ಸಮಾಜ ಮತ್ತು ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ಪಾಟಿದಾರ್ ನಾಯಕ ಮೇ 18 ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಹಾರ್ದಿಕ್ ಪಟೇಲ್ ಅವರ ಮುಂದಿನ ನಡೆ ಏನು ಎನ್ನುವ ಬಗ್ಗೆ ಅನುಮಾನಗಳು ಇದ್ದ ನಡುವೆಯೇ, ಗುರುವಾರದಂದು ತಾವು ಭಾರತೀಯ ಜನತಾ ಪಕ್ಷಕ್ಕೆ ಸೇರುವುದಾಗಿ ಹೇಳಿದ್ದಾರೆ.
ಅಹಮದಾಬಾದ್ (ಮೇ. 31): ಜೂನ್ 2 ರಂದು ಭಾರತೀಯ ಜನತಾ ಪಕ್ಷಕ್ಕೆ ಸೇರುವುದಾಗಿ ಕಾರ್ಯಕರ್ತ ಹಾರ್ದಿಕ್ ಪಟೇಲ್ (Hardik Patel) ಮಂಗಳವಾರ ಹೇಳಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ಗುಜರಾತ್ ಕಾಂಗ್ರೆಸ್ ಕಾರ್ಯಾಧ್ಯಕ್ಷ (Gujarat Congress working president ) ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲದೆ, ಪ್ರಾಥಮಿಕ ಸದಸ್ಯತ್ವಕ್ಕೆ (primary membership)ರಾಜೀನಾಮೆ ನೀಡಿದ ಸುಮಾರು ಎರಡು ವಾರಗಳ ನಂತರ ಅವರು ಈ ಘೋಷಣೆ ಮಾಡಿದ್ದಾರೆ.. ಗುಜರಾತ್ ವಿಧಾನಸಭೆ (Assembly elections ) ಚುನಾವಣೆಗೆ ತಿಂಗಳುಗಳ ಮುಂಚೆಯೇ ಈ ಬೆಳವಣಿಗೆ ನಡೆದಿದೆ.
ಗುಜರಾತ್‌ನ ಬಿಜೆಪಿ ವಕ್ತಾರ ಯಜ್ಞೇಶ್ ದವೆ (Yagnesh Dave) ಅವರು ಪಟೇಲ್ ಜೂನ್ 2 ರಂದು ಕೇಸರಿ ಪಕ್ಷಕ್ಕೆ ಸೇರುತ್ತಾರೆ ಎಂದು ಖಚಿತಪಡಿಸಿದ್ದಾರೆ ಎಂದು ಪಿಟಿಐ ಕೂಡ ವರದಿ ಮಾಡಿದೆ.
ಮೇ 18 ರಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಪಟೇಲ್ ಪಕ್ಷವು ಸಮಾಜ ಮತ್ತು ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಮಟ್ಟದ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಯಾವುದೇ ಕ್ರಮಗಳನ್ನು ವಿರೋಧಿಸಲು ಮಾತ್ರ ಆಸಕ್ತಿ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರವಿರಲಿ, ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿ ರದ್ದತಿಯಾಗಿರಲಿ, ಜಿಎಸ್‌ಟಿ ಜಾರಿಯಾಗಿರಲಿ (ಸರಕು ಮತ್ತು ಸೇವಾ ತೆರಿಗೆ) - ಭಾರತವು ಈ ವಿಷಯಗಳಿಗೆ ದೀರ್ಘಕಾಲ ಪರಿಹಾರಗಳನ್ನು ಬಯಸಿತ್ತು ಮತ್ತು ಕಾಂಗ್ರೆಸ್ ಮಾತ್ರ ರಸ್ತೆ ತಡೆ ಪಾತ್ರವನ್ನು ನಿರ್ವಹಿಸುತ್ತಿತ್ತು ಮತ್ತು ಯಾವಾಗಲೂ ಕೂಡ ಕೇವಲ ಪ್ರತಿರೋಧದ ಹೇಳಿಕೆಯ ಹೊರತಾಗಿ ಬೇರೆ ಯಾವ ಕೆಲಸವನ್ನೂ ಮಾಡೋದಿಲ್ಲ” ಎಂದು ಪಟೇಲ್ ಆರೋಪಿಸಿದ್ದರು.
ಹಿರಿಯ ಕಾಂಗ್ರೆಸ್ ನಾಯಕತ್ವವು ಗಂಭೀರತೆಯ ಕೊರತೆ ಮತ್ತು ಗುಜರಾತ್ ನಿವಾಸಿಗಳ ಸಮಸ್ಯೆಗಳನ್ನು ಆಲಿಸಲು ಸಿದ್ಧರಿಲ್ಲ ಎಂದು ಹಾರ್ದಿಕ್ ಪಟೇಲ್ ಆರೋಪಿಸಿದರು. ನಮ್ಮ ದೇಶವು ಸವಾಲುಗಳನ್ನು ಎದುರಿಸಿದಾಗ ಮತ್ತು ಕಾಂಗ್ರೆಸ್‌ಗೆ ನಾಯಕತ್ವದ ಅಗತ್ಯವಿದ್ದಾಗ ಕಾಂಗ್ರೆಸ್ ನಾಯಕರು ವಿದೇಶದಲ್ಲಿ ಆನಂದಿಸುತ್ತಿದ್ದರು ಎಂದು ಅವರು ಟೀಕಿಸಿದರು.
ಮೇ 19 ರಂದು, ಹಿಂದೂಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಪಕ್ಷವು ಮಾತನಾಡುವುದಿಲ್ಲ ಎಂದು ಪಟೇಲ್ ಆರೋಪಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆ, ಅಯೋಧ್ಯೆಯ ರಾಮ ಮಂದಿರ ಅಥವಾ ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಹಿಂದೂ ದೇವತೆ ಶಿವನ ಪ್ರಾತಿನಿಧ್ಯದ ಶಿವಲಿಂಗದ ಆವಿಷ್ಕಾರದಂತಹ ವಿಷಯಗಳ ಬಗ್ಗೆ ಕಾಂಗ್ರೆಸ್ ಎಂದಿಗೂ ಧ್ವನಿ ಎತ್ತುವುದಿಲ್ಲ ಎಂದು ಅವರು ಹೇಳಿದ್ದಾರೆ.
ಏಪ್ರಿಲ್ 22 ರಂದು, ಅವರು ಬಿಜೆಪಿಯನ್ನು ಅದರ "ಕಠಿಣ ನಿರ್ಧಾರ ತೆಗೆದುಕೊಳ್ಳುವ" ನಾಯಕತ್ವಕ್ಕಾಗಿ ಹೊಗಳಿದ್ದರು ಮತ್ತು ಅವರ ಎಲ್ಲಾ ಆಯ್ಕೆಗಳು ಮುಕ್ತವಾಗಿವೆ ಎಂದು ಹೇಳಿದರು. ಆದರೆ, ಆ ಸಮಯದಲ್ಲಿ ಪಟೇಲ್ ಅವರು ಕೇಸರಿ ಪಕ್ಷಕ್ಕೆ ಸೇರುವುದನ್ನು ನಿರಾಕರಿಸಿದ್ದರು. ಪಟೇಲ್ ಅವರು ದೇಶದ್ರೋಹದ ಪ್ರಕರಣಗಳಲ್ಲಿ ಜೈಲಿಗೆ ಹೋಗಬೇಕಾಗಬಹುದು ಎಂಬ ಭಯದಿಂದ ಪಕ್ಷವನ್ನು ತೊರೆದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜಗದೀಶ್ ಠಾಕೂರ್ ಹೇಳಿದ್ದರು.
ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಘಾತ, ಪಕ್ಷಕ್ಕೆ ರಾಜೀನಾಮೆ ನೀಡಿದ ಹಾರ್ದಿಕ್ ಪಟೇಲ್!
ಗುಜರಾತ್ ಚುನಾವಣೆಗೆ ದಿನಗಣನೆ ಆರಂಭವಾಗಿರುವ ನಡುವೆಯೇ ಕಾಂಗ್ರೆಸ್ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದ ಗುಜರಾತ್ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್, ಕಾರ್ಯಾಧ್ಯಕ್ಷ ಹುದ್ದೆಯಲ್ಲಿದ್ದಾಗಲೇ ಬಿಜೆಪಿಯನ್ನು ಹೊಗಳಿದ್ದರು. ‘ಬಿಜೆಪಿಯಲ್ಲಿ ಕೆಲವು ಒಳ್ಳೆಯ ಅಂಶಗಳಿವೆ. ನಾವು ಅದನ್ನು ಗುರುತಿಸಬೇಕು’ ಎಂದು ಹೇಳಿದ್ದಾರೆ. ಇದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು.
ಕಾಂಗ್ರೆಸ್‌ನಿಂದ ದೂರ ಸರಿದಿದ್ದೇಕೆ ಹಾರ್ದಿಕ್ ಪಟೇಲ್? ಪಾಟಿದಾರ್ ನಾಯಕ ಕೊಟ್ಟ 10 ಕಾರಣ!
‘ರಾಜಕೀಯವಾಗಿ ಬಿಜೆಪಿ ಹಲವು ನಿರ್ಣಯಗಳನ್ನು ಇತ್ತೀಚಿಗೆ ತೆಗೆದುಕೊಂಡಿದೆ. ಇಂತಹ ನಿರ್ಧಾರಗಳನ್ನು ಕೈಗೊಳ್ಳುವ ಶಕ್ತಿ ಆ ಪಕ್ಷಕ್ಕೆ ಇದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ಅವರ ಪರವಾಗಿ ನಿಲ್ಲದಿದ್ದರೂ ಈ ಸತ್ಯವನ್ನು ನಾವು ಒಪ್ಪಿಕೊಳ್ಳಬೇಕು. ಕಾಂಗ್ರೆಸ್ ಸಹ ಗುಜರಾತ್‌ನಲ್ಲಿ ಬಲವಾಗಬೇಕು ಎಂದರೆ ಕೌಶಲ್ಯ ಮತ್ತು ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಸುಧಾರಿಸಿಕೊಳ್ಳಬೇಕು’ ಎಂದಿದ್ದರು.
