ಬೆಳಗಾವಿ, (ಫೆ.12): ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ರಮೇಶ್ ಜಾರಕಿಹೊಳಿ‌ ಟಾರ್ಗೆಟ್ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ನನ್ನ ಕ್ಷೇತ್ರ ಟಾರ್ಗೆಟ್ ಮಾಡಿದ್ರೆ, ನಾನು ಗೋಕಾಕ್ ಟಾರ್ಗೆಟ್ ಮಾಡುತ್ತೇನೆ. ಪಕ್ಷ ಬಯಸಿದ್ರೆ ಗೋಕಾಕ್​ನಿಂದ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುವ ಮೂಲಕ ಸಾಹುಕಾರ್‌ಗೆ ತಿರುಗೇಟು ಕೊಟ್ಟರು. 

"

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನನಗೆ ಉತ್ತರ ಕೊಡಲು ಜಾಸ್ತಿ ಹೊತ್ತು ಬೇಕಿಲ್ಲ. 2023ರಲ್ಲಿ ಜನರಿಂದ ಉತ್ತರ ಕೊಡಿಸಲು ಕಾಯುತ್ತಿದ್ದೇನೆ ಎಂದು ಪರೋಕ್ಷವಾಗಿ ಸಚಿವ ರಮೇಶ್ ಜಾರಕಿಹೊಳಿಗೆ ಟಾಂಗ್ ಕೊಟ್ಟರು. 

ಲಕ್ಷ್ಮೀ ಹೆಬ್ಬಾಳ್ಕರ್​ಗೆ ಶಾಕ್​ ಕೊಡಲು ರಮೇಶ್​ ಜಾರಕಿಹೊಳಿ ಮೆಗಾ ಪಾಲಿಟಿಕ್ಸ್!​...

ಸಚಿವ ರಮೇಶ ಜಾರಕಿಹೊಳಿ‌ ನೀಡುತ್ತಿರುವ ಹೇಳಿಕೆ, ಆರೋಪಕ್ಕೆ ನಾನೇನೂ ಮೌನವಾಗಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನನ್ನ ಗ್ರಾಮೀಣ ಕ್ಷೇತ್ರದ ಜನರೇ ತಕ್ಕ ಉತ್ತರ ನೀಡಲಿದ್ದಾರೆ. ಜನರ ಸೇವೆ ಮಾಡುತ್ತ ನಾನು ಮುಂದುವರಿಯುತ್ತೇನೆ. ಕ್ಷೇತ್ರದ ಜನರಿಂದಲೇ ಜಾರಕಿಹೊಳಿ ಅವರಿಗೆ ತಕ್ಕ ಉತ್ತರ ಕೊಡಬೇಕು ಅಂದುಕೊಂಡಿದ್ದೇನೆ ಎಂದರು.

ಇನ್ನು ಗ್ರಾಮ ಪಂಚಾಯತಿ ಸದಸ್ಯರಿಗೆ ಬಿಜೆಪಿಯಿಂದ ಸನ್ಮಾನ ವಿಚಾರಕ್ಕೆ ಪ್ರತಿಕ್ರಿಯಿಸಿ,  ಸರ್ಕಾರವನ್ನು ಬೀಳಿಸಿದವರಿಗೆ ಗ್ರಾಮ ಪಂಚಾಯಿತಿ ಯಾವ ಲೆಕ್ಕ. ಎಂಎಲ್‌ಎಗಳನ್ನೇ ಎಸ್ಕೇಪ್ ಮಾಡಿದ್ದಾರೆ, ಇವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಅವರು ಪ್ರಜಾಪ್ರಭುತ್ವ ಮೇಲೆಯೇ ವಿಶ್ವಾಸ ಕಳೆದುಕೊಂಡಿದ್ದಾರೆ. ಎಲ್ಲವನ್ನೂ ಎದುರಿಸಲು ನಾನು ಸಮರ್ಥಳಿದ್ದೇನೆ ಎಂದು ಹೇಳಿದರು.