ಬೆಂಗಳೂರು: ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಪ್ರಸಿದ್ಧ ಸುಕ್ಷೇತ್ರವಾದ ಹಾರನಹಳ್ಳಿ ಕೋಡಿ ಮಠಕ್ಕೆ ಗೃಹ ಸಚಿವ ಡಾ। ಜಿ.ಪರಮೇಶ್ವರ್ ಅವರು ಸೋಮವಾರ ಮುಂಜಾನೆ ಅಚಾನಕ್ ಭೇಟಿ ನೀಡಿ ಪೀಠಾಧ್ಯಕ್ಷ ಡಾ। ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರೊಂದಿಗೆ ಸುಮಾರು 1 ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದ್ದಾರೆ.ಸಚಿವರು ಸ್ಥಳೀಯ ಶಾಸಕ ಕೆ.ಎಂ.ಶಿವಲಿಂಗೇಗೌಡ ಸೇರಿದಂತೆ ಯಾವುದೇ ಕಾಂಗ್ರೆಸ್ ಮುಖಂಡರಿಗೂ, ಹಾಗೆಯೇ ತಮ್ಮದೇ ಇಲಾಖೆಯ ಪೊಲೀಸರಿಗೂ ಮಾಹಿತಿ ನೀಡದೆ, ಏಕಾಂಗಿಯಾಗಿ, ಗೌಪ್ಯವಾಗಿ ಮಠಕ್ಕೆ ಭೇಟಿ ನೀಡಿದ್ದಾರೆ. ಇದು ಕುತೂಹಲಕ್ಕೆ ಕಾರಣವಾಗಿದೆ. ‘ಸಚಿವರು ಮಠದ ಭಕ್ತರು, ಹಾಗಾಗಿ ಭೇಟಿ ನೀಡಿದ್ದಾರೆ. ಯಾವುದೇ ರಾಜಕೀಯ ಚರ್ಚೆ ಆಗಿಲ್ಲ’ ಎಂದು ಕೋಡಿಮಠದ ಶ್ರೀಗಳು ಮಾಧ್ಯಮದವರಿಗೆ ಸ್ಪಷ್ಟನೆ ನೀಡಿದ್ದಾರೆ.ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಗಟ್ಟಿಯಾಗಿಯೇ ಕುರ್ಚಿ ಮೇಲೆ ಕುಳಿತು, ಅಧಿಕಾರ ಮಾಡುತ್ತಿದ್ದಾರೆ. ಮುಂದೆಯೂ ಸಿಎಂ ಆಗಿಯೇ ಸಿದ್ದರಾಮಯ್ಯ ಇರುತ್ತಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ। ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದರು. ಸರ್ಕಾರ, ಪಕ್ಷದ ಮುಂದೆ ಯಾವುದೇ ಆಲೋಚನೆಗಳೂ ಇಲ್ಲ. ಬದಲಾವಣೆ ಬಗ್ಗೆ ಪಕ್ಷದಲ್ಲಿ ಚರ್ಚೆಯೇ ಇಲ್ಲದಿದ್ದಾಗ ಅಂತೆ ಕಂತೆಗಳ ಬಗ್ಗೆ ಮಾತಾದರೂ ಯಾಕೆ ಎಂದು ಪ್ರಶ್ನಿಸಿದರು.