ಮಹಾರಾಷ್ಟ್ರದ ಪೌರಾಡಳಿತ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರಕ್ಕಿಳಿದಿದ್ದ ತಮಿಳ್ನಾಡಿನ ಬಿಜೆಪಿ ಮುಖಂಡ ಕೆ.ಅಣ್ಣಾಮಲೈ ಹಾಗೂ ಎಂಎನ್‌ಎಸ್‌ ನೇತಾರ ರಾಜ್ ಠಾಕ್ರೆ ಮಧ್ಯೆ ವಾಕ್ಸಮರ ಏರ್ಪಟ್ಟಿದೆ.

 ಮುಂಬೈ: ಮಹಾರಾಷ್ಟ್ರದ ಪೌರಾಡಳಿತ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರಕ್ಕಿಳಿದಿದ್ದ ತಮಿಳ್ನಾಡಿನ ಬಿಜೆಪಿ ಮುಖಂಡ ಕೆ.ಅಣ್ಣಾಮಲೈ ಹಾಗೂ ಎಂಎನ್‌ಎಸ್‌ ನೇತಾರ ರಾಜ್ ಠಾಕ್ರೆ ಮಧ್ಯೆ ವಾಕ್ಸಮರ ಏರ್ಪಟ್ಟಿದೆ. ಮಹಾರಾಷ್ಟ್ರದ ವಿಷಯಗಳ ಬಗ್ಗೆ ಮಾತನಾಡಲು ಅಣ್ಣಾಮಲೈಗೆ ಏನು ಅಧಿಕಾರವಿದೆ ಎಂದು ರಾಜ್‌ ಪ್ರಶ್ನಿಸಿದ್ದು, ಲುಂಗಿ ಧಾರಿಯಾದ ಅಣ್ಣಾಮಲೈ ಬಗ್ಗೆ ಆಕ್ಷೇಪಾರ್ಹ ವಾಕ್ಯ ಬಳಸಿದ್ದಾರೆ. ಇದಕ್ಕೆ ಅಣ್ಣಾಮಲೈ ಕೂಡ ತಿರುಗೇಟು ನೀಡಿದ್ದಾರೆ.

ಅಣ್ಣಾಮಲೈ ಅವರನ್ನು ‘ರಸಮಲೈ’ ಎಂದು ಲೇವಡಿ

ಮುಂಬೈನಲ್ಲಿ ನಡೆದ ಶಿವಸೇನೆ (ಯುಬಿಟಿ)-ಎಂಎನ್ಎಸ್ ಜಂಟಿ ಸಭೆಯಲ್ಲಿ ಮಾತನಾಡಿದ ರಾಜ್‌, ಅಣ್ಣಾಮಲೈ ಅವರನ್ನು ‘ರಸಮಲೈ’ ಎಂದು ಲೇವಡಿ ಮಾಡಿದರು ಹಾಗೂ ಮುಂಬೈ ಸಂಬಂಧಿತ ವಿಷಯಗಳ ಬಗ್ಗೆ ಮಾತನಾಡಲು ತಮಿಳು ನಾಯಕನಿಗೇನು ಹಕ್ಕಿದೆ ಎಂದು ಪ್ರಶ್ನಿಸಿದರು.

ಇದಲ್ಲದೆ, ಕಟ್ಟರ್‌ ಮರಾಠಿವಾದಿಗಳು ದಕ್ಷಿಣ ಭಾರತೀಯರ ವಿರುದ್ಧ ಐತಿಹಾಸಿಕವಾಗಿ ಬಳಸುತ್ತಿದ್ದ ‘ಉಠಾವೋ ಲುಂಗಿ, ಬಜಾವೋ ಪುಂಗಿ’ (ಲುಂಗಿ ಎತ್ತಿ ಪುಂಗಿ ಊದಿರಿ) ಎಂಬ ವಿವಾದಾತ್ಮಕ ಘೋಷಣೆಯನ್ನು ಲುಂಗಿಧಾರಿ ಅಣ್ಣಾಮಲೈ ಉಲ್ಲೇಖಿಸಿ ಚಾಟಿ ಬೀಸಿದರು.

ಅಣ್ಣಾಮಲೈ ತಿರುಗೇಟು:

ರಾಜ್‌ ಟೀಕೆಗೆ ಚೆನ್ನೈನಲ್ಲಿ ಪ್ರತಿಕ್ರಿಯಿಸಿದ ಅಣ್ಣಾಮಲೈ, ‘ಒಬ್ಬ ಭಾರತೀಯನಾದ ನಾನು ಮುಂಬೈ ಬಗ್ಗೆ ಮಾತಾಡುವುದರಲ್ಲಿ ತಪ್ಪೇನಿದೆ? ನನಗೆ ಬೆದರಿಕೆ ಹಾಕಲು ರಾಜ್ ಠಾಕ್ರೆ ಮತ್ತು ಆದಿತ್ಯ ಠಾಕ್ರೆ ಯಾರು? ನಾನು ರೈತನ ಮಗನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ಕೆಲವರು ನನ್ನನ್ನು ನಿಂದಿಸಲು ಮಾತ್ರ ಸಭೆಗಳನ್ನು ನಡೆಸುತ್ತಿದ್ದಾರೆ. ನಾನು ಅಷ್ಟು ಮುಖ್ಯ ವ್ಯಕ್ತಿಯೇ ಎಂದು ನನಗೆ ತಿಳಿದಿಲ್ಲ. ಯಾವ ಬೆದರಿಕೆಗೂ ನಾನು ಜಗ್ಗಲ್ಲ’ ಎಂದರು.

‘ನಾನು ಮುಂಬೈಗೆ ಬಂದರೆ ನನ್ನ ಕಾಲುಗಳನ್ನು ಕತ್ತರಿಸುವುದಾಗಿ ಕೆಲವರು ಬರೆದಿದ್ದಾರೆ. ನಾನು ಮುಂಬೈಗೂ ಹೋಗುವೆ. ನನ್ನ ಕಾಲುಗಳನ್ನು ಕತ್ತರಿಸಿ ಎಂದು ಅವರಿಗೆ ಸವಾಲು ಹಾಕುತ್ತೇನೆ. ಅಂತಹ ಬೆದರಿಕೆಗಳಿಗೆ ನಾನು ಹೆದರಿದ್ದರೆ, ನಾನು ನನ್ನ ಹಳ್ಳಿಯಲ್ಲಿಯೇ ಇರುತ್ತಿದ್ದೆ’ ಎಂದರು.

ಚೆನ್ನೈನ ಬಜೆಟ್ ₹ 8,000 ಕೋಟಿ. ಬೆಂಗಳೂರಿನ ಬಜೆಟ್ ₹ 19,000 ಕೋಟಿ. ಮುಂಬೈ ನಗರದ ಬಜೆಟ್ ₹ 75,000 ಕೋಟಿ. ಆದ್ದರಿಂದ ಮುಂಬೈ ಹಣಕಾಸು ನಿರ್ವಹಿಸಲು, ಅಭಿವೃದ್ಧಿ ನಿರ್ವಹಿಸಲು ಆಡಳಿತದಲ್ಲಿ ಒಳ್ಳೆಯ ಜನರು ಬೇಕು ಎಂದರು.

ನನ್ನ ಕಾಲು ಕತ್ತರಿಸಿ

ಭಾರತೀಯನಾದ ನಾನು ಮುಂಬೈ ಬಗ್ಗೆ ಮಾತಾಡುವುದರಲ್ಲಿ ತಪ್ಪೇನಿದೆ? ನನಗೆ ಬೆದರಿಕೆ ಹಾಕಲು ರಾಜ್ ಠಾಕ್ರೆ ಮತ್ತು ಆದಿತ್ಯ ಠಾಕ್ರೆ ಯಾರು? ನಾನು ಮುಂಬೈಗೆ ಬಂದರೆ ನನ್ನ ಕಾಲುಗಳನ್ನು ಕತ್ತರಿಸುವುದಾಗಿ ಕೆಲವರು ಹೇಳಿದ್ದಾರೆ. ನಾನು ಮುಂಬೈಗೂ ಹೋಗುವೆ. ನನ್ನ ಕಾಲುಗಳನ್ನು ಕತ್ತರಿಸಿ.

ಅಣ್ಣಾಮಲೈ, ಬಿಜೆಪಿ ನಾಯಕ