ರಾಜ್ಯ ಸರ್ಕಾರ ಬಿಡದಿಯಲ್ಲಿ ಜಾರಿ ಮಾಡಲು ಉದ್ದೇಶಿರುವ ‘ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ ಶಿಪ್’(ಜಿಬಿಐಟಿ) ಯೋಜನೆಯನ್ನು ಕೈ ಬಿಡುವಂತೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಬೆಂಗಳೂರು (ಸೆ.28): ರಾಜ್ಯ ಸರ್ಕಾರ ಬಿಡದಿಯಲ್ಲಿ ಜಾರಿ ಮಾಡಲು ಉದ್ದೇಶಿರುವ ‘ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ ಶಿಪ್’(ಜಿಬಿಐಟಿ) ಯೋಜನೆಯನ್ನು ಕೈ ಬಿಡುವಂತೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರ ಮೇಲಿನ ಸರ್ಕಾರದ ದಬ್ಬಾಳಿಕೆ ಖಂಡಿಸಿ ಹಾಗೂ ಯೋಜನೆ ಕೈಬಿಡುವಂತೆ ಆಗ್ರಹಿಸಿ ಭಾನುವಾರ (ಸೆ.28) ರಾಮನಗರ ಜಿಲ್ಲೆಯ ಬೈರಮಂಗಲ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ರೈತರೊಂದಿಗೆ ಜೆಡಿಎಸ್‌ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದೆ.

ಪ್ರತಿಭಟನೆಯಲ್ಲಿ ನಾನು ಸೇರಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು. ‘ಬಿಡದಿ ಉಳಿಸಿ-ಜಿಬಿಐಟಿ ನಿಲ್ಲಿಸಿ’ ರೈತರ ಹೋರಾಟಕ್ಕೆ ಜೆಡಿಎಸ್‌ ಸಂಪೂರ್ಣ ಬೆಂಬಲ ನೀಡಲಿದೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ ರೈತರು ಒಂದು ಸಾವಿರ ದಿನ ಹೋರಾಟ ಮಾಡಿದ್ದಾರೆ. ಅದೇ ರೀತಿ ಜೆಡಿಎಸ್‌ ಪಕ್ಷ ಈ ಯೋಜನೆ ಕೈ ಬಿಡುವವರೆಗೂ ಸರ್ಕಾರದ ವಿರುದ್ಧ ಹೋರಾಟ ನಡೆಸಲಿದೆ. ಸರ್ಕಾರ ಮೊದಲು ಕೆಐಡಿಬಿಯ 900 ಎಕ್ರೆ ಜಾಗದಲ್ಲಿ ಪೈಲೆಟ್‌ ಪ್ರಾಜೆಕ್ಟ್‌ ಮಾಡಿ ತೋರಿಸಬೇಕು.

ಈವರೆಗೂ ಸಭೆ ಮಾಡಿಲ್ಲ

ಆಗ ಯೋಜನೆ ಮೇಲೆ ಜನರಿಗೆ ವಿಶ್ವಾಸ ಮೂಡುತ್ತದೆ ಎಂದು ಹೇಳಿದರು. ಯೋಜನೆ ಸಂಬಂಧ ಸರ್ಕಾರ ಪರಿಸರ ಇಲಾಖೆಯಿಂದ ಈವರೆಗೂ ಒಪ್ಪಿಗೆ ಪಡೆದಿಲ್ಲ. ರೈತರಿಗೆ ಪರಿಹಾರದ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಈವರೆಗೂ ಸಭೆ ಮಾಡಿಲ್ಲ. ತರಾತುರಿಯಲ್ಲಿ ಟೌನ್‌ ಶಿಪ್‌ ಯೋಜನೆ ಜಾರಿ ಮಾಡುತ್ತಿರುವ ಹಿಂದಿನ ಉದ್ದೇಶವೇನು ಎಂದು ಅವರು ಪ್ರಶ್ನಿಸಿದರು. ಯೋಜನೆ ಸಂಬಂಧ ಬಾಸ್ಟನ್‌ ಕನ್ಸಲ್ಟಿಂಗ್‌ ಗ್ರೂಪ್‌ ಮಾಡಿರುವ ಯೋಜನಾ ವರದಿ ಬಹಿರಂಗಪಡಿಸಬೇಕು. ರಾಜ್ಯ ಸರ್ಕಾರ ಕೈಗಾರಿಕಾ ಉದ್ದೇಶಕ್ಕೆ ಬೆಂಗಳೂರು ಸುತ್ತಮುತ್ತ ಈವರೆಗೆ ಮಾಡಿರುವ ಭೂಸ್ವಾಧೀನದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ನಿಖಿಲ್‌ ಕುಮಾರಸ್ವಾಮಿ ಒತ್ತಾಯಿಸಿದರು.