ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ನಿಗಾ: ಶಾಸಕ ವಿಜಯೇಂದ್ರ ಭರವಸೆ
ತಾಲೂಕಿನ ಮತದಾರರು, ಕಾರ್ಯಕರ್ತರು ಕಳೆದ 4 ದಶಕದಿಂದ ಯಡಿಯೂರಪ್ಪ ಅವರನ್ನು ಸತತ ಬೆಂಬಲಿಸಿ ರಾಜ್ಯ ರಾಜಕಾರಣದಲ್ಲಿ ಪ್ರಬಲ ಶಕ್ತಿಯಾಗಿ ಗುರುತಿಸಿಕೊಳ್ಳುವ ರೀತಿಯಲ್ಲಿ ಪ್ರೋತ್ಸಾಹಿಸಿದ್ದಾರೆ.
ಶಿಕಾರಿಪುರ (ಮೇ.23): ತಾಲೂಕಿನ ಮತದಾರರು, ಕಾರ್ಯಕರ್ತರು ಕಳೆದ 4 ದಶಕದಿಂದ ಯಡಿಯೂರಪ್ಪ ಅವರನ್ನು ಸತತ ಬೆಂಬಲಿಸಿ ರಾಜ್ಯ ರಾಜಕಾರಣದಲ್ಲಿ ಪ್ರಬಲ ಶಕ್ತಿಯಾಗಿ ಗುರುತಿಸಿಕೊಳ್ಳುವ ರೀತಿಯಲ್ಲಿ ಪ್ರೋತ್ಸಾಹಿಸಿದ್ದಾರೆ. ಈ ದಿಸೆಯಲ್ಲಿ ಕ್ಷೇತ್ರದ ಜನತೆ ಸಹಿತ ವಿರೋಧ ಪಕ್ಷದವರಿಗೂ ಹೆಚ್ಚಿನ ಗೌರವ ನೀಡಲಾಗುತ್ತಿದೆ. ಇದನ್ನು ದೌರ್ಬಲ್ಯ ಎಂದು ಭಾವಿಸದಂತೆ ವಿರೋಧಿಗಳಿಗೆ ಕ್ಷೇತ್ರದ ನೂತನ ಶಾಸಕ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದರು. ಸೋಮವಾರ ಪಟ್ಟಣದ ಮಂಗಳ ಭವನದ ಹಿಂಭಾಗ ತಾಲೂಕು ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಮತದಾರರು, ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆರಂಭದಲ್ಲಿಯೇ ಕ್ಷೇತ್ರದಲ್ಲಿ ಗೆಲ್ಲುವ ಬಹುದೊಡ್ಡ ವಿಶ್ವಾಸವನ್ನು ಹೊಂದಿದ್ದೆ. 70ರ ದಶಕದಿಂದ ಯಡಿಯೂರಪ್ಪ ಅವರಿಗೆ ರಾಜಕೀಯವಾಗಿ ಬೆಂಬಲಿಸಿ, ಪ್ರೋತ್ಸಾಹಿಸಿದ ಕ್ಷೇತ್ರದ ಜನತೆ ಕಾರ್ಯಕರ್ತರ ಪರಿಶ್ರಮದಿಂದ ಈ ಬಾರಿ ಪುನಃ ಜಯಗಳಿಸುವ ವಿಶ್ವಾಸ ಹುಸಿಯಾಗಲಿಲ್ಲ. ಈ ದಿಸೆಯಲ್ಲಿ ವಿಧಾನಸೌಧದ ಮೆಟ್ಟಿಲು ಹತ್ತುವ ಮುನ್ನ ಕ್ಷೇತ್ರದ ಮತದಾರರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ಸಂಕಲ್ಪ ಕೈಗೊಂಡಿದ್ದಾಗಿ ತಿಳಿಸಿದರು.
ಮಳೆಗಾಲ ಎದುರಿಸಲು ಕೊಡಗು ಜಿಲ್ಲಾಡಳಿತ ಸಿದ್ಧತೆ: ಜೂನ್ 1ರ ಬಳಿಕ ಎನ್‌ಡಿಆರ್‌ಎಫ್ ತಂಡ ಆಗಮನ
ಬಿಜೆಪಿ ಉಪಾಧ್ಯಕ್ಷನಾಗಿ ರಾಜ್ಯದಲ್ಲಿ ಪಕ್ಷ ಸಂಘಟಿಸುವ ಬಹುದೊಡ್ಡ ಜವಾಬ್ದಾರಿ ಹೊಂದಿದ್ದೇನೆ. ಈ ದಿಸೆಯಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಬೇಕಾಗಿದೆ. ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ತಾಲೂಕು ಕಚೇರಿ ಆವರಣದಲ್ಲಿ ಶಾಸಕರ ಕಚೇರಿಯನ್ನು ಆರಂಭಿಸಿ ವಾರದ 3-4 ದಿನ ಸ್ಥಳೀಯರ ಕುಂದುಕೊರತೆ ಆಲಿಸಿ ಪರಿಹರಿಸಲು, ಹೆಚ್ಚಿನ ನಿಗಾ ವಹಿಸುತ್ತೇನೆ. ಹಗಲು -ರಾತ್ರಿ ಗೆಲುವಿಗಾಗಿ ಶ್ರಮಿಸಿದ ಮತದಾರರು, ಕಾರ್ಯಕರ್ತರನ್ನು ನೇರವಾಗಿ ಭೇಟಿಯಾಗುವುದಾಗಿ ತಿಳಿಸಿದರು.
ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷದವರು ಯಡಿಯೂರಪ್ಪ, ಸಂಸದ ರಾಘವೇಂದ್ರ ಸಹಿತ ಹಿರಿಯ ಮುಖಂಡರ ಬಗ್ಗೆ ಅತ್ಯಂತ ಹಗುರವಾಗಿ ಟೀಕಿಸಿದ್ದಾರೆ. ಯಡಿಯೂರಪ್ಪನವರು ಕಾರ್ಯಕರ್ತರು ಹಾಗೂ ಮುಖಂಡರ ಸಹಿತ ಪ್ರತಿಯೊಬ್ಬರಿಗೂ ನೀಡುವ ಗೌರವವನ್ನು ವಿರೋಧಿಗಳು ದೌರ್ಬಲ್ಯ ಎಂದು ಭಾವಿಸಬಾರದು. ಅಭಿವೃದ್ಧಿ ಕಾರ್ಯದ ಜತೆಗೆ ಬಗರ್‌ಹುಕುಂ, ಇ-ಸ್ವತ್ತು, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ನ್ಯೂನತೆ ಹೋಗಲಾಡಿಸಿ, ಯುವಕರಿಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ. ಭ್ರಷ್ಟಾಚಾರ ರಹಿತ ಆಡಳಿತದ ಮೂಲಕ ಎಲ್ಲರ ವಿಶ್ವಾಸ ಗಳಿಸಿ ಭಗವಂತ ಮೆಚ್ಚುವ ರೀತಿ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಸೇವೆ ಸಲ್ಲಿಸುವುದಾಗಿ ತಿಳಿಸಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಯಡಿಯೂರಪ್ಪ ಅವರ 40 ವರ್ಷದ ರಾಜಕೀಯ ಜೀವನದಲ್ಲಿ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದಾರೆ. ಕಾರ್ಯಕರ್ತರಿಗೆ ಎಂದೂ ಕಣ್ಣೀರು ಹಾಕಿಸಿಲ್ಲ. ಅದೇ ರೀತಿಯಲ್ಲಿ ಬೆರಳು ತೋರಿಸದಂತೆ ಸಮಾಜ ಕಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಈ ಬಾರಿ ಚುನಾವಣೆಯಲ್ಲಿ ಭಯಪಡುವ ರೀತಿಯಲ್ಲಿ ವಿರೋಧಿಗಳು ಸುಳ್ಳು ಪ್ರಚಾರ ಮಾಡಿದ್ದು, ಬಣಜಾರ್ ಸಮಾಜ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ರಚಿಸಿ ಸಮಾಜದ ಕಷ್ಟ-ಸುಖಕ್ಕೆ ಸ್ಪಂದಿಸಿದ್ದೇವೆ. ವೀರಭದ್ರನ ಈ ಕ್ಷೇತ್ರದಲ್ಲಿ ಸುಳ್ಳು ಹೇಳಿದಲ್ಲಿ ದೇವರು ನೋಡಿಕೊಳ್ಳುತ್ತಾನೆ ಎಂದು ತಿಳಿಸಿದರು.
ಮುಂದಿನ ವರ್ಷ ಲೋಕಸಭಾ ಚುನಾವಣೆ ಅಂತಿಮ ಪರೀಕ್ಷೆ ಇದೆ. ಪ್ರಧಾನಿ ನರೇಂದ್ರ ಮೋದಿಗಾಗಿ ಜನತೆ ಕೈ ಎತ್ತಬೇಕಾಗಿದೆ. ಆ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಜಯಗಳಿಸಲು ಯತ್ನಿಸಬೇಕಾಗಿದೆ. ಮೇ 30ಕ್ಕೆ ಕೇಂದ್ರ ಸರ್ಕಾರಕ್ಕೆ 9 ವರ್ಷ ಭರ್ತಿಯಾಗಲಿದೆ. ಈ ದಿಸೆಯಲ್ಲಿ ಸಂಘಟನೆಗೆ ಶಕ್ತಿ ತುಂಬಲು ಪಕ್ಷ ವಿವಿಧ ಕಾರ್ಯಕ್ರಮವನ್ನು ಆಯೋಜಿಸಿದೆ. ಸರ್ಕಾರ ಬದಲಾದರೂ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆ ಆಗದಂತೆ ಜಾಗ್ರತೆ ವಹಿಸಲಾಗುವುದು. ಜಿಲ್ಲೆಗೆ ಹೊಸದಾಗಿ .220 ಕೋಟಿ ವೆಚ್ಚದಲ್ಲಿ 280 ಬಿಎಸ್‌ಎನ್‌ಎಲ್ ಟವರ್ ಮಂಜೂರಾಗಿವೆ. ಇದರಿಂದ ಬೈಂದೂರು, ಹೊಸನಗರ, ತೀರ್ಥಹಳ್ಳಿಯಲ್ಲಿನ ನೆಟ್ವರ್ಕ್ ಸಮಸ್ಯೆಗೆ ಪರಿಹಾರ ಸಿಗಲಿದೆ. ಶಿಕಾರಿಪುರ ತಾಲೂಕಿಗೆ 30 ಟವರ್ ಮಂಜೂರಾಗಿವೆ ಎಂದು ತಿಳಿಸಿದರು.
Chamarajanagar: ತಾತ, ಅಪ್ಪನಂತೆ ಸೋಲದೆ ಗೆದ್ದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್!
ಕಾರ್ಯಕರ್ತರು, ಮುಖಂಡರು ಹಗಲು- ರಾತ್ರಿ ಶ್ರಮ ವಹಿಸಿದ ಪರಿಣಾಮ ವಿಜಯೇಂದ್ರ ದೊಡ್ಡ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಶೀಘ್ರದಲ್ಲಿಯೇ ತಾಲೂಕು ಕಚೇರಿ ಆವರಣದಲ್ಲಿ ಶಾಸಕರ ಕಚೇರಿ ತೆರೆದು ಸ್ಥಳದಲ್ಲಿಯೇ ಆಹವಾಲು ಸ್ವೀಕರಿಸಿ, ಜನರ ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ. ಬರಲಿರುವ ತಾ.ಪಂ, ಜಿ.ಪಂ. ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ಪಕ್ಷ ಹೆಚ್ಚಿನ ಸ್ಥಾನ ಗಳಿಸುವ ರೀತಿ ಕಾರ್ಯನಿರ್ವಹಿಸಬೇಕಿದೆ. ಕಾರ್ಯಕರ್ತರು, ಮುಖಂಡರು ಚುನಾವಣೆಯಲ್ಲಿ ಗೆಲುವಿಗೆ ದೊಡ್ಡ ಶಕ್ತಿಯಾಗಿದ್ದಾರೆ
- ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ