ಎರಡು ಕೋಟಿ ಉದ್ಯೋಗ ಕೊಡ್ತಿವಿ ಎಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರದಿಂದ ಇದೀಗ ಮಹಾತ್ಮ ಗಾಂಧಿಯವರನ್ನೇ ದೇಶದಿಂದ ಹೊರಗೆ ಹಾಕುವ ಯತ್ನ ನಡೆದಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗ (ಜ.10): ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರ್ಕಾರ, ಈಗ ದೇಶದ ಬಡವರ ಪಾಲಿನ ಸಂಜೀವಿನಿಯಂತಿರುವ ನರೇಗಾ ಯೋಜನೆಯಿಂದ ಮಹಾತ್ಮ ಗಾಂಧಿಯವರ ಹೆಸರನ್ನೇ ಕೈಬಿಡುವ ಮೂಲಕ ಗಾಂಧೀಜಿಯವರನ್ನು ದೇಶದಿಂದಲೇ ಹೊರಹಾಕುವ ಪ್ರಯತ್ನ ನಡೆಸುತ್ತಿದೆ' ಎಂದು ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.

ಗಾಂಧಿ ಹೆಸರು ತೆಗೆಯುವುದು ಅಕ್ಷಮ್ಯ: ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಕಟುವಾಗಿ ಟೀಕಿಸಿದರು. ಅಹಿಂಸೆಯ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿಯವರು ಮಾನವೀಯ ಮೌಲ್ಯಗಳ ಸಂಕೇತ. ನರೇಗಾ ಯೋಜನೆಗೆ ಅವರ ಹೆಸರು ಅತ್ಯಂತ ಸೂಕ್ತವಾಗಿತ್ತು. ಆದರೆ ಬಿಜೆಪಿ ಸರ್ಕಾರ ಹಂತ ಹಂತವಾಗಿ ಗಾಂಧೀಜಿಯವರ ಹೆಸರನ್ನು ಅಳಿಸುವ ಸಂಚು ರೂಪಿಸುತ್ತಿದೆ. ನಾವು ಕೂಡ ರಾಮನ ಭಕ್ತರೇ, ನಮ್ಮ ಹೃದಯದಲ್ಲೂ ರಾಮನಿದ್ದಾನೆ. ಆದರೆ ರಾಮನ ಹೆಸರಿನಲ್ಲಿ ಸುಳ್ಳು ಹೇಳುತ್ತಾ ಬಡವರ ಉದ್ಯೋಗ ಕಿತ್ತುಕೊಳ್ಳುವ ಯೋಜನೆ ಸರಿಯಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರ ವಿರುದ್ಧ ಗ್ರಾಮ ಪಂಚಾಯತ್ ಮಟ್ಟದಲ್ಲಿ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಸಂವಿಧಾನ ಬದಲಾವಣೆ ಅಸಾಧ್ಯ

ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಈ ಹಿಂದೆ ಕೂಗಾಡುತ್ತಿದ್ದವರು ಈಗ ತಣ್ಣಗಾಗಿದ್ದಾರೆ. ಸಂವಿಧಾನ ಬದಲಿಸುವುದು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಅರಸು ಕಾಲಾವಧಿಯಿಂದಲೇ ಭೂ ಹಕ್ಕು ನೀಡುವ ಮೂಲಕ ಜನರಿಗೆ ಆರ್ಥಿಕ ಭದ್ರತೆ ನೀಡಿದೆ. ಈಗಿನ ಗ್ಯಾರಂಟಿ ಯೋಜನೆಗಳನ್ನು ಕೇವಲ ಬಾಯಲ್ಲಿ ಹೇಳದೆ ಅನುಷ್ಠಾನಕ್ಕೆ ತಂದಿದ್ದೇವೆ' ಎಂದು ಸರ್ಕಾರದ ಸಾಧನೆಗಳನ್ನು ಸ್ಮರಿಸಿದರು.

ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ

ಪಿಯುಸಿ ಪೂರಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, 'ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪ್ರಶ್ನೆ ಪತ್ರಿಕೆಗಳನ್ನು ಮೊಬೈಲ್ ಮೂಲಕ ಕಳುಹಿಸುವ ಡಿಜಿಟಲ್ ವಿಧಾನ ಅಳವಡಿಸಿದ್ದರೂ, ಯಾವುದೋ ಒಂದು ಮೂಲೆಯಲ್ಲಿ ಲೋಪವಾಗಿದೆ. ಯಾವ ಮೊಬೈಲ್ ಕೋಡ್‌ನಿಂದ ಪತ್ರಿಕೆ ಹರಿದಾಡಿದೆ ಎಂಬುದು ಈಗಾಗಲೇ ಪತ್ತೆಯಾಗಿದೆ. ಪ್ರಕರಣವನ್ನು ಎಫ್‌ಎಸ್‌ಎಲ್ (FSL) ತನಿಖೆಗೆ ಒಪ್ಪಿಸಲಾಗುವುದು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಭರವಸೆ ನೀಡಿದರು.

ಕನ್ನಡ ಶಾಲೆಗಳಿಗೆ ಅನುದಾನ

1995ರ ನಂತರದ ಖಾಸಗಿ ಅನುದಾನ ರಹಿತ ಕನ್ನಡ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿದೆ. ಬಜೆಟ್ ಪೂರ್ವ ಸಭೆಯಲ್ಲೂ ಈ ವಿಷಯ ಪ್ರಸ್ತಾಪಿಸುತ್ತೇನೆ. ಕನ್ನಡ ಭಾಷೆ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ. ಆದರೆ ಅನುದಾನ ನೀಡುವ ಮುನ್ನ ಮಕ್ಕಳ ದಾಖಲಾತಿಯನ್ನು ಪರಿಗಣಿಸಲಾಗುವುದು' ಎಂದು ತಿಳಿಸಿದರು.