ಜಿಲ್ಲೆಯ ಕಾಂಗ್ರೆಸ್‌ ಪಕ್ಷದ ಚುನಾವಣಾ ಚಾಣಕ್ಯ ಎನ್‌.ಚಲುವರಾಯಸ್ವಾಮಿ ಎಂದರೆ ತಪ್ಪಾಗದು. ಏಕೆಂದರೆ, ಕಳೆದ ಚುನಾವಣೆಯಲ್ಲಿ ಏಳೂ ಕ್ಷೇತ್ರಗಳಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡಿದ್ದ ಕಾಂಗ್ರೆಸ್‌ ಪಕ್ಷಕ್ಕೆ ವಿಧಾನ ಪರಿಷತ್‌ ಚುನಾವಣೆಗಳ ಮೂಲಕ ಜೀವ ತುಂಬಿ 2023ರ ಚುನಾವಣೆಯಲ್ಲಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿನ ರೂವಾರಿಯಾಗಿದ್ದಾರೆ.

ಮಂಡ್ಯ ಮಂಜುನಾಥ

ಮಂಡ್ಯ (ಮೇ.14): ಜಿಲ್ಲೆಯ ಕಾಂಗ್ರೆಸ್‌ ಪಕ್ಷದ ಚುನಾವಣಾ ಚಾಣಕ್ಯ ಎನ್‌.ಚಲುವರಾಯಸ್ವಾಮಿ ಎಂದರೆ ತಪ್ಪಾಗದು. ಏಕೆಂದರೆ, ಕಳೆದ ಚುನಾವಣೆಯಲ್ಲಿ ಏಳೂ ಕ್ಷೇತ್ರಗಳಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡಿದ್ದ ಕಾಂಗ್ರೆಸ್‌ ಪಕ್ಷಕ್ಕೆ ವಿಧಾನ ಪರಿಷತ್‌ ಚುನಾವಣೆಗಳ ಮೂಲಕ ಜೀವ ತುಂಬಿ 2023ರ ಚುನಾವಣೆಯಲ್ಲಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿನ ರೂವಾರಿಯಾಗಿದ್ದಾರೆ.

ಒಂದು ಕಾಲಘಟ್ಟದಲ್ಲಿ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಜಿಲ್ಲೆಯೊಳಗೆ 2018ರ ಚುನಾವಣೆ ಪಕ್ಷವನ್ನು ಧೂಳೀಪಟ ಮಾಡಿತ್ತು. ಅಸ್ತಿತ್ವವಿಲ್ಲದೆ ಪಕ್ಷದ ಕಾರ್ಯಕರ್ತರು ಅತಂತ್ರರಾಗಿದ್ದರು. ಆದರೂ ಎದೆಗುಂದದ ಎನ್‌.ಚಲುವರಾಯಸ್ವಾಮಿ ಅವರು ಮುಖಂಡರು, ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯವನ್ನು ತುಂಬಿ ಮುನ್ನಡೆಸಿದರು. 2018ರ ವಿಧಾನಸಭೆ ಚುನಾವಣೆ ಬಳಿಕ ಜೆಡಿಎಸ್‌ ಪಕ್ಷ ಒಂದೇ ಒಂದು ಚುನಾವಣೆಯನ್ನೂ ಗೆಲ್ಲದಂತೆ ಕಾರ್ಯತಂತ್ರ ರೂಪಿಸುತ್ತಾ ಪ್ರತಿ ಹಂತದಲ್ಲೂ ಯಶಸ್ವಿಯಾಗುತ್ತಲೇ ಬಂದರು.

ಚಲುವರಾಯಸ್ವಾಮಿ ಮತ್ತೆ ನಾಗಮಂಗಲ ಅಧಿಪತಿ: ಅಭಿವೃದ್ಧಿ ವಿಮುಖ ಕೆ.ಸುರೇಶ್‌ಗೌಡಗೆ ಸೋಲು

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದರೂ ಅದ್ಭುತ ಎನ್ನುವಂತೆ ರಣತಂತ್ರ ರೂಪಿಸಿ ದಿನೇಶ್‌ ಗೂಳಿಗೌಡರನ್ನು ಗೆಲ್ಲಿಸಿಕೊಂಡು ಬಂದರು. ಅದಾದ ನಂತರ ಎದುರಾದ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ ಪಕ್ಷದಿಂದ ಮಧು ಜಿ.ಮಾದೇಗೌಡರು ಜಯಗಳಿಸಲು ಕಾರಣರಾದರು. ಈ ಎರಡು ಗೆಲುವು ಚಲುವರಾಯಸ್ವಾಮಿ ನಾಯಕತ್ವದ ಕಡೆಗೆ ರಾಜ್ಯ ನಾಯಕರು ಕಣ್ಣರಳಿಸಿ ನೋಡುವಂತೆ ಮಾಡಿದವು. ಅಲ್ಲದೇ, ನೆಲೆಯನ್ನೇ ಕಳೆದುಕೊಂಡಿದ್ದ ಕಾಂಗ್ರೆಸ್‌ಗೆ ಬುನಾದಿ ಹಾಕಿಕೊಟ್ಟವು.

ಇದೀಗ 2023ರ ಚುನಾವಣೆ ವೇಳೆಗೆ ಸಮಯೋಚಿತ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಎಲ್ಲ ಕ್ಷೇತ್ರಗಳಲ್ಲೂ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು. ಯಾವುದೇ ಪಕ್ಷದ ಬೆಂಬಲವನ್ನೂ ಪಡೆಯದೆ ಜೆಡಿಎಸ್‌ ಪಕ್ಷವನ್ನು ದಿಟ್ಟವಾಗಿ ಎದುರಿಸಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ವಿಜಯಪತಾಕೆ ಹಾರಿಸುವಲ್ಲಿ ಚಲುವರಾಯಸ್ವಾಮಿ ಪ್ರಮುಖ ಕಾರಣಕರ್ತರಾಗಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್‌ ಗೆಲುವಿಗೆ ಬಿಜೆಪಿ ನೀಡಿದ ಬೆಂಬಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್‌ ಕಾರ್ಯಕರ್ತರ ಶ್ರಮ ಹೆಚ್ಚಾಗಿತ್ತು. ಇದರ ನಡುವೆಯೂ ಸುಮಲತಾ ಬಿಜೆಪಿ ಬೆಂಬಲಿಸುವ ನಿರ್ಧಾರ ಕೈಗೊಂಡರೂ ಚಲುವರಾಯಸ್ವಾಮಿ ಧೈರ್ಯಗೆಡಲಿಲ್ಲ. ಬೆಂಬಲವನ್ನು ಹರಸಿಕೊಂಡು ಅವರ ಬಳಿಗೆ ಹೋಗಲಿಲ್ಲ. ಅವರ ನಿರ್ಧಾರವನ್ನು ಟೀಕಿಸಲೂ ಇಲ್ಲ. ಸ್ವಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿದ್ದ ಚಲುವರಾಯಸ್ವಾಮಿ ಅವರು ಎಲ್ಲ ಕ್ಷೇತ್ರಗಳಿಗೂ ಹೋಗಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಯೋಜನೆಗಳೊಂದಿಗೆ ಜಿಲ್ಲೆಯ ಅಭಿವೃದ್ಧಿ ವಿಷಯಗಳನ್ನು ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸುವುದರೊಂದಿಗೆ ಜಿಲ್ಲೆಯ ಅಭಿವೃದ್ಧಿಯ ಕನಸು ಮೂಡಿಸಿದರು. ಇವೆಲ್ಲವೂ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಿದೆ ಎಂದು ನಂಬಲಾಗಿದೆ.

ಕಾಂಗ್ರೆಸ್‌ ಶಕ್ತಿ ಬಹಿರಂಗ: ಪ್ರಧಾನಿ ಮೋದಿ, ಅಮಿತ್‌ ಶಾ, ಯೋಗಿ ಆದಿತ್ಯನಾಥ ಸೇರಿದಂಬೆ ಬಿಜೆಪಿಯ ಹಲವು ದಿಗ್ಗಜ ರಾಜಕಾರಣಿಗಳು ಜಿಲ್ಲೆಗೆ ಬಂದು ರೋಡ್‌ ಶೋ, ಪ್ರಚಾರದ ಅಬ್ಬರ ಸೃಷ್ಟಿಸಿ ಹೋದರು. ಮೋದಿ ಅಲೆಯಲ್ಲಿ ಮಂಡ್ಯ ಜಿಲ್ಲೆಯೊಳಗೆ ಬಿಜೆಪಿ ಗೆಲ್ಲುವ ಭರವಸೆಯನ್ನು ಹುಟ್ಟುಹಾಕಿದರು. ಇದರ ನಡುವೆಯೂ ಚಲುವರಾಯಸ್ವಾಮಿ ಅವರು ಕಾಂಗ್ರೆಸ್‌ ಯಾರೊಬ್ಬರ ಪ್ರಭಾವವೂ ತಟ್ಟದಂತೆ ಎಚ್ಚರ ವಹಿಸಿದರು. ಕಾಂಗ್ರೆಸ್‌ ಮತಗಳು ಬಿಜೆಪಿ ಕಡೆಗೆ ಹರಿದುಹೋಗದಂತೆ ಕಟ್ಟಿ ಹಾಕಿದರು. ಭಾರತ್‌ ಜೋಡೋ ಯಾತ್ರೆ, ಪ್ರಜಾಧ್ವನಿ ಯಾತ್ರೆಗಳ ಮೂಲಕ ಜೆಡಿಎಸ್‌, ಬಿಜೆಪಿಗೆ ಸರಿಸಮನಾಗಿ ಜನಬಲ ಪ್ರದರ್ಶಿಸುವುದರೊಂದಿಗೆ ಕಾಂಗ್ರೆಸ್‌ ಶಕ್ತಿ ಏನೆಂಬುದನ್ನು ಬಹಿರಂಗವಾಗಿಯೇ ಸಾಬೀತುಪಡಿಸಿದರು.

Mandya: ರಾಜ್ಯ, ರಾಷ್ಟ್ರಕ್ಕೆ ಕಾಂಗ್ರೆಸ್‌ ಅನಿವಾರ್ಯ: ಚಲುವರಾಯಸ್ವಾಮಿ

ಛಲಗಾರ ಚಲುವರಾಯಸ್ವಾಮಿ: ಚಲುವರಾಯಸ್ವಾಮಿ ಅವರ ಸಂಘಟಿತ ನಾಯಕತ್ವ, ಚುನಾವಣಾ ರಣತಂತ್ರಗಳು, ದಿಟ್ಟತನ, ಹಿಡಿದ ಕಾರ್ಯವನ್ನು ಸಾಧಿಸುವ ಛಲಗಾರಿಕೆ ಎಲ್ಲವೂ ಕಾಂಗ್ರೆಸ್‌ಗೆ ಶಕ್ತಿಯನ್ನು ತಂದುಕೊಟ್ಟಿವೆ. ಅವೆಲ್ಲವೂ ಕಾರ್ಯಕರ್ತರಿಗೆ ಸ್ಫೂರ್ತಿಯನ್ನು ತಂದುಕೊಟ್ಟಿವೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಧೂಳೀಪಟ ಮಾಡಿದ ರೀತಿಯಲ್ಲೇ ಈ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷವನ್ನು ಧೂಳೀಪಟ ಮಾಡಿ ಸೇಡು ತೀರಿಸಿಕೊಂಡಿದ್ದಾರೆ.