ಪ್ರತಾಪ್‌ ಸಿಂಹ ಅವರು ಮೊದಲು ಮೋದಿ ಅವರಿಂದ ಎಲ್ಲರ ಖಾತೆಗೂ 15 ಲಕ್ಷ ಹಾಕಿಸಲಿ. ರಾಜ್ಯಕ್ಕೆ ಬರಬೇಕಿರುವ ಅನುದಾನ ತರಲಿ ಎಂದು ತಿರುಗೇಟು ನೀಡಿದ ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್‌ಗೌಡ 

ಮೈಸೂರು(ಮೇ.27): ನಾವು ಯಾವುದೇ ಸುಳ್ಳು ಭರವಸೆಗಳನ್ನು ನೀಡಿಲ್ಲ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಜಾರಿಗೆ ಬದ್ಧವಾಗಿದೆ. ಇದಕ್ಕೆ ಯಾರ ಗಡುವೂ ಬೇಕಿಲ್ಲ. ಅವರು ನೀಡಿರುವ ಗಡುವಿಗಿಂತ ಮೊದಲೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದು ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್‌ಗೌಡ ತಿಳಿಸಿದರು.

ಸಂಸದ ಪ್ರತಾಪ್‌ ಸಿಂಹ ಗ್ಯಾರಂಟಿ ಯೋಜನೆಗಳ ಜಾರಿಗೆ ಜೂ.1ರ ಗಡುವು ನೀಡಿರುವುದರ ಕುರಿತು ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಏನನ್ನೂ ಮಾಡಲಿಲ್ಲ. ಕೇವಲ ಕೋಮು ದ್ವೇಷ ಕೆರಳಿಸುವ ಕೆಲಸ ಮಾಡಿದರು. ಕಾಂಗ್ರೆಸ್‌ ಅಭಿವೃದ್ಧಿ ಪರವಾಗಿದ್ದು, ಅಭಿವೃದ್ಧಿ ಯೋಜನೆಗಳಿಗೆ ರಾಜಕೀಯ ಮಾಡದೆ ಸಹಕಾರ ನೀಡುತ್ತೇವೆ. ಪ್ರತಾಪ್‌ ಸಿಂಹ ಅವರು ಮೊದಲು ಮೋದಿ ಅವರಿಂದ ಎಲ್ಲರ ಖಾತೆಗೂ 15 ಲಕ್ಷ ಹಾಕಿಸಲಿ. ರಾಜ್ಯಕ್ಕೆ ಬರಬೇಕಿರುವ ಅನುದಾನ ತರಲಿ ಎಂದು ತಿರುಗೇಟು ನೀಡಿದರು.

ನಾನು ಕೆಲಸಕ್ಕಾಗಿ ಯಾರ ಕಾಲು ಬೇಕಾದ್ರೂ ಹಿಡೀತೀನಿ: ಸಂಸದ ಪ್ರತಾಪ್‌ಸಿಂಹ

ಮಾಜಿ ಸಚಿವ ಡಾ. ಅಶ್ವತ್ಥನಾರಾಯಣ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂಬ ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಯಾವುದೇ ದ್ವೇಷ ರಾಜಕಾರಣ ಮಾಡುತ್ತಿಲ್ಲ. ಪೊಲೀಸರು ಇಷ್ಟುದಿನ ಮಲಗಿದ್ದರು. ಈಗ ಅವರನ್ನು ಎಬ್ಬಿಸಿದ್ದೇವೆ. ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎಂದು ಹೇಳಿಕೆ ನೀಡಿದ್ದರೂ ಪೊಲೀಸರು ಎಫ್‌ಐಆರ್‌ ದಾಖಲಿಸಿರಲಿಲ್ಲ. ಈಗ ಕಾನೂನಾತ್ಮಕವಾಗಿ ಪ್ರಕರಣ ದಾಖಲಿಸಿದ್ದೇವೆ ಎಂದರು.

ಮೂವರಿಗೆ ಸಚಿವ ಸ್ಥಾನ ಕೊಡಿ

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆದರೆ, ನಮ್ಮ ಪಕ್ಷದ ಹಿರಿಯ ಶಾಸಕರಾಗಿರುವ ಡಾ.ಎಚ್‌.ಸಿ. ಮಹದೇವಪ್ಪ, ತನ್ವೀರ್‌ ಸೇಠ್‌, ಕೆ. ವೆಂಕಟೇಶ್‌ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸುತ್ತೇನೆ ಎಂದು ಶಾಸಕ ಕೆ. ಹರೀಶ್‌ಗೌಡ ತಿಳಿಸಿದರು.

ನಾಯಕತ್ವ ಬದಲಾವಣೆ ವಿಚಾರ, ಅಧಿಕಾರ ಹಂಚಿಕೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಹೈಕಮಾಂಡ್‌ ಮಟ್ಟದಲ್ಲಿ ಏನು ಮಾತುಕತೆ ನಡೆದಿದೆ ಎಂಬುದು ನನಗೆ ಗೊತ್ತಿಲ್ಲ. ಮುಂದಿನ 20 ವರ್ಷ ನಮ್ಮ ಪಕ್ಷದ ಸರ್ಕಾರವೇ ಇರುತ್ತದೆ. ಗ್ಯಾರಂಟಿ ಯೋಜನೆಗಳನ್ನು ಖಂಡಿತವಾಗಿಯೂ ಜಾರಿಗೊಳಿಸುತ್ತೇವೆ. ನಮ್ಮಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಬಣ ಅಂತೇನಿಲ್ಲ. ನಮ್ಮದೇನಿದ್ದರೂ ಕಾಂಗ್ರೆಸ್‌ ಪಕ್ಷದ ಬಣ ಎಂದರು.