ಬೆಂಗಳೂರು, [ಸೆ.27]:  ಮುಖ್ಯಮಂತ್ರಿಯಾಗಿದ್ದಾಗ ವಾಸವಿದ್ದ ಸರ್ಕಾರಿ ವಸತಿ ನಿಲಯ 'ಕಾವೇರಿ ನಿವಾಸ' ವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೂವರೆ ವರ್ಷಗಳ ಬಳಿಕ ಇಂದು [ಶುಕ್ರವಾರ] ಖಾಲಿ ಮಾಡಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಅವರಿಗೆ ಕಾವೇರಿ ನಿವಾಸವನ್ನು ಹಂಚಿಕೆ ಮಾಡಲಾಗಿತ್ತು. ಆದ್ರೆ, ಅದನ್ನು ಜಾರ್ಜ್ ಅವರು ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟಿದ್ದರು. ಇದ್ರಿಂದ ಸಿದ್ದರಾಮಯ್ಯ ಅವರು  ಸಿಎಂ ಸ್ಥಾನದಿಂದ ಇಳಿದರೂ ಕಾವೇರಿ ನಿವಾಸದಲ್ಲಿಯೇ ಉಳಿದಿದ್ದರು. 

CM ಸೇರಿ 13 ಸಚಿವರಿಗೆ ನಿವಾಸ ಹಂಚಿಕೆ: ಮತ್ತೆ ಲಕ್ಕಿ ಮನೆಗೆ ಯಡಿಯೂರಪ್ಪ

ಸಾಂವಿಧಾನಿಕ ಹುದ್ದೆಯಲ್ಲಿ ಇರದಿದ್ದರೂ ಸರ್ಕಾರಿ ನಿವಾಸವನ್ನು ಖಾಲಿ ಮಾಡದ ಸಿದ್ದರಾಮಯ್ಯ ವಿರುದ್ಧ ಸಾಕಷ್ಟು ಟೀಕೆ-ಟಿಪ್ಪಣಿಗಳು ಕೇಳಿಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.
  
ಸದ್ಯ ಖಾಲಿಯಾಗಿರುವ ಕಾವೇರಿ ನಿವಾಸಕ್ಕೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಶಿಫ್ಟ್ ಆಗಲಿದ್ದಾರೆ.  8 ವರ್ಷಗಳ ಬಳಿಕ ಬಿಎಸ್​ವೈ ಕಾವೇರಿ ನಿವಾಸಕ್ಕೆ ಸ್ಥಳಾಂತರವಾಗಲಿದ್ದಾರೆ.

ಈ ಹಿಂದೆ ಬಿಎಸ್ ವೈ ಲಕ್ಕಿ ಮನೆ ಎನ್ನಲಾಗಿದ ರೇಸ್​ಕೋರ್ಸ್​ ರಸ್ತೆಯಲ್ಲಿರುವ ರೇಸ್​ವ್ಯೂ ಕಾಟೇಜ್​ ನಂ 2 ಹಂಚಿಕೆಯಾಗಿತ್ತು. ಆದ್ರೆ ಇದೀಗ  ಕಾವೇರಿ ವಸತಿ ಗೃಹಕ್ಕೆ ಹೋಗಲು ನಿರ್ಧರಿಸಿದ್ದಾರೆ. 

ಗೃಹ ಕಚೇರಿ ಕೃಷ್ಣಗೆ ಸಾರ್ವಜನಿಕರು ಸಿಎಂ ಭೇಟಿಗೆ ಬರ್ತಾ ಇರ್ತಾರೆ. ಹೀಗಾಗಿ ಕಾವೇರಿಯಲ್ಲೇ ವಾಸ್ತವ್ಯ ಹೂಡಿದರೆ ಸಾರ್ವಜನಿಕರ ಭೇಟಿಗೆ ಅನುಕೂಲ. ಜೊತೆಗೆ ಟ್ರಾಫಿಕ್ ಕಿರಿಕಿರಿಯಿಂದ ಸಾರ್ವಜನಿಕರಿಗೆ ತೊಂದರೆ ಆಗದಿರುವ ಕಾರಣದಿಂದ ಯಡಿಯೂರಪ್ಪ ಕಾವೇರಿಗೆ ಹೋಗಲು ತೀರ್ಮಾನಿಸಿದ್ದಾರೆ.