ಈಗಾಗಲೇ 2023ರ ಅಸೆಂಬ್ಲಿ ಚುನಾವಣೆಗೇ ನಿಲ್ಲೋದಿಲ್ಲವೆಂದು ತಮ್ಮ ಪುತ್ರ ಅರುಣ್‌ಗೆ ಟಿಕೆಟ್‌ ಕೊಡಬೇಕೆಂದು ಹೈಕಮಾಂಡ್‌ ಮುಂದೆ ಕೋರಿಕೊಂಡು ಮಗನ ಪಟ್ಟಾಭಿಷೇಕಕ್ಕೆ ಸಿದ್ಧರಾಗಿದ್ದ ಎಂವೈ ಪಾಟೀಲರು ಈಗ ರಾಜಕೀಯವಾಗಿ ತಮ್ಮ ವಿರೋಧಿ ಮಾಲೀಕಯ್ಯ ಗುತ್ತೇದಾರ್‌ ಅವರ ಕಾಂಗ್ರೆಸ್‌ ಸೇರ್ಪಡೆಗೆ ಅದು ಹೇಗೆ ಹಸಿರು ನಿಶಾನೆ ಕೊಟ್ಟರೋ? ಪಾಟೀಲರು ಏನೇ ನಿರ್ಣಯ ಕೈಗೊಂಡರು ಅದರ ಹಿಂದೆ ಉದ್ದೇಶವಿರುತ್ತದೆ ಎಂಬುದನ್ನು ಬಲ್ಲ ಅವರ ಅಭಿಮಾನಿಗಳು ಕೂಡಾ ಇದೀಗ ಗೊಂದಲದಲ್ಲಿದ್ದಾರೆ.

ಶೇಷಮೂರ್ತಿ ಅವಧಾನಿ

ಕಲಬುರಗಿ(ಏ.20): ಭೀಮಾ ತೀರ ಅಫಜಲ್ಪುರದಲ್ಲಿನ ರಾಜಕೀಯ ಅದಲ್‌ ಬದಲ್‌ ಆಟ ಜಿಲ್ಲೆಯಲ್ಲಿ ಅಹಿಂದ ರಾಜಕೀಯಕ್ಕೆ ಹೊಸ ರೂಪ - ಹೊಳಪು ಕೊಡುವುದೆ? ಎಂಬ ಪ್ರಶ್ನೆ ಉದ್ಭವವಾಗಿದೆ. ಕಿರಿಯ ಸಹೋದರ ನಿತಿನ್‌ ಗುತ್ತೇದಾರ್‌ ಕಮಲ ಹಿಡಿದ ಬೆನ್ನಲ್ಲೇ ಬಿಜೆಪಿ ಮೇಲೆ ಮುನಿಸಿಕೊಂಡಿರುವ ಮಾಲೀಕಯ್ಯ ಗುತ್ತೇದಾರ್ ಕೈ ಹಿಡಿದಿದ್ದಾರೆ.

ಈ ರಾಜಕೀಯ ವಿಪ್ಲವ, ಗುತ್ತೇದಾರ್‌ ಸಹೋದರರ ಜಿದ್ದಾ ಜಿದ್ದಿ ರಾಜಕೀಯ ಪರಿಣಾಮ ಜಿಲ್ಲೆಯಲ್ಲಿ ಮತ್ತೆ ಅಹಿಂದ ರಾಜಕೀಯಕ್ಕೆ ಮುನ್ನುಡಿ ಬರೆಯೋ ಸಂಭವಗಳು ಕಾಣಿಸಿಕೊಂಡಿವೆ. 1980ರ ದಶಕದಲ್ಲಿ ಹಣಮಂತರಾವ ದೇಸಾಯಿ ನಂತರ ಅಫಜಲ್ಪುರ ಶಾಸಕರಾದ ಮಾಲೀಕಯ್ಯ ಗುತ್ತೇದಾರ್‌ 6 ಬಾರಿ ಶಾಸಕ, 1 ಬಾರಿ ಸಚಿವರೂ ಆಗಿದ್ದವರು. ಮೂಲತಃ ಕಾಂಗ್ರೆಸ್ಸಿಗ. ಬದಲಾದ ಸಂದರ್ಭಗಳಲ್ಲಿ ಜನತಾ ದಳ, ಕೆಸಿಪಿ, ಬಿಜೆಪಿ ಎಂದು ಪಕ್ಷಾಂತರ ಮಾಡಿಯೂ ಅಫಜಲ್ಪುರದಲ್ಲಿ ತಮ್ಮ ರಾಜಕೀಯ ಗಟ್ಟಿತನ ಉಳಿಸಿಕೊಂಡವರು.

ಬಿಜೆಪಿ ಪ್ರಣಾಳಿಕೆ ಮೋದಿ‌ ಫೋಟೊ ಅಲ್ಬಂ‌ನಂತಿದೆ: ಸಚಿವ ಖರ್ಗೆ

ತಮಗೆ ಟಿಕೆಟ್‌ ಕೊಡಲಿಲ್ಲವೆಂದು 2018ರಲ್ಲಿ ಬಿಜೆಪಿ ಸೇರಿದ್ದ ಮಾಲೀಕಯ್ಯ ಮತ್ತೆ ಕಾಂಗ್ರೆಸ್‌ ಸೇರಿದ್ದಾರೆ. 2023ರ ಅಸಂಬ್ಲಿ ಚುನಾವಣೆಯಲ್ಲಿ ನಿತನ್‌ ಹಾಗೂ ಮಾಲೀಕಯ್ಯ ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ಮಾಡಿದ್ದರು. ಟಿಕೆಟ್‌ ಮಾಲೀಕಯ್ಯ ಪಾಲಾದಾಗ ಮುನಿದ ನಿತಿನ್‌ ಪಕ್ಷೇತರರಾಗಿ ಕಣಕ್ಕಿಳಿದು 53 ಸಾವಿರ ಮತ ಪಡೆದಿದ್ದಲ್ಲದೆ ಸಹೋದರ ಮಾಲೀಕಯ್ಯರನ್ನೇ 3ನೇ ಸ್ಥಾನಕ್ಕೆ ತಳ್ಳಿದ್ದರು. ಸಹೋದರನ ರಾಜಕೀಯ ಸವಾಲ್‌ಗೆ ಪ್ರತ್ಯುತ್ತರವಾಗಿ ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ಸೇರಿ ಕಲಬುರಗಿಯಲ್ಲಿ ಮತ್ತೆ ಅಹಿಂದ ರಾಜಕಾರಣಕ್ಕೆ ಮುನ್ನುಡಿ ಬರೆದರು ಎಂದು ಚರ್ಚೆಗಳು ಸಾಗಿವೆ.

ಎಂ.ವೈ ಪಾಟೀಲ್‌ ಲೆಕ್ಕಾಚಾರ ನಿಗೂಢ!

ಈಗಾಗಲೇ 2023ರ ಅಸೆಂಬ್ಲಿ ಚುನಾವಣೆಗೇ ನಿಲ್ಲೋದಿಲ್ಲವೆಂದು ತಮ್ಮ ಪುತ್ರ ಅರುಣ್‌ಗೆ ಟಿಕೆಟ್‌ ಕೊಡಬೇಕೆಂದು ಹೈಕಮಾಂಡ್‌ ಮುಂದೆ ಕೋರಿಕೊಂಡು ಮಗನ ಪಟ್ಟಾಭಿಷೇಕಕ್ಕೆ ಸಿದ್ಧರಾಗಿದ್ದ ಎಂವೈ ಪಾಟೀಲರು ಈಗ ರಾಜಕೀಯವಾಗಿ ತಮ್ಮ ವಿರೋಧಿ ಮಾಲೀಕಯ್ಯ ಗುತ್ತೇದಾರ್‌ ಅವರ ಕಾಂಗ್ರೆಸ್‌ ಸೇರ್ಪಡೆಗೆ ಅದು ಹೇಗೆ ಹಸಿರು ನಿಶಾನೆ ಕೊಟ್ಟರೋ? ಪಾಟೀಲರು ಏನೇ ನಿರ್ಣಯ ಕೈಗೊಂಡರು ಅದರ ಹಿಂದೆ ಉದ್ದೇಶವಿರುತ್ತದೆ ಎಂಬುದನ್ನು ಬಲ್ಲ ಅವರ ಅಭಿಮಾನಿಗಳು ಕೂಡಾ ಇದೀಗ ಗೊಂದಲದಲ್ಲಿದ್ದಾರೆ.

ನಿತಿನ್ ಗುತ್ತೇದಾರ್ ಕಾಂಗ್ರೆಸ್‌ಗೆ ಬಂದರೆ ನೆಲೆ ಕಳೆದುಕೊಳ್ಳಬೇಕಾಗುತ್ತದೆ. ಮಾಲೀಕಯ್ಯ ಬಂದರೆ ಬರಲಿ. ನಿತಿನ್‌ಗೆ ಹೋಲಿಸಿದರೆ ಮಾಲೀಕಯ್ಯ ಆಗಮನ ಅಷ್ಟೊಂದು ಪರಿಣಾಮ ಬೀರದು ಅಂದುಕೊಂಡು ಹಾಲಿ ಶಾಸಕ ಎಂವೈ ಪಾಟೀಲರು ಬಂದದ್ದೆಲ್ಲ ಬರಲಿ... ಎಂಬ ನಿಲುವಿಗೆ ಅಂಟಿಕೊಂಡಿರಬಹುದೆ? ಎಂಬ ಚರ್ಚೆಗಳು ಸಾಗಿವೆ.

ಇತ್ತ ಮಾಲೀಕಯ್ಯನವರೂ ತಮ್ಮ ಪುತ್ರ ರಿತೇಷರನ್ನ ರಾಜಕೀಯವಾಗಿ ತಮ್ಮ ಉತ್ತರಾಧಿಕಾರಿ ಮಾಡುವ ಹಂಬಲದಲ್ಲಿದ್ದಾರೆ. ಪುತ್ರ ವ್ಯಾಮೋಹದ ಇಬ್ಬರು ನಾಯಕರು ಕೈ ಕುಲುಕಿದ್ದರಿಂದ ಅಫಜಲ್ಪುರದಲ್ಲಿ ಅದ್ಯಾವ ಬದಲಾವಣೆ ನಡೆಯಬಹುದು ಎಂಬುದು ಕಾದು ನೋಡಬೇಕಷ್ಟೆ.

ಭೀಮಾ ತೀರದ ಸಹೋದರರ ಸವಾಲ್‌ ಸುತ್ತಮುತ್ತ

ಭೀಮೆಯಲ್ಲಿ ಸಾಕಷ್ಟು ನೀರು ಹರಿದು ಹೋದಂತೆ ಈ ನದಿ ತೀರದಲ್ಲಿಯೂ ರಾಜಕೀಯ ಅದಲ್‌ ಬದಲ್‌ ಆಟಗಳಿಗೆ ಲೆಕ್ಕವೇ ಇಲ್ಲ. ಅಂತಹ ಸರಣಿಗೆ ಈ ಗುತ್ತೇದಾರ್‌ ಸಹೋದರರ ಆಟವೂ ಸೇರಿಕೊಂಡಿದೆ. ಅನೇಕರು ಇದು ಅಫಜಲ್ಪುರ ಮಟ್ಟಿಗೆ ಸೀಮಿತಗೊಳಿಸೋದು ಸರಿಯಲ್ಲ, ಅಹಿಂದ ರಾಜಕೀಯದ ಅಸಲಿ ಆಟ ಇನ್ನು ಮುಂದೆ ಗೊತ್ತಾಗಲಿದೆ ಎಂದು ಹೇಳುತ್ತಿದ್ದಾರೆ. ಏಕೆಂದರೆ ಮಾಲೀಕಯ್ಯ ಜೊತೆಗೆ ಅನೇಕ ಅಹಿಂದ ನಾಯಕರು ಕೈ ಹಿಡಿದಿದ್ದಾರೆ. ಇತ್ತ ನಿತಿನ್‌ ಜೊತೆಗೂ ಅನೇಕ ಅಹಿಂದ ನಾಯಕರು ಕಮಲ ಹಿಡಿದಿದ್ದಾರೆ. ಹೀಗಾಗಿ ಅಫಜಲ್ಪುರ ಜಿಲ್ಲಾದ್ಯಂತ ಅಹಿಂದ ರಾಜಕೀಯ ಆಟ ತಳ್ಳಿ ಹಾಕಲಾಗದು.

ಸಿಬಿಐ, ಐಟಿ, ಇಡಿ ಕತ್ತೆ ಕಾಯ್ತಿದವಾ? ಕರ್ನಾಟಕದಿಂದ ಬ್ಲಾಕ್ ಮನಿ ಹೋಗ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಖರ್ಗೆ ಕಿಡಿ 

ಏತನ್ಮಧ್ಯೆ ಬಿಜೆಪಿ ಜೊತೆ ಮೈತ್ರಿಯಲ್ಲಿರುವ ಜೆಡಿಎಸ್‌ ಪರವಾಗಿ ಅಫಜಲ್ಪುರದಲ್ಲಿ ಹೋರಾಟಗಾರ ಶಿವಕುಮಾರ್ ನಾಟೀಕಾರ್‌ ಇದ್ದಾರೆ. ಭೀಮಾ ನೀರಿನ ಹೋರಾಟ ಮಾಡುವ ಮೂಲಕ ತಮ್ಮ ವರ್ಚಸ್ಸು ಹೆಚ್ಚಿಸಿಕೊಂಡಿರುವ ನಾಟೀಕಾರ್‌ ಅಹಿಂದ ರಾಜಕೀಯವನ್ನ ಅದ್ಹೇಗೆ ಸ್ವೀಕರಿಸುವರೋ? ಬಿಜೆಪಿ ಮೈತ್ರಿಗೇ ತೃಪ್ತಿ ಪಡುವರೋ? ಎಂದು ಜನ ಕಾದು ನೋಡುತ್ತಿದ್ದಾರೆ.

ರಂಗೇರಲಿದೆ ಲೋಕ ಸಮರ:

2019ರಲ್ಲಿ ಬಿಜೆಪಿಯಲ್ಲಿದ್ದ ಮಾಲೀಕಯ್ಯ ಗುತ್ತೇದಾರ್‌ ಖರ್ಗೆ ವಿರುದ್ಧ ಸದಾಕಾಲ ಕುಟುಕುತ್ತಲೇ ಚುನಾವಣೆ ಅಖಾಡ ರಂಗೇರಿಸಿದ್ದರು. ಆದರೀಗ ಕೈ ಹಿಡಿದಿದ್ದಾರೆ. ಖರ್ಗೆ ಪರವಾಗಿ, ಕಾಂಗ್ರೆಸ್‌ ಪರವಾಗಿ ಮಾತನಾಡುತ್ತ ಅದ್ಹೇಗೆ ಅಖಾಡದಲ್ಲಿ ಪ್ರವೇಶ ಮಾಡುವರೋ ಎಂದು ಜನ ನಿರೀಕ್ಷಿಸುತ್ತಿದ್ದಾರೆ. ಇತ್ತ ನಿತಿನ್‌ ಗುತ್ತೇದಾರ್‌ ಬಿಜೆಪಿ ಪರ ಅಖಾಡಕ್ಕಿಳಿದು ಪಚಾರಕ್ಕೆ ರಂಗು ತುಂಬಬೇಕಿದೆ.