ಡಿ.ಕೆ.ಶಿವಕುಮಾರ್ ಅವರ ಆಪ್ತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಆರಾಧ್ಯ ಅವರು ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿ ಕೊಠಡಿಯ ವಾಸ್ತು ಪರಿಶೀಲನೆ ನಡೆಸಿದ್ದಾರೆ. ಡಿಕೆಶಿ ಆರಾಧ್ಯ ದೈವ ನೊಣವಿನಕೆರೆ ಅಜ್ಜಯ್ಯನ ಫೋಟೋ ಇಟ್ಟು ವಿಶೇಷ ಪೂಜೆ ನೆರವೇರಿಸಲಾಗಿದೆ.
ಬೆಂಗಳೂರು (ಜೂ.3): ವಿಧಾನಸೌಧದ ಮೂರನೇ ಮಹಡಿಯಲ್ಲಿನ ಮುಖ್ಯಮಂತ್ರಿ ಅವರ ಕೊಠಡಿಯ ವಾಸ್ತುವನ್ನು ಡಿ.ಕೆ.ಶಿವಕುಮಾರ್ ಅವರ ಆಪ್ತ ಜ್ಯೋತಿಷಿ, ವಾಸ್ತು ತಜ್ಞ ಆರಾಧ್ಯ ಅವರು ಮಂಗಳವಾರ ಪರಿಶೀಲನೆ ನಡೆಸಿದರು.
ವಾಸ್ತು ಪರಿಶೀಲನೆ ವೇಳೆ ಮುಖ್ಯಮಂತ್ರಿ ಅವರ ಕೊಠಡಿಯಲ್ಲಿದ್ದವರೆಲ್ಲರನ್ನೂ ಹೊರಗೆ ಕಳುಹಿಸಿ ಬಾಗಿಲು ಹಾಕಲಾಗಿತ್ತು. ಆರಾಧ್ಯ ಅವರು ಕೊಠಡಿಯ ಪ್ರತಿಯೊಂದು ಅಂಶವನ್ನೂ ಪರಿಶೀಲಿಸಿದರು. ಈ ವೇಳೆ ಕೆಲ ಬದಲಾವಣೆಗೆ ಸೂಚಿಸಿದ್ದಾರೆ. ಅದರಂತೆ ಕೊಠಡಿಯಲ್ಲಿನ ಪೀಠೋಪಕರಣಗಳನ್ನು ಇಡುವ ಸ್ಥಳ ಸೇರಿ ಮತ್ತಿತರ ಅಂಶಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ.
ಸಿಎಂ ಕೊಠಡಿಯಲ್ಲಿ ಅಜ್ಜಯ್ಯ:
ಲೋಕಸಭವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನದ ನಂತರ ವಿಧಾನಸೌಧಕ್ಕೆ ಡಿ.ಕೆ.ಶಿವಕುಮಾರ್ ಆಗಮಿಸಲಿದ್ದಾರೆ. ಹೀಗಾಗಿ ವಿಧಾನಸೌಧ ಪ್ರವೇಶ ದ್ವಾರ ಹಾಗೂ ವಿಧಾನಸೌಧದ ಮೂರನೇ ಮಹಡಿಯ ಮುಖ್ಯಮಂತ್ರಿ ಅವರ ಕೊಠಡಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ. ಜತೆಗೆ, ಡಿ.ಕೆ.ಶಿವಕುಮಾರ್ ಅವರ ಆರಾಧ್ಯ ದೈವ ನೊಣವಿನಕೆರೆ ಅಜ್ಜಯ್ಯ ಅವರ ಭಾವಚಿತ್ರ ಸೇರಿ ದೇವರ ಫೋಟೋಗಳನ್ನಿಟ್ಟು, ವಿಶೇಷ ಪೂಜೆ ನೆರವೇರಿಸಲಾಗಿದೆ.



