ಸಂಪುಟ ಸಭೆಯಲ್ಲಿ 46 ಕಸ ಗುಡಿಸುವ ಯಂತ್ರಗಳನ್ನು 7 ವರ್ಷದವರೆಗೆ ಬಾಡಿಗೆ ಆಧಾರದ ಮೇಲೆ ಪಡೆಯಲು ಒಪ್ಪಿಗೆ ನೀಡುವ ಮುಖಾಂತರ ಕಮಿಷನ್ ಗೋಲ್ ಮಾಲ್‌ಗೆ ಅವಕಾಶ ನೀಡಿದೆ ಎಂದು ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬೆಂಗಳೂರು (ನ.19): ಸಂಪುಟ ಸಭೆಯಲ್ಲಿ 46 ಕಸ ಗುಡಿಸುವ ಯಂತ್ರಗಳನ್ನು 7 ವರ್ಷದವರೆಗೆ ಬಾಡಿಗೆ ಆಧಾರದ ಮೇಲೆ ಪಡೆಯಲು ಒಪ್ಪಿಗೆ ನೀಡುವ ಮುಖಾಂತರ ಕಮಿಷನ್ ಗೋಲ್ ಮಾಲ್‌ಗೆ ಅವಕಾಶ ನೀಡಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಕಸ ಗುಡಿಸುವ ಯಂತ್ರಗಳ ಬಾಡಿಗೆ ಬದಲು ಖರೀದಿಗೆ ಕಡಿಮೆ ವೆಚ್ಚವಾಗುತ್ತದೆ. ಆದರೆ, ಇಲ್ಲಿ ಗಣಿತವನ್ನು ಮಧ್ಯಾಹ್ನದ ಬೆಳಕಲ್ಲೇ ಕೊಂದು ದಹನ ಮಾಡಲಾಗಿದೆ.
ಬಿಬಿಎಂಪಿ ಯಾರ್ಡ್‌ಗಳಲ್ಲಿ 26 ಕಸ ಗುಡಿಸುವ ಯಂತ್ರಗಳು ಬಳಕೆಯಾಗದೆ ಬಿದ್ದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಪಮುಖ್ಯಮಂತ್ರಿ ನೇತೃತ್ವದ ಕಾಂಗ್ರೆಸ್ ಸರ್ಕಾರವು 613 ಕೋಟಿ ರು. ವೆಚ್ಚದಲ್ಲಿ ಪ್ರತಿ ಯಂತ್ರಕ್ಕೆ 1.9 ಕೋಟಿ ರು.ನಂತೆ 46 ಕಸ ಗುಡಿಸುವ ಯಂತ್ರಗಳಿಗೆ ಬಾಡಿಗೆ ನೀಡಲು ಬಯಸಿದೆ. ಅದೇ ಯಂತ್ರಗಳನ್ನು ಖರೀದಿಸಲು ಒಂದಕ್ಕೆ 1.3 ಕೋಟಿ ರು.ನಿಂದ 3 ಕೋಟಿ ರು. ವೆಚ್ಚವಾಗುತ್ತದೆ ಎಂದು ತಿಳಿಸಿದ್ದಾರೆ. ತಜ್ಞರ ಸಮಿತಿಯು ಈ ಯಂತ್ರಗಳನ್ನು ಖರೀದಿಸಲು ಶಿಫಾರಸು ಮಾಡಿದೆ. ಆದರೂ ಡಿಸಿಎಂ ಮತ್ತು ಅವರ ತಂಡ ಅತ್ಯಂತ ದುಬಾರಿ ಆಯ್ಕೆಯನ್ನು ಆರಿಸಿ, ಅದನ್ನು ಆಡಳಿತ ಎಂದು ಲೇಬಲ್ ಮಾಡಿ ಹೊಸ ಆರ್ಥಿಕ ಸಿದ್ದಾಂತವನ್ನು ರಚಿಸಿದೆ.
ಬಹುಶಃ ವೆಚ್ಚ, ಕಾರ್ಯಕ್ಷಮತೆ ಮತ್ತು ಹೊಣೆಗಾರಿಕೆಯ ನಿಜವಾದ ಅರ್ಥವನ್ನು ತಿಳಿದಿರುವ ಕಿರಣ್ ಮಜುಂದಾರ್ ಶಾ ಹಾಗೂ ಟಿ.ವಿ. ಮೋಹನದಾಸ್ ಪೈ ಅವರಂತಹ ಕಾರ್ಪೊರೇಟ್ ನಾಯಕರು ಈ ಸರ್ಕಾರಕ್ಕೆ ಒಂದು ಕ್ರ್ಯಾಶ್ ಕೋರ್ಸ್ ಮೂಲಭೂತ ಗಣಿತದಲ್ಲೇ ಉತ್ತರ ಕೊಡಬೇಕಾದ ಸಮಯ ಬಂದಿದೆ. ಇಲ್ಲದಿದ್ದರೆ ಇನ್ನೊಂದು 600 ಕೋಟಿ ರು. ಇದೇ ರೀತಿ ಕಾಣೆಯಾಗಬಹುದು ಎಂದು ನಿಖಿಲ್ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
ಕೈದಿಗಳ ಮೋಜು-ಮಸ್ತಿ ಕಾಂಗ್ರೆಸ್‌ನ ಗ್ಯಾರಂಟಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ರಾಜಾತಿಥ್ಯ ವಿಡಿಯೋ ವೈರಲ್ ಆಗಿದ್ದು, ರಾಜ್ಯ ಸರ್ಕಾರ ಯಾವ ರೀತಿ ನಡೆದುಕೊಳ್ಳುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ಮಾತೆತ್ತಿದರೆ ಗ್ಯಾರಂಟಿ ಅಂತಾರೆ, ಕೈದಿಗಳ ಮೋಜು-ಮಸ್ತಿಗೆ ಕಾಂಗ್ರೆಸ್ ಮತ್ತೊಂದು ಗ್ಯಾರಂಟಿ ಕೊಟ್ಟಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು. ತಾಲೂಕಿನ ಕುಂಬಾರಹಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಿಎಂ ಕುಮಾರಸ್ವಾಮಿ ಅವರ ನಾಯಕತ್ವವನ್ನು ಎಲ್ಲರೂ ಒಪ್ಪಿದ್ದಾರೆ.
ಈಗ ರಾಜ್ಯಕ್ಕೆ ಕುಮಾರಣ್ಣನ ನಾಯಕತ್ವ ಬೇಕು ಅಂತ ರಾಜ್ಯದ ಜನರು ಚರ್ಚೆ ಮಾಡುತ್ತಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಗಟ್ಟಿಯಾಗಿ ನೆಲೆಯೂರಿದ್ದು, ಮೈತ್ರಿ ಮುಂದುವರಿಯುತ್ತದೆ ಎಂದು ಹೇಳಿದರು. ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಎನ್ನುವುದು ಮಾರ್ಚ್‌ವರೆಗೂ ಹೋಗುತ್ತಾ. ಬಿಹಾರ ಚುನಾವಣೆ ಮುಗಿದ ಮೇಲೆ ಹೊಸ ಕ್ರಾಂತಿ ಬರುತ್ತಾ? ಯಾರು ಕುರ್ಚಿ ಉಳಿಸಿಕೊಳ್ಳುತ್ತಾರೆ? ಯಾರು ಬಿಡುತ್ತಾರೆ? ಯಾರು ಕಿತ್ತುಕೊಳ್ಳುತ್ತಾರೆ? ಕಾದು ನೋಡೋಣ ಎಂದು ನಿಖಿಲ್ ವ್ಯಂಗ್ಯವಾಡಿದರು.


