ಮಳೆಗಾಲ ಎದುರಿಸಲು ಕೊಡಗು ಜಿಲ್ಲಾಡಳಿತ ಸಿದ್ಧತೆ: ಜೂನ್ 1ರ ಬಳಿಕ ಎನ್‌ಡಿಆರ್‌ಎಫ್ ತಂಡ ಆಗಮನ
ಮುಂಗಾರಿಗೂ ಮುನ್ನವೇ ರಾಜ್ಯದಲ್ಲಿ ಮಳೆ ಅಬ್ಬರಿಸುತ್ತಿದ್ದರೆ, ಇತ್ತ ಜೂನ್ 4 ರಂದು ಮುಂಗಾರು ಕೊಡಗು ಜಿಲ್ಲೆಯನ್ನು ಪ್ರವೇಶಿಸಲಿದೆ. ಕಳೆದ ಐದು ವರ್ಷಗಳಿಂದ ಮುಂಗಾರಿನ ಸಂದರ್ಭದಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರವಾಹ, ಭೂಕುಸಿತ ಆಗುವುದು ಸಾಮಾನ್ಯ ಎನ್ನುವಂತೆ ಆಗಿದೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಮೇ.22): ಮುಂಗಾರಿಗೂ ಮುನ್ನವೇ ರಾಜ್ಯದಲ್ಲಿ ಮಳೆ ಅಬ್ಬರಿಸುತ್ತಿದ್ದರೆ, ಇತ್ತ ಜೂನ್ 4 ರಂದು ಮುಂಗಾರು ಕೊಡಗು ಜಿಲ್ಲೆಯನ್ನು ಪ್ರವೇಶಿಸಲಿದೆ. ಕಳೆದ ಐದು ವರ್ಷಗಳಿಂದ ಮುಂಗಾರಿನ ಸಂದರ್ಭದಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರವಾಹ, ಭೂಕುಸಿತ ಆಗುವುದು ಸಾಮಾನ್ಯ ಎನ್ನುವಂತೆ ಆಗಿದೆ. ಹೀಗಾಗಿ ಪ್ರತೀ ವರ್ಷ ಮಳೆಗಾಲಕ್ಕೂ ಒಂದು ತಿಂಗಳು ಮೊದಲೇ ಕೊಡಗು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸುತ್ತಿತ್ತು. ಒಂದು ವೇಳೆ ಪ್ರವಾಹ, ಭೂಕುಸಿತಗಳಾದರೆ ಜನರನ್ನು ರಕ್ಷಿಸುವುದು ಹೇಗೆ ಎಂಬುದರ ಬಗ್ಗೆ ಪೂರ್ವ ತರಬೇತಿ ಕೂಡ ನಡೆಯುತ್ತಿತ್ತು.
ಆದರೆ ಈ ಬಾರಿ ಚುನಾವಣೆ ಇದ್ದಿದ್ದರಿಂದ ಇದುವರೆಗೆ ಯಾವುದೇ ಸಿದ್ಧತೆ ನಡೆಸದ ಜಿಲ್ಲಾಡಳಿತ, ಕೊನೆಗೂ ಸೋಮವಾರ ಕಂದಾಯ, ವಿದ್ಯುತ್, ಲೋಕೋಪಯೋಗಿ, ಪೊಲೀಸ್ ಮತ್ತು ಅಗ್ನಿ ಶಾಮಕ ದಳ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಎಲ್ಲಾ ಸಿದ್ಧತೆ ಕೈಗೊಳ್ಳುವಂತೆ ಸೂಚಿಸಿದೆ. ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ಮತ್ತು ಅಪರ ಜಿಲ್ಲಾಧಿಕಾರಿ ಡಾ. ನಂಜುಂಡೇಗೌಡ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಲ್ಲಾ ನಗರ, ಪಟ್ಟಣ ಮತ್ತು ಗ್ರಾಮೀಣ ಭಾಗವೂ ಸೇರಿದಂತೆ ಎಲ್ಲೆಡೆ ಸರಾಗವಾಗಿ ಮಳೆ ನೀರು ಹರಿಯುವಂತೆ ನೋಡಿಕೊಳ್ಳುವಂತೆ, ಅದಕ್ಕಾಗಿ ಸ್ವಚ್ಛತೆ ಕೈಗೊಳ್ಳುವಂತೆ ಪಂಚಾಯಿತಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ.
ಕೊಟ್ಟ ಮಾತನ್ನು ಉಳಿಸಿಕೊಳ್ಳುವೆ: ಸಚಿವ ಮುನಿಯಪ್ಪ
ಇನ್ನು ಜಿಲ್ಲೆಯಲ್ಲಿ ಪ್ರವಾಹ ಅಥವಾ ಭೂಕುಸಿತವಾಗುವ ಸಾಧ್ಯತೆಯೂ ಇದ್ದು ಅದರ ನಿರ್ವಹಣೆಗಾಗಿ ಜೂನ್ 1 ರ ನಂತರ ಎನ್ಡಿಆರ್ಎಫ್ ತಂಡ ಕೊಡಗಿಗೆ ಬಂದು ಬೀಡು ಬಿಡಲಿದೆ. ಕಳೆದ ವರ್ಷ ನಾವು ಗುರುತ್ತಿಸಿದ್ದ ಸ್ಥಳಗಳಲ್ಲದೆ ಬೇರೆ ನಾಲ್ಕೈದು ಸ್ಥಳಗಳಲ್ಲಿ ಭೂಕುಸಿತವಾಗಿತ್ತು. ಒಂದು ವೇಳೆ ಈ ಬಾರಿಯೂ ಆ ರೀತಿ ಆದಲ್ಲಿ ಅದನ್ನು ನಿಭಾಯಿಸಲು ನಾವು ಸಿದ್ಧವಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ್ ಹೇಳಿದ್ದಾರೆ. ಜಿಲ್ಲೆಯಲ್ಲಿ ಭೂಕುಸಿತದ ಜೊತೆಗೆ ಪ್ರವಾಹವೂ ನಾಲ್ಕೈದು ವರ್ಷಗಳಿಂದ ಎದುರಾಗುತ್ತಿದೆ. ಪರಿಣಾಮ ಭಾಗಮಂಡಲದಿಂದ ಕುಶಾಲನಗರದವರೆಗೆ ಕಾವೇರಿ ನದಿ ದಂಡೆಯಲ್ಲಿ ಇರುವ ಹತ್ತಾರು ಹಳ್ಳಿ, ಪಟ್ಟಣಗಳು ಪ್ರವಾಹ ಎದುರಿಸುತ್ತಿವೆ.
ಈ ಗ್ರಾಮಗಳ ಹಲವಾರು ಬಡಾವಣೆಗಳು ಮುಳುಗಿ ನೂರಾರು ಕುಟುಂಬಗಳು ಕಾಳಜಿ ಕೇಂದ್ರಗಳನ್ನು ಸೇರಿದ್ದವು. ಈ ವರ್ಷವೂ ಮತ್ತೆ ಅಂತಹದ್ದೇ ಪರಿಸ್ಥಿತಿ ಎದುರಾಗಬಹುದು ಎನ್ನುವ ಆತಂಕವಿದ್ದು, ಈಗಾಗಲೇ ಮಡಿಕೇರಿ ನಗರದಲ್ಲಿರುವ ಗಾಂಧಿ ಭವನ, ರೆಡ್ ಕ್ರಾಸ್ ಭವನ, ಜಿಲ್ಲಾ ತರಬೇತಿ ಸಂಸ್ಥೆ ಕಟ್ಟಡಗಳಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಲಾಗಿದೆ. ಮತ್ತೊಂದೆಡೆ ಬರೀ ಬೆಟ್ಟಗುಡ್ಡಗಳಿಂದಲೇ ಕೂಡಿರುವ ಮಡಿಕೇರಿ ನಗರದಲ್ಲಿಯೇ ನಾಲ್ಕೈದು ಬಡಾವಣೆಯನ್ನು ಭೂಕುಸಿತ ಪ್ರದೇಶಗಳೆಂದು ಗುರುತ್ತಿಸಲಾಗಿದೆ. ಇಂದಿರಾನಗರ, ಚಾಮುಂಡೇಶ್ವರಿ ನಗರ, ಮಲ್ಲಿಕಾರ್ಜುನ ನಗರ ಸೇರಿದಂತೆ ಹಲವು ಪ್ರದೇಶಗಳು ಭೂಕುಸಿತವಾಗುವ ಸಾಧ್ಯತೆ ಇರುವ ಪ್ರದೇಶಗಳೆಂದು ಗುರುತ್ತಿಸಲಾಗಿದೆ.
Chamarajanagar: ಕುಟುಂಬ ರಾಜಕಾರಣದಲ್ಲಿ ಗೆದ್ದು ಬೀಗಿದ ಶಾಸಕ ಮಂಜುನಾಥ್
ಈ ಪ್ರದೇಶಗಳ 210 ಕುಟುಂಬಗಳಿಗೆ ಈಗಾಗಲೇ ಪುನರ್ವಸತಿ ಕಲ್ಪಿಸಿ ಅಲ್ಲಿಂದ ಶಾಶ್ವತವಾಗಿ ಸ್ಥಳಾಂತರ ಮಾಡಿದ್ದೇವೆ. ಇನ್ನು ಅಲ್ಲಿಯೇ ವಾಸಿಸುತ್ತಿರುವ ಕುಟುಂಬಗಳಿಗೆ ಇನ್ನೆರಡು ಮೂರು ದಿನಗಳಲ್ಲಿ ನೋಟಿಸ್ ನೀಡಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗುವುದು ಎಂದು ನಗರಸಭೆ ಆಯುಕ್ತ ವಿಜಯ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಜೂನ್ ನಾಲ್ಕರಿಂದ ಕಾಲಿಡಲಿರುವ ಮುಂಗಾರು ಏನು ಅವಾಂತರ ಸೃಷ್ಟಿಸುವುದೋ ಕಾದು ನೋಡಬೇಕಾಗಿದೆ.