ಅಸ್ಸಾಂನಲ್ಲಿ ಈ ಹಿಂದೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಸರ್ಕಾರದ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಕಾಂಗ್ರೆಸ್ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಅಕ್ರಮ ಬಾಂಗ್ಲಾ ವಲಸಿಗರು ಅಸ್ಸಾಂನಲ್ಲಿ ನೆಲೆಸಲು ಸಹಕರಿಸುತ್ತಿದೆ ಎಂದು ಕಿಡಿಕಾರಿದ್ದಾರೆ..
ನಮ್ರುಪ್ (ಅಸ್ಸಾಂ): ಅಸ್ಸಾಂನಲ್ಲಿ ಈ ಹಿಂದೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಸರ್ಕಾರದ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಕಾಂಗ್ರೆಸ್ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಅಕ್ರಮ ಬಾಂಗ್ಲಾ ವಲಸಿಗರು ಅಸ್ಸಾಂನಲ್ಲಿ ನೆಲೆಸಲು ಸಹಕರಿಸುತ್ತಿದೆ. ಅವರ ಮತ ಬ್ಯಾಂಕ್ ಬಲಪಡಿಸುವುದಷ್ಟೇ ಕಾಂಗ್ರೆಸ್‌ಗೆ ಬೇಕಾಗಿರುವುದು. ಇಲ್ಲಿನ ಜನತೆಯ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಕಿಡಿಕಾರಿದ್ದಾರೆ.
ದೇಶದ್ರೋಹಿಗಳು ಅಕ್ರಮ ನುಸುಳುಕೋರರಿಗೆ ರಕ್ಷಣೆ
ಶನಿವಾರ ಗುವಾಹಟಿಯಲ್ಲಿ ಮಾತನಾಡುವ ವೇಳೆ ದೇಶದ್ರೋಹಿಗಳು ಅಕ್ರಮ ನುಸುಳುಕೋರರಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಭಾನುವಾರವೂ ಅಸ್ಸಾಂನಲ್ಲಿ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪಗಳ ಸರಮಾಲೆ ಹೊರಿಸಿದ್ದಾರೆ.
ಕಾಂಗ್ರೆಸ್ ದೇಶವಿರೋಧಿ ಕೃತ್ಯಗಳಲ್ಲಿ ನಿರತವಾಗಿದೆ
ಅಸ್ಸಾಂನ ದಿಬ್ರುಗಢ ಜಿಲ್ಲೆಯ ನಮ್ರುಪ್‌ನಲ್ಲಿ 10,601 ಕೋಟಿ ರು. ಮೌಲ್ಯದ ರಸಗೊಬ್ಬರ ಘಟಕ ಉದ್ಘಾಟಿಸಿ ಮಾತನಾಡಿದ ಮೋದಿ, ‘ಕಾಂಗ್ರೆಸ್ ದೇಶವಿರೋಧಿ ಕೃತ್ಯಗಳಲ್ಲಿ ನಿರತವಾಗಿದೆ. ಅವರು ಅಕ್ರಮ ಬಾಂಗ್ಲಾ ವಲಸಿಗರು ಅಸ್ಸಾಂನ ಕಾಡುಗಳು ಮತ್ತು ಭೂಮಿಯಲ್ಲಿ ನೆಲೆಸಬೇಕೆಂದು ಬಯಸುತ್ತಾರೆ. ತಮ್ಮ ಮತ ಬ್ಯಾಂಕ್ ಬಲಪಡಿಸಲು ಮಾತ್ರ ಬಯಸುತ್ತಾರೆಯೇ ಹೊರತು ಜನರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಕಾಂಗ್ರೆಸ್ ಮಾಡಿದ ತಪ್ಪು ಕೆಲಸಗಳನ್ನು ಕಳೆದ 11 ವರ್ಷದಿಂದ ಸರಿ ಮಾಡುತ್ತಲೇ ಇದ್ದೇವೆ’ ಎಂದು ಕಿಡಿಕಾರಿದರು. ಜತೆಗೆ, ‘2019ರಲ್ಲಿ ಭೂಪೇನ್ ಡಾ। ಹಜಾರಿಕಾ ಅವರಿಗೆ ಭಾರತರತ್ನ ನೀಡಿದಾಗ ಅದನ್ನೂ ವಿರೋಧಿಸಿದ್ದ ಕಾಂಗ್ರೆಸ್, ಹಾಡುವವರಿಗೆ, ಕುಣಿಯುವವರಿಗೆಲ್ಲಾ ಮೋದಿ ಪ್ರಶಸ್ತಿ ಕೊಡುತ್ತಿದ್ದಾರೆ’ ಎಂದು ಟೀಕಿಸಿತ್ತು ಎಂದರು.
‘ಕಾಂಗ್ರೆಸ್ ಅಧಿಕಾರ ಹಿಡಿಯುವ ಉದ್ದೇಶದಿಂದ ಮತಪಟ್ಟಿ ಪರಿಷ್ಕರಣೆಯನ್ನು ವಿರೋಧಿಸುತ್ತಿದೆ. ನಾನು ಮಾಡಲು ಪ್ರಯತ್ನಿಸುವ ಯಾವುದೇ ಒಳ್ಳೆಯದನ್ನು ಅವರು ವಿರೋಧಿಸುತ್ತಾರೆ. ಅಸ್ಸಾಮಿ ಜನರ ಗುರುತು, ಭೂಮಿ, ಹೆಮ್ಮೆ ಮತ್ತು ಅಸ್ತಿತ್ವವನ್ನು ರಕ್ಷಿಸಲು ಬಿಜೆಪಿ ಸರ್ಕಾರ ಯಾವಾಗಲೂ ಕೆಲಸ ಮಾಡುತ್ತದೆ’ ಎಂದು ಭರವಸೆ ನೀಡಿದರು.


