ಭ್ರಷ್ಟಾಚಾರ ನಡೆಸಿದ್ರೆ ಸಹಿಸಲ್ಲ: ಕರ್ನಾಟಕದ ಸಚಿವರಿಗೆ ರಾಹುಲ್‌ ಗಾಂಧಿ ಎಚ್ಚರಿಕೆ

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಹೋರಾಡಿ ಕಾಂಗ್ರೆಸ್‌ ಗೆದ್ದಿದೆ. ಇದರಿಂದ ಕಂಗೆಟ್ಟಿರುವ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಮುಂಬರುವ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ಸಿಗೂ ಭ್ರಷ್ಟಾಚಾರದ ಕಳಂಕ ಹಚ್ಚುವ ಪ್ರಯತ್ನ ಮಾಡಬಹುದು. ಇದಕ್ಕೆ ಆಸ್ಪದ ನೀಡದಂತೆ ರಾಜ್ಯದ ಸಚಿವರು ಆಡಳಿತ ನಡೆಸಬೇಕು ಎಂದು ರಾಹುಲ್‌ ಗಾಂಧಿ ಸಭೆಯಲ್ಲಿ ಎಚ್ಚರಿಸಿದರು 

Rahul Gandhi Warns the Minister of Karnataka For Corruption will not be Tolerated grg

ಬೆಂಗಳೂರು(ಆ.03):  ‘ಬಿಜೆಪಿಯ ಭ್ರಷ್ಟಆಡಳಿತದ ವಿರುದ್ಧ ರೋಸಿ ಜನರು ಕಾಂಗ್ರೆಸ್‌ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಹೀಗಾಗಿ, ಎಐಸಿಸಿಯು ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಪಾಲಿಸಲಿದೆ.’ ಇದು ದೆಹಲಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಸಚಿವರೊಂದಿಗಿನ ಸಭೆ ಹಾಗೂ ಹಿರಿಯ ನಾಯಕರ ಸಭೆಯಲ್ಲಿ ರಾಜ್ಯದ ಸಚಿವರಿಗೆ ಎಐಸಿಸಿ ವರಿಷ್ಠ ರಾಹುಲ್‌ ಗಾಂಧಿ ನೀಡಿದ ಖಡಕ್‌ ಎಚ್ಚರಿಕೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಹೋರಾಡಿ ಕಾಂಗ್ರೆಸ್‌ ಗೆದ್ದಿದೆ. ಇದರಿಂದ ಕಂಗೆಟ್ಟಿರುವ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಮುಂಬರುವ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ಸಿಗೂ ಭ್ರಷ್ಟಾಚಾರದ ಕಳಂಕ ಹಚ್ಚುವ ಪ್ರಯತ್ನ ಮಾಡಬಹುದು. ಇದಕ್ಕೆ ಆಸ್ಪದ ನೀಡದಂತೆ ರಾಜ್ಯದ ಸಚಿವರು ಆಡಳಿತ ನಡೆಸಬೇಕು ಎಂದು ರಾಹುಲ್‌ ಗಾಂಧಿ ಸಭೆಯಲ್ಲಿ ಎಚ್ಚರಿಸಿದರು ಎಂದು ಮೂಲಗಳು ತಿಳಿಸಿವೆ.

ರಾಹುಲ್ ಗಾಂಧಿಗೆ ಸೂಕ್ತವಾದ ಹುಡುಗಿ ಹುಡುಕಿ ಕೊಡಿ: ಮಹಿಳೆಯರಿಗೆ ಸೋನಿಯಾ ಮನವಿ

ಇದೇ ವೇಳೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದ ನಂತರ ಭ್ರಷ್ಟಾಚಾರದ ಬಗ್ಗೆ ವಿಪರೀತ ಎನಿಸುವಷ್ಟುಊಹಾಪೋಹಗಳು ಹರಡುತ್ತಿವೆ. ಹಾಗಂತ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ನನ್ನ ಅಭಿಪ್ರಾಯವಲ್ಲ. ಆದರೆ, ಆಡಳಿತದ ಬಗ್ಗೆ ಈ ರೀತಿಯ ಊಹಾಪೋಹ ಹಬ್ಬುವಿಕೆಗೆ ಆಸ್ಪದ ನೀಡಬಾರದು ಎಂದು ಎಚ್ಚರಿಸಿದರು ಎನ್ನಲಾಗಿದೆ.

ಕೇಂದ್ರದಲ್ಲಿ ಯುಪಿಎ-2 ಸರ್ಕಾರ ಅಧಿಕಾರದಲ್ಲಿ ಇದ್ದಾಗ ಅತ್ಯುತ್ತಮ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿತ್ತು. ಆದರೆ, ಕೆಲ ಭ್ರಷ್ಟಾಚಾರ ಪ್ರಕರಣಗಳಿಗೆ ದೊರೆತ ವಿಪರೀತ ಪ್ರಚಾರದಿಂದಾಗಿ ಚುನಾವಣೆಯಲ್ಲಿ ಸೋಲನುಭವಿಸಬೇಕಾಯಿತು. ವಾಸ್ತವದಲ್ಲಿ ಭ್ರಷ್ಟಾಚಾರ ಇದೆಯೋ ಇಲ್ಲವೋ ಊಹಾಪೋಹಗಳ ಮೂಲಕ ಕಣ್ಣು ಕುಕ್ಕುವಂತಾದರೂ ಅಧಿಕಾರ ಹೋಗಲಿದೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಿಜೆಪಿಯು ಮಾಧ್ಯಮಗಳ ಮೂಲಕ ವಿಪರೀತ ಸುಳ್ಳು ಹಾಗೂ ಸರ್ಕಾರದ ಬಗ್ಗೆ ಕೆಟ್ಟಭಾವನೆ ಮೂಡಿಸುವ ಪ್ರಯತ್ನಗಳನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತದೆ. ಇದಕ್ಕೆ ಇಂಬು ನೀಡುವಂತಹ ಚಟುವಟಿಕೆಗಳು ನಡೆಯಬಾರದು. ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಒಳ್ಳೆ ಹೆಸರು ಬಂದಿದೆ. ಇದನ್ನು ಜನರಿಗೆ ಸಮರ್ಪಕವಾಗಿ ಮುಟ್ಟಿಸುವ ಮೂಲಕ ಉತ್ತಮ ಆಡಳಿತ ನೀಡುವ ದಿಸೆಯಲ್ಲಿ ಕೆಲಸ ಮಾಡಬೇಕು ಎಂದರು.

ಈ ಬಾರಿ ಕಾಂಗ್ರೆಸ್‌ ರಾಜ್ಯದಲ್ಲಿ ಅಭೂತ ಪೂರ್ವ ಗೆಲುವು ಸಾಧಿಸಲು ಮುಖ್ಯ ಕಾರಣ ಎಲ್ಲ ಜಾತಿ ಸಮುದಾಯಗಳ ಬಡವರು ಪಕ್ಷಕ್ಕೆ ಮತ ಹಾಕಿದ್ದು. ಹೀಗಾಗಿ ಸಮುದಾಯಗಳು ಸರ್ಕಾರದಿಂದ ಸ್ವಚ್ಛ ಹಾಗೂ ಪಾರದರ್ಶಕ ಆಡಳಿತ ನಿರೀಕ್ಷಿಸುತ್ತಾರೆ. ಇದನ್ನು ನೀಡುವ ಹೊಣೆ ನಿಭಾಯಿಸಬೇಕಿದೆ ಎಂದು ನಿರ್ದೇಶನ ನೀಡಿದರು ಎಂದು ಮೂಲಗಳು ಹೇಳಿವೆ.

ದೇಶದ ಗಮನ ಕರ್ನಾಟಕದೆಡೆ:

ಇದಕ್ಕೂ ಮೊದಲು ರಾಹುಲ್‌ ಗಾಂಧಿ, ಸರ್ಕಾರ ರಚನೆಯಾಗಿ ಎರಡು ತಿಂಗಳಲ್ಲೇ ಗ್ಯಾರಂಟಿಗಳು ಜಾರಿಯಾಗಿ ಪ್ರತಿ ದಿನ ಈ ಯೋಜನೆಗಳ ಲಾಭ ಕರ್ನಾಟಕದ ಮಧ್ಯಮ ವರ್ಗ ಮತ್ತು ಬಡವರಿಗೆ ತಲುಪುತ್ತಿದೆ. ಈ ಗ್ಯಾರಂಟಿಗಳು ಪ್ರತಿಯೊಬ್ಬ ಫಲಾನುಭವಿಗೂ ಕಡ್ಡಾಯವಾಗಿ ತಲುಪುವಂತೆ ಸರ್ಕಾರಿ ಯಂತ್ರವನ್ನು ಯಶಸ್ವಿಯಾಗಿ ಬಳಸಿ. ಬೇರೆ ಬೇರೆ ರಾಜ್ಯ ಸರ್ಕಾರಗಳು ಕರ್ನಾಟಕದ ಕಡೆಗೆ ನೋಡುತ್ತಿವೆ. ಸಾಲದ ಹೊರೆ ಆಗದಂತೆ, ಇರುವ ಅವಕಾಶದಲ್ಲೇ ಐದು ಗ್ಯಾರಂಟಿಗಳಿಗೆ ಹಣ ಹೊಂದಿಸುವ ಮೂಲಕ ಕರ್ನಾಟಕ ದೇಶಕ್ಕೆ ಒಂದು ಆರ್ಥಿಕ ಮಾದರಿಯನ್ನು ರೂಪಿಸಿಕೊಟ್ಟಿದೆ. ಐದು ಗ್ಯಾರಂಟಿಗಳು ದೇಶದ ಆರ್ಥಿಕ ನೀತಿಯ ಗೇಮ್‌ ಚೇಂಜರ್‌ ಆಗುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಿದರು ಎಂದು ತಿಳಿದುಬಂದಿದೆ.

ಭಾರತ್‌ ಜೋಡೋ ಯಾತ್ರೆ ಬಳಿಕ ರಾಹುಲ್‌ ಗಾಂಧಿಗೆ ಮಂಡಿನೋವು: ಕೇರಳದಲ್ಲಿ ಆಯುರ್ವೇದಿಕ್‌ ಚಿಕಿತ್ಸೆ

ಮೊದಲ ಹಂತದ ಸಭೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಎಐಸಿಸಿ ಸದಸ್ಯರು, ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಎಐಸಿಸಿ ಕಾರ್ಯದರ್ಶಿಗಳು, ಪ್ರಮುಖ ಸಚಿವರು ಸೇರಿ ಸುಮಾರು 37 ಮಂದಿಯನ್ನು ಉದ್ದೇಶಿಸಿ ರಾಹುಲ್‌ ಗಾಂಧಿ ಮಾತನಾಡಿದರು. ಅನಂತರ ಅವರು ರಾಜ್ಯ ಸಚಿವ ಸಂಪುಟದ ಸದಸ್ಯರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು.

ಎಂಎಲ್‌ಸಿ ನಾಮನಿರ್ದೇಶನ ಅಧಿಕಾರ ರಾಜ್ಯಕ್ಕೆ

ವಿಧಾನಪರಿಷತ್‌ನ ಮೂರು ನಾಮನಿರ್ದೇಶಿತ ಸದಸ್ಯ ಸ್ಥಾನಗಳಿಗೆ ಅಂತಿಮ ಹೆಸರುಗಳನ್ನು ಅಖೈರುಗೊಳಿಸುವ ಜವಾಬ್ದಾರಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ವಹಿಸಲಾಗಿದೆ. ನಿಮ್ಮ ಹಂತದಲ್ಲೇ ನಿರ್ಧರಿಸಿ ಅಂತಿಮಗೊಳಿಸಿ ಎಂದು ರಾಹುಲ್‌ ಗಾಂಧಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಹುಲ್‌ ಹೇಳಿದ್ದೇನು?

- ಬಿಜೆಪಿಯ ಭ್ರಷ್ಟಆಡಳಿತದ ವಿರುದ್ಧ ಜನರು ರೋಸಿ ಹೋಗಿದ್ದಾರೆ
- ಹೀಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ
- ಎಐಸಿಸಿಯು ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ಪಾಲಿಸಲಿದೆ
- ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪುವಂತೆ ಮಾಡಿ
- ಗ್ಯಾರಂಟಿ ಬಗ್ಗೆ ಇತರೆ ಸರ್ಕಾರಗಳು ಕರ್ನಾಟಕ ಕಡೆ ನೋಡುತ್ತಿವೆ

ಖರ್ಗೆ ತಿಳಿಸಿದ್ದೇನು?

- ರಾಜ್ಯದಲ್ಲಿ ವಿಪರೀತ ಎನ್ನಿಸುವಷ್ಟುಊಹಾಪೋಹಗಳು ಹರಡುತ್ತಿವೆ
- ಹಾಗಂತ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಹೇಳಲ್ಲ
- ಆದರೆ, ಈ ರೀತಿಯ ಊಹಾಪೋಹ ಹಬ್ಬುವಿಕೆಗೆ ಆಸ್ಪದ ನೀಡಬಾರದು
- ಯುಪಿಎ-2 ಸರ್ಕಾರ ಅತ್ಯುತ್ತಮ ಅಭಿವೃದ್ಧಿ ಕಾರ್ಯಕ್ರಮ ರೂಪಿಸಿತ್ತು
- ಕೆಲ ಭ್ರಷ್ಟಾಚಾರ ಪ್ರಕರಣಗಳಿಗೆ ದೊರೆತ ವಿಪರೀತ ಪ್ರಚಾರದಿಂದ ಸೋತಿತು

Latest Videos
Follow Us:
Download App:
  • android
  • ios