ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕೃಷಿ ವಿಜ್ಞಾನ ಕಾಲೇಜು ಸ್ಥಾಪನೆ ಸಂಬಂಧ ತಜ್ಞರ ಸಮಿತಿ ವರದಿ ಪಡೆದು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದ್ದಾರೆ.

ವಿಧಾನಸಭೆ (ಮಾ.12): ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕೃಷಿ ವಿಜ್ಞಾನ ಕಾಲೇಜು ಸ್ಥಾಪನೆ ಸಂಬಂಧ ತಜ್ಞರ ಸಮಿತಿ ವರದಿ ಪಡೆದು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ಎ.ಕಿರಣ್‌ ಕುಮಾರ್‌ ಕೊಡ್ಗಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನೂತನ ಕೃಷಿ ಕಾಲೇಜು ಪ್ರಾರಂಭಿಸುವ ಪ್ರಸ್ತಾವನೆಗಳ ಪರಿಶೀಲಿಸುವ ಸಂಬಂಧ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಲಾಗಿದೆ. ಈ ಸಮಿತಿ ರಾಜ್ಯದಲ್ಲಿರುವ ಕೃಷಿ ವಿವಿಗಳ ಬಲವರ್ಧನೆ/ಹೊಸ ಕೃಷಿ ಕಾಲೇಜುಗಳ ಸ್ಥಾಪನೆ ಮತ್ತು ಅವುಗಳ ಇನ್ನಿತರ ಅಭಿವೃದ್ಧಿಗೆ ಅಗತ್ಯವಿರುವ ಅಂಶಗಳನ್ನು ಪರಿಶೀಲಿಸಲಿದೆ. ಹೊಸ ಕೃಷಿ ಕಾಲೇಜುಗಳ ಸ್ಥಾಪನೆ ಪ್ರಸ್ತಾವನೆಗಳನ್ನು ಈ ಸಮಿತಿಗೆ ಸಲ್ಲಿಸಬೇಕು. ಬಳಿಕ ಸಮಿತಿ ನೀಡುವ ವರದಿ ಆಧರಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಬಿಜೆಪಿ ಸರ್ಕಾರ ರದ್ದು ಮಾಡಿತ್ತು

ಬಿಜೆಪಿ ಸರ್ಕಾರವು ರಾಜ್ಯದ ಕೃಷಿ ಡಿಪ್ಲೊಮಾ ಕಾಲೇಜುಗಳನ್ನು ರದ್ದುಗೊಳಿಸಿತ್ತು. ನಮ್ಮ ಸರ್ಕಾರ ಮತ್ತೆ ಕೃಷಿ ಡಿಪ್ಲೊಮಾ ಕಾಲೇಜುಗಳಿಗೆ ಪ್ರವೇಶಾತಿ ಕಲ್ಪಿಸಿದೆ. ಬ್ರಹ್ಮಾವರ ಕೃಷಿ ಸಂಶೋಧನಾ ಸಂಶೋಧನಾ ಕೇಂದ್ರದಲ್ಲಿ ಇರುವ 300 ಎಕರೆ ಜಾಗದಲ್ಲಿ ಉಡುಪಿ ಜಿಲ್ಲೆಗೆ ಹೊಸ ಕೃಷಿ ಕಾಲೇಜು ಪ್ರಾರಂಭಿಸುವ ಪ್ರಸ್ತಾವನೆಯನ್ನು ಸದ್ಯಕ್ಕೆ ಪರಿಗಣಿಸಲು ಅವಕಾಶವಿಲ್ಲ. ಆದರೂ ತಜ್ಞರ ಸಮಿತಿ ವರದಿ ಪಡೆದು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಆರ್ಥಿಕ ಇಲಾಖೆ ಅನುಮತಿ ಕೊಟ್ಟರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

ಇದಕ್ಕೂ ಮುನ್ನ ಮಾತನಾಡಿದ ಶಾಸಕ ವಿ.ಸುನೀಲ್‌ ಕುಮಾರ್‌, ಉಡುಪಿ ಜಿಲ್ಲೆಗೆ ಕೃಷಿ ವಿಜ್ಞಾನ ಕಾಲೇಜು ಕೊಟ್ಟರೆ, ಕರಾವಳಿಯ ಮೂರು ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಮೂಲಸೌಕರ್ಯ ಇರುವುದರಿಂದ ಕಾಲೇಜು ಸ್ಥಾಪಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.