ರೈತರ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿಂಚಿತ್ತಾದರೂ ಕಾಳಜಿ ವಹಿಸಿದ್ದರೆ ಕೆಕೆಆರ್‌ಡಿಬಿಯಿಂದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.
ಬೀದರ್ (ಸೆ.17): ರೈತರ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿಂಚಿತ್ತಾದರೂ ಕಾಳಜಿ ವಹಿಸಿದ್ದರೆ ಕೆಕೆಆರ್‌ಡಿಬಿಯಿಂದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ಯಾರಂಟಿ ಯೋಜನೆಗೆ ದಲಿತರ ಅಭಿವೃದ್ಧಿ ಹಣ ಹೊಂದಿಕೆ ಅಪರಾಧವಾಗಿದೆ. ಅಷ್ಟಕ್ಕೂ ಸರ್ಕಾರ ತಾನು ಆರ್ಥಿಕವಾಗಿ ಸಬಲವಾಗಿದ್ದರೆ ಅತಿವೃಷ್ಟಿ, ಪ್ರವಾಹದಿಂದ ರೈತರಿಗೆ ನೂರಾರು ಕೋಟಿ ರು. ಹಾನಿಯಾಗಿದ್ದು ರಾಜ್ಯ ಸರ್ಕಾರ ಸಾಲ ಮನ್ನಾ ಮಾಡುವುದಕ್ಕೆ ಮುಂದಾಗಿ ರೈತರಲ್ಲಿ ಆಸ್ಮಸ್ಥೈರ್ಯ ತುಂಬಲಿ ಎಂದರು.
ಮಳೆ ಹಾನಿ ಪ್ರದೇಶಗಳಿಗೆ ಭೇಟಿ: ಜಿಲ್ಲೆಯಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ ಮತ್ತು ನೊಂದ ಸಂತ್ರಸ್ತರ ಭೇಟಿ ಮಾಡಿ ಸಾಂತ್ವನ ಹೇಳಿದರು. ಸರ್ಕಾರ ಕೈಗೊಂಡಿರುವ ನೆರೆ ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಬೀದರ್ ವಿಧಾನಸಭಾ ಕ್ಷೇತ್ರದ ಮರಕಲ್, ಅಲಿಯಂಬರ್, ಇಸ್ಲಾಂಪೂರ, ಜಾಂಪಾಡ್ ಗ್ರಾಮಗಳ ರೈತರ ಜಮೀನಿನಲ್ಲಿ ನಿಂತಿರುವ ನೀರಿನಲ್ಲೇ ತೆರಳಿ ಬೆಳೆ ಹಾನಿ ಪರಿಶೀಲನೆ ನಡೆಸಿ, ಅಲ್ಲಿದ್ದ ರೈತರಿಂದ ಮಾಹಿತಿ ಪಡೆದುಕೊಂಡರು. ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಮನೆ ಕೆಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತರಿಗೆ ಧನ ಸಹಾಯ ಮಾಡಿದರು.
ಒತ್ತಡಕ್ಕೆ ಮಣಿದ್ರೆ ನಾವು ಕೈಕಟ್ಟಿ ಕೂರಲ್ಲ
ಮಂಡ್ಯದಲ್ಲಿ ಭಾನುವಾರದಿಂದ ಅಶಾಂತಿಯುತ ವಾತಾವರಣ ನಿರ್ಮಾಣವಾಗಿದೆ. ಎರಡು ವರ್ಷದಲ್ಲಿ ಮೂರು ಬಾರಿ ಈ ರೀತಿಯಾಗಿದೆ. ಕೆರಗೋಡು, ನಾಗಮಂಗಲ ಬಳಿಕ ಮದ್ದೂರಿನಲ್ಲಿ ನಡೆದಿದೆ. ಗಣೇಶೋತ್ಸವ ಸಮಯದಲ್ಲಿ ಕಿಡಿಗೇಡಿಗಳು ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿ ಘರ್ಷಣೆಗೆ ಕಾರಣರಾಗಿದ್ದಾರೆ ಎಂದು ಹೇಳಿದರು. ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಇಂತಹ ಘಟನೆಗಳು ಮರುಕಳಿಸುತ್ತಿವೆ. ಪೊಲೀಸರೇ ಇವತ್ತು ಅಸಹಾಯಕರಾಗಿದ್ದಾರೆ. ರಾಜ್ಯ ಸರ್ಕಾರ, ಗೃಹ ಸಚಿವರು ಅಸಮರ್ಥರಾಗಿದ್ದಾರೆ. ಅವರು ಘಟನೆಯ ನೇರ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ನಾವು ಹಿಂದೆ ಕರಾವಳಿ ಭಾಗದಲ್ಲಿ ಈ ರೀತಿ ಘಟನೆ ನೋಡುತ್ತಿದ್ದೆವು. ಈಗ ನಮ್ಮಲ್ಲಿಗೇ ಬಂದು ನಿಂತಿದೆ. ಒಂದು ವರ್ಗದ ಮತ ಗಟ್ಟಿ ಮಾಡಿಕೊಳ್ಳೋಕೆ ರಾಜ್ಯ ಸರ್ಕಾರ ಈ ರೀತಿ ಮಾಡುತ್ತಿದೆ. ಮದ್ದೂರಿನ ಘಟನೆ ರಾಜ್ಯವ್ಯಾಪಿ ಚರ್ಚೆ ಆಗುತ್ತಿದೆ. ಕೆರಗೋಡು, ನಾಗಮಂಗಲ ಬಿಟ್ಟು ಈಗ ಮದ್ದೂರಿಗೆ ಬಂದು ನಿಂತಿದೆ. ಆದರೂ ಸರ್ಕಾರ ಏನೂ ಆಗಿಲ್ಲವೇನೋ ಎಂದು ಸುಮ್ಮನೆ ಕುಳಿತಿದೆ ಎಂದು ಟೀಕಿಸಿದರು. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮುಂದೆ ಹಲವು ಬೇಡಿಕೆ ಇಟ್ಟ ನಿಖಿಲ್, ಕೋಮುಗಲಭೆ ಮಾಡಿದವರ ಬಂಧನ ಆಗಬೇಕು. ಪ್ರಕರಣದಲ್ಲಿ ಭಾಗಿಯಾದವರನ್ನು ಕೈ ಬಿಟ್ಟರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
