Rajya Sabha Elections 2022: ಇದೇ ಜೂನ್ 10ರಂದು ರಾಜ್ಯಸಭಾ ಚುನಾವಣೆ ನಡೆಯಲಿದ್ದು ಕೆಲವೊಂದು ಅಚ್ಚರಿಯ ಆಯ್ಕೆಗಳನ್ನು ಬಿಜೆಪಿ ಮಾಡಿದೆ. ಅದೇ ರೀತಿ ಒಂದೇ ಒಂದು ಮುಸಲ್ಮಾನ ಅಭ್ಯರ್ಥಿಯನ್ನೂ ಕಣಕ್ಕಿಳಿಸಿಲ್ಲ. ಸದ್ಯ ಇರುವ ಮೂರು ಸಂಸದರ ಅವಧಿಯೂ ಅಂತ್ಯಕ್ಕೆ ಬಂದಿದ್ದು, ಮುಸಲ್ಮಾನ ಸಮುದಾಯದಿಂದ ರಾಜಕೀಯ ಕೊಂಡಿಯನ್ನು ಬಿಜೆಪಿ ಕಳಚಿಕೊಳ್ಳಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
ನವದೆಹಲಿ: ಇನ್ನು ಕೆಲ ತಿಂಗಳುಗಳ ಒಳಗೆ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಬಿಜೆಪಿ ಪಕ್ಷದಿಂದ ಮುಸಲ್ಮಾನ ಸಂಸದರು ಇರುವುದಿಲ್ಲ. ಈ ಬಾರಿಯ ರಾಜ್ಯಸಭೆ ಚುನಾವಣೆಯಲ್ಲಿ (Rajya Sabha Election 2022) ಯಾವುದೇ ಮುಸಲ್ಮಾನ ನಾಯಕರಿಗೂ ಟಿಕೆಟ್ ನೀಡಿಲ್ಲ. ಇನ್ನು ಸದ್ಯ ಬಿಜೆಪಿ ಪಕ್ಷದಲ್ಲಿ ರಾಜ್ಯಸಭೆಯಲ್ಲಿ ಮೂವರು ಸಂಸದರಿದ್ದಾರೆ. ಮುಖ್ತಾರ್ ಅಬ್ಬಾಸ್ ನಖ್ವಿ (Mukhtar Abbas Naqvi), ಸೈಯದ್ ಜಾಫರ್ ಇಸ್ಲಾಂ (Syed Zafar Islam) ಮತ್ತು ಎಮ್‌ಜೆ ಅಕ್ಬರ್ (MJ Akbar) ಬಿಜೆಪಿಯ ಸಂಸದರು (Muslim MPS from BJP). ಈ ಮೂವರ ಅಧಿಕಾರಾವಧಿಯೂ ಕೆಲವೇ ದಿನಗಳಲ್ಲಿ ಮುಗಿಯಲಿದೆ. ಈ ಬಾರಿ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಒಟ್ಟೂ 22 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೂನ್ 10ರಂದು ರಾಜ್ಯಸಭೆ ಚುನಾವಣೆ ನಡೆಯಲಿದೆ (Rajya Sabha election on June 10).
ಮುಖ್ತಾರ್ ಅಬ್ಬಾಸ್ ನಖ್ವಿ ಅಲ್ಪಸಂಖ್ಯಾತ ವ್ಯವಹಾರಗಳ ಕೇಂದ್ರ ಸಚಿವರಾಗಿದ್ದು (Union Minister for Minority Affairs), ಮತ್ತೆ ರಾಜ್ಯಸಭೆಗೆ ಆರು ತಿಂಗಳೊಳಗೆ ಮರುನೇಮಕವಾಗದಿದ್ದರೆ, ಅವರ ಖಾತೆಯನ್ನೂ ಕಳೆದುಕೊಳ್ಳಲಿದ್ದಾರೆ. ಈ ಮೂವರೂ ಸಂಸದರ ಅವಧಿ ಜುಲೈ 7ರಂದು ಅಂತ್ಯಗೊಳ್ಳಲಿದೆ. ಆದರೆ ಬಿಜೆಪಿ ಮೂಲಗಳ ಪ್ರಕಾರ ನಖ್ವಿ ಅವರನ್ನು ರಾಂಪುರ ಲೋಕಸಭಾ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆಯಿದೆ. ಉತ್ತರ ಪ್ರದೇಶದ ರಾಂಪುರ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ (Rampura Loka Sabha By Poll) ನಡೆಯಬೇಕಿದೆ.
ಸಮಾಜವಾದಿ ಪಕ್ಷದ ಆಜಮ್ ಖಾನ್ (Samajavadi Party's Azam Khan) ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ನಂತರ ಅವರ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಈ ಕ್ಷೇತ್ರದಿಂದ ನಖ್ವಿ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಜೂನ್ 23ರಂದು ಉತ್ತರ ಪ್ರದೇಶದ ಆಜಂಗಢ ಮತ್ತು ರಾಂಪುರ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಿಗದಿಯಾಗಿದ್ದು, ಇನ್ನೂ ಟಿಕೆಟ್ ಘೋಷಣೆಯಾಗಿಲ್ಲ.
ಇದನ್ನೂ ಓದಿ: ಕೇಂದ್ರ ಸಚಿವರು ಸೇರಿ ಹಲವರಿಗೆ ಬಿಜೆಪಿ ಕೊಕ್?: ನಖ್ವಿ, ಜಾವಡೇಕರ್‌ಗೆ ರಾಜ್ಯಸಭೆ ಟಿಕೆಟ್ ಇಲ್ಲ!
ಸೈಯದ್ ಜಾಫರ್ ಇಸ್ಲಾಂ ಅವಧಿ ಜುಲೈ 4ರಂದು ಅಂತ್ಯಗೊಂಡರೆ ಎಮ್ ಜೆ ಅಕ್ಬರ್ ಅವಧಿ ಜೂನ್ 29ರಂದು ಅಂತ್ಯಗೊಳ್ಳಲಿದೆ.
ರಾಷ್ಟ್ರಪತಿಗಳು ಒಟ್ಟೂ 12 ಸಂಸದರನ್ನು ನೇರವಾಗಿ ರಾಜ್ಯಸಭೆಗೆ ನೇಮಕ ಮಾಡಬಹುದು. ಸದ್ಯ ಕೇವಲ ಐದು ಸಂಸದರನ್ನು ಮಾತ್ರ ರಾಷ್ಟ್ರಪತಿಗಳು ನೇಮಕ ಮಾಡಿದ್ದು, ಇನ್ನೂ ಎಂಟು ಸೀಟು ಖಾಲಿಯಿದೆ. ಬಿಜೆಪಿ ಬೇಕಾದಲ್ಲಿ ಪ್ರಬಲ ಮುಸ್ಲಿಂ ನಾಯಕರೊಬ್ಬರಿಗೆ ರಾಷ್ಟ್ರಪತಿಯವರ ಕಡೆಯಿಂದ ನೇಮಿಸುವ ಮಾರ್ಗ ಅನುಸರಿಸಬಹುದು. 2019ರಲ್ಲಿ ಬಿಜೆಪಿ ಒಟ್ಟೂ ಆರು ಮುಸಲ್ಮಾನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆರಕ್ಕೆ ಆರೂ ಅಭ್ಯರ್ಥಿಗಳು ಸೋಲು ಕಂಡಿದ್ದರು. ಇದೇ ಕಾರಣಕ್ಕೆ ಬಿಜೆಪಿಯಲ್ಲಿ ಮುಸಲ್ಮಾನ ಪ್ರತಿನಿಧಿಗಳು ಸಂಪೂರ್ಣ ಕಡಿಮೆಯಾಗಿದ್ದರೂ ಆಶ್ಚರ್ಯವಿಲ್ಲ ಎಂದೂ ಕೆಲವರು ವಿಶ್ಲೇಷಿಸುತ್ತಾರೆ.
ಪ್ರಸ್ತುತ ಜಾರ್ಖಂಡ್‌ನಿಂದ ಬಿಜೆಪಿ ಪ್ರತಿನಿಧಿಸುತ್ತಿರುವ ಸಂಸದ, ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಅಲ್ಲದೇ ನಾಯಕರಾದ ಒ.ಪಿ.ಮಾಥುರ್, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಗೌತಮ್ ಮತ್ತು ವಿನಯ್ ಸಹಸ್ರಬುದ್ಧೆ, ರಾಜ್ಯಸಭೆಯ ಬಿಜೆಪಿಯ ಮುಖ್ಯ ಸಚೇತಕ ಮತ್ತು ಮಾಜಿ ಕೇಂದ್ರ ಸಚಿವ ಶಿವ್ ಪ್ರತಾಪ್ ಶುಕ್ಲಾ ಅವರಿಗೂ ಸಹ ಟಿಕೆಟ್ ನೀಡಲಾಗಿಲ್ಲ.
ಇದನ್ನೂ ಓದಿ: ಒಂದೇ ಕ್ಲಿಕ್‌ನಲ್ಲಿ ರೈತರ ಖಾತೆ ಸೇರಿದ ಸಮ್ಮಾನ್ ನಿಧಿ, ಇದೆಲ್ಲವೂ ದೇಶದ 'ಕೃಪೆ'ಯಿಂದ ನಡೆಯುತ್ತಿದೆ ಎಂದ ಮೋದಿ!
11 ಸ್ಥಾನಗಳು ಖಾಲಿ ಇರುವ ಉತ್ತರ ಪ್ರದೇಶದಲ್ಲಿ 6 ಅಭ್ಯರ್ಥಿಗಳನ್ನು ಬಿಜೆಪಿ ಘೋಷಿಸಿದೆ. ಯೋಗಿ ಆದಿತ್ಯನಾಥ ಅವರಿಗಾಗಿ ತನ್ನ ಗೋರಖ್‌ಪುರ ಸ್ಥಾನ ಬಿಟ್ಟುಕೊಟ್ಟರಾಧಾ ಮೋಹನ್ ಅಗರವಾಲ್ ಅವರಿಗೆ ರಾಜ್ಯಸಭಾ ಟಿಕೆಟ್ ನೀಡಲಾಗಿದೆ.
ಸಚಿವ ಸಂಪುಟ ಪುನಾರಚನೆ?
ಕೇಂದ್ರ ಮಂತ್ರಿಮಂಡಲದಲ್ಲಿ ಹಲವು ರಾಜ್ಯಸಭಾ ಸಂಸದರಿಗೆ ಸ್ಥಾನ ನೀಡಲಾಗಿದೆ. ಮುಂದಿನ ಚುನಾವಣೆಯಲ್ಲಿ ಹಲವು ಸಚಿವರಿಗೆ ರಾಜ್ಯಸಭಾ ಟಿಕೆಟ್ ನೀಡದಿರುವ ಕಾರಣ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದೆ. ಯಾವ ಹೊಸ ಸಂಸದರಿಗೆ ಸಚಿವ ಸ್ಥಾನ ಲಭ್ಯವಾಗಬಹುದು ಎಂಬ ಕುತೂಹಲ ಮನೆಮಾಡಿದೆ
