ಒಂದೇ ಕ್ಲಿಕ್ನಲ್ಲಿ ರೈತರ ಖಾತೆ ಸೇರಿದ ಸಮ್ಮಾನ್ ನಿಧಿ, ಇದೆಲ್ಲವೂ ದೇಶದ 'ಕೃಪೆ'ಯಿಂದ ನಡೆಯುತ್ತಿದೆ ಎಂದ ಮೋದಿ!
* ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 21,000 ಕೋಟಿ ರೂ.ಗಳ 11 ನೇ ಕಂತು ಬಿಡುಗಡೆ
* 10 ಕೋಟಿಗೂ ಹೆಚ್ಚು ರೈತರಿಗೆ ಇದರ ಲಾಭ
* ಇದು ನನ್ನ ಜೀವನದ ವಿಶೇಷ ಕ್ಷಣ ಎಂದ ಮೋದಿ
ಶಿಮ್ಲಾ(ಮೇ.31): ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 21,000 ಕೋಟಿ ರೂ.ಗಳ 11 ನೇ ಕಂತನ್ನುಪ್ರಧಾನಿ ನರೇಂದ್ರ ಮೋದಿ ಅವರು ಮೇ 31 ರಂದು ಬಿಡುಗಡೆ ಮಾಡಿದರು. ಈ ಮೂಲಕ 10 ಕೋಟಿಗೂ ಹೆಚ್ಚು ರೈತರು ಇದರ ಲಾಭ ಪಡೆದಿದ್ದಾರೆ. ಶಿಮ್ಲಾದಲ್ಲಿ, ಪ್ರಧಾನಿ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶದ ವಿವಿಧ ಸ್ಥಳಗಳಲ್ಲಿ ರೈತರೊಂದಿಗೆ ಸಂಪರ್ಕ ಸಾಧಿಸಿದರು. ಕೃಷಿ ಸಚಿವಾಲಯದ ಪ್ರಕಾರ, ಶಿಮ್ಲಾದಲ್ಲಿ ಈ 'ಗರೀಬ್ ಕಲ್ಯಾಣ್ ಸಮ್ಮೇಳನ'ವನ್ನು ಆಜಾದಿಯ ಅಮೃತ್ ಮಹೋತ್ಸವದ ಅಡಿಯಲ್ಲಿ ಆಯೋಜಿಸಲಾಗಿದೆ. ಪಿಎಂ-ಕಿಸಾನ್ ಸಮ್ಮಾನ್ ನಿಧಿಯನ್ನು ಫೆಬ್ರವರಿ 24, 2019 ರಂದು ಪ್ರಾರಂಭಿಸಲಾಯಿತು.
ಇಂದು ನನ್ನ ಜೀವನದ ವಿಶೇಷ ದಿನ
ಇದೀಗ ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿಯ ಹಣವನ್ನು ದೇಶದ ಕೋಟ್ಯಂತರ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ, ಅವರಿಗೆ ಹಣ ತಲುಪಿಯೂ ಆಗಿದೆ ಎಂದು ಮೋದಿ ಹೇಳಿದರು. ಇಂದು ಶಿಮ್ಲಾದ ಭೂಮಿಯಿಂದ ದೇಶದ 10 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡುವ ಸೌಭಾಗ್ಯ ಸಿಕ್ಕಿದೆ. ಇಂದು ನನ್ನ ಜೀವನದಲ್ಲಿ ಒಂದು ವಿಶೇಷ ದಿನವಾಗಿದೆ, ಈ ವಿಶೇಷ ದಿನದಂದು ದೇವಭೂಮಿಗೆ ನಮನ ಸಲ್ಲಿಸುವ ಅವಕಾಶವನ್ನು ಪಡೆಯುವುದಕ್ಕಿಂತ ಹೆಚ್ಚಿನ ಭಾಗ್ಯ ಏನಿದೆ. ನಮ್ಮನ್ನು ಆಶೀರ್ವದಿಸಲು ನೀವು ಅಪಾರ ಸಂಖ್ಯೆಯಲ್ಲಿ ಬಂದಿದ್ದೀರಿ, ನಾನು ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.
ಇದೆಲ್ಲ ನಡೆಯುತ್ತಿರುವುದು ದೇಶದ ‘ಕೃಪೆ’ಯಿಂದ.
130 ಕೋಟಿ ಭಾರತೀಯರ ಸೇವಕನಾಗಿ ಕೆಲಸ ಮಾಡಲು ನೀವೆಲ್ಲರೂ ನನಗೆ ಅವಕಾಶ ನೀಡಿದ್ದೀರಿ, ನನಗೆ ಸವಲತ್ತು ಸಿಕ್ಕಿದೆ. ಇಂದು ನಾನು ಏನನ್ನಾದರೂ ಮಾಡಲು ಶಕ್ತನಾಗಿದ್ದೇನೆ, ನಾನು ಹಗಲಿರುಳು ಓಡಬಲ್ಲೆ, ಹಾಗಾಗಿ ಮೋದಿ ಅದನ್ನು ಮಾಡುತ್ತಾರೆ ಎಂದು ಭಾವಿಸಬೇಡಿ, ಮೋದಿ ಓಡುತ್ತಾರೆ ಎಂದು ಭಾವಿಸಬೇಡಿ, ಇದೆಲ್ಲವೂ ದೇಶವಾಸಿಗಳ ಕೃಪೆಯಿಂದ ನಡೆಯುತ್ತಿದೆ. ಒಂದು ಕುಟುಂಬದ ಸದಸ್ಯನಾಗಿ, ಕುಟುಂಬದ ಭರವಸೆ ಮತ್ತು ಆಕಾಂಕ್ಷೆಗಳೊಂದಿಗೆ ಸಂಪರ್ಕ ಸಾಧಿಸುವುದು, 130 ಕೋಟಿ ದೇಶವಾಸಿಗಳ ಕುಟುಂಬ, ಇದು ನನ್ನ ಜೀವನದಲ್ಲಿ ಎಲ್ಲವೂ ಆಗಿದೆ. ನನ್ನ ಜೀವನದಲ್ಲಿ ನೀವೇ ಸರ್ವಸ್ವ ಮತ್ತು ಈ ಜೀವನವೂ ನಿಮಗಾಗಿ ಎಂದಿದ್ದಾರೆ.
2014ರ ಮೊದಲು ಸರಕಾರ ಭ್ರಷ್ಟಾಚಾರವನ್ನು ವ್ಯವಸ್ಥೆಯ ಒಂದು ಭಾಗವಾಗಿ ಒಪ್ಪಿಕೊಂಡಿತ್ತು.
2014 ರ ಮೊದಲು ಸರ್ಕಾರವು ಭ್ರಷ್ಟಾಚಾರವನ್ನು ವ್ಯವಸ್ಥೆಯ ಅತ್ಯಗತ್ಯ ಭಾಗವೆಂದು ಪರಿಗಣಿಸಿತ್ತು. ಆಗಿನ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಬದಲು ಭ್ರಷ್ಟತೆಗೆ ಶರಣಾಯಿತು, ಆಗ ಯೋಜನೆಗಳ ಹಣವನ್ನು ನಿರ್ಗತಿಕರಿಗೆ ತಲುಪುವ ಮೊದಲು ಲೂಟಿ ಮಾಡುವುದನ್ನು ದೇಶ ನೋಡುತ್ತಿತ್ತು. ಆದರೆ ಇಂದು ಜನ್ ಧನ್ ಖಾತೆಗಳ ಪ್ರಯೋಜನಗಳು, ಜನ್ ಧನ್-ಆಧಾರ್ ಮತ್ತು ಮೊಬೈಲ್‌ನಿಂದ ಮಾಡಿದ ತ್ರಿಶಕ್ತಿಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಮೊದಲು ಅಡುಗೆ ಮನೆಯಲ್ಲಿ ಹೊಗೆಯಾಡಿಸುವ ಅಗತ್ಯವಿತ್ತು, ಇಂದು ಉಜ್ವಲ ಯೋಜನೆಯಿಂದ ಸಿಲಿಂಡರ್ ಪಡೆಯುವ ಸೌಲಭ್ಯವಿದೆ. 2014ಕ್ಕಿಂತ ಮೊದಲು ದೇಶದ ಭದ್ರತೆಯ ಬಗ್ಗೆ ಕಾಳಜಿ ಇತ್ತು, ಇಂದು ಸರ್ಜಿಕಲ್ ಸ್ಟ್ರೈಕ್-ವೈಮಾನಿಕ ದಾಳಿಯ ಬಗ್ಗೆ ಹೆಮ್ಮೆ ಪಡುತ್ತೇವೆ. ಇಂದು ನಮ್ಮ ಗಡಿ ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿದೆ ಎಂದಿದ್ದಾರೆ.
PM KISAN: ರೈತರಿಗೆ ಮತ್ತೆ ಗುಡ್‌ನ್ಯೂಸ್, eKYC ಮಾಡದಿದ್ದರೆ ಹಣ ಖಾತೆಗೆ ಬರಲ್ಲ, ಹೀಗೆ ಆಧಾರ್ ಲಿಂಕ್ ಮಾಡಿ!
ಶಾಶ್ವತ ಪರಿಹಾರ ನೀಡಿದ್ದೇವೆ
ಪ್ರಧಾನಿ ವಸತಿ ಯೋಜನೆ, ವಿದ್ಯಾರ್ಥಿವೇತನ ಅಥವಾ ಪಿಂಚಣಿ ಯೋಜನೆಗಳು ತಂತ್ರಜ್ಞಾನದ ಸಹಾಯದಿಂದ ನಾವು ಭ್ರಷ್ಟಾಚಾರದ ವ್ಯಾಪ್ತಿಯನ್ನು ಕಡಿಮೆ ಮಾಡಿದ್ದೇವೆ. ಈ ಹಿಂದೆ ಶಾಶ್ವತ ಎಂದು ಭಾವಿಸಲಾಗಿದ್ದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ಪ್ರಯತ್ನಿಸುತ್ತಿದ್ದೇವೆ. ನಾಲ್ಕು ದಶಕಗಳಿಂದ ಕಾದು ಒನ್ ರ್ಯಾಂಕ್ ಒನ್ ಪಿಂಚಣಿ ಜಾರಿಗೊಳಿಸಿ, ನಮ್ಮ ಮಾಜಿ ಸೈನಿಕರಿಗೆ ಬಾಕಿ ಹಣ ನೀಡಿದ್ದು ನಮ್ಮ ಸರ್ಕಾರ. ಹಿಮಾಚಲದ ಪ್ರತಿಯೊಂದು ಕುಟುಂಬವೂ ಇದರಿಂದ ಸಾಕಷ್ಟು ಪ್ರಯೋಜನ ಪಡೆದಿದೆ. ಸ್ವಂತ ವೋಟ್ ಬ್ಯಾಂಕ್ ಸೃಷ್ಟಿಸಿಕೊಳ್ಳುವ ರಾಜಕಾರಣ ದೇಶಕ್ಕೆ ಸಾಕಷ್ಟು ಹಾನಿ ಮಾಡಿದೆ. ನಾವು ವೋಟ್ ಬ್ಯಾಂಕ್ ಸೃಷ್ಟಿಸಲು ಅಲ್ಲ, ನವ ಭಾರತ ನಿರ್ಮಾಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ. 2014ಕ್ಕಿಂತ ಮೊದಲು ನಾನು ನಿಮ್ಮ ನಡುವೆ ಬರುವಾಗ ಭಾರತ ಜಗತ್ತಿನೊಂದಿಗೆ ಕಣ್ಣುಮುಚ್ಚಿ ಮಾತನಾಡುವುದಿಲ್ಲ ಎಂದು ಹೇಳುತ್ತಿದ್ದೆ. ಇಂದು ಭಾರತ ಬಲವಂತದಲ್ಲಿ ಸ್ನೇಹದ ಹಸ್ತ ಚಾಚುವುದಿಲ್ಲ. ಇಂದು ಭಾರತವು ಸಹಾಯಹಸ್ತ ಚಾಚಿದೆ. 21ನೇ ಶತಮಾನದ ಉಜ್ವಲ ಭಾರತಕ್ಕಾಗಿ, ಮುಂದಿನ ಪೀಳಿಗೆಗೆ ಉಜ್ವಲ ಭವಿಷ್ಯಕ್ಕಾಗಿ ನಾವು ಶ್ರಮಿಸಬೇಕಾಗಿದೆ. ಅಸ್ಮಿತೆಯ ಕೊರತೆಯಿಲ್ಲದ ಆದರೆ ಆಧುನಿಕತೆಯ ಭಾರತ. ಭಾರತದ ಜನರ ಸಾಮರ್ಥ್ಯದ ಮುಂದೆ ಯಾವುದೇ ಗುರಿ ಅಸಾಧ್ಯವಲ್ಲ. ಇಂದು ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಇಂದು ಭಾರತದಲ್ಲಿ ದಾಖಲೆಯ ವಿದೇಶಿ ಹೂಡಿಕೆ ನಡೆಯುತ್ತಿದೆ. ಇಂದು ಭಾರತ ದಾಖಲೆಯ ರಫ್ತು ಮಾಡುತ್ತಿದೆ ಎಂದಿದ್ದಾರೆ.
ಪ್ರಧಾನಿ ಮೋದಿ ರೋಡ್ ಶೋ
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ಎಂಟನೇ ವಾರ್ಷಿಕೋತ್ಸವದ ಅಂಗವಾಗಿ ಶಿಮ್ಲಾದ ರಿಡ್ಜ್ ಮೈದಾನದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ಮೊದಲು ರೋಡ್‌ಶೋ ನಡೆಸಿದರು. ಅವರ ಜೊತೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಕೂಡ ಇದ್ದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ತ್ರಿಲೋಕ್ ಜಮ್ವಾಲ್ ಪ್ರಕಾರ, ಪ್ರಧಾನ ಮಂತ್ರಿಗಳ ರೋಡ್‌ಶೋ ಸಿಟಿಒದಿಂದ ರಾಣಿ ಝಾನ್ಸಿ ಪಾರ್ಕ್‌ವರೆಗೆ ಅರ್ಧ ಕಿಲೋಮೀಟರ್ ದೂರವನ್ನು ಕ್ರಮಿಸಿತು. ಹಿಮಾಚಲ ಪ್ರದೇಶದಲ್ಲಿ ಈ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ತಿಳಿಸೋಣ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ನಾಲ್ಕನೇ ವರ್ಷಾಚರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರ ತವರು ಜಿಲ್ಲೆ ಮಂಡಿಯ ಪಡಲ್ ಮೈದಾನದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮೋದಿ ಅವರು ಡಿಸೆಂಬರ್ 27 ರಂದು ಹಿಮಾಚಲ ಪ್ರದೇಶಕ್ಕೆ ಕೊನೆಯ ಬಾರಿಗೆ ಭೇಟಿ ನೀಡಿದ್ದರು. ಇದಕ್ಕೂ ಮೊದಲು, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಹೇಳಿದರು - ಈ ಶಿಮ್ಲಾ ರಿಡ್ಜ್ ಮೈದಾನವು ತುಂಬಾ ಚಿಕ್ಕದಾದ ಮೈದಾನವಾಗಿದೆ, ಪ್ರತಿಯೊಬ್ಬರೂ ಸಭೆಯ ಸ್ಥಳಕ್ಕೆ ತಲುಪಲು ಸಾಧ್ಯವಿಲ್ಲ. 5 ನಿಮಿಷ ನಡೆದ ಬಳಿಕ ಪ್ರಧಾನಿ ಅವರನ್ನು ಭೇಟಿಯಾಗುವಂತೆ ಮನವಿ ಮಾಡಿದೆವು. ಮಾಲ್ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಇಲ್ಲಿಗೆ ತಲುಪಿದ್ದಕ್ಕಾಗಿ ನಾನು ಪ್ರಧಾನಿಯವರಿಗೆ ಆಭಾರಿಯಾಗಿದ್ದೇನೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಮ್ಮ ಸರ್ಕಾರ ದೇಶದಲ್ಲಿ ಎಂಟು ವರ್ಷಗಳನ್ನು ಪೂರೈಸಿದೆ. ದೇವಭೂಮಿ ಹಿಮಾಚಲಕ್ಕೆ ನಿಮ್ಮ ಭೇಟಿಗೆ ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ನೀವು ಹಿಮಾಚಲದ ಜನರನ್ನು ಎಷ್ಟು ಪ್ರೀತಿಸುತ್ತೀರೋ, ಹಿಮಾಚಲದ ಜನರು ಸಹ ನಿಮ್ಮ ಮೇಲೆ ಅದೇ ಪ್ರೀತಿಯನ್ನು ತೋರಿಸುತ್ತಾರೆ.
ರೈತರಿಗೆ ಪ್ರಮುಖ ಮಾಹಿತಿ
ಈ ಹಿಂದೆ ಏಪ್ರಿಲ್-ಜುಲೈ ಕಂತು ಏಪ್ರಿಲ್ 1 ರಿಂದ ಜುಲೈ 31 ರ ನಡುವೆ, ಆಗಸ್ಟ್-ನವೆಂಬರ್ ಕಂತು ಆಗಸ್ಟ್ 1 ರಿಂದ ನವೆಂಬರ್ 30 ರ ನಡುವೆ, ಡಿಸೆಂಬರ್-ಮಾರ್ಚ್ ಕಂತು ಡಿಸೆಂಬರ್ 1 ರಿಂದ ಮಾರ್ಚ್ 31 ರ ನಡುವೆ ವರ್ಗಾವಣೆಯಾಗಿತ್ತು. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಮೂರು ಸಮಾನ ಕಂತಿನಲ್ಲಿ ಹಣ ಬಿಡುಗಡೆಯಾಗುತ್ತದೆ.
ನೋಟುಗಳ ಮುದ್ರಣಕ್ಕೆ ಸರ್ಕಾರದಿಂದ 4.5 ಸಾವಿರ ಕೋಟಿ ಖರ್ಚು, ಪ್ರತಿ ಮುಖಬೆಲೆಯ ನೋಟಿಗೆ ಆಗುವ ಖರ್ಚೆಷ್ಟು!
PM ಕಿಸಾನ್ ಟೋಲ್ ಫ್ರೀ ಸಂಖ್ಯೆ: 18001155266
ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ:155261
PM ಕಿಸಾನ್ ಸ್ಥಿರ ದೂರವಾಣಿ ಸಂಖ್ಯೆಗಳು: 011-23381092, 23382401
ಸಹಾಯವಾಣಿ: 011-24300606
ಸಹಾಯವಾಣಿ: 0120-6025109
ಇ-ಮೇಲ್ ಐಡಿ: pmkisan-ict@gov.in
eKYC ಮಾಡೋದು ಹೇಗೆ? ಇಲ್ಲಿದೆ ಪ್ರಕ್ರಿಯೆ
ಹಂತ 1- ಮೊದಲು pmkisan.gov.in ಮೂಲಕ ಪಿಎಂ ಕಿಸಾನ್ ಯೋಜನೆಯ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ.
ಹಂತ 2- ನಂತರ ಮುಖಪುಟದ ಬಲಭಾಗದಲ್ಲಿರುವ ಇ-ಕೆವೈಸಿ ಲಿಂಕ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 3- ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮತ್ತು ಸರ್ಚ್ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 4- ನಂತರ ಅದನ್ನು ಪರಿಶೀಲಿಸಲು ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಸಂಪರ್ಕಗೊಂಡಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಲು ಕೇಳಲಾಗುತ್ತದೆ.
ಹಂತ 5- ಮೊಬೈಲ್ ನಂಬರ್ ನಮೂದಿಸಿ ಒಟಿಪಿ ಪಡೆಯಲು ಕ್ಲಿಕ್ ಮಾಡಿ. ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಕೇಳಿದ ಸ್ಥಳದಲ್ಲಿ OTP ಅನ್ನು ನಮೂದಿಸಿ.
ಹಂತ 6- ನಂತರ ಆಧಾರ್ ದೃಢೀಕರಣಗೊಳಿಸಲು ಇರುವ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 7- ಬಳಿಕ ನಿಮ್ಮ ಫೋನ್‌ಗೆ ಬಂದ OTPಯನ್ನು ನಮೂದಿಸಿ.
ಹಂತ 8- ಇದರ ನಂತರ, ನೀವು ಕೇಳಿದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿದರೆ ಇ-ಕೆವೈಸಿ ಪೂರ್ಣಗೊಳಿಸುವಿಕೆಯ ಸಂದೇಶ ಸಿಗುತ್ತದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಬಗ್ಗೆ ಕೆಲ ಪ್ರಮುಖ ವಿಚಾರಗಳು
ಪಿಎಂ-ಕಿಸಾನ್ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಇದು ಫೆಬ್ರವರಿ 24, 2019 ರಂದು ಪ್ರಾರಂಭವಾಯಿತು. ಈ ಯೋಜನೆಯು ಆರಂಭದಲ್ಲಿ 2 ಹೆಕ್ಟೇರ್‌ವರೆಗೆ ಭೂಮಿಯನ್ನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ (SMFs) ಉದ್ದೇಶಿಸಲಾಗಿತ್ತು, ಆದರೆ 01.06.2019 ರಿಂದ ಜಾರಿಗೆ ಬರುವಂತೆ, ಎಲ್ಲಾ ಭೂಹಿಡುವಳಿ ರೈತರನ್ನು ಒಳಗೊಳ್ಳಲು ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲಾಯಿತು. ಯೋಜನೆಯ ಪ್ರಕಾರ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ಮೂರು ಸಮಾನ ಕಂತುಗಳಲ್ಲಿ ರೂ.6000/- ಆರ್ಥಿಕ ಲಾಭವನ್ನು ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ದೇಶಾದ್ಯಂತದ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ, ಫೆಬ್ರವರಿ 22, 2022 ರವರೆಗೆ ಸುಮಾರು 11.78 ಕೋಟಿ ರೈತರಿಗೆ ಪ್ರಯೋಜನಗಳನ್ನು ಒದಗಿಸಲಾಗಿದೆ. ಭಾರತದಾದ್ಯಂತ ಈ ಯೋಜನೆಯ ಅರ್ಹ ಫಲಾನುಭವಿಗಳಿಗೆ ವಿವಿಧ ಕಂತುಗಳಲ್ಲಿ 1.82 ಲಕ್ಷ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ಪೈಕಿ ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ 1.29 ಲಕ್ಷ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
ಫಲಾನುಭವಿಗಳ ಪಟ್ಟಿ
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯತ್ ಗಳ ನೋಟಿಸ್ ಬೋರ್ಡ್ ಗಳಲ್ಲಿ ಪ್ರಕಟಿಸಲಾಗುತ್ತದೆ. ಹೀಗಾಗಿ ಈ ಯೋಜನೆಯ ಪ್ರಯೋಜನ ಪಡೆಯುವ ರೈತ ಕುಟುಂಬಗಳು ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಪರಿಶೀಲಿಸಬಹುದು. ಇಲ್ಲವೇ ಆನ್ ಲೈನ್ ನಲ್ಲಿ ಕೂಡ ಫಲಾನುಭವಿಗಳ ಪಟ್ಟಿಯನ್ನು ಚೆಕ್ ಮಾಡಬಹುದು. ಇವೆರಡರ ಹೊರತಾಗಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕೂಡ ಅರ್ಹ ರೈತರಿಗೆ ಎಸ್ ಎಂಎಸ್ ಅಲರ್ಟ್ ಕಳುಹಿಸುತ್ತವೆ.
ಆನ್ ಲೈನ್ ನಲ್ಲಿ ಪರಿಶೀಲಿಸೋದು ಹೇಗೆ?
ಹಂತ 1: ಪಿಎಂ ಕಿಸಾನ್ ಸಮ್ಮಾನ್ ನಿಧಿಯ ವೆಬ್‌ಸೈಟ್ pmkisan.gov.inಗೆ ಭೇಟಿ ನೀಡಿ.
ಹಂತ 2: ಮುಖಪುಟದಿಂದ ನಿಮಗೆ ರೈತರ ಕಾರ್ನರ್ (Farmers Corner) ಎಂಬ ಪ್ರತ್ಯೇಕ ವಿಭಾಗ ಕಾಣಿಸುತ್ತದೆ.
ಹಂತ 3: ರೈತರ ಕಾರ್ನರ್ ವಿಭಾಗದಲ್ಲಿ 'ಫಲಾನುಭವಿ ಸ್ಥಿತಿ' (Beneficiary Status) ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಹಂತ 4: ಇಲ್ಲವೇ ನೀವು ನೇರವಾಗಿ https://pmkisan.gov.in/BeneficiaryStatus.aspx ಲಿಂಕ್ ಗೆ ಭೇಟಿ ನೀಡಬಹುದು.
ಹಂತ 5: ಈಗ ನೀವು ಆಧಾರ್ ಸಂಖ್ಯೆ, ಪಿಎಂ ಕಿಸಾನ್ ಖಾತೆ ಸಂಖ್ಯೆ ಅಥವಾ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ -ಇವುಗಳಲ್ಲಿ ಯಾವುದಾದರೂ ಒಂದು ಮಾಹಿತಿಯನ್ನು ಆಯ್ಕೆ ಮಾಡಿ ಭರ್ತಿ ಮಾಡಿ.
ಹಂತ 6: ಮಾಹಿತಿಗಳನ್ನು ಭರ್ತಿ ಮಾಡಿದ ಬಳಿಕ 'ಡೇಟಾ ಪಡೆಯಿರಿ' (Data option) ಆಯ್ಕೆ ಮೇಲೆ ಕ್ಲಿಕ್ ಮಾಡಿ. ಈಗ ನಿಮಗೆ ಫಲಾನುಭವಿ ಸ್ಥಿತಿ ಬಗ್ಗೆ ಮಾಹಿತಿ ಸಿಗುತ್ತದೆ.
ನೀವು ಪಿಎಂ ಕಿಸಾನ್ ಯೋಜನೆ ಪ್ರಯೋಜನ ಪಡೆಯಲು ಅರ್ಹರಾಗಿದ್ದು, ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿದ್ದರು ಕೂಡ ಒಂದು ವೇಳೆ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಸರ್ಕಾರಕ್ಕೆ ನೇರವಾಗಿ ದೂರು ನೀಡಬಹುದು.