ಕೇಂದ್ರ ಸರ್ಕಾರದ ಜಿ ರಾಮ್ ಜಿ ಕಾಯ್ದೆಯು ಸಂವಿಧಾನ ವಿರೋಧಿಯಾಗಿದ್ದು, ಅದು ನಾಥೂರಾಮ ಕಾಯ್ದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಈ ಕಾಯ್ದೆ ವಿರುದ್ಧ ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿದ್ದು, ಕಾನೂನು ಹೋರಾಟ ರೂಪಿಸುತ್ತಿದೆ ಎಂದು ತಿಳಿಸಿದ್ದಾರೆ
ಕಲಬುರಗಿ (ಜ.11): ಕೇಂದ್ರ ಸರ್ಕಾರದ ಜಿ ರಾಮ್ ಜಿ ಕಾಯ್ದೆ ಸಂವಿಧಾನ ವಿರೋಧಿಯಾಗಿದ್ದು, ಅದರ ವಿರುದ್ಧ ರಾಜ್ಯ ಸರ್ಕಾರ ಈಗಾಗಲೇ ನಿರ್ಣಯ ಕೈಗೊಂಡಿದೆ. ಅಲ್ಲದೇ ಕಾನೂನು ಹೋರಾಟ ರೂಪಿಸುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದ ವಿಬಿ ಜಿ ರಾಮ್ ಜಿ ಕಾಯ್ದೆ ದಶರಥನ ರಾಮನೂ ಅಲ್ಲ, ಸೀತಾರಾಮನೂ ಅಲ್ಲ. ಅದು ನಾಥೂ‘ರಾಮ’ ಕಾಯ್ದೆ. ನಾಥೂರಾಮ ಎಂದರೆ ಅದು ಆರೆಸ್ಸೆಸ್ ತತ್ವದ ರಾಮ ಎಂದರ್ಥ. ಆರೆಸ್ಸೆಸ್ ತತ್ವಗಳು ಬಡವರ ವಿರುದ್ಧವಾಗಿರುತ್ತವೆ ಎಂದು ಆರೋಪಿಸಿದರು.
ಕಾಯ್ದೆ ಬಗ್ಗೆ ವಿವರವಾಗಿ ಚರ್ಚಿಸಲು 2 ದಿನ ವಿಶೇಷ ಅಧಿವೇಶನ ಕರೆಯಲು ಕೂಡಾ ತೀರ್ಮಾನಿಸಲಾಗಿದೆ. ಅಲ್ಲಿ ಬಿಜೆಪಿಯವರು ಅವರ ವಿಚಾರ ಹೇಳಲಿ. ನಾವು ನಮ್ಮ ವಿಚಾರ ಹೇಳುತ್ತೇವೆ. ಇದರ ಜೊತೆಗೆ ಕಾನೂನು ಹೋರಾಟ ರೂಪಿಸಲಾಗುತ್ತಿದೆ. ರಾಜ್ಯ ಸರ್ಕಾರದೊಂದಿಗೆ ಮಹಿಳಾ ಸಂಘಟನೆಗಳು, ಕೂಲಿ ಕಾರ್ಮಿಕರ ಸಂಘಟನೆಗಳು ಕೈಜೋಡಿಸಲು ಮುಂದಾಗಿವೆ. 3 ಕೃಷಿ ಕಾಯ್ದೆಗಳು ವಾಪಸ್ ಪಡೆದಂತೆ ಇದು ಸಹ ವಾಪಸ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


