ಬೆಂಗಳೂರು, (ಅ.11):  ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರಿಗೆ ಸರ್ಕಾರಿ ನಿವಾಸ ನೀಡಬೇಕಿದೆ. ಹಾಗಾಗಿ ಸರ್ಕಾರಕ್ಕೆ ಪತ್ರ ಬರೆದಿರುವ ಸಿದ್ದು, ಕಾವೇರಿ ನಿವಾಸವನ್ನು ನನಗೇ ಕೊಟ್ಟುಬಿಡಿ ಎಂದು ಕೋರಿದ್ದಾರೆ.

2 ಸರ್ಕಾರಗಳು ಬದಲಾದರೂ ಸಿದ್ದರಾಮಯ್ಯ ಅವರು ಕಾವೇರಿ ನಿವಾಸವನ್ನು ಬಿಡಲು ಮನಸ್ಸು ಮಾಡಿಲ್ಲ. ಮುಖ್ಯಮಂತ್ರಿ ಆದಾಗಿನಿಂದಲೂ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿಯೇ ಇದ್ದಾರೆ. ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯಗೆ ಯಾವುದೇ ಶಾಸನಬದ್ಧ ಸ್ಥಾನ ಇರದಿದ್ದರೂ ಸಹ ಅವರು ಕಾವೇರಿ ನಿವಾಸ ಬಿಟ್ಟುಕೊಟ್ಟಿರಲಿಲ್ಲ. 

ಆರೂವರೆ ವರ್ಷಗಳ ಬಳಿಕ ಸರ್ಕಾರಿ ನಿವಾಸ ತೊರೆದ ಸಿದ್ದರಾಮಯ್ಯ, ಕಾವೇರಿಗೆ BSY ಲಗ್ಗೆ

 ಈಗ ಬಿಜೆಪಿ ಸರ್ಕಾರ ಬಂದಮೇಲೂ ಕಾವೇರಿ ನಿವಾಸಕ್ಕೆ ಅವರು ಪಟ್ಟು ಹಿಡಿದಿದ್ದಾರೆ. ಮುಖ್ಯಮಂತ್ರಿ ಆಗಿದ್ದವರಿಗೆ ಕಾವೇರಿ ನಿವಾಸ ನೀಡುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕಾವೇರಿ ನಿವಾಸ ಆಯ್ಕೆ ಮಾಡಿಕೊಂಡಿದ್ದಾರೆ. 

ಆದ್ರೆ ಇತ್ತ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಾವೇರಿ ನಿವಾಸವನ್ನು ನನಗೇ ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕಾವೇರಿ ನಿವಾಸವನ್ನು ನೀಡುತ್ತಾರೆಯೋ ಅಥವಾ ಬದಲಿ ನಿವಾಸ ಕೊಡುತ್ತಾರೆಯೋ ಎಂಬುದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದು.

CM ಸೇರಿ 13 ಸಚಿವರಿಗೆ ನಿವಾಸ ಹಂಚಿಕೆ: ಮತ್ತೆ ಲಕ್ಕಿ ಮನೆಗೆ ಯಡಿಯೂರಪ್ಪ

ಈ ಬಗ್ಗೆ ಸಿದ್ದು ಹೇಳಿದ್ದೇನು?
ಕಾವೇರಿ ಸರ್ಕಾರಿ ನಿವಾಸವನ್ನೇ ಕೇಳಿ ಸಿಎಂ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ  ಇಂದು [ಶುಕ್ರವಾರ] ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿದ್ದು,  ಹೌದು ಕಾವೇರಿ ನಿವಾಸ ಕೇಳಿ ಸಿಎಂಗೆ ಪತ್ರ ಬರೆದ್ದೇನೆ. ಅದರಲ್ಲಿ‌ ತಪ್ಪೇನಿದೆ ಹೇಳಿ? ಅವರೂ ಕಾವೇರಿಗೆ ಬರೋದಾಗಿ ಆದೇಶ ಮಾಡಿದಾರೆ. ಅವರ ಆದೇಶವನ್ನು ಅವರು ಬದಲಾವಣೆ ಮಾಡ್ಕೋಬಹುದಲ್ಲ? ಎಂದು ಹೇಳಿದರು.

ಅವರು ಮೊದಲು ರೇಸ್ ಕೋರ್ಸ್ ಮನೆಗೆ ಆದೇಶ ಮಾಡ್ಕೊಂಡಿದ್ರು. ನಾನು ಕಾವೇರಿ ಮನೆಯಲ್ಲಿ ಇದೀನಿ. ಈಗ ಬದಲಾವಣೆ ಮಾಡ್ಬೇಕು ಅಂದ್ರೆ ಕಷ್ಟ. ಬೇರೆ ಮನೆಗೆ ಹೋಗ್ಬೇಕಾದ್ರೆ ಸಾಮಾನುಗಳನ್ನೆಲ್ಲ ಹೊತ್ಕೊಂಡ್ ಹೋಗಬೇಕು. ಬೇರೆ ಮನೆವ ಇದೆಯೋ ಇಲ್ವೋ ಅದೂ ಗೊತ್ತಿಲ್ಲ. ಹಾಗಾಗಿ‌ ಕಾವೇರಿಯನ್ನೇ ಕೊಡಿ ಅಂತ ಕೇಳಿದೀನಿ. ಸಿಎಂ ಏನ್ ತೀರ್ಮಾನ ಮಾಡ್ತಾರೋ ನೋಡೋಣ ಎಂದರು.