Asianet Suvarna News Asianet Suvarna News

ಬಿಜೆಪಿ ಪ್ರಣಾಳಿಕೆ ಮೋದಿ‌ ಫೋಟೊ ಅಲ್ಬಂ‌ನಂತಿದೆ: ಸಚಿವ ಖರ್ಗೆ

ಬಿಜೆಪಿ ಪ್ರಣಾಳಿಕೆ ಈ ಹಿಂದಿನ ಅಚ್ಚೇದಿನ್‌ನಿಂದ ಹಿಡಿದು, ವಿಕಸಿತ ಭಾರತ, ಅಮೃತ ಕಾಲ್‌ ಮೂಲಕ ಸಾಗಿ ಈಗಿನ ಮೋದಿ ಕೀ ಗ್ಯಾರಂಟಿ ವರೆಗೆ ಬಂದಿದೆ. ಮೋದಿ ಗ್ಯಾರಂಟಿಗೆ ವಾರಂಟಿ ಇಲ್ಲ, ಕಾಂಗ್ರೆಸ್‌ ಗ್ಯಾರಂಟಿಗೆ, ಖರ್ಗೆ ಸಾಹೇಬರು, ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಸಾಹೇಬರೇ ವಾರಂಟಿ ಇದ್ದಾರೆ: ಪ್ರಿಯಾಂಕ್‌ ಖರ್ಗೆ 

BJP Manifesto is like Narendra Modi Photo Album says Minister Priyank Kharge grg
Author
First Published Apr 16, 2024, 1:03 PM IST

ಕಲಬುರಗಿ(ಏ.16): ಬಿಜೆಪಿ ಪ್ರಣಾಳಿಕೆ ಮೋದಿ‌ ಫೋಟೊ ಆಲ್ಬಂ‌ನಂತಿದೆ, ಅದರಲ್ಲಿ ಯಾವುದೆ ಸ್ಪಷ್ಟತೆ ಇಲ್ಲ, ಪ್ರಣಾಳಿಕೆ ಘೋಷಣೆಗಳ ಪುಸ್ತಕದಂತಿದ್ದು ಮೋದಿ ಅವರ ಪಿಕ್‌ನಿಕ್‌ನ ವಿಭಿನ್ನ ಫೋಟೋಗಳು ಬಿಟ್ಟರೆ ಯುವಕರಿಗೆ,‌ ಮಹಿಳೆಯರಿಗೆ, ರೈತರಿಗೆ, ಬಡವರಿಗೆ, ಶ್ರಮಿಕರಿಗೆ, ನಿರ್ಗತಿಕರಿಗೆ ಉಪಯೋಗವಾಗುವಂತ ಯಾವುದೇ ಅಂಶಗಳಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪ್ರಣಾಳಿಕೆ ಈ ಹಿಂದಿನ ಅಚ್ಚೇದಿನ್‌ನಿಂದ ಹಿಡಿದು, ವಿಕಸಿತ ಭಾರತ, ಅಮೃತ ಕಾಲ್‌ ಮೂಲಕ ಸಾಗಿ ಈಗಿನ ಮೋದಿ ಕೀ ಗ್ಯಾರಂಟಿ ವರೆಗೆ ಬಂದಿದೆ. ಮೋದಿ ಗ್ಯಾರಂಟಿಗೆ ವಾರಂಟಿ ಇಲ್ಲ, ಕಾಂಗ್ರೆಸ್‌ ಗ್ಯಾರಂಟಿಗೆ, ಖರ್ಗೆ ಸಾಹೇಬರು, ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಸಾಹೇಬರೇ ವಾರಂಟಿ ಇದ್ದಾರೆಂದರು.

ಸಿಬಿಐ, ಐಟಿ, ಇಡಿ ಕತ್ತೆ ಕಾಯ್ತಿದವಾ? ಕರ್ನಾಟಕದಿಂದ ಬ್ಲಾಕ್ ಮನಿ ಹೋಗ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಖರ್ಗೆ ಕಿಡಿ 

ಈ ಹಿಂದಿನ ಹತ್ತು ವರ್ಷಗಳ ಗ್ಯಾರಂಟಿಗಳು ಯಾರ ಗ್ಯಾರಂಟಿಗಳಾಗಿದ್ದವು? ಅವರದೇ ಗ್ಯಾರಂಟಿಗಳಾದ ಅಚ್ಛೇದಿನ್, ಸ್ಕಿಲ್ ಇಂಡಿಯಾ, ಮೇಕ್ ಇನ್‌ ಇಂಡಿಯಾ, 100 ಸ್ಮಾರ್ಟ್‌ಸಿಟಿಗಳು, 2 ಕೋಟಿ ಉದ್ಯೋಗ ಸೃಷ್ಟಿಯ ಗ್ಯಾರಂಟಿಗಳು ಏನಾದವು? ಯಾವ ಗ್ಯಾರಂಟಿಗಳು ಅನುಷ್ಠಾನಗೊಂಡಿವೆ? ಅವರ ಗ್ಯಾರಂಟಿಗಳಿಗೆ ವಾರೆಂಟಿಯೇ ಇಲ್ಲ. ಹಾಗಾಗಿ, ಜನರು ಅವರ ಗ್ಯಾರಂಟಿಗಳನ್ನು ನಂಬುವುದಿಲ್ಲ. ನಮ್ಮ ಸರ್ಕಾರದ ಗ್ಯಾರಂಟಿಗಳನ್ನೇ ಬಿಜೆಪಿ ನಕಲು ಮಾಡಿದೆ ಎಂದರು.

ಕರ್ನಾಟಕದ್ದೇ ನಕಲು ಮಾಡುತ್ತಿದ್ದಾರೆ:

ನೇಮಕಾತಿ ಪರೀಕ್ಷೆಗಳಲ್ಲಿನ ವಂಚನೆ ತಡೆಯಲು ತಾವೇ ಖಾಸಗಿ ಬಿಲ್‌ ಮಂಡಿಸಿದ್ದಾಗಿ ಹೇಳಿದ ಖರ್ಗೆ, ಅದೀಗ ಎರಡೂ ಸದನಗಳಲ್ಲಿ ಪಾಸಾಗಿ ರಾಜ್ಯಪಾಲರ ಅನುಮೋದನೆಗೆ ಕಳಿಸಲಾಗಿತ್ತು, ಬಿಲ್‌ವಾಪಸ್‌ ಬಂದಿದೆ. ಇದೀಗ ಯುವಕರ ಬಗ್ಗೆ ಮೋದಿಯ ಗ್ಯಾರಂಟಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಕಾಯಿದೆ ತರಲಾಗುವುದು ಎಂದಿದೆ. ಇದು ನಮ್ಮ ಬಿಲ್‌ನ ನಕಲು. ಅವರದೇ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಪರೀಕ್ಷೆಗಳಲ್ಲಿ ಅವಾಂತರ ನಡೆದರೂ ಕ್ರಮ ಕೈಗೊಳ್ಳದವರು ಈಗ ಕ್ರಣಕ್ಕೆ ಮುಂದಾಗ್ತಾರಾ? ಎಂದು ಪ್ರಶ್ನಿಸಿದರು.

ಖಾಲಿ ಹುದ್ದೆ ಭರ್ತಿ ಮಾಡೋ ಬಗ್ಗೆ ಮಾತೇ ಇಲ್ಲ ಯಾಕೆ?:

ಕೇಂದ್ರದ ಅಂಕಿ ಅಂಶಗಳ ಪ್ರಕಾರ, ಕೇಂದ್ರ ಸರ್ಕಾರದಲ್ಲಿ 30 ಲಕ್ಷ ಕೇಂದ್ರದ ಹುದ್ದೆಗಳು ಖಾಲಿ ಇವೆ. ಅವುಗಳಲ್ಲಿ 9.64 ಲಕ್ಷ ಹುದ್ದೆಗಳು ಹಣಕಾಸು ಇಲಾಖೆಯಲ್ಲಿ, 3 ಲಕ್ಷ ಹುದ್ದೆಗಳು ರೇಲ್ವೆ ಇಲಾಖೆಯಲ್ಲಿ, 2.2 ಲಕ್ಷ ಹುದ್ದೆಗಳು ಸೇನೆಯ ಸಿವಿಲ್ ವಿಭಾಗದಲ್ಲಿ, 1.20 ಲಕ್ಷ ಹುದ್ದೆಗಳು ಅಂಚೆ ಇಲಾಖೆಯಲಿ, 74,000 ಹುದ್ದೆಗಳು ಕಂದಾಯ ಇಲಾಖೆಯಲ್ಲಿ ಖಾಲಿ ಇವೆ. ಈ ಎಲ್ಲ ಹುದ್ದೆ ತುಂಬಲು ಯಾವ ಕ್ರಮ ಕೈಗೊಳ್ಳಲಾಗುವುದು ಎನ್ನುವ ಕುರಿತು ಬಿಜೆಪಿ ಪ್ರಣಾಳಿಕೆಯಲ್ಲಿ ಇಲ್ಲ. ಐಒಎಲ್‌ ವರದಿ ಪ್ರಕಾರ ಶೇ.83ರಷ್ಟು ಯುವಕರು ನಿರುದ್ಯೋಗಿಗಳಾಗಿದ್ದಾರೆ. ಲೋಕನೀತಿ ಸರ್ವೆ ಪ್ರಕಾರ, ಶೇ.79 ಯುವಕರಿಗೆ ಉದ್ಯೋಗ ಅವಕಾಶಗಳು ಸಿಗುತ್ತಿಲ್ಲ. ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲವೆಂದು ಟೀಕಿಸಿದರು.

ಬಿಜೆಪಿಯವರು ಸ್ಕಿಲ್ ಇಂಡಿಯಾ ಯೋಜನೆಯಡಿಯಲ್ಲಿ 2022 ರ ಒಳಗಾಗಿ 40 ಕೋಟಿ ಯುವಕರಿಗೆ ತರಬೇತಿ ನೀಡುವುದಾಗಿ ಹೇಳಿದ್ದು ಈ ಗುರಿಯಲ್ಲಿ ಇದೂವರೆಗೆ ಕೇವಲ ಶೇ.3.51 (1.40 ಕೋಟಿ) ಜನರಿಗೆ ತರಬೇತಿ ನೀಡಿದ್ದಾರೆ ಹೊರತು ಉದ್ಯೋಗ ನೀಡಿಲ್ಲ. ಈ ಶೇ.3.51ರಲ್ಲಿ ಶೇ.80 ಯುವಕರಿಗೆ ಉದ್ಯೋಗ ಸಿಕ್ಕಿಲ್ಲ ಶೇ.20 ಯುವಕರು ಈ ಯೋಜನೆ ಉಪಯೋಗ ಇಲ್ಲ ಎಂದು ಬಿಟ್ಟು ಹೋಗಿದ್ದಾರೆಂದರು.

ಮೋದಿ ಮಾತು ಅನುಷ್ಠಾನವಾಯ್ತೆ?:

ಕಳೆದ ಸಲ ಬಂದಾಗ ಮೈಸೂರು, ಹಂಪಿ ಅಂಜನಾದ್ರಿ ಅಭಿವೃದ್ಧಿ ಮಾಡುವುದಾಗಿ ಮೋದಿ ಹೇಳಿದ್ದರು. ಅವೆಲ್ಲ ಏನಾಯ್ತು?. ಈಗ ಮತ್ತೆ ನಿನ್ನೆ ಅದೇ ಮಾತನ್ನೇ ಹೇಳಿದ್ದಾರೆ ಎಂದ ಖರ್ಗೆ ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾಗಿದ್ದ ಬರ ಪರಿಹಾರ, ತೆರಿಗೆ ಪರಿಹಾರ ಕುರಿತು ಮಾತೇ ಆಡಿಲ್ಲ. ದೇವೇಗೌಡ, ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನು ಪಕ್ಕ ಕೂಡಿಸಿಕೊಂಡು ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಚಾರ ಬಗ್ಗೆ ಮಾತನಾಡುತ್ತಾರೆ. ಯಡಿಯೂರಪ್ಪ ಭ್ರಷ್ಟಾಚಾರ ಮಾಡಿದ್ದಾರೆ ಎಂದು ತಾನೆ ಅವರನ್ನು ಸಿಎಂ ಸ್ಥಾನದಿಂದ‌ ಇಳಿಸಿದ್ದು ? ಯಡಿಯೂರಪ್ಪ ವಿಜಯೇಂದ್ರ ಅವರದ್ದು ಕುಟುಂಬ ರಾಜಕಾರಣವಲ್ಲವೇ? ಎಂದು ಪ್ರಶ್ನಿಸಿದರು.

ಅಬ್‌ ಕೀ ಬಾರ್‌, ಬಿಜೆಪಿ ಸಂಸತ್‌ ಸೇ ಬಾಹರ್‌:

ಅಬ್ ಕೀ ಬಾರ್ ಚಾರ್ ಸೌ ಪಾರ್ ಅಲ್ಲ ಅಬ್ ಕೀ ಬಾರ್ ಬಿಜೆಪಿ ಸಂಸತ್ ಕೇ ಬಹಾರ್ ಆಗುತ್ತದೆ ಎಂದು ಸಚಿವ, ಕರ್ನಾಟಕದಿಂದ ನೂರು ಕೋಟಿ‌ಹಣ ದೇಶದ‌ ಚುನಾವಣೆಗೆ ಬಳಕೆಯಾಗುತ್ತಿದೆ ಎಂದು ಪ್ರಧಾನಿ‌ ಹೇಳಿರುವುದು ಹಾಸ್ಯಾಸ್ಪದ. ‘ಕೇಂದ್ರದ ತನಿಖಾ‌ ಸಂಸ್ಥೆಗಳು ಅವರ ಕೈಯಲ್ಲೇ ಇವೆ. ಅವರಿಂದ ತನಿಖೆ‌ ನಡೆಸಲಿ’ ಎಂದು ಸವಾಲು ಹಾಕಿದರು.

ಪ್ರಧಾನಿ ಮೋದಿ ಕನ್ನಡಿಗರಿಗೇನು ಕೊಟ್ಟಿದ್ದಾರೆಂದು ಹೇಳಲಿ: ಸಚಿವ ಪ್ರಿಯಾಂಕ್ ಖರ್ಗೆ

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಕೆಪಿಸಿಸಿ ಪ್ರ. ಕಾರ್ಯದರ್ಶಿ ರಾಜಗೋಪಾಲರೆಡ್ಡಿ, ಡಾ ಕಿರಣ್ ದೇಶಮುಖ್, ಪ್ರವೀಣ್ ಹರವಾಳ, ಶಿವು ಹೊನಗುಂಟಿ, ಅರವಿಂದ ಚವ್ಹಾಣ್‌ ಇದ್ದರು.

ಕಾಂಗ್ರೆಸ್‌ಗೆ ಮಾಲೀಕಯ್ಯಾ, ಪಕ್ಷದ ನಿರ್ಧಾರಕ್ಕೆ ಬದ್ಧ: ಖರ್ಗೆ

ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಪಕ್ಷ ಸೇರ್ಪಡೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಗುತ್ತೇದಾರ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಅಲ್ಲಿ ಏನು ಚರ್ಚೆಗಳಾಗಿವೆ ಎಂಬುದರ ಮಾಹಿತಿ ಇಲ್ಲ, ಭೇಟಿ ಆಗಿ ಬಂದಿದ್ದಾರೆ. ಆದರೆ, ಪಕ್ಷ ಸೇರ್ಪಡೆ ವಿಚಾರವಾಗಿ ಅಂತಹ ಯಾವುದೇ ಪ್ರಸ್ತಾವನೆ ಸದ್ಯ ಪಕ್ಷದ ಮುಂದಿಲ್ಲ. ಆದರೂ ಈ ವಿಚಾರದಲ್ಲಿ ಪಕ್ಷ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ತಾವು ಹಾಗೂ ತಮ್ಮ ಕುಟುಂಬ ಬದ್ಧವಾಗಿರುತ್ತದೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. 

Follow Us:
Download App:
  • android
  • ios