ರಾಜ್ಯದಲ್ಲಿ ಯಾವುದೇ ಸಮಯದಲ್ಲಿ ಚುನಾವಣೆ ನಡೆದರೂ ಎದುರಿಸಲು ಬಿಜೆಪಿ ಸಿದ್ಧವಾಗಿದೆ. ಪಕ್ಷದೊಳಗಿನ ಕೆಲ ಗೊಂದಲಗಳು ತಿಳಿದಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಕಾರ್ಕಳ (ನ.19): ರಾಜ್ಯದಲ್ಲಿ ಯಾವುದೇ ಸಮಯದಲ್ಲಿ ಚುನಾವಣೆ ನಡೆದರೂ ಎದುರಿಸಲು ಬಿಜೆಪಿ ಸಿದ್ಧವಾಗಿದೆ. ಪಕ್ಷದೊಳಗಿನ ಕೆಲ ಗೊಂದಲಗಳು ತಿಳಿದಿವೆ, ಆದರೆ ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗೂಡಬೇಕು. ಮುಖ್ಯಮಂತ್ರಿ ಯಾರೇ ಆದರೂ ಪರವಾಗಿಲ್ಲ, ಪಕ್ಷದ ಹಿರಿಯ ನಾಯಕರು ನಿರ್ಧರಿಸುತ್ತಾರೆ. ನನಗೆ ಹುದ್ದೆಗೆ ಅಹಂಕಾರವಿಲ್ಲ, ಪಕ್ಷಕ್ಕೆ ಹೆಗಲು ಕೊಟ್ಟು ಕೆಲಸ ಮಾಡುವ ಶಕ್ತಿ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಕಾರ್ಕಳ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಕರಾವಳಿ ಮತ್ತು ಉಡುಪಿ ಜಿಲ್ಲೆಗಳು ಬಿಜೆಪಿಗೆ ಶಕ್ತಿತುಂಬಿದ ಕ್ಷೇತ್ರಗಳು ಎಂದು ಬಣ್ಣಿಸಿದರು.

ರಾಜ್ಯದ ಕಾಂಗ್ರೆಸ್ ಆಡಳಿತವನ್ನು ಟೀಕಿಸಿದ ವಿಜಯೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಎಂಬ ಅನುಭವ ಜನತೆಗೆ ಇಲ್ಲ. ಮುಖ್ಯಮಂತ್ರಿ ಕುರ್ಚಿಗಾಗಿ ಒಳಕಿಚ್ಚು, ಜಾತಿ ಜಾತಿಗಳ ನಡುವೆ ಅಂತರ ಸೃಷ್ಟಿಸುವ ಕಾರ್ಯ, ಅಭಿವೃದ್ದಿ ನಿಧಿ ಬಿಡುಗಡೆಗೆ ವಿಳಂಬ ಇವು ಕಾಂಗ್ರೆಸ್ ಸರ್ಕಾರದ ವೈಫಲ್ಯ ಎಂದು ಹೇಳಿದರು. ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಮಾತನಾಡಿ, 28ರಂದು ಪ್ರಧಾನಮಂತ್ರಿ ಉಡುಪಿಗೆ ಆಗಮಿಸುತ್ತಿದ್ದು, ರೋಡ್ ಶೋದಲ್ಲಿ ಕಾರ್ಕಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು ಎಂದು ಕರೆ ನೀಡಿದರು.

ಸಂಸದ ಬ್ರಿಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಕುತ್ಯಾರು, ಶಾಸಕರಾದ ಯಶಪಾಲ್ ಸುವರ್ಣ, ಹರೀಶ್ ಪೂಂಜಾ, ಹಿರಿಯ ನಾಯಕ ಬೋಳ ಪ್ರಭಾಕರ ಕಾಮತ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಹಾಜರಿದ್ದರು. ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಸ್ವಾಗತಿಸಿ ಮಾತನಾಡಿ, ಡಿ.28ರಂದು ಕಾರ್ಕಳದಲ್ಲಿ ಯುವಮೋರ್ಚಾ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಇದಕ್ಕೂ ಮೊದಲು ವಿಜಯೇಂದ್ರ ಅವರು, ಇತ್ತೀಚೆಗೆ ನಿಧನರಾದ ಹಿರಿಯ ಬಿಜೆಪಿ ಮುಖಂಡ ಎಂ.ಕೆ. ವಿಜಯಕುಮಾರ್ ನಿವಾಸಕ್ಕೆ ತೆರಳಿ ಕುಟುಂಬಕ್ಕೆ ಸಂತಾಪ ಸೂಚಿಸಿದರು.

ಬಿಹಾರದಲ್ಲಿ ಪ್ರಜಾಪ್ರಭುತ್ವದ ದಿಗ್ವಿಜಯ

ಬಿಹಾರ ವಿಧಾನಸಭಾ ಚುನಾವಣೆಯ ಅಭೂತಪೂರ್ವ ಜಯ, ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಸದೃಢ ನಾಯಕತ್ವದ ಕೊರಳನ್ನು ಅಲಂಕರಿಸಿದ ಪ್ರಜಾಪ್ರಭುತ್ವದ ವಿಜಯದ ಹಾರವಾಗಿ ವಿಜೃಂಭಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಪ್ರಧಾನಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ ದೇಶಕ್ಕೆ ಅನಿವಾರ್ಯ ಎಂಬ ಸಂದೇಶವನ್ನೂ ಬಿಹಾರದ ಮತದಾರರು ರವಾನಿಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟದ ಸಂಘಟಿತ ಹೋರಾಟ, ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಅವರ ಅವರ ಕಾರ್ಯತಂತ್ರ, ಮುಖ್ಯಮಂತ್ರಿ ನಿತೀಶ್‌ ಕುಮಾರ್‌ರ ದಕ್ಷ ಆಡಳಿತವನ್ನು ಮೆಚ್ಚಿ ಬಿಹಾರದ ಜನತೆ ಮತ್ತೆ ಎನ್‌ಡಿಎ ಸರ್ಕಾರವನ್ನು ನಿರೀಕ್ಷೆ ಮೀರಿದ ಐತಿಹಾಸಿಕ ದಾಖಲೆಯ ಬಹುಮತದಿಂದ ಗೆಲ್ಲಿಸಿ ಆಶೀರ್ವದಿಸಿದ್ದಾರೆ’ ಎಂದಿದ್ದಾರೆ.