ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಅಸ್ಸಾಂನ ಪ್ರಸಿದ್ಧ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.  ತಾಂತ್ರಿಕ ದೇವಿಯು ಇವರ ರಾಜಕೀಯ ಬಯಕೆಗಳನ್ನು ಈಡೇರಿಸುವಳೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.

ಅಸ್ಸಾಂನ ಗುವಾಹಟಿಯಲ್ಲಿರುವ ನೀಲಾಚಲ ಬೆಟ್ಟದ ಮೇಲಿರುವ ಕಾಮಾಕ್ಯ ದೇವಾಲಯ (Kamakhya Temple) ಭಾರತದ ಅತ್ಯಂತ ಹಳೆಯ ಮತ್ತು ಪವಿತ್ರವಾದ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ತಾಂತ್ರಿಕ ಪೂಜೆಗೆ ಹೆಸರುವಾಸಿಯಾದ ಈ ದೇವಾಲಯದಲ್ಲಿ ದೇವಿಯ ಯೋನಿ ರೂಪವನ್ನು ಪೂಜಿಸಲಾಗುತ್ತದೆ. ಈ ದೇವಾಲಯವು ಕುಲಚಾರ ತಂತ್ರ ಮಾರ್ಗದ ಕೇಂದ್ರವಾಗಿದೆ ಮತ್ತು ದೇವತೆಯ ಮುಟ್ಟನ್ನು ಆಚರಿಸುವ ವಾರ್ಷಿಕ ಉತ್ಸವವಾದ ಅಂಬುಬಾಚಿ ಮೇಳದ ಸ್ಥಳವಾಗಿದೆ. ಕೇಳಿದ್ದನ್ನು ಬೇಡುವ ದೇವಿ ಎಂದೇ ಈಕೆಯನ್ನು ಪೂಜಿಸಲಾಗುತ್ತದೆ. ಇದೀಗ ಈ ದೇಗುಲಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಮತ್ತು ಕಾಂಗ್ರೆಸ್​ ಸಂಸದೆ ಪ್ರಿಯಾಂಕಾ ಗಾಂಧಿ ಭೇಟಿ ನೀಡಿದ್ದು, ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಡಿಕೆಶಿ ಹೇಳಿದ್ದೇನು?

ಈ ಕುರಿತು ಡಿ.ಕೆ.ಶಿವಕುಮಾರ್​ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರ ಜೊತೆಗೆ ಅಸ್ಸಾಂನ ಗುವಾಹಟಿಯಲ್ಲಿರುವ ಪವಿತ್ರ ಕಾಮಾಖ್ಯ ದೇವಾಲಯಕ್ಕೆ ಭೇಟಿ ನೀಡಿದೆ. ಕಾಮಾಕ್ಯ ದೇವಿಯ ಆಶೀರ್ವಾದವು ಎಲ್ಲರಿಗೂ ಶಕ್ತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಡಿಕೆಶಿ ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಇದಾಗಲೇ ರಾಜ್ಯ ರಾಜಕೀಯದಲ್ಲಿ ಕೆಲವು ತಿಂಗಳುಗಳಿಂದ ಆಗುತ್ತಿರುವ ಮೌನ ಗುದ್ದಾಟದ ಬಗ್ಗೆ ಎಲ್ಲರಿಗೂ ತಿಳಿದಿರುವ ವಿಷಯವೇ. ಡಿಕೆಶಿ ಅವರು ನಿಯಮದ ಪ್ರಕಾರ ತಮಗೆ ಬರಬೇಕಿರುವ ಸಿಎಂ ಖುರ್ಚಿಗಾಗಿ ಬೇಡಿಕೆ ಒಡ್ಡುತ್ತಿದ್ದಾರೆ. ಇದಾಗಲೇ ಕೆಲವು ಜ್ಯೋತಿಷಿಗಳು ಹೇಳಿದ ಪ್ರಕಾರ, ಸಂಕ್ರಾಂತಿ ಮುಗಿದ ಮೇಲೆ ಸಿಎಂ ಖುರ್ಚಿ ಅವರಿಗೆ ಸಿಗಬೇಕಿತ್ತು. ಆದರೆ ಸಂಕ್ರಾಂತಿ ಮುಗಿದು, ಶಿವರಾತ್ರಿಯೂ ಮುಗಿದು ಹೋಗಿದೆ. ಇದೀಗ ಕೆಲವರು ಬಜೆಟ್​ ಆಗಲಿ ಎಂದು ಭವಿಷ್ಯ ನುಡಿಯುತ್ತಿದ್ದಾರೆ.

ಹೋಮ-ಹವನಗಳ ಮೊರೆ

ಜ್ಯೋತಿಷ, ಭವಿಷ್ಯ ಏನೇ ಇದ್ದರೂ ಶಿವಕುಮಾರ್​ ಅವರಂತೂ ಇದಾಗಲೇ ಹಲವಾರು ರೀತಿಯ ಹೋಮ-ಹವನಗಳನ್ನು ನಡೆಸಿದ್ದಾರೆ. ಕಂಡ ಕಂಡ ದೇವರ ಮೊರೆ ಹೋಗಿದ್ದಾರೆ. ಪವಿತ್ರ ಸ್ಥಳಗಳಿಗೆ ಹೋಗಿ ಪೂಜೆ ಸಲ್ಲಿಸಿ ಬಂದಿದ್ದಾರೆ. ಇದೀಗ ಕಾಮಾಕ್ಯ ದೇಗುಲಕ್ಕೂ ಭೇಟಿ ನೀಡಿದ್ದಾರೆ.

ಪ್ರಧಾನಿ ಹುದ್ದೆ ಆಕಾಂಕ್ಷಿ

ಅದೇ ಇನ್ನೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೆಳಕ್ಕೆ ಇಳಿಸಿ, ಪ್ರಧಾನಿ ಸ್ಥಾನವನ್ನು ಕಾಂಗ್ರೆಸ್ಸಿಗರಿಗೆ ನೀಡಬೇಕು ಎಂದು ಕಳೆದೊಂದು ದಶಕದಿಂದ ಹೋರಾಟ ನಡೆಯುತ್ತಲೇ ಇದೆ. ಇಲ್ಲಿಯವರೆಗೆ ರಾಹುಲ್​ ಗಾಂಧಿ ಹೆಸರು ಪ್ರಧಾನಿ ಹುದ್ದೆಗೆ ಕೇಳಿಬರುತ್ತಿತ್ತು. ಆದರೆ ಅದು ಸಾಧ್ಯವಿಲ್ಲ ಎನ್ನುವ ಮಾತು ಪಕ್ಷದ ಒಳಗಿನಿಂದಲೇ ಕೇಳಿಬರುತ್ತಿದ್ದು, ಈ ಸ್ಥಾನಕ್ಕೆ ಪ್ರಿಯಾಂಕಾ ಗಾಂಧಿಯವರೇ ಸೂಕ್ತ ವ್ಯಕ್ತಿ ಎನ್ನಲಾಗಿದೆ. ಆದ್ದರಿಂದ ಪ್ರಿಯಾಂಕಾ ಅವರು ದೇವಸ್ಥಾನಗಳಲ್ಲಿ ಪೂಜೆ ನೆರವೇರಿಸುವ ಹಿಂದೆ ಇಂಥದ್ದೊಂದು ಕಾರಣ ಇದ್ದಿರಬಹುದು ಎಂದು ರಾಜಕೀಯ ವಲಯಗಳಲ್ಲಿ ಮಾತು ಕೇಳಿಬರುತ್ತಿದೆ. ಒಟ್ಟಿನಲ್ಲಿ ಪ್ರಧಾನಿ ಹುದ್ದೆ ಮತ್ತು ರಾಜ್ಯದ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಿಗೆ ತಾಂತ್ರಿಕ ದೇವಿ ಎಂದೇ ಪ್ರಸಿದ್ಧಿ ಹೊಂದಿರುವ ಕಾಮಾಕ್ಯ ದೇವಿ ಒಲಿಯುವಳೇ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದ್ದು, ಇದಕ್ಕೆ ಕಾಲವೇ ಉತ್ತರಿಸಬೇಕಿದೆ.

Scroll to load tweet…