ನಮ್ಮ ರಾಜ್ಯದ ಗೋಲ್ಡನ್‌ ಚ್ಯಾರಿಯೇಟ್‌ ರೈಲು ಅನ್ಯ ರಾಜ್ಯಕ್ಕೂ ಹೋಗುತ್ತದೆ. ಹಾಗಂತ ನಾವು ಬೇರೆ ರಾಜ್ಯಗಳಿಗೆ ಹಣಮಾಡಿಕೊಡುತ್ತಿದ್ದೇವೆಯೇ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.

ಬೆಂಗಳೂರು (ಅ.31): ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ‘ಎಕ್ಸ್’ ಖಾತೆಯಲ್ಲಿ ಕೇರಳದ ವಯನಾಡಿಗೆ ಪ್ರವಾಸಿಗರನ್ನು ಸೆಳೆಯುವಂತಹ ಪ್ರಚಾರದ ಚಿತ್ರ ಪೋಸ್ಟ್‌ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಕಾಂಗ್ರೆಸ್‌ ಸಮರ್ಥಿಸಿಕೊಂಡಿದೆ. ಬಿಜೆಪಿ ವಿನಾಕಾರಣ ವಿರೋಧ ಮಾಡುತ್ತಿದೆ. ನಮ್ಮ ರಾಜ್ಯದ ಗೋಲ್ಡನ್‌ ಚ್ಯಾರಿಯೇಟ್‌ ರೈಲು ಅನ್ಯ ರಾಜ್ಯಕ್ಕೂ ಹೋಗುತ್ತದೆ. ಹಾಗಂತ ನಾವು ಬೇರೆ ರಾಜ್ಯಗಳಿಗೆ ಹಣಮಾಡಿಕೊಡುತ್ತಿದ್ದೇವೆಯೇ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು ನೀಡಿದ್ದಾರೆ.

ಪ್ರಿಯಾಂಕಾ ಗಾಂಧಿ ಅವರು ವಯನಾಡನ್ನು ಪ್ರತಿನಿಧಿಸುತ್ತಿದ್ದಾರೆ ಎಂಬ ಒಂದೇ ಕಾರಣಕ್ಕೆ ಬಿಜೆಪಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ನಮ್ಮ ರಾಜ್ಯದ ಗೋಲ್ಡನ್‌ ಚಾರಿಯೆಟ್‌ ರೈಲು ಅನ್ಯ ರಾಜ್ಯಗಳಿಗೆ ಪ್ರವಾಸ ಹೋಗುತ್ತದೆ. ಮುಜರಾಯಿ ಇಲಾಖೆಯಿಂದ ಬೇರೆ ರಾಜ್ಯದ ದೇವಸ್ಥಾನಗಳಲ್ಲಿ ಅತಿಥಿಗೃಹ, ಕಾರ್ಯಕ್ರಮದ ಹಾಲ್‌ಗಳಿವೆ. ಹಾಗೆಂದ ಮಾತ್ರಕ್ಕೆ ನಾವು ಬೇರೆ ರಾಜ್ಯಗಳಿಗೆ ಹಣ ಮಾಡಿಕೊಡುತ್ತೇವೆ ಎನ್ನಲಾದಿತೇ ಎಂದು ಪ್ರಶ್ನಿಸಿದರು. ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌ ಮಾತನಾಡಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಈ ಸಂಬಂಧ ವಿವರಣೆ ನೀಡುವಂತೆ ಸೂಚಿಸಿದ್ದೇವೆ. ಯಾಕಾಗಿ ವಯನಾಡಿನ ಪ್ರವಾಸೋದ್ಯಮ ಕುರಿತು ಯಾಕಾಗಿ ಪ್ರಚಾರ ಮಾಡಲಾಗಿದೆ ಎಂಬ ವಿಷಯ ತಿಳಿದುಕೊಳ್ಳುತ್ತೇವೆ ಎಂದರು.

ಇ-ಬಸ್‌ ಪೂರೈಕೆ ಸಂಸ್ಥೆಗೆ ಕಠಿಣ ನಿಯಮ ರೂಪಿಸಿ

ಕೇಂದ್ರ ಸರ್ಕಾರದ ಸೂಚನೆಯಂತೆ ಗ್ರಾಸ್‌ ಕಾಸ್ಟ್‌ ಕಾಂಟ್ರ್ಯಾಕ್ಟ್‌ (ಜಿಸಿಸಿ) ಮಾದರಿಯಲ್ಲಿ ಖಾಸಗಿ ಸಂಸ್ಥೆಗಳಿಂದ ಗುತ್ತಿಗೆ ಆಧಾರದಲ್ಲಿ ಬಿಎಂಟಿಸಿಗೆ ಪಡೆಯಲಾಗಿರುವ ಎಲೆಕ್ಟ್ರಿಕ್‌ ಬಸ್‌ಗಳ ನಿರ್ವಹಣೆ ಕೊರತೆಯಿಂದ ನಿಗಮದ ಕಾರ್ಯಾಚರಣೆಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಜಿಸಿಸಿ ಅಡಿಯಲ್ಲಿ ಬಸ್‌ ಪೂರೈಕೆ ಮತ್ತು ನಿರ್ವಹಣೆಗೆ ಕಠಿಣ ನಿಯಮ ಜಾರಿಗೊಳಿಸಬೇಕು ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ಫೇಮ್‌ ಯೋಜನೆ ಅಡಿಯಲ್ಲಿ ನಗರ ಸಾರಿಗೆಗಳಿಗಾಗಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಪಡೆಯಲಾಗುತ್ತಿದೆ. ಅವುಗಳನ್ನು ಜಿಸಿಸಿ ಮಾದರಿಯಲ್ಲಿ ಪಡೆಯಲಾಗುತ್ತಿದೆ.

ಬಸ್‌ಗಳ ನಿರ್ವಹಣೆ, ಚಾಲಕರ ನೇಮಕ ಎಲ್ಲವೂ ಬಸ್‌ ಪೂರೈಸುವ ಖಾಸಗಿ ಸಂಸ್ಥೆಯ ಜವಾಬ್ದಾರಿಯಾಗಿದೆ. ಬಿಎಂಟಿಸಿಯಲ್ಲಿ ಸದ್ಯ 1,644 ಎಲೆಕ್ಟ್ರಿಕ್‌ ಬಸ್‌ಗಳು ಸೇವೆ ನೀಡುತ್ತಿವೆ. ಆದರೆ, ಆ ಬಸ್‌ಗಳು ಪದೇಪದೆ ಕೆಟ್ಟು ನಿಲ್ಲುತ್ತಿವೆ ಹಾಗೂ ಅದರ ಚಾಲಕರು ಬಸ್‌ ಪೂರೈಸಿದ ಸಂಸ್ಥೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾರಣದಿಂದಾಗಿ ಬಿಎಂಟಿಸಿ ಬಸ್‌ ಸೇವೆ ನೀಡುವಲ್ಲಿಯೂ ಸಮಸ್ಯೆಯಾಗುತ್ತಿದೆ. ಹೀಗಾಗಿ ಎಲೆಕ್ಟ್ರಿಕ್‌ ಬಸ್‌ ನಿರ್ವಹಣೆ ಕುರಿತಂತೆ ಖಾಸಗಿ ಸಂಸ್ಥೆಗಳಿಗೆ ಕಠಿಣ ಸೂಚನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.