ಮುಖ್ಯಮಂತ್ರಿ ಕುರ್ಚಿಗಾಗಿ ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರುವ ತಿಕ್ಕಾಟಕ್ಕೆ ಕಾಂಗ್ರೆಸ್ ಹೈಕಮಾಂಡ್ ಶೀಘ್ರವೇ ಮದ್ದು ನೀಡಬಹುದು ಎಂಬ ಊಹಾಪೋಹಗಳ ನಡುವೆಯೇ, ‘ಇದು ಸ್ಥಳೀಯ ಸಮಸ್ಯೆ, ಇದನ್ನು ಸ್ಥಳೀಯ ನಾಯಕರೇ ಇತ್ಯರ್ಥಪಡಿಸಿಕೊಳ್ಳಬೇಕು’ ಎಂದು ಮಲ್ಲಿಕಾರ್ಜನ ಖರ್ಗೆ ಹೊಸ ‘ಬಾಂಬ್’ ಸಿಡಿಸಿದ್ದಾರೆ.
ಕಲಬುರಗಿ : ಮುಖ್ಯಮಂತ್ರಿ ಕುರ್ಚಿಗಾಗಿ ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರುವ ತಿಕ್ಕಾಟಕ್ಕೆ ಕಾಂಗ್ರೆಸ್ ಹೈಕಮಾಂಡ್ ಶೀಘ್ರವೇ ಮದ್ದು ನೀಡಬಹುದು ಎಂಬ ಊಹಾಪೋಹಗಳ ನಡುವೆಯೇ, ‘ಇದು ಸ್ಥಳೀಯ ಸಮಸ್ಯೆ, ಇದನ್ನು ಸ್ಥಳೀಯ ನಾಯಕರೇ ಇತ್ಯರ್ಥಪಡಿಸಿಕೊಳ್ಳಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಹೊಸ ‘ಬಾಂಬ್’ ಸಿಡಿಸಿದ್ದಾರೆ. ಪಕ್ಷದ ಅಧ್ಯಕ್ಷರ ಈ ಅಚ್ಚರಿ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ.
ಪಕ್ಷದ ದೆಹಲಿ ನಾಯಕತ್ವವು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಶೀಘ್ರವೇ ದೆಹಲಿಗೆ ಕರೆಸಿ ಮಾತನಾಡುವ ಸಾಧ್ಯತೆ ಇದೆ ಎಂಬ ವರದಿಗಳು ಮತ್ತು ದೆಹಲಿ ನಾಯಕರ ಕರೆಯ ನಿರೀಕ್ಷೆಯ ಕುರಿತು ಡಿಸಿಎಂ ಡಿಕೆಶಿ ಹೇಳಿಕೆ ಬೆನ್ನಲ್ಲೇ, ಖರ್ಗೆ ಹೇಳಿಕೆ ನಾನಾ ವಿಶ್ಲೇಷಣೆಗಳಿಗೆ ಕಾರಣವಾಗಿದೆ.
ಸ್ಥಳೀಯ ಸಮಸ್ಯೆ:
ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ‘ನಾಯಕತ್ವ ಕುರಿತ ಗೊಂದಲಗಳು ಸ್ಥಳೀಯ ಮಟ್ಟದಲ್ಲಿ ಮಾತ್ರ ಇದೆಯೇ ಹೊರತೂ ಹೈಕಮಾಂಡ್ ಮಟ್ಟದಲ್ಲಿ ಅಲ್ಲ’ ಎಂದು ಸ್ಪಷ್ಟಪಡಿಸಿದರು.
ಜೊತೆಗೆ, ‘ಈ ವಿಷಯದಲ್ಲಿ ಹೈಕಮಾಂಡ್ ಯಾವುದೇ ಗೊಂದಲ ಸೃಷ್ಟಿ ಮಾಡಿಲ್ಲ. ಇದು ಸ್ಥಳೀಯ ಮಟ್ಟದಲ್ಲಿ ಮಾತ್ರ ಇದೆ. ಇದು ಸೃಷ್ಟಿಯಾಗಿರುವುದು ಸ್ಥಳೀಯವಾಗಿ. ಹೀಗಾಗಿ ಪಕ್ಷದೊಳಗಿನ ಆಂತರಿಕ ಗೊಂದಲಗಳ ಕುರಿತು ಸ್ಥಳೀಯ ನಾಯಕತ್ವ ಹೊಣೆ ಹೊರಬೇಕೇ ಹೊರತೂ, ಹೈಕಮಾಂಡ್ ಹೊಣೆ ಮಾಡಬಾರದು. ಎಲ್ಲದ್ದಕ್ಕೂ ಹೈಕಮಾಂಡ್ ಹೊಣೆ ಎಷ್ಟು ಮಾಡುವುದು ಎಷ್ಟು ಸರಿ?’ ಎಂದು ಗೊಂದಲಗಳ ಕುರಿತು ಎಐಸಿಸಿ ಅಧ್ಯಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಗೆಲುವಿನ ಹಿರಿಮೆ ಬೇಡ:
ಇದೇ ವೇಳೆ ಪಕ್ಷದ ಚುನಾವಣಾ ಗೆಲುವಿನ ಬಗ್ಗೆ ನಾಯಕರು ಶ್ರೇಯಸ್ಸು ಪಡೆಯಲು ಮುಂದಾಗುತ್ತಿರುವ ಬಗ್ಗೆಯೂ ಎಚ್ಚರಿಕೆ ನೀಡಿದ ಖರ್ಗೆ, ‘ನನ್ನಿಂದ ಪಕ್ಷ ಅಧಿಕಾರಕ್ಕೆ ಬಂತು. ನನ್ನಿಂದ ಪಕ್ಷ ಅಧಿಕಾರಕ್ಕೆ ಬಂತು ಅಂತ ಯಾರೂ ಹೇಳಬಾರದು. ಇವರು ಪಕ್ಷ ಕಟ್ಟಿದ್ದಾರೆ. ಅವರು ಪಕ್ಷ ಕಟ್ಟಿದ್ದಾರೆ ಅಂತ ಕಾರ್ಯಕರ್ತರು ಸಹ ಹೇಳಿಕೊಳ್ಳುವುದು ಬಿಟ್ಟುಬಿಡಬೇಕು. ಎಲ್ಲರೂ ಸೇರಿ ಪಕ್ಷ ಕಟ್ಟಿದ್ದಾರೆ. ಯಾರೋ ಒಬ್ಬ ವ್ಯಕ್ತಿಯ ಪ್ರಯತ್ನದಿಂದ ಆಗಿದ್ದಲ್ಲ, ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಅನ್ನು ಕಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ಗೆಲುವಿಗೆ ಎಲ್ಲರೂ ಕೊಡುಗೆ ನೀಡಿದ್ದಾರೆ. ಹೀಗಿರುವ ಯಾರ ಹೆಸರನ್ನೂ ಹೇಳುವುದು ಸರಿಯಲ್ಲ’ ಎಂದು ಯಾರ ಹೆಸರೂ ಹೇಳದೆ ಪಕ್ಷದ ಹಿರಿಯ ನಾಯಕರ ಕಿವಿ ಹಿಂಡಿದ್ದಾರೆ.
ಡಿಕೆ ದೆಹಲಿ ಭೇಟಿ ಗೊತ್ತಿಲ್ಲ:
ಡಿ.ಕೆ.ಶಿವಕುಮಾರ್ ಡಿ.23ರಂದು ದೆಹಲಿಗೆ ಭೇಟಿ ನೀಡುವ ವಿಚಾರ ನನಗೆ ತಿಳಿದಿಲ್ಲ ಎಂದು ಖರ್ಗೆ ಹೇಳಿದರು.
ಸುದರ್ಶನ್ ಪತ್ರ:
ಈ ನಡುವೆ ರಾಜ್ಯದ ಗೊಂದಲ ಬಗೆಹರಿಸುವಂತೆ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಬರೆದಿರುವ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ‘ಸುದರ್ಶನ್ ಅವರು ಬರೆದಿರುವ ಪತ್ರ ಇನ್ನೂ ನನ್ನ ಕೈ ಸೇರಿಲ್ಲ. ನಾನು ದೆಹಲಿಗೆ ಹೋದ ನಂತರ ಪತ್ರದಲ್ಲಿ ಏನಿದೆ ಎನ್ನುವುದು ಗೊತ್ತಾಗುತ್ತದೆ. ಯಾವ ಉದ್ದೇಶಕ್ಕೆ ಅವರು ಪತ್ರ ಬರೆದಿದ್ದಾರೆ? ಪತ್ರದಲ್ಲಿ ಏನಿದೆ? ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳುತ್ತೇನೆ. ಸುದರ್ಶನ ಅವರು ಏನು ಹೇಳಿದ್ದಾರೆ? ಏನು ಸಲಹೆ ಕೊಟ್ಟಿದ್ದಾರೆ? ಎನ್ನುವುದು ಪತ್ರ ನೋಡಿದ ಬಳಿಕವಷ್ಟೇ ಗೊತ್ತಾಗುತ್ತದೆ’ ಎಂದರು.
ಖರ್ಗೆ ಹೇಳಿದ್ದೇನು?
- ರಾಜ್ಯ ನಾಯಕತ್ವ ಕುರಿತ ಗೊಂದಲ ಸ್ಥಳೀಯವಾಗಿ ಸೃಷ್ಟಿಸಿಕೊಳ್ಳಲಾಗಿರುವ ಸಮಸ್ಯೆ
- ಇದನ್ನು ಸೃಷ್ಟಿ ಮಾಡಿದ್ದು ಹೈಕಮಾಂಡ್ ಅಲ್ಲ. ಎಲ್ಲದಕ್ಕೂ ನಮ್ಮನ್ನೇಕೆ ದೂಷಿಸುತ್ತೀರಿ
- ನಾಯಕತ್ವ ಗೊಂದಲ ಸ್ಥಳೀಯ ಮಟ್ಟದಲ್ಲಿ ಮಾತ್ರ ಇವೆ. ಹೈಕಮಾಂಡ್ ಮಟ್ಟದಲ್ಲಿ ಅಲ್ಲ
- ಸಮಸ್ಯೆ ಸ್ಥಳೀಯವಾಗಿ ಸೃಷ್ಟಿಯಾಗಿರುವ ಕಾರಣ ಅದನ್ನು ಸ್ಥಳೀಯರೇ ಇತ್ಯರ್ಥ ಮಾಡಬೇಕು
ಯಾರೋ ಒಬ್ಬ ವ್ಯಕ್ತಿಯ ಪ್ರಯತ್ನದಿಂದ ಪಕ್ಷ ಸಂಘಟನೆ ಆಗಿಲ್ಲ. ಕಾರ್ಯಕರ್ತರು ಕಟ್ಟಿದ ಪಕ್ಷ
- ಕಾಂಗ್ರೆಸ್ ಗೆಲುವಿಗೆ ಎಲ್ಲರೂ ಕೊಡುಗೆ ನೀಡಿದ್ದಾರೆ. ತಮ್ಮಿಂದ ಅಧಿಕಾರಕ್ಕೆ ಬಂತು ಎನ್ನಬೇಡಿ


