ಎರಡೂ ಕ್ಷೇತ್ರಗಳಲ್ಲಿ ಯಾವುದೇ ಬಂಡಾಯ ಇಲ್ಲ.ಬಾಗಲಕೋಟೆ ಹಾಗೂ ದಾವಣಗೆರೆ ಉಪ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಗೆಲುವು ಸಾಧಿಸಲಿದೆ ಎಂದು ಸಂಸದ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ (ಮಾ.19): ಬಾಗಲಕೋಟೆ ಹಾಗೂ ದಾವಣಗೆರೆ ಉಪ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಗೆಲುವು ಸಾಧಿಸಲಿದೆ ಎಂದು ಸಂಸದ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಕ್ಷೇತ್ರಗಳಲ್ಲೂ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಈಗಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ರಾಷ್ಟ್ರೀಯ ಅಧ್ಯಕ್ಷರಿಗೆ ರವಾನಿಸಲಾಗಿದೆ. ಇಂದು ಅಥವಾ ನಾಳೆ ಹೆಸರು ಘೋಷಣೆ ಆಗಲಿದೆ. ಎರಡೂ ಕ್ಷೇತ್ರಗಳಲ್ಲಿ ಯಾವುದೇ ಬಂಡಾಯ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, 2023ರ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಬಡವರ ಮತ ಪಡೆದು ಅಧಿಕಾರಕ್ಕೆ ಬಂದಿದ್ದಾರೆ. ಆದರೆ, ಮೂರು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಅವರು, ಬೆಲೆ ಏರಿಕೆಯಿಂದ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇವಲ ಜನರನ್ನು ಮೋಸ ಮಾಡುವ ಆಡಳಿತ ನಡೆಯುತ್ತಿದೆ. ಹಿಂದುಳಿದ ಹಾಗೂ ಅಲೆಮಾರಿ ಸಮುದಾಯಗಳಿಗೆ ಅನ್ಯಾಯ ಮಾಡಲಾಗಿದೆ. ಬಿಜೆಪಿ ಸರ್ಕಾರ ನೀಡಿದ್ದ ಶೇ.6 ರ ಮೀಸಲಾತಿ ರದ್ದುಗೊಳಿಸಿ ಎಸ್ಸಿ, ಎಸ್ಟಿ ಸಮಾಜಕ್ಕೆ ದ್ರೋಹ ಮಾಡಲಾಗಿದೆ. ದಲಿತ ಸಮುದಾಯಕ್ಕೂ ವಿಶ್ವಾಸ ದ್ರೋಹ ಮಾಡಲಾಗಿದೆ ಎಂದು ಆರೋಪಿಸಿದರು.
ಅಲ್ಪಸಂಖ್ಯಾತರಿಗೆ ಅವಕಾಶ
ರಾಜ್ಯದಲ್ಲಿ ಎರಡು ವರ್ಷಗಳಿಂದಲೇ ಕುರ್ಚಿ ಕಿತ್ತಾಟ ನಡೆಯುತ್ತಿದೆ. ಮೂರೂ ಗುಂಪುಗಳಾಗಿ ಅಧಿಕಾರದ ಪೈಪೋಟಿ ನಡೆಯುತ್ತಿದ್ದು, ಅಭಿವೃದ್ಧಿ ಕಡೆಗಣಿಸಲಾಗಿದೆ. ಕಾನೂನು ಸುವ್ಯವಸ್ಥೆಯೂ ಹದಗೆಟ್ಟಿದೆ. ಅಲ್ಪಸಂಖ್ಯಾತರಿಗೆ ಅವಕಾಶ ನೀಡುತ್ತೇವೆ ಎಂದು ಹೇಳಿದರೂ, ಪ್ರಾಯೋಗಿಕವಾಗಿ ಬೇರೆ ರೀತಿಯ ನಡೆ ಕಾಣಿಸುತ್ತಿದೆ ಎಂದರು.
ಗ್ಯಾಸ್ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಅವರು, ಡೊಮೆಸ್ಟಿಕ್ ಗ್ಯಾಸ್ ಪೂರೈಕೆಯಲ್ಲಿ ಯಾವುದೇ ತೊಂದರೆ ಇಲ್ಲ. ಕಮರ್ಷಿಯಲ್ ಗ್ಯಾಸ್ ಹಡಗುಗಳು ಬಂದಿದ್ದು, ಸಮಸ್ಯೆ ಶೀಘ್ರದಲ್ಲೇ ಪರಿಹಾರವಾಗಲಿದೆ. ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಡಳಿತದ ಉದಾಹರಣೆ ನೀಡಿದ ಅವರು, ಆ ಸಮಯದಲ್ಲಿ ಇದ್ದಂತಹ ಹೊಂದಾಣಿಕೆಯ ವ್ಯವಸ್ಥೆಯನ್ನು ಕಾಂಗ್ರೆಸ್ ಮತ್ತೆ ನೆನಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


