Asianet Suvarna News Asianet Suvarna News

ಉಪಚುನಾವಣಾ ಕದನ: RR ನಗರದ ಗೆಲುವು ಮಂತ್ರಿ ಸ್ಥಾನ ಕಲ್ಪಿಸಲಿದೆ, ಮುನಿರತ್ನ

ಯಾವ ಅಪೇಕ್ಷೆ ಇಲ್ಲದೆ ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಪಕ್ಷ ಸೇರಿದ್ದೇನೆ|ಯಡಿಯೂರಪ್ಪ ನನ್ನ ನಾಯಕ, ಬಿಜೆಪಿ ಪಕ್ಷ ನನಗೆ ದೇವಾಲಯ. ಅವರು ನನ್ನ ಮೇಲೆ ನಂಬಿಕೆ ಇಟ್ಟು ಏನೇ ಜವಾಬ್ದಾರಿ ಕೊಟ್ಟರೂ ಭಕ್ತಿಯಿಂದ ಪ್ರಸಾದವಾಗಿ ಸ್ವೀಕಾರ ಮಾಡುತ್ತೇನೆ ಎಂದ ಮುನಿರತ್ನ| 

Munirathna Talks Over RR Nagar ByElection grg
Author
Bengaluru, First Published Oct 28, 2020, 8:41 AM IST

ಬೆಂಗಳೂರು(ಅ.28): ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪೈಕಿ ತೀವ್ರ ಕುತೂಹಲ ಮೂಡಿಸಿರುವ ಕಣ ರಾಜರಾಜೇಶ್ವರಿ ನಗರ ಕ್ಷೇತ್ರ. ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರ ಪಕ್ಷವಾಗಿದ್ದ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಬಂದರೂ ನ್ಯಾಯಾಲಯದಲ್ಲಿ ಪ್ರಕರಣ ಇದ್ದುದರಿಂದ ಹಲವು ತಿಂಗಳುಗಳ ಕಾಲ ಉಪಚುನಾವಣೆಯೇ ಎದುರಾಗಿರಲಿಲ್ಲ. ಅಂತಿಮವಾಗಿ ಚುನಾವಣೆ ಎದುರಾಗಿದ್ದು, ಕಾಂಗ್ರೆಸ್‌ ಪಕ್ಷ ಕೂಡ ಇದನ್ನು ಸವಾಲಾಗಿಯೇ ಸ್ವೀಕರಿಸಿ ಪ್ರಚಾರದಲ್ಲಿ ತೊಡಗಿದೆ. ಆದರೆ, ಕಾಂಗ್ರೆಸ್ಸಿನ ಏಟಿಗೆ ತಿರುಗೇಟು ನೀಡಲು ಮುನಿರತ್ನ ಅವರೂ ಸಜ್ಜಾಗಿದ್ದು, ಕಳೆದ ಹಲವು ದಿನಗಳಿಂದ ಬಿರುಸಿನ ರಣತಂತ್ರ ರೂಪಿಸುವುದರೊಂದಿಗೆ ಪ್ರಚಾರದಲ್ಲಿ ತೊಡಗಿದ್ದಾರೆ. ತಾವು ಹಿಂದೆ ಶಾಸಕರಾಗಿ ಮಾಡಿದ ಸಾಧನೆಗಳನ್ನು ಮುಂದಿಟ್ಟುಕೊಂಡು ಇದೀಗ ಇನ್ನಷ್ಟುಅಭಿವೃದ್ಧಿ ಮಾಡಲು ಅವಕಾಶ ನೀಡುವಂತೆ ಮತಯಾಚಿಸುತ್ತಿದ್ದಾರೆ. ಬಿಡುವಿಲ್ಲದ ಪ್ರಚಾರದ ನಡುವೆಯೇ ಮುನಿರತ್ನ ಅವರು ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.

ನಿಮ್ಮ ಚುನಾವಣಾ ಪ್ರಚಾರ ರಂಗೇರಿದೆ?

ಚುನಾವಣೆಯೇನೂ ನನಗೆ ಹೊಸದಲ್ಲ. ಈ ಹಿಂದೆ ಆರು ವಿವಿಧ ಚುನಾವಣೆಗಳನ್ನು ಎದುರಿಸಿದ ಅನುಭವವಿದೆ. ಅದರಲ್ಲಿ ಇದೂ ಸೇರಿ ನಾಲ್ಕು ಬಾರಿ ನೇರವಾಗಿ ನಾನೇ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ಎರಡು ಬಾರಿ ಸಂಸದರ ಚುನಾವಣೆ, ಒಂದು ಬಾರಿ ಬಿಬಿಎಂಪಿ ಚುನಾವಣೆಗೆ ಕೆಲಸ ಮಾಡಿದ್ದೇನೆ. ಚುನಾವಣಾ ಪ್ರಚಾರ ಚೆನ್ನಾಗಿ ನಡೆಯುತ್ತಿದೆ. ನನಗೆ ಕ್ಷೇತ್ರದ ಮತದಾರರೇನು ಹೊಸಬರಲ್ಲ. ಮತದಾರರಿಗೂ ಈ ಮುನಿರತ್ನ ಹೊಸಬನಲ್ಲ. ಕಳೆದ ಎರಡು ಬಾರಿ ಶಾಸಕನಾಗಿ ನಾನು ನಿರಂತರವಾಗಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಜನರು ನೋಡಿದ್ದಾರೆ. ನನ್ನ ಕಾರ್ಯವೈಖರಿ ಅವರಿಗೆ ಇಷ್ಟವಾಗಿದೆ. ಪಕ್ಷ ಭೇದ ಮರೆತು ಚುನಾವಣೆಯಲ್ಲಿ ಎಲ್ಲರೂ ನನಗೆ ಮತ ನೀಡುತ್ತಾರೆ ಎಂಬ ವಿಶ್ವಾಸವಿದೆ.

'ದಾಖಲೆ ಇದ್ರೆ ಬೇಗ ಬಿಡುಗಡೆ ಮಾಡಿದರೆ ಒಳ್ಳೆಯದು'

ಕಾಂಗ್ರೆಸ್‌ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ?

ಎದುರಾಳಿಗಳ ಬಗ್ಗೆ ನಾನು ಯೋಚಿಸುವುದಿಲ್ಲ. ನಾನೇನಿದ್ದರೂ ಚುನಾವಣೆಯ ನನ್ನ ರಣತಂತ್ರದ ಮೇಲೆ ಮಾತ್ರ ಗಮನ ಹರಿಸುತ್ತೇನೆ. ಈ ಹಿಂದೆ ಎರಡು ಬಾರಿ ಮತದಾರರು ನನ್ನನ್ನು ಹರಸಿದ್ದಾರೆ. ನಾನು ಯಾವುದೇ ಭ್ರಷ್ಟಾಚಾರ ಎಸಗಿಲ್ಲ. ಮುಂದಿನ ಅಧಿಕಾರವಧಿಗೂ ನನ್ನನ್ನು ಬೆಂಬಲಿಸುವ ಬಗ್ಗೆ ಅನುಮಾನವಿಲ್ಲ. ಅಭಿವೃದ್ಧಿಯನ್ನೇ ಎದುರು ನೋಡುವ ಪ್ರಜ್ಞಾವಂತ ಮತದಾರರು ಬೇರೆ ಆಯ್ಕೆ ಬಗ್ಗೆ ಯೋಚಿಸುವುದಿಲ್ಲ ಎಂಬುದು ನನ್ನ ಸ್ಪಷ್ಟಅಭಿಪ್ರಾಯ.

ಕಾಂಗ್ರೆಸ್‌ ಸಖ್ಯ ತೊರೆದು ಬಿಜೆಪಿ ಸೇರಿದ್ದೀರಿ, ಹೇಗನ್ನಿಸುತ್ತಿದೆ?

ನನಗೆ ಹಿಂದೆ ಬಿಜೆಪಿಯ ರಾಷ್ಟ್ರ ಪ್ರೇಮ ಮತ್ತು ತತ್ವ-ಸಿದ್ಧಾಂತದ ಬಗ್ಗೆ ಸತ್ಯ ತಿಳಿದಿರಲಿಲ್ಲ. ಜತೆಗೆ ಇಡೀ ಜಗತ್ತು ಇಂದು ನರೇಂದ್ರ ಮೋದಿ ಅವರ ನಾಯಕತ್ವವನ್ನು ಮೆಚ್ಚಿ ಕೊಂಡಾಡುತ್ತಿದೆ. ಇವೆಲ್ಲವೂ ನನಗೆ ಸತ್ಯದ ದರ್ಶನ ಮಾಡಿಸಿದೆ. ಖುಷಿಯಾಗಿದೆ. ಅವೆಲ್ಲವನ್ನೂ ಮೆಚ್ಚಿ ನಾನು ಬಿಜೆಪಿ ಸೇರಿದ್ದೇನೆ. ಬಿಜೆಪಿ ತತ್ವ-ಸಿದ್ಧಾಂತಗಳನ್ನು ಒಪ್ಪಿಕೊಂಡು ಕೆಲಸ ಮಾಡುತ್ತೇನೆ.

ಏನನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದೀರಿ?

ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಮುಂದುವರಿಕೆ ಹಾಗೂ ಸರ್ಕಾರದ ಸವಲತ್ತು ದೊರಕಿಸುವುದರ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ಮತ್ತಷ್ಟುಚುರುಕುಗೊಳಿಸಲು ಉಪ ಚುನಾವಣೆ ಅಗತ್ಯವಿತ್ತು. ಕ್ಷೇತ್ರದ ಅಭಿವೃದ್ಧಿ ವಿಷಯವೇ ಮುಖ್ಯ. ಕಳೆದ ಅವಧಿಯಲ್ಲಿನ ನನ್ನ ಅಭಿವೃದ್ಧಿ ಕಾರ್ಯಗಳನ್ನು ಮತ್ತಷ್ಟುಮುಂದುವರಿಸುವ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮತಯಾಚನೆ ಮಾಡುತ್ತಿದ್ದೇನೆ. ರಾಷ್ಟ್ರೀಯ ಪಕ್ಷ ಬಿಜೆಪಿಗೆ ಬಗ್ಗೆ ದೇಶದಾದ್ಯಂತ ಒಲವಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾರ್ಯಗಳು ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಜನಪರ ಆಡಳಿತ ಮತದಾರರ ಮನಸ್ಸಿನಲ್ಲಿ ಅಚ್ಚೊತ್ತಿದೆ.

' ಡಿಕೆಶಿ ವಿರುದ್ಧ 100 ಕೇಸ್ ಕೊಡಲಿ, ಮುನಿರತ್ನ ವಿರುದ್ಧವೂ ನಾವು ದಾಖಲೆ ಬಿಡುಗಡೆ ಮಾಡುತ್ತೇವೆ'

ಉಪಚುನಾವಣೆಗೆ ನೀವೆ ಕಾರಣ ಎಂದು ಕಾಂಗ್ರೆಸ್‌ ಹೇಳುತ್ತಿದೆ?

ನಾನು ಯಾಕೆ ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರ ಪಕ್ಷವಾಗಿದ್ದ ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿಗೆ ಸೇರಿದೆ ಎಂಬುದನ್ನೂ ಆ ಪಕ್ಷದ ಮುಖಂಡರೇ ಪ್ರಾಮಾಣಿಕವಾಗಿ ಹೇಳಬೇಕು. ಎಲ್ಲವೂ ಜನರಿಗೆ ಗೊತ್ತಿದೆ.

ಸ್ಥಳೀಯ ಮುಖಂಡರ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಸಫಲವಾಗಿದೆಯೇ?

ಚುನಾವಣೆಯಲ್ಲಿ ನಾನು ಗೆಲ್ಲುವುದು ಎಷ್ಟುಮುಖ್ಯವೋ, ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೆಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವುದೂ ಅಷ್ಟೇ ಮುಖ್ಯ. ನಾನು ಪರಸ್ಪರ ಚರ್ಚೆ ಮಾಡಿ ಎಲ್ಲವನ್ನೂ ಬಗೆಹರಿಸಿಕೊಳ್ಳುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿ ಗೆಲುವಿನ ಬಾವುಟ ಹಾರಿಸುವುದಷ್ಟೇ ನನ್ನ ಗುರಿ. ಎಲ್ಲರ ಸಹಕಾರ ಮತ್ತು ಮತದಾರರ ಆಶೀರ್ವಾದದಿಂದ ನಾನು ಇದರಲ್ಲಿ ಯಶಸ್ವಿಯಾಗುತ್ತೇನೆ. ಇದಕ್ಕೆ ಕ್ಷೇತ್ರದ ಶಕ್ತಿ ದೇವತೆ ತಾಯಿ ರಾಜರಾಜೇಶ್ವರಿಯೇ ಸಾಕ್ಷಿ. ಮುನಿರಾಜು ಗೌಡ ಅವರು ಕೂಡ ಪಕ್ಷದ ಪರ ಹಾಗೂ ನನ್ನ ಪರ ಪ್ರಚಾರದಲ್ಲಿ ತೊಡಗುತ್ತಾರೆ.

ನೀವು ಒಕ್ಕಲಿಗ ವಿರೋಧಿ ಎಂದೂ ಆರೋಪಿಸಲಾಗ್ತಿದೆ?

ಈ ಹಿಂದೆ ಕೆಂಪೇಗೌಡ ಅಧ್ಯಯನ ಪೀಠದ ಗುದ್ದಲಿ ಪೂಜೆ ಸಂದರ್ಭದಲ್ಲಿ ನನ್ನ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಹಾಡಿ ಹೊಗಳಿದ್ದರು. ಕಳೆದ ಹತ್ತು ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದಾಗ ಈ ಮಾತುಗಳು ಕೇಳಿ ಬರಲಿಲ್ಲ. ಇದೀಗ ನನ್ನನ್ನು ಒಕ್ಕಲಿಗ ವಿರೋಧಿ ಎಂದೆಲ್ಲ ಬಿಂಬಿಸಲಾಗುತ್ತಿದೆ. ಸಣ್ಣ ಮಟ್ಟಕ್ಕೆ ಇಳಿದು ಯಾರೇ ಆದರೂ ರಾಜಕಾರಣ ಮಾಡಬಾರದು. ಈಗ ನಡೆಯುತ್ತಿರುವ ಬೆಳವಣಿಗೆ ಖಂಡಿತವಾಗಿಯೂ ರಾಜಕಾರಣದಲ್ಲಿ ಒಳ್ಳೆಯದಲ್ಲ.

ಕ್ಷೇತ್ರದ ಅಭಿವೃದ್ಧಿಗಾಗಿ ಯಾವ ಕನಸು ಬಿತ್ತುತ್ತಿದ್ದೀರಿ?

ಹೆಬ್ಬಾಳದಿಂದ ಸುಮ್ಮನಹಳ್ಳಿ, ಅನ್ನಪೂರ್ಣೇಶ್ವರಿನಗರದಿಂದ ಹೊಸಕೆರೆಹಳ್ಳಿವರೆಗೆ ಮೆಟ್ರೋ ಯೋಜನೆ ಅನುಷ್ಠಾನ ಮಾಡುವ ಗುರಿ ಹೊಂದಿದ್ದೇನೆ. ಮಲ್ಲತ್ತಹಳ್ಳಿ ಕೆರೆ ಅಭಿವೃದ್ಧಿ ಸೇರಿ ಪ್ರತಿ ವಾರ್ಡ್‌ನಲ್ಲೂ ಮೂಲಸೌಕರ್ಯಗಳನ್ನು ಉನ್ನತೀಕರಿಸಬೇಕಿದೆ. ಅರ್ಧಕ್ಕೆ ನಿಂತಿರುವ ಹಲವಾರು ಕಾಮಗಾರಿ ಪೂರ್ಣಗೊಳಿಸುವ ಅಗತ್ಯವಿದೆ. ಜನರು ನನ್ನ ಮೇಲೆ ನಂಬಿಕೆ ಇಟ್ಟು ಅಭಿವೃದ್ಧಿಗಾಗಿಯೇ ಮತ ಚಲಾಯಿಸಲಿ ಎಂದು ಮನವಿ ಮಾಡುತ್ತೇನೆ.

ಸಚಿವರಾಗುತ್ತೀರಿ ಎಂದು ಅಶೋಕ್‌ ಸ್ಪಷ್ಟವಾಗಿ ಹೇಳಿದ್ದಾರೆ?

ಯಾವ ಅಪೇಕ್ಷೆ ಇಲ್ಲದೆ ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಪಕ್ಷ ಸೇರಿದ್ದೇನೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನನ್ನ ನಾಯಕರು. ಬಿಜೆಪಿ ಪಕ್ಷ ನನಗೆ ದೇವಾಲಯ. ಅವರು ನನ್ನ ಮೇಲೆ ನಂಬಿಕೆ ಇಟ್ಟು ಏನೇ ಜವಾಬ್ದಾರಿ ಕೊಟ್ಟರೂ ಭಕ್ತಿಯಿಂದ ಪ್ರಸಾದವಾಗಿ ಸ್ವೀಕಾರ ಮಾಡುತ್ತೇನೆ. ಕಾಯ ವಾಚ ಮನಸಾ ಕೆಲಸ ಮಾಡುತ್ತೇನೆ. ಇಲ್ಲಿನ ಗೆಲುವು ಮಂತ್ರಿ ಸ್ಥಾನ ಕಲ್ಪಿಸಲಿದೆ. ಅದರಿಂದ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟುಅಧಿಕಾರ ಸಿಗುತ್ತದೆ.
 

Follow Us:
Download App:
  • android
  • ios