ನಾಗಮಂಗಲ ಕ್ಷೇತ್ರಕ್ಕೆ ಕಾಂಗ್ರೆಸ್‌ನ ಎನ್‌.ಚಲುವರಾಯಸ್ವಾಮಿ ಮತ್ತೆ ಅಧಿಪತಿಯಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿಯಿಂದ ವಿಮುಖರಾಗಿದ್ದ ಕೆ.ಸುರೇಶ್‌ಗೌಡ ಸೋತು ಶರಣಾಗಿದ್ದಾರೆ.

ಮಂಡ್ಯ (ಮೇ.14): ನಾಗಮಂಗಲ ಕ್ಷೇತ್ರಕ್ಕೆ ಕಾಂಗ್ರೆಸ್‌ನ ಎನ್‌.ಚಲುವರಾಯಸ್ವಾಮಿ ಮತ್ತೆ ಅಧಿಪತಿಯಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿಯಿಂದ ವಿಮುಖರಾಗಿದ್ದ ಕೆ.ಸುರೇಶ್‌ಗೌಡ ಸೋತು ಶರಣಾಗಿದ್ದಾರೆ. ರಾಜಕೀಯ ಅಧಿಕಾರ ನೀಡುವಂತೆ ಕ್ಷೇತ್ರದ ಮತದಾರರೆದುರು ಅಂಗಲಾಚುತ್ತಿದ್ದ ಎಲ್‌.ಆರ್‌. ಶಿವರಾಮೇಗೌಡರು ಈ ಬಾರಿ ಪತ್ನಿಯನ್ನು ಕಣಕ್ಕಿಳಿಸಿದರೂ ಗೆಲುವು ಮರೀಚಿಕೆಯಾಗಿದೆ. ಚಲುವರಾಯಸ್ವಾಮಿ ಗೆಲುವಿನ ನಗೆ ಬೀರಿ ಅಧಿಕಾರದ ಗದ್ದುಗೆ ಏರಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್‌ ವರಿಷ್ಠ ದೇವೇಗೌಡರ ವರ್ಚಸ್ಸೇ ದೊಡ್ಡ ಶಕ್ತಿ. ಅದನ್ನು ಬಿಟ್ಟರೆ ಶಾಸಕ ಕೆ.ಸುರೇಶ್‌ಗೌಡರ ವರ್ಚಸ್ಸೇನೂ ಇಲ್ಲ. ದೇವೇಗೌಡರ ನಾಮಬಲದಿಂದಲೇ ಎರಡು ಬಾರಿ ಸುರೇಶ್‌ಗೌಡರು ಗೆದ್ದುಬಂದರೇ ವಿನಃ ಸ್ವಂತ ವರ್ಚಸ್ಸಿನ ಮೇಲಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.

1999, 2004 ಹಾಗೂ 2013ರಲ್ಲಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದ ಚಲುವರಾಯಸ್ವಾಮಿ ಅವರು ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿಯ ಕೊಡುಗೆಗಳನ್ನು ನೀಡಿದ್ದಾರೆ. ಮೂರು ಬಾರಿಯೂ ಜೆಡಿಎಸ್‌ ಪಕ್ಷದಿಂದ ಆಯ್ಕೆಯಾಗಿದ್ದ ಅವರು 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತು ಈಗ ಅದೇ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಬಂದಿದ್ದಾರೆ. ಶಾಸಕರಾಗಿದ್ದ ಸುರೇಶ್‌ಗೌಡರು 2008ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರೆ, 2018ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದು ವಿಜಯಿಯಾಗಿದ್ದರು.

ಸಿದ್ಧಾಂತದ ಸೋಲಲ್ಲ, ವೈಯಕ್ತಿಕ ಸೋಲು, ಜನಾದೇಶಕ್ಕೆ ತಲೆ ಬಾಗುತ್ತೇನೆ: ಸಿ.ಟಿ.ರವಿ

ಜೆಡಿಎಸ್‌ ಪಕ್ಷದಲ್ಲಿದ್ದಾಗಲೇ ಎಲ್‌.ಆರ್‌.ಶಿವರಾಮೇಗೌಡರು ಶಾಸಕರಾಗಿದ್ದ ಕೆ.ಸುರೇಶ್‌ಗೌಡರ ವಿರುದ್ಧ ಸಿಡಿದೆದ್ದಿದ್ದರು. ವಿಧಾನಪರಿಷತ್‌ ಮಾಜಿ ಸದಸ್ಯ ಎನ್‌.ಅಪ್ಪಾಜಿಗೌಡರೂ ಸುರೇಶ್‌ಗೌಡರ ನಡೆ ವಿರುದ್ಧ ಅಸಮಾಧಾನಗೊಂಡಿದ್ದರು. ಇವರೊಟ್ಟಿಗೆ ಸಮಾಜಸೇವಕ ಹೆಸರಿನಲ್ಲಿ ಕ್ಷೇತ್ರಕ್ಕೆ ಕಾಲಿಟ್ಟಫೈಟರ್‌ ರವಿ ಕೂಡ ಸುರೇಶ್‌ಗೌಡರನ್ನು ಸೋಲಿಸಲು ಪಣ ತೊಟ್ಟರು. ಇವೆಲ್ಲಾ ಬೆಳವಣಿಗೆಗಳು ಸುರೇಶ್‌ಗೌಡರನ್ನು ರಾಜಕೀಯವಾಗಿ ದುರ್ಬಲಗೊಳಿಸಿದವು. ಇದರ ನಡುವೆಯೂ ದೇವೇಗೌಡರು ಪ್ರಚಾರಕ್ಕೆ ಬಂದ ದಿನ ಜನಶಕ್ತಿ ಪ್ರದರ್ಶನಗೊಂಡದ್ದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿತು. ದೇವೇಗೌಡರ ಬಗ್ಗೆ ಜನರಿಗಿರುವ ಪ್ರೀತಿ-ಅಭಿಮಾನ ವ್ಯಕ್ತವಾಗಿತ್ತು.

ಆದರೆ, ಅದು ಸುರೇಶ್‌ಗೌಡರಿಗೆ ಮತಗಳನ್ನು ತಂದುಕೊಡಲಿಲ್ಲ. ಬದಲಿಗೆ ಚಲುವರಾಯಸ್ವಾಮಿಗೆ ಶಕ್ತಿಯನ್ನು ತಂದುಕೊಟ್ಟವು. ಚುನಾವಣೆ ಮುಗಿದ ನಂತರದಲ್ಲಿ ಜಿಲ್ಲೆಯಲ್ಲೇ ನಾಗಮಂಗಲದಲ್ಲಿ ಬೆಟ್ಟಿಂಗ್‌ಗೆ ಬಂದಷ್ಟುಪಂಥಾಹ್ವಾನ ಇನ್ನಾವುದೇ ಕ್ಷೇತ್ರದಿಂದ ಬರಲಿಲ್ಲ. ಚಲುವರಾಯಸ್ವಾಮಿ ಪರವಾಗಿ ಕುರಿ, ಮೇಕೆ, ಟ್ರ್ಯಾಕ್ಟರ್‌, ಕಾರು ಸೇರಿದಂತೆ ನಗದು ಹಣವನ್ನು ಪಣಕ್ಕಿಟ್ಟು ನೇರವಾಗಿಯೇ ವಿರೋಧಿಗಳಿಗೆ ಸವಾಲು ಹಾಕಿದರು. ಅವರ ಪರವಾಗಿ ಯಾರೊಬ್ಬರೂ ಬೆಟ್ಟಿಂಗ್‌ ಕಟ್ಟುವ ಧೈರ್ಯ ಮಾಡಲಿಲ್ಲ.

Karnataka Election Results 2023: ಸುಮಲತಾ ಬೆಂಬಲ ಬಿಜೆಪಿಗೆ ಗೆಲುವು ತರಲಿಲ್ಲ

ಮತ ಎಣಿಕೆಯ ದಿನ ಆರಂಭದ ಕೆಲವು ಸುತ್ತುಗಳಲ್ಲಿ ಸುರೇಶ್‌ಗೌಡ ಮುನ್ನಡೆ ಸಾಧಿಸಿದರೂ ಆನಂತರ ಮುನ್ನಡೆ ಕಾಯ್ದುಕೊಂಡ ಎನ್‌.ಚಲುವರಾಯಸ್ವಾಮಿ ಅವರು ಗೆಲುವಿನ ಗುರಿ ಮುಟ್ಟುವವರೆಗೂ ಹಿಂತಿರುಗಿ ನೋಡಲೇ ಇಲ್ಲ. ಬಿಜೆಪಿ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯಾಗಿ ಸುಧಾ ಶಿವರಾಮೇಗೌಡರನ್ನು ಕಣಕ್ಕಿಳಿಸಿತ್ತು. ಪಕ್ಷ ನಡೆಸಿದ ಪ್ರಯೋಗ ಯಶಸ್ವಿಯಾಗಲೇ ಇಲ್ಲ. ನಿರೀಕ್ಷೆಯಷ್ಟುಮತಗಳನ್ನು ಪಡೆದುಕೊಳ್ಳುವುದಕ್ಕೂ ಸಾಧ್ಯವಾಗದೆ ಪರಾಭವಗೊಂಡರು. ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸಂಸದೆ ಸುಮಲತಾ ಇದ್ದರೂ ಯಾರೂ ಕೂಡ ಮತಗಳನ್ನು ತಂದುಕೊಡಲಿಲ್ಲ.