ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ಲೋಕಭವನದ ಗಾಜಿನ ಮನೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಐತಿಹಾಸಿಕ ಸಮಾರಂಭಕ್ಕೆ ರಾಹುಲ್ ಗಾಂಧಿ ಸೇರಿದಂತೆ ದೆಹಲಿಯ 50ಕ್ಕೂ ಹೆಚ್ಚು ಗಣ್ಯರನ್ನು ಆಹ್ವಾನಿಸಲಾಗಿದೆ.
ನವದೆಹಲಿ (ಜೂ.3): ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬುಧವಾರದಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ಲೋಕಭವನದ ಆವರಣದಲ್ಲಿರುವ ಸುಂದರ ಗಾಜಿನ ಮನೆಯಲ್ಲಿ ಈ ಐತಿಹಾಸಿಕ ಹಾಗೂ ಅದ್ಧೂರಿ ಪದಗ್ರಹಣ ಸಮಾರಂಭ ಜರುಗಲಿದೆ. ಪ್ರಮಾಣ ವಚನ ಸಮಾರಂಭಕ್ಕೆ ಗಣ್ಯರ ದಂಡೇ ಆಗಮಿಸುತ್ತಿದ್ದು, 50ಕ್ಕೂ ಹೆಚ್ಚು ದೆಹಲಿಗರಿಗೆ ಡಿಕೆಶಿ ಆಹ್ವಾನ ನೀಡಿದ್ದಾರೆ.
ಬುಧವಾರ ಸಂಜೆ 4:10 ಗಂಟೆಗೆ ಸರಿಯಾಗಿ ಆರಂಭವಾಗಲಿರುವ ನಿಗದಿತ ಶುಭ ಮುಹೂರ್ತದಲ್ಲಿ ಡಿಕೆಶಿಯವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸಮಾರಂಭಕ್ಕೆ ಗಣ್ಯರ ದಂಡೇ ಆಗಮಿಸುತ್ತಿದೆ. ಈ ಪ್ರತಿಷ್ಠಿತ ಸಮಾರಂಭಕ್ಕೆ ಅಧಿಕೃತ ಆಹ್ವಾನ ಪತ್ರಿಕೆಗಳನ್ನು ವಿತರಿಸಲಾಗುತ್ತಿದ್ದು, ಭದ್ರತಾ ದೃಷ್ಟಿಯಿಂದ ಕೇವಲ ಆಯ್ದ ವಿವಿಐಪಿ ಮತ್ತು ಗಣ್ಯ ಅತಿಥಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಸಮಾರಂಭಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ಈ ಮಧ್ಯೆ, ಪಕ್ಷದ ದೆಹಲಿ ವಲಯದಲ್ಲಿ ಉತ್ತಮ ಸಂಪರ್ಕ ಬೆಳೆಸಿಕೊಂಡಿರುವ ಡಿಕೆಶಿ, ಪ್ರಮಾಣ ವಚನ ಸಮಾರಂಭಕ್ಕೆ ದೆಹಲಿಯಲ್ಲಿನ ಗಣ್ಯರನ್ನೂ ಆಹ್ವಾನಿಸಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಸೇರಿ ಸುಮಾರು 50ಕ್ಕೂ ಹೆಚ್ಚು ಗಣ್ಯರಿಗೆ ಆಹ್ವಾನ ನೀಡಿದ್ದಾರೆ. ಎಐಸಿಸಿ ಪದಾಧಿಕಾರಿಗಳು, ವಕೀಲರು, ಮಾಜಿ ಸಿಎಂ ಸೇರಿ ತಮ್ಮ ಆಪ್ತೆಷ್ಟರನ್ನು ಸಮಾರಂಭಕ್ಕೆ ಆಹ್ವಾನಿಸಿದ್ದಾರೆ.


