* ಗುಜರಾತ್ ಕಾಂಗ್ರೆಸ್‌ಗೆ ಹಾರ್ದಿಕ್ ಪಟೇಲ್ ಗುಡ್‌ಬೈ* ಕಾಂಗ್ರೆಸ್ ಪಕ್ಷ ತೊರೆದಿದ್ದೇಕೆ ಹಾರ್ದಿಕ್?* ಪಾಟೀದಾರ್ ನಾಯಕ ಕೊಟ್ಟ ಹತ್ತು ಕಾರಣಗಳು ಹೀಗಿವೆ
ಅಹಮದಾಬಾದ್(ಮೇ.18): 2015ರಲ್ಲಿ ಪಾಟಿದಾರ್ ಮೀಸಲಾತಿ ಆಂದೋಲನದ ನೇತೃತ್ವ ವಹಿಸಿ ದೇಶಾದ್ಯಂತ ರಾಜಕೀಯದಲ್ಲಿ ಪ್ರಾಬಲ್ಯ ಮೆರೆದಿದ್ದ ಹಾರ್ದಿಕ್ ಪಟೇಲ್ ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಚುನಾವಣೆ ಸನ್ನಿಹಿತವಾಗುತ್ತಿದ್ದಂತೆಯೇ ಸೋನಿಯಾ ಗಾಂಧಿ ಅವರಿಗೆ ಸುದೀರ್ಘ ಪತ್ರವನ್ನು ಕಳುಹಿಸಿದ್ದಾರೆ. ಈ ಪತ್ರವನ್ನು ಅವರು ತಮ್ಮ ಟ್ವಿಟರ್‌ನಲ್ಲಿಯೂ ಹಂಚಿಕೊಂಡಿದ್ದಾರೆ. ಈ ಪತ್ರದಲ್ಲಿ ಅವರು ಇಂದು ನಾನು ಧೈರ್ಯದಿಂದ ಕಾಂಗ್ರೆಸ್ ಪಕ್ಷದ ಸ್ಥಾನಕ್ಕೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನ ನಿರ್ಧಾರವನ್ನು ನನ್ನ ಎಲ್ಲಾ ಸಹೋದ್ಯೋಗಿಗಳು ಮತ್ತು ಗುಜರಾತ್ ಜನರು ಸ್ವಾಗತಿಸುತ್ತಾರೆ ಎಂದು ನನಗೆ ಖಾತ್ರಿಯಿದೆ. ನನ್ನ ಈ ಹೆಜ್ಜೆ ಭವಿಷ್ಯದಲ್ಲಿ ಗುಜರಾತ್‌ಗಾಗಿ ನಿಜವಾಗಿಯೂ ಧನಾತ್ಮಕವಾಗಿ ಕೆಲಸ ಮಾಡಲಿದೆ ಎಂದಿದ್ದಾರೆ.
ಹಾರ್ದಿಕ್ ಪಟೇಲ್ ಪತ್ರದಲ್ಲಿ ಉಲ್ಲೇಖಿಸಿದ ಪ್ರಮುಖ 10 ಅಂಶಗಳು
1. ಸುಮಾರು 3 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವು ಕೇವಲ ಪ್ರತಿಭಟನೆಯ ರಾಜಕೀಯಕ್ಕೆ ಇಳಿದಿರುವುದನ್ನು ನಾನು ಕಂಡುಕೊಂಡಿದ್ದೇನೆ. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರವಾಗಲಿ, ಸಿಎಎ-ಎನ್‌ಆರ್‌ಸಿ ಸಮಸ್ಯೆಯಾಗಲಿ, ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಲಿ ಅಥವಾ ಜಿಎಸ್‌ಟಿ ಜಾರಿಯಾಗಲಿ, ದೇಶವು ದೀರ್ಘಕಾಲದಿಂದ ಪರಿಹಾರವನ್ನು ಬಯಸಿದೆ ಮತ್ತು ಕಾಂಗ್ರೆಸ್ ಪಕ್ಷವು ಕೇವಲ ಅಡ್ಡಿಯುಂಟು ಮಾಡುತ್ತಿದೆ.
2. ಕಾಂಗ್ರೆಸ್ ಪಕ್ಷ ಮತ್ತು ಪಕ್ಷದ ನಾಯಕತ್ವವು ಸಾರ್ವಜನಿಕರಿಗೆ ಮೂಲಭೂತ ಮಾರ್ಗಸೂಚಿಯನ್ನು ಪ್ರಸ್ತುತಪಡಿಸಲು ಸಾಧ್ಯವಾಗದ ಕಾರಣ ದೇಶದ ಪ್ರತಿಯೊಂದು ರಾಜ್ಯದಲ್ಲೂ ಕಾಂಗ್ರೆಸ್ ಅನ್ನು ಜನರು ತಿರಸ್ಕರಿಸಿದ್ದಾರೆ.
3. ನಾನು ಪಕ್ಷದ ಉನ್ನತ ನಾಯಕರನ್ನು ಭೇಟಿಯಾದಾಗಲೆಲ್ಲ, ಗುಜರಾತ್‌ನ ಜನರ ಮತ್ತು ಪಕ್ಷದ ಸಮಸ್ಯೆಗಳನ್ನು ಆಲಿಸುವುದಕ್ಕಿಂತ ನಾಯಕತ್ವದ ಗಮನವು ನನ್ನ ಮೊಬೈಲ್ ಮತ್ತು ಇತರ ವಿಷಯಗಳ ಮೇಲೆ ಹೆಚ್ಚು ಎಂದು ತೋರುತ್ತದೆ. ದೇಶವು ಸಂಕಷ್ಟದಲ್ಲಿದ್ದಾಗ ಅಥವಾ ಕಾಂಗ್ರೆಸ್‌ಗೆ ನಾಯಕತ್ವದ ಅಗತ್ಯವಿದ್ದಾಗ ನಮ್ಮ ನಾಯಕರು (ರಾಹುಲ್ ಗಾಂಧಿಯನ್ನು ಉಲ್ಲೇಖಿಸಿ) ವಿದೇಶದಲ್ಲಿದ್ದರು.
4. ಗುಜರಾತ್ ಬಗ್ಗೆ ಉನ್ನತ ನಾಯಕತ್ವದ ನಡವಳಿಕೆಯು ಅವರು ಗುಜರಾತ್ ಮತ್ತು ಗುಜರಾತಿಗಳನ್ನು ದ್ವೇಷಿಸುವಂತಿದೆ. ಹಾಗಾದರೆ ಗುಜರಾತ್‌ನ ಜನರು ಅವರನ್ನು ಪರ್ಯಾಯವಾಗಿ ನೋಡಬೇಕೆಂದು ಕಾಂಗ್ರೆಸ್ ಹೇಗೆ ನಿರೀಕ್ಷಿಸುತ್ತದೆ?
5. ನಮ್ಮಂತಹ ಕಾರ್ಯಕರ್ತರು ನಮ್ಮ ಸ್ವಂತ ಖರ್ಚಿನಲ್ಲಿ ದಿನಕ್ಕೆ 500-600 ಕಿಲೋಮೀಟರ್ ಪ್ರಯಾಣಿಸಿ, ಸಾರ್ವಜನಿಕರ ಬಳಿ ಹೋಗುತ್ತೇವೆ. ಇದೇ ವೇಳೆ ಗುಜರಾತ್‌ನ ದೊಡ್ಡ ನಾಯಕರು ಜನರ ಸಮಸ್ಯೆಗಳಿಂದ ದೂರವಿರುತ್ತಾರೆ. ಕೇವಲ ದೆಹಲಿಯ ನಾಯಕರಿಗೆ ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಸಿಕ್ಕಿತೇ ಎಂಬುವುದಷ್ಟೇ ಅವರಿಗೆ ಮಹತ್ವನೀಯವಾಗಿದೆ.
6. ನಾನು ಯುವಕರ ನಡುವೆ ಹೋದಾಗಲೆಲ್ಲ ಗುಜರಾತಿಗರನ್ನು ಮಾತ್ರ ಎಲ್ಲ ರೀತಿಯಿಂದಲೂ ಅವಮಾನಿಸುವ ಇಂತಹ ಪಕ್ಷದಲ್ಲಿ ನೀನೇಕೆ ಇದ್ದೀಯಾ ಎಂದು ಎಲ್ಲರೂ ಒಂದೇ ಮಾತನ್ನು ಹೇಳುತ್ತಿದ್ದರು, ಅದು ಉದ್ಯಮ ಕ್ಷೇತ್ರದಲ್ಲಿರಲಿ, ಧಾರ್ಮಿಕ ಕ್ಷೇತ್ರದಲ್ಲಿರಲಿ ಅಥವಾ ರಾಜಕೀಯ ಕ್ಷೇತ್ರವೇ ಆಗಿರಲಿ.
7. ಕಾಂಗ್ರೆಸ್ ಪಕ್ಷವು ಯುವಕರ ನಂಬಿಕೆಯನ್ನು ಮುರಿದಿದೆ ಎಂದು ನಾನು ಭಾವಿಸುತ್ತೇನೆ, ಇದರಿಂದಾಗಿ ಯಾರೂ ಇಂದು ಯುವ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಲು ಬಯಸುವುದಿಲ್ಲ.
8. ಕಾಂಗ್ರೆಸ್‌ನ ದೊಡ್ಡ ನಾಯಕರು ಉದ್ದೇಶಪೂರ್ವಕವಾಗಿ ಗುಜರಾತಿನ ಜನರ ಸಮಸ್ಯೆಗಳನ್ನು ಹೇಗೆ ದುರ್ಬಲಗೊಳಿಸಿದ್ದಾರೆ ಮತ್ತು ಪ್ರತಿಯಾಗಿ ದೊಡ್ಡ ಆರ್ಥಿಕ ಲಾಭವನ್ನು ಹೇಗೆ ತೆಗೆದುಕೊಂಡಿದ್ದಾರೆ ಎಂಬುದು ಇಂದು ಗುಜರಾತ್‌ನಲ್ಲಿರುವ ಎಲ್ಲರಿಗೂ ತಿಳಿದಿದೆ ಎಂದು ನಾನು ಬಹಳ ದುಃಖದಿಂದ ಹೇಳಬೇಕಾಗಿದೆ. ರಾಜಕೀಯ ಸಿದ್ದಾಂತವೇ ಬೇರೆ ಇರಬಹುದು ಆದರೆ ಕಾಂಗ್ರೆಸ್ ನ ಹಿರಿಯ ನಾಯಕರನ್ನು ಈ ರೀತಿ ಮಾರಾಟ ಮಾಡಿರುವುದು ರಾಜ್ಯದ ಜನತೆಗೆ ಮಾಡಿದ ದೊಡ್ಡ ದ್ರೋಹ.
9. ದುಃಖಕರವೆಂದರೆ, ಕಾಂಗ್ರೆಸ್ ಪಕ್ಷವು ಗುಜರಾತ್ ಜನತೆಗೆ ಏನನ್ನೂ ಒಳ್ಳೆಯದನ್ನು ಮಾಡಲು ಬಯಸುವುದಿಲ್ಲ. ಹಾಗಾಗಿಯೇ ನಾನು ಗುಜರಾತ್‌ಗೆ ಏನಾದರೂ ಮಾಡಬೇಕೆಂದುಕೊಂಡಾಗ ಪಕ್ಷ ನನ್ನನ್ನು ತಿರಸ್ಕಾರ ಮಾಡಿತು. ಕಾಂಗ್ರೆಸ್ ಪಕ್ಷದ ನಾಯಕತ್ವವು ನಮ್ಮ ರಾಜ್ಯ, ನಮ್ಮ ಸಮಾಜ ಮತ್ತು ವಿಶೇಷವಾಗಿ ಯುವಜನರ ಮೇಲೆ ಇಂತಹ ದ್ವೇಷವನ್ನು ಇಟ್ಟುಕೊಂಡಿದೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ.
10. ಇಂದು, ಅತ್ಯಂತ ಧೈರ್ಯದಿಂದ, ನಾನು ಕಾಂಗ್ರೆಸ್ ಪಕ್ಷದ ಎಲ್ಲಾ ಹುದ್ದೆಗಳಿಗೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನ ನಿರ್ಧಾರವನ್ನು ನನ್ನ ಎಲ್ಲಾ ಸಹೋದ್ಯೋಗಿಗಳು ಮತ್ತು ಗುಜರಾತ್ ಜನರು ಸ್ವಾಗತಿಸುತ್ತಾರೆ ಎಂದು ನನಗೆ ಖಾತ್ರಿಯಿದೆ. ನನ್ನ ಈ ಹೆಜ್ಜೆಯ ನಂತರ, ಭವಿಷ್ಯದಲ್ಲಿ ಇಡೀ ಗುಜರಾತ್‌ಗಾಗಿ ನಾನು ನಿಜವಾಗಿಯೂ ಧನಾತ್ಮಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ನಾನು ನಂಬುತ್ತೇನೆ. ನಾನು ಸಾರ್ವಜನಿಕರಿಂದ ಪಡೆದ ಪ್ರೀತಿಯ ಋಣವನ್ನು ಯಾವಾಗಲೂ ತೀರಿಸಲು ಪ್ರಯತ್ನಿಸುತ್ತೇನೆ.
