ಕಾವೇರಿ ವಿಚಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ: ವಿಜಯೇಂದ್ರ
ಕಾವೇರಿಯ ಹೋರಾಟ ದಿನೇ ದಿನೇ ಹೆಚ್ಚಾಗುತ್ತಿದೆ. ಕಾವೇರಿ ವಿಚಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಶಾಸಕ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಶಿವಮೊಗ್ಗ (ಸೆ.24): ಕಾವೇರಿಯ ಹೋರಾಟ ದಿನೇ ದಿನೇ ಹೆಚ್ಚಾಗುತ್ತಿದೆ. ಕಾವೇರಿ ವಿಚಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಶಾಸಕ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ರಾಜ್ಯ ಸರ್ಕಾರ ವೈಫಲ್ಯ ಕಾಣುತ್ತಿದೆ. ಇದರ ಪರಿಣಾಮ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯ ಸಿಗದ ಸಂದರ್ಭ ಸೃಷ್ಟಿ ಆಗಿದೆ. ಕಾವೇರಿ ಕಣಿವೆ ಹೋರಾಟದ ರೈತರು ಸಹ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ನಡುವೆಯೂ ಸುಪ್ರೀಂ ಕೋರ್ಟ್ ನಲ್ಲಿ ನಮಗೆ ಹಿನ್ನಡೆಯಾಗಿದೆ.
ಇದು ಈ ಭಾಗದ ರೈತರಿಗೆ ದೊಡ್ಡ ಆಘಾತವಾಗಿದೆ ಎಂದರು. ಬೆಂಗಳೂರಿನಲ್ಲಿ ಬಿಜೆಪಿ ಸಹ ರಾಜ್ಯ ಸರ್ಕಾರ ವಿರುದ್ಧ ಹೋರಾಟ ಕೈಗೊಂಡಿದೆ. ನ್ಯಾಯ ಸಿಗುವವರೆಗೂ ನಾವು ನಮ್ಮ ಹೋರಾಟ ನಡೆಸುತ್ತೇವೆ. ರೈತರು ಒಂದು ಕಡೆ ಬೆಂಗಳೂರು ಬಂದ್ ಕರೆ ಕೊಟ್ಟಿದ್ದಾರೆ. ಮಂಡ್ಯದಲ್ಲಿ ಹೋರಾಟ ನಡೆಯುತ್ತಿದೆ. ರಾಜ್ಯದ ಬೇರೆ ಬೇರೆ ಕಡೆ ಹೋರಾಟ ನಡೆಯುತ್ತಿದೆ. ಆದರೆ, ರಾಜ್ಯ ಸರ್ಕಾರ, ಮಂತ್ರಿಗಳು ಹೋರಾಟದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಐದು ಡಿಸಿಎಂ, ಆರು ಡಿಸಿಎಂ ಆಗಬೇಕು ಅಂತ ತಲೆಕೆಡಿಸಿಕೊಂಡಿದೆ ಎಂದು ಹರಿಹಾಯ್ದರು.
ಕಾವೇರಿ ನೀರು ಬಿಡದಿದ್ದರೆ ನ್ಯಾಯಾಂಗ ನಿಂದನೆಯಾಗದು: ಎಚ್.ಡಿ.ಕುಮಾರಸ್ವಾಮಿ
ಜೆಡಿಎಸ್‌ನೊಂದಿಗೆ ಮೈತ್ರಿ ಸ್ವಾಗತಾರ್ಹ: ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತವನ್ನು ವಿಶ್ವ ಗುರುವನ್ನಾಗಿ ಮಾಡುವ ಕನಸು ಹೊಂದಿದ್ದಾರೆ. ಈ ಕನಸು ನನಸು ಮಾಡಲು ರಾಜ್ಯ ಹಾಗೂ ದೇಶದ ಭವಿಷ್ಯದ ದೃಷ್ಟಿಯಿಂದ ಜೆಡಿಎಸ್ ಎನ್‌ಡಿಎ ತೆಕ್ಕೆಗೆ ಬಂದಿರೋದು ಸ್ವಾಗತಾರ್ಹ. ಜೆಡಿಎಸ್‌ನೊಂದಿಗೆ ಮೈತ್ರಿಯನ್ನು ಬಿಜೆಪಿಯ ಎಲ್ಲಾ ನಾಯಕರು ಸ್ವಾಗತ ಮಾಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತ.ನಾಡು ಏಜೆಂಟ್ ರೀತಿ ಕಾಂಗ್ರೆಸ್ ವರ್ತನೆ: ಕಾಂಗ್ರೆಸ್ ಪಕ್ಷ ತಮಿಳುನಾಡಿನ ಏಜೆಂಟ್ ರೀತಿ ವರ್ತಿಸುತ್ತಿದೆ. ಸುಪ್ರೀಂ ಕೋರ್ಟ್ ಹೇಳುವ ಮೊದಲೇ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿದ್ದು ಅಕ್ಷಮ್ಯ ಅಪರಾಧ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ. ಕಾವೇರಿ ನೀರಿನ ವಿಚಾರ ಸೇರಿದಂತೆ ವಿವಿಧ ರಂಗಗಳಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಶನಿವಾರ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಕಾವೇರಿ ಜಲಾನಯನ ಪ್ರದೇಶದ ಯಾವುದೇ ಜಲಾಶಯಗಳಲ್ಲಿ ನೀರು ಇಲ್ಲ.
ಸುಪ್ರೀಂ ಕೋರ್ಟ್ ತಜ್ಞರ ಸಮಿತಿಯನ್ನು ಕಳುಹಿಸಿ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಎಷ್ಟು ನೀರಿದೆ ಎಂಬುದನ್ನು ನೋಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡುವಲ್ಲಿ ವಿಫಲರಾಗಿದ್ದಾರೆ. ಕಾಂಗ್ರೆಸ್ ಪಕ್ಷ ತಮಿಳುನಾಡಿನ ಏಜೆಂಟ್‌ನಂತೆ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ಲೋಕಸಭೆಗಷ್ಟೇ ಅಲ್ಲ, ದೀರ್ಘಾವಧಿಗೆ: ಎಚ್‌ಡಿಕೆ
ತಮಿಳುನಾಡಿಗೆ ನೀರು ಬಿಡುವುದರಿಂದ ಬೆಂಗಳೂರು ಮತ್ತು ಮೈಸೂರಿಗೆ ಕುಡಿಯುವ ನೀರಿಗೆ ಅಭಾವವಾಗಲಿದೆ. ಆದರೂ ರಾಜ್ಯ ಸರ್ಕಾರ ತಮಿಳುನಾಡಿಗೆ ಹಗಲು-ರಾತ್ರಿ ಕಾವೇರಿ ನೀರು ಬಿಟ್ಟು ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಈ ಮೂಲಕ ತಮಿಳುನಾಡನ್ನು ಸಂತುಷ್ಟಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಯೋಗ್ಯತೆ ಇದ್ದರೆ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ, ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಆಗ್ರಹಿಸಿದರು.