Asianet Suvarna News Asianet Suvarna News

ಕಾವೇರಿ ನೀರು ಬಿಡದಿದ್ದರೆ ನ್ಯಾಯಾಂಗ ನಿಂದನೆಯಾಗದು: ಎಚ್‌.ಡಿ.ಕುಮಾರಸ್ವಾಮಿ

ಸುಪ್ರೀಂ ಕೋರ್ಟ್‌ ಆದೇಶದಂತೆ ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯುಸೆಕ್‌ ನೀರನ್ನು ಹರಿಸದಿದ್ದರೆ ಸರ್ಕಾರ ನ್ಯಾಯಾಂಗ ನಿಂದನೆಗೆ ಗುರಿಯಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. 

Former CM HD Kumaraswamy React On Cauvery Water Issue At Mandya gvd
Author
First Published Sep 24, 2023, 12:59 PM IST

ಮಂಡ್ಯ (ಸೆ.24): ಸುಪ್ರೀಂ ಕೋರ್ಟ್‌ ಆದೇಶದಂತೆ ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯುಸೆಕ್‌ ನೀರನ್ನು ಹರಿಸದಿದ್ದರೆ ಸರ್ಕಾರ ನ್ಯಾಯಾಂಗ ನಿಂದನೆಗೆ ಗುರಿಯಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಡೆಯುತ್ತಿರುವ ಕಾವೇರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ಪಾಲಿಸಲು ಸಾಧ್ಯವಾಗದ ಆದೇಶವನ್ನು ಪಾಲಿಸದಿದ್ದರೆ ಅದು ನ್ಯಾಯಾಂಗ ನಿಂದನೆ ಎಂದು ಹೇಳಲಾಗುವುದಿಲ್ಲ ಎಂದು ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಾದ ಉದಯ್‌ ಲಲಿತ್‌ ಸೆ.20, 2016ರಲ್ಲಿ ತೀರ್ಪು ನೀಡಿದ್ದಾರೆ. ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯುಸೆಕ್‌ ನೀರು ಬಿಡುವಂತೆ ಆದೇಶಿಸಿರುವುದು ಪಾಲಿಸಲಾಗದ ಆದೇಶ. ಹಾಗಾಗಿ ನೀರು ಬಿಡದಿದ್ದರೆ ನ್ಯಾಯಾಂಗ ನಿಂದನೆಯಾಗದು. ಈ ಪ್ರಕರಣಕ್ಕೂ ತೀರ್ಪು ಅನ್ವಯವಾಗಲಿದೆ ಎಂದರು.

ಕಾನೂನು ತಜ್ಞರ ಸಮಿತಿ ರಚಿಸಿ: ನೀರಾವರಿ ವಿಷಯಕ್ಕೆ ಸಂಬಂಧಿಸಿದಂತೆ ಮುಂದೆ ಯಾವ ರೀತಿ ಕಾನೂನು ಹೋರಾಟ ನಡೆಸಬೇಕು ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಮುಖ್ಯ ನ್ಯಾಯಾಧೀಶರಾಗಿ ನಿವೃತ್ತರಾಗಿರುವ ನಮ್ಮ ರಾಜ್ಯದ ಮೂರು ಮಂದಿ ಹಾಗೂ 6 ಜನ ಅಡ್ವೋಕೇಟ್‌ ಜನರಲ್‌ ಅವರನ್ನೊಳಗೊಂಡ ಸಮಿತಿ ರಚಿಸಿ ಸಲಹೆ-ಸೂಚನೆ ಪಡೆಯುವಂತೆ ಸರ್ಕಾರಕ್ಕೆ ಸಲಹೆ ನೀಡಿದರು. ಕಾಂಗ್ರೆಸ್‌ ಸರ್ಕಾರ ಕಾನೂನು ತಜ್ಞರನ್ನಾಗಿ ಇಟ್ಟುಕೊಂಡಿರುವವರನ್ನು ಆ ದೇವರೇ ಕಾಪಾಡಬೇಕು. ಅವರೆಲ್ಲ ಏನು ಅಧ್ಯಯನ ಮಾಡಿದ್ದಾರೆ. ನೀರಾವರಿ ಅಧಿಕಾರಿಗಳೂ ಸರಿಯಾದ ಮಾಹಿತಿ ಕೊಡುತ್ತಿಲ್ಲ. ಸರ್ಕಾರವೂ ಸಮರ್ಥ ವಾದ ಮಂಡಿಸುವ ತಜ್ಞರನ್ನು ಇಟ್ಟುಕೊಂಡಿಲ್ಲ. ಇವೆಲ್ಲವೂ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗಲು ಕಾರಣವಾಗಿದೆ ಎಂದು ದೂರಿದರು.

ಬಿಜೆಪಿ-ಜೆಡಿಎಸ್‌ ಮೈತ್ರಿ ಲೋಕಸಭೆಗಷ್ಟೇ ಅಲ್ಲ, ದೀರ್ಘಾವಧಿಗೆ: ಎಚ್‌ಡಿಕೆ

ಅಧಿಕಾರಿಗಳ ಬೇಜವಾಬ್ದಾರಿತನ: ಕಾವೇರಿ ನೀರು ನಿಯಂತ್ರಣ ಸಮಿತಿಯವರು ಮೊದಲ ಬಾರಿಗೆ ಸಭೆ ಸೇರಿದಾಗ ತಮಿಳುನಾಡಿನ 15 ಮಂದಿ ಅಧಿಕಾರಿಗಳು ಸಮಗ್ರ ಮಾಹಿತಿಯನ್ನಿಟ್ಟುಕೊಂಡು ಸಭೆಗೆ ಹಾಜರಾದರೆ, ನಮ್ಮ ಅಧಿಕಾರಿಗಳು ಬೆರಳಣಿಕೆಯಷ್ಟು ಮಂದಿ ಪಾಲ್ಗೊಂಡಿದ್ದರು. ಪ್ರಾಧಿಕಾರದ ಸಭೆಗೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಭಾಗವಹಿಸುತ್ತಾರೆ. ರಾಜ್ಯದ ನೀರಿನ ವಿಚಾರದಲ್ಲಿ ಇಷ್ಟೊಂದು ಬೇಜವಾಬ್ದಾರಿತನ ತೋರಿದರೆ ರೈತರಿಗೆ ಅನ್ಯಾಯವಾಗದೆ ಇನ್ನೇನಾಗಲಿದೆ ಎಂದು ಖಾರವಾಗಿ ಪ್ರಶ್ನಿಸಿದರು.

ತಮಿಳುನಾಡು 1,80,000 ಎಕರೆ ಕೃಷಿ ಪ್ರದೇಶಕ್ಕೆ ಮಾತ್ರ ನೀರನ್ನು ಬಳಸಿಕೊಳ್ಳಬೇಕು. ಆದರೆ, 4 ಲಕ್ಷ ಎಕರೆಗೂ ಮೀರಿ ನೀರನ್ನು ಬಳಸುತ್ತಿದ್ದಾರೆ. ಇದನ್ನು ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡೆವಿಟ್‌ನಲ್ಲಿ ದಾಖಲಿಸಿಲ್ಲ. ಪ್ರಾಧಿಕಾರದವರು ಏರ್‌ ಕಂಡೀಷನ್‌ ರೂಮ್‌ನಲ್ಲಿ ಕುಳಿತುಕೊಂಡು ಆದೇಶ ಮಾಡುವುದಲ್ಲ. ಸರ್ಕಾರ ಈ ಆದೇಶವನ್ನು ಪ್ರತಿಭಟಿಸಬೇಕಿತ್ತು. ನಮ್ಮ ರಾಜ್ಯದಲ್ಲಿರುವ ನೀರಿನ ಪರಿಸ್ಥಿತಿ ಏನಿದೆ. ತಮಿಳುನಾಡಿನಲ್ಲಿ ಕಾನೂನುಬಾಹೀರವಾಗಿ ಏನೆಲ್ಲಾ ಚಟುವಟಿಕೆ ಮಾಡಿದ್ದಾರೆ. ಇವೆಲ್ಲವನ್ನೂ ಕುಳಿತು ಮಾಹಿತಿ ಒದಗಿಸದೆ ಪ್ರತಿ ಬಾರಿಯೂ ಪ್ರಾಧಿಕಾರ ಆದೇಶಿಸಿದೆ, ಸುಪ್ರೀಂ ಕೋರ್ಟ್‌ ಮುಂದೆ ಹೋಗಬೇಕು ಎಂಬ ನೆಪ ಹೇಳಿಕೊಂಡು ಎಷ್ಟು ವರ್ಷ ನೀರು ಹರಿಸುತ್ತೀರಿ ಎಂದು ಪ್ರಶ್ನಿಸಿದರು.

ಸಂಕಷ್ಟ ಸೂತ್ರಕ್ಕೆ ಅಂದೇ ಒತ್ತಾಯಿಸಿದ್ದೆ: 2007ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ನ್ಯಾಯ ಮಂಡಳಿ ಅಂತಿಮ ತೀರ್ಪು ಹೊರಬಿದ್ದಾಗ ನೀರು ಹಂಚಿಕೆ ಸಮರ್ಪಕವಾಗಿಲ್ಲ ಎಂದು ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಿದ್ದೆ. 2018ರಲ್ಲಿ ಮತ್ತೆ ನಾನೇ ಮುಖ್ಯಮಂತ್ರಿಯಾಗಿದ್ದಾಗ 14.75 ಟಿಎಂಸಿ ನೀರು ರಾಜ್ಯಕ್ಕೆ ಹೆಚ್ಚುವರಿಯಾಗಿ ಸಿಕ್ಕಿತ್ತು. ಆ ವೇಳೆ ಸುಪ್ರೀಂ ಕೋರ್ಟ್‌ ಇನ್ನು ಮುಂದೆ ಜಲವಿವಾದಕ್ಕೆ ಸಂಬಂಧಿಸಿದಂತೆ ವ್ಯಾಜ್ಯವನ್ನು ನನ್ನ ಮುಂದೆ ತರಬೇಡಿ. ಪ್ರಾಧಿಕಾರದ ಮುಂದೆ ಹೋಗುವಂತೆ ತಿಳಿಸಿತ್ತು. ಆಗಲೂ ನಾನು ಪ್ರತಿಭಟನೆ ನಡೆಸಿದ್ದೆ. ಪ್ರಾಧಿಕಾರಕ್ಕೆ ಸದಸ್ಯರನ್ನೂ ಕಳುಹಿಸಿಕೊಡಲಿಲ್ಲ. ಸಂಕಷ್ಟ ಸೂತ್ರ ರಚನೆಯಾಗಿಲ್ಲ. ನಮಗೆ ನೀರಿನ ಮೇಲಿನ ಹಕ್ಕು ಇನ್ನೂ ಸಿಗಬೇಕು ಎಂದು ಹೋರಾಟ ನಡೆಸಿದ್ದೆ. ಆದರೆ, ಈ ಸರ್ಕಾರಕ್ಕೆ ರೈತರು, ಸಾಮಾನ್ಯ ಜನರ ಬಗ್ಗೆ ಕಾಳಜಿಯೇ ಇಲ್ಲದಂತೆ ವರ್ತಿಸುತ್ತಿದೆ ಎಂದು ದೂರಿದರು.

Aunty ಎಂದಿದ್ದಕ್ಕೆ ಸೆಕ್ಯೂರಿಟಿ ಗಾರ್ಡ್‌ಗೆ ಚಪ್ಪಲಿಯಿಂದ ಹಲ್ಲೆ ಮಾಡಿದ ಮಹಿಳೆ!

ಸಂಕಷ್ಟ ಸೂತ್ರದ ಬಗ್ಗೆ ಈಗ ಎಲ್ಲರೂ ಧ್ವನಿ ಎತ್ತುತ್ತಿದ್ದಾರೆ. ನಾನು ಅಂದೇ ಇದರ ಬಗ್ಗೆ ಹೋರಾಟ ನಡೆಸಿದ್ದೆ. ಈಗಲೂ ಸರ್ಕಾರ ಸಂಕಷ್ಟ ಸೂತ್ರ ರಚನೆಗೆ ಬಿಗಿಪಟ್ಟು ಹಿಡಿಯಬೇಕು. ನಮ್ಮಲ್ಲಿ ನೀರಿಲ್ಲ. ಒಂದು ಬೆಳೆ ಬೆಳೆಯಲಾಗದ ಸ್ಥಿತಿಯಲ್ಲಿದ್ದೇವೆ. ಸುಪ್ರೀಂ ಕೋರ್ಟ್‌ ಹೊರಡಿಸಿರುವ ಆದೇಶ ಪಾಲಿಸಲು ಸಾಧ್ಯವಾಗದಿರುವುದರಿಂದ ನೀರನ್ನು ಸ್ಥಗಿತಗೊಳಿಸಿ ಕಾನೂನು ಹೋರಾಟ ಮುಂದುವರೆಸುವಂತೆ ಸರ್ಕಾರಕ್ಕೆ ಸಲಹೆ ನೀಡಿದರು. ಶಾಸಕರಾದ ಜಿ.ಟಿ.ದೇವೇಗೌಡ, ಮುನಿರತ್ನ, ಮಾಜಿ ಶಾಸಕರಾದ ಸಿ.ಎಸ್‌.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ರವೀಂದ್ರ ಶ್ರೀಕಂಠಯ್ಯ, ಕೆ.ಸುರೇಶ್‌ಗೌಡ, ಡಾ.ಕೆ.ಅನ್ನದಾನಿ, ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಜಿ.ಬಿ.ಶಿವಕುಮಾರ್‌, ನಿಖಿಲ್‌ ಕುಮಾರಸ್ವಾಮಿ, ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ರಮೇಶ್‌, ಮನ್‌ಮುಲ್‌ ಮಾಜಿ ಅಧ್ಯಕ್ಷ ಬಿ.ಆರ್‌.ರಾಮಚಂದ್ರ ಸೇರಿದಂತೆ ಇತರರಿದ್ದರು.

Follow Us:
Download App:
  • android
  • ios