರಿತಂತೆ ಕೇಂದ್ರ ಜಿಎಸ್‌ಟಿ ಕೌನ್ಸಿಲ್‌ನಲ್ಲಿ ರಾಜ್ಯದ ಪರವಾಗಿ ಪ್ರಸ್ತಾಪಿಸುವ ಕುರಿತು ಚಿಂತನೆ ನಡೆಸಲಾಗಿದೆ. ಆನ್‌ಲೈನ್ ಗೇಮಿಂಗ್ ಸಂಸ್ಥೆಗಳ ಮೇಲೆ ಜಿಎಸ್‌ಟಿ ವಿಧಿಸುವ ಕುರಿತಂತೆ ಅಭಿಪ್ರಾಯ ತಿಳಿಸುವ ಕುರಿತಂತೆ ಜಿಎಸ್‌ಟಿ ಕೌನ್ಸಿಲ್ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಎಸ್‌ಟಿ ಕೌನ್ಸಿಲ್ ರಾಜ್ಯ ಪ್ರತಿನಿಧಿಯೂ ಆಗಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಂಗಳವಾರ ವಾಣಿಜ್ಯ ತೆರಿಗೆ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಿದರು. ಈ ವೇಳೆ ಆನ್‌ಲೈನ್ ಗೇಮಿಂಗ್ ಸಂಸ್ಥೆಗಳ ಮೇಲೆ ಶೇ.28 ಜಿಎಸ್‌ಟಿ ವಿಧಿಸುವ ಕುರಿತು ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸಿದೆ.
ಬೆಂಗಳೂರು-ಪುಣೆ ಹೆದ್ದಾರಿ ಪರಿಶೀಲಿಸಿದ ಎಡಿಜಿಪಿ ಅಲೋಕ್ ಕುಮಾರ್
ಅದನ್ನು ಕಡಿಮೆ ಮಾಡಬೇಕಾ ಅಥವಾ ಅಷ್ಟೇ ಪ್ರಮಾಣದ ತೆರಿಗೆ ವಿಧಿಸಬಹುದಾ ಎಂಬ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಕೇಳಲಾಗಿದೆ. ತೆರಿಗೆ ಪ್ರಮಾಣ ಇಳಿಕೆ ಮಾಡಿದರೆ ಆನ್‌ಲೈನ್ ಗೇಮಿಂಗ್‌ಗೆ ನಾವೇ ಪ್ರೋತ್ಸಾಹ ನೀಡುವಂತಾಗಲಿದೆ. ಹೀಗಾಗಿ ತೆರಿಗೆ ಇಳಿಕೆ ಮಾಡದಂತೆ ಜಿಎಸ್‌ಟಿ ಕೌನ್ಸಿಲ್‌ಗೆ ತಿಳಿಸುವುದಾಗಿ ಕೃಷ್ಣ ಬೈರೇಗೌಡ ಹೇಳಿದರು. ಜತೆಗೆ ಆನ್‌ಲೈನ್ ಗೇಮ್‌ನಿಂದ ಮೋಸ ಹೋಗುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಅದನ್ನು ತಡೆಯಲು ಹಾಗೂ ಆನ್‌ಲೈನ್ ಗೇಮಿಂಗ್ ಕಡೆಗೆ ಜನರು ಆಕರ್ಷಿತರಾಗದಂತೆ ಮಾಡಲು, ಆಟವಾಡಿ ಹಣ ಗೆದ್ದವರಿಗೂ ಜಿಎಸ್‌ಟಿ ವಿಧಿಸಬೇಕು. ಗೆದ್ದ ಹಣಕ್ಕೆ ಶೇ.28 ಜಿಎಸ್‌ಟಿ ವಿಧಿಸದರೆ ಆನ್‌ಲೈನ್ ಗೇಮಿಂಗ್‌ನಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಕಡಿಮೆ ಮಾಡುವ ಸಾಧ್ಯತೆಗಳಿವೆ. ಈ ಕುರಿತಂತೆಯೂ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.