* ಜೂ.10ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆ* ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಬಿಜೆಪಿ* ಕೇಂದ್ರ ಸಚಿವರು ಸೇರಿ ಹಲವರಿಗೆ ಬಿಜೆಪಿ ಕೊಕ್?
ನವದೆಹಲಿ(ಮೇ.31): ಜೂ.10ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಬಿಜೆಪಿ ಕೇಂದ್ರ ಸಚಿವರು ಸೇರಿದಂತೆ ಹಲವು ನಾಯಕರನ್ನು ಪಟ್ಟಿಯಿಂದ ಕೈಬಿಟ್ಟಿದೆ.
ಪ್ರಸ್ತುತ ಜಾರ್ಖಂಡ್‌ನಿಂದ ಬಿಜೆಪಿ ಪ್ರತಿನಿಧಿಸುತ್ತಿರುವ ಸಂಸದ, ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಅಲ್ಲದೇ ನಾಯಕರಾದ ಒ.ಪಿ.ಮಾಥುರ್, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಗೌತಮ್ ಮತ್ತು ವಿನಯ್ ಸಹಸ್ರಬುದ್ಧೆ, ರಾಜ್ಯಸಭೆಯ ಬಿಜೆಪಿಯ ಮುಖ್ಯ ಸಚೇತಕ ಮತ್ತು ಮಾಜಿ ಕೇಂದ್ರ ಸಚಿವ ಶಿವ್ ಪ್ರತಾಪ್ ಶುಕ್ಲಾ ಅವರಿಗೂ ಸಹ ಟಿಕೆಟ್ ನೀಡಲಾಗಿಲ್ಲ.
11 ಸ್ಥಾನಗಳು ಖಾಲಿ ಇರುವ ಉತ್ತರ ಪ್ರದೇಶದಲ್ಲಿ 6 ಅಭ್ಯರ್ಥಿಗಳನ್ನು ಬಿಜೆಪಿ ಘೋಷಿಸಿದೆ. ಯೋಗಿ ಆದಿತ್ಯನಾಥ ಅವರಿಗಾಗಿ ತನ್ನ ಗೋರಖ್‌ಪುರ ಸ್ಥಾನ ಬಿಟ್ಟುಕೊಟ್ಟರಾಧಾ ಮೋಹನ್ ಅಗರವಾಲ್ ಅವರಿಗೆ ರಾಜ್ಯಸಭಾ ಟಿಕೆಟ್ ನೀಡಲಾಗಿದೆ.
ಸಚಿವ ಸಂಪುಟ ಪುನಾರಚನೆ?
ಕೇಂದ್ರ ಮಂತ್ರಿಮಂಡಲದಲ್ಲಿ ಹಲವು ರಾಜ್ಯಸಭಾ ಸಂಸದರಿಗೆ ಸ್ಥಾನ ನೀಡಲಾಗಿದೆ. ಮುಂದಿನ ಚುನಾವಣೆಯಲ್ಲಿ ಹಲವು ಸಚಿವರಿಗೆ ರಾಜ್ಯಸಭಾ ಟಿಕೆಟ್ ನೀಡದಿರುವ ಕಾರಣ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದೆ. ಯಾವ ಹೊಸ ಸಂಸದರಿಗೆ ಸಚಿವ ಸ್ಥಾನ ಲಭ್ಯವಾಗಬಹುದು ಎಂಬ ಕುತೂಹಲ ಮನೆಮಾಡಿದೆ
