ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಸಚಿವ ಬಿ.ನಾಗೇಂದ್ರ ಅವರನ್ನು, ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೂ ಸಂಪುಟದಿಂದ ವಜಾಗೊಳಿಸಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷ ಆಗ್ರಹಿಸಿದೆ.
ಬೆಂಗಳೂರು (ಜು.7): ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣದಲ್ಲಿ ಗಂಭೀರ ಆರೋಪ ಎದುರಿಸುತ್ತಿರುವ ಸಚಿವ ಬಿ.ನಾಗೇಂದ್ರ ಅವರನ್ನು ಪ್ರಕರಣದ ವಿಚಾರಣೆ ಪೂರ್ಣಗೊಂಡು ಅಂತಿಮ ತೀರ್ಪು ಬರುವವರೆಗೂ ಸಂಪುಟದಿಂದ ವಜಾಗೊಳಿಸುವಂತೆ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷ ಆಗ್ರಹಿಸಿದೆ.
ಗಂಭೀರ ಆರೋಪ ಎದುರಿಸುತ್ತಿರುವ ಬಿ ನಾಗೇಂದ್ರಗೆ ಮಂತ್ರಿಗಿರಿ ಯಾಕೆ?
ಈ ಪ್ರಕರಣದಲ್ಲಿ ತನಿಖೆಗೆ ಒಳಗಾಗಿರುವ ಬಿ.ನಾಗೇಂದ್ರ ಅವರನ್ನು ಮತ್ತೆ ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಖಂಡನೀಯ. ಈ ಪ್ರಕರಣ ಸಂಬಂಧ ಇಡಿ, ಸಿಬಿಐ ಮತ್ತು ಎಸ್ಐಟಿ ತನಿಖೆ ನಡೆಸಿದ್ದು, ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ಗಳನ್ನೂ ಸಲ್ಲಿಸಿವೆ. ಈ ಚಾರ್ಜ್‌ಶೀಟ್‌ಗಳಲ್ಲಿ ಬಿ.ನಾಗೇಂದ್ರ ಅವರ ಪಾತ್ರದ ಬಗ್ಗೆ ಆರೋಪಗಳನ್ನು ಉಲ್ಲೇಖಿಸಲಾಗಿದೆ. ಇಂತಹ ಗಂಭೀರ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ಸಚಿವ ಸಂಪುಟದಲ್ಲಿ ಮುಂದುವರೆಸಿರುವುದು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಪೋಷಿಸುವ ನಿಲುವಿಗೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಪಕ್ಷದ ಕಾರ್ಯಾಧ್ಯಕ್ಷ ರಘು ಜಾಣಗೆರೆ ಟೀಕಿಸಿದ್ದಾರೆ.
ವಾಲ್ಮೀಕಿ ನಿಗಮದ ಹಣ ತಿಂದಿದ್ದಕ್ಕಲ್ಲವೇ ಜೈಲು ಸೇರಿದ್ದು?
ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಮೀಸಲಾಗಿದ್ದ ಕೋಟ್ಯಂತರ ರು. ಸಾರ್ವಜನಿಕ ಹಣದ ದುರುಪಯೋಗದ ಆರೋಪಗಳು ಇರುವ ಪ್ರಕರಣದ ಪ್ರಮುಖ ಆರೋಪಿಗೆ ಸಚಿವ ಸ್ಥಾನ ನೀಡಿರುವುದು ಕಾಂಗ್ರೆಸ್ ಪಕ್ಷದ ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಈ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆ ಮುಂದುವರೆದಿರುವ ಹಿನ್ನೆಲೆಯಲ್ಲಿ ನ್ಯಾಯಾಂಗ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಬಿ. ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ದೂರವಿಡಬೇಕು. ಅಗತ್ಯವಿದ್ದಲ್ಲಿ ಅವರು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯವ್ಯಾಪಿ ಹೋರಾಟ ಕೆಆರ್‌ಎಸ್ ಎಚ್ಚರಿಕೆ
ಪ್ರಸ್ತುತ ಜಾಮೀನಿನ ಮೇಲಿರುವ ನಾಗೇಂದ್ರ ಅವರಿಗೆ ಜಾಮೀನು ಷರತ್ತುಗಳಲ್ಲಿ ಅವರ ಸಂಚಾರದ ಮೇಲೂ ಕೆಲವು ನಿರ್ಬಂಧಗಳು ಜಾರಿಯಲ್ಲಿವೆ. ಇಂತಹ ಪರಿಸ್ಥಿತಿಯಲ್ಲಿ ಸಚಿವ ಸ್ಥಾನದಲ್ಲಿರುವ ವ್ಯಕ್ತಿಯು ತನ್ನ ಕರ್ತವ್ಯಗಳನ್ನು ಸಂಪೂರ್ಣ ಸ್ವಾತಂತ್ರ್ಯದಿಂದ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಹೇಗೆ ಸಾಧ್ಯ? ಹೀಗಾಗಿ ಈ ಪ್ರಕರಣದ ವಿಚಾರಣೆ ಪೂರ್ಣಗೊಂಡು ಅಂತಿಮ ತೀರ್ಪು ಬರುವವರೆಗೂ ಬಿ. ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಇಲ್ಲವಾದರೆ, ಪಕ್ಷದಿಂದ ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಳ್ಳುವುದಾಗಿ ಅವರು ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.


