ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ನಡೆಸಿ ಹೊಳೆನರಸೀಪುರದಿಂದ ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ.ರೇವಣ್ಣ ಜಯಗಳಿಸಿದ್ದು, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಹೈಕೋರ್ಟ್‌ನಲ್ಲಿ  ಅರ್ಜಿ ಸಲ್ಲಿಸಲಾಗಿದೆ.

ಬೆಂಗಳೂರು ಆ.3): ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ನಡೆಸಿ ಹೊಳೆನರಸೀಪುರದಿಂದ ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ.ರೇವಣ್ಣ ಜಯಗಳಿಸಿದ್ದು, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಕುರಿತಂತೆ ಚುನಾವಣೆಯಲ್ಲಿ ರೇವಣ್ಣ(HD Revanna) ಅವರ ಎದುರು ಸೋತ ಬಿಜೆಪಿ ಅಭ್ಯರ್ಥಿ ದೇವರಾಜೇಗೌಡ ಚುನಾವಣಾ ತಕರಾರು ಸಲ್ಲಿಸಿದ್ದಾರೆ.

ಅರ್ಜಿ ಸಂಬಂಧ ಬುಧವಾರ ಕೆಲ ಕಾಲ ವಾದ ಆಲಿಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ಪೀಠ, ಎಚ್‌.ಡಿ.ರೇವಣ್ಣ, ಶ್ರೇಯಸ್‌ ಎಂ.ಪಟೇಲ್‌, ಗೀತಾ ಶಿವಸ್ವಾಮಿ, ಬಿ.ಕೆ.ನಾಗರಾಜ, ಎಚ್‌.ಎಸ್‌.ತಾರೇಶ್‌, ಡಿ.ಆರ್‌.ರಂಗಸ್ವಾಮಿ ಸೇರಿದಂತೆ ಎಲ್ಲ ಪ್ರತಿವಾದಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಸೆ.4ಕ್ಕೆ ಮುಂದೂಡಿತು.

ಸುಳ್ಳು ಜಾತಿ, ಶೈಕ್ಷಣಿಕ ಪ್ರಮಾಣಪತ್ರ ಆರೋಪ; ಪ್ರಿಯಾಂಕ್‌ ಖರ್ಗೆ ಆಯ್ಕೆ ರದ್ದತಿ ಕೋರಿ ಹೈಕೋರ್ಟ್‌ಗೆ ಅರ್ಜಿ

ಚುನಾವಣೆಯಲ್ಲಿ ಎಚ್‌.ಡಿ.ರೇವಣ್ಣ ಹೊಳೆನರಸೀಪುರ ಕ್ಷೇತ್ರದಿಂದ 88,103 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಅದನ್ನು ಪ್ರಶ್ನಿಸಿರುವ ಅರ್ಜಿದಾರರು, ರೇವಣ್ಣ ವ್ಯಾಪಕ ಚುನಾವಣಾ ಅಕ್ರಮಗಳನ್ನು ಎಸಗಿದ್ದಾರೆ. ಅವರ ಬೆಂಬಲಿಗರು ಅಣ್ಣೆಹಳ್ಳಿಯಲ್ಲಿ ಮತದಾರರಿಗೆ ಎರಡು ಕೋಳಿ ಮತ್ತು ಎರಡು ಸಾವಿರ ನಗದು ಹಂಚಿದ್ದಾರೆ. ಶಾಂತಿಗ್ರಾಮದ ಬಳಿ ಜನರಿಗೆ ಅಮಿಷವೊಡ್ಡುತ್ತಿದ್ದುದನ್ನು ತಡೆಯಲು ಹೋದಾಗ ರೇವಣ್ಣ ಅವರ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ.

ಈ ಬಗ್ಗೆ ಮಿಥುನ್‌, ಮೋಹನ್‌, ಮಂಜು ಮತ್ತು ಶಂಕರ್‌ ಸೇರಿ 30 ಮಂದಿ ವಿರುದ್ಧ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಅಲ್ಲದೆ, ರೇವಣ್ಣ ಅವರು ಸಲ್ಲಿಸಿರುವ ನಾಮಪತ್ರವೇ ದೋಷಪೂರಿತವಾಗಿದೆ. ಅವರು ತಮ್ಮ ಆಸ್ತಿ ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿಲ್ಲ ಎಂದೂ ಆರೋಪಿಸಿದ್ದಾರೆ.

ಕುಮಾರಸ್ವಾಮಿ ಜೊತೆ ಕುಸ್ತಿ..ರೇವಣ್ಣ ಜೊತೆ ದೋಸ್ತಿ: ದೇವೇಗೌಡರ ದೊಡ್ಡ ಮಗ ಅಂದ್ರೆ ಸಿದ್ದರಾಮಯ್ಯಗೆ ಬಲು ಪ್ರೀತಿ..!