ಕಾವೇರಿ ವಿಚಾರದಲ್ಲಿ ರಾಜ್ಯದ ಸಂಸದರಿಗೆ ಮೋದಿ ಬಳಿ ಹೋಗಲು ಧೈರ್ಯವಿಲ್ಲ: ಸಚಿವ ತಂಗಡಗಿ
ಕಾವೇರಿ ವಿಚಾರದಲ್ಲಿ ಬಿಜೆಪಿಯವರು ನಾಟಕ ಮಾಡುತ್ತಿದ್ದು, ರಾಜ್ಯದ 25 ಸಂಸದರು ಪ್ರಧಾನಿ ನರೇಂದ್ರ ಮೋದಿ ಬಳಿ ಹೋಗಿ ಕೇಳುವ ಧೈರ್ಯ ಕಳೆದುಕೊಂಡಿದ್ದರಿಂದ ಈ ಸಮಸ್ಯೆ ಹೆಚ್ಚಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಕಾರಟಗಿ (ಸೆ.25): ಕಾವೇರಿ ವಿಚಾರದಲ್ಲಿ ಬಿಜೆಪಿಯವರು ನಾಟಕ ಮಾಡುತ್ತಿದ್ದು, ರಾಜ್ಯದ 25 ಸಂಸದರು ಪ್ರಧಾನಿ ನರೇಂದ್ರ ಮೋದಿ ಬಳಿ ಹೋಗಿ ಕೇಳುವ ಧೈರ್ಯ ಕಳೆದುಕೊಂಡಿದ್ದರಿಂದ ಈ ಸಮಸ್ಯೆ ಹೆಚ್ಚಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು. ಪಟ್ಟಣದಲ್ಲಿ ನೂತನ ಬಸ್ ನಿಲ್ದಾಣ ಕಾಮಗಾರಿಯನ್ನು ಭಾನುವಾರ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯದ ಹಿತಾಸಕ್ತಿ ವಿಚಾರವಾಗಿ ನಾಟಕ ಮಾಡುವುದು, ಪ್ರತಿಭಟನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ? ನಮಗೆ ನೀರಿಲ್ಲ.
ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಿ ಪ್ರಾಧಿಕಾರದವರನ್ನು ಕರೆದು ಮಾತನಾಡಿದರೆ ಸಮಸ್ಯೆ ಇತ್ಯರ್ಥವಾಗುತ್ತದೆ. ಆದರೆ ಬಿಜೆಪಿಯವರಿಗೆ ಇದು ಬೇಕಾಗಿಲ್ಲ. ಅವರಿಗೆ ಪ್ರತಿಭಟನೆ, ನಾಟಕ ಮಾಡುವುದು ಬೇಕಾಗಿದೆ ಎಂದರು. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ತೀರ್ಪನ್ನು ಪಾಲಿಸಬೇಕಾಗಿದೆ. ಸಂವಿಧಾನದಲ್ಲಿರುವ ಹಾದಿಯನ್ನೇ ರಾಜ್ಯ ಕಾಂಗ್ರೆಸ್ ಪಾಲಿಸುತ್ತಿದೆ. ರಾಜ್ಯದ ರೈತ ಸಂಘದವರು ಪ್ರತಿಭಟನೆ ಮಾಡುತ್ತಿದ್ದಾರೆ ಅದು ಸರಿ. ಆದರೆ, ಬಿಜೆಪಿಯವರು ಏಕೆ ಈ ನಾಟಕವಾಡುತ್ತಿದ್ದಾರೋ ಅರ್ಥವಾಗುತ್ತಿಲ್ಲ ಎಂದರು.
ಕಾವೇರಿ ನೀರು ಹರಿಸಿದ್ದು ಸರ್ಕಾರದ ತಪ್ಪು: ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ವಿಚಾರವಾಗಿ ಕಾಂಗ್ರೆಸ್ ಯಾವುದಕ್ಕೂ ಕುಗ್ಗುತ್ತಿಲ್ಲ, ಭಯಪಟ್ಟಿಲ್ಲ. ಜೆಡಿಎಸ್ ಯಾವ ಮುಖ ಇಟ್ಟುಕೊಂಡು ಬಿಜೆಪಿಯೊಂದಿಗೆ ಈ ಸ್ನೇಹ ಬೆಳೆಸಿದೆಯೋ ಗೊತ್ತಿಲ್ಲ. ಈ ಹಿಂದೆ ಕೋಮುವಾದಿ ಎಂದು ಬಿಜೆಪಿಯವರನ್ನು ಜರಿದಿದ್ದ ಜೆಡಿಎಸ್ ಈಗ ಮೈತ್ರಿ ಮಾಡಿಕೊಂಡರೆ ಈ ರಾಜ್ಯದ ಜನರು ಒಪ್ಪುತ್ತಾರೆ ಎನ್ನುವುದು ಸುಳ್ಳು ಎಂದು ತಂಗಡಗಿ ಹೇಳಿದರು. ಮುಂದಿನ ಲೋಕಸಭೆ ಚುನಾವಣೆ ವಿಚಾರವಾಗಿ ಪಕ್ಷ ತಮ್ಮನ್ನು ಬೆಳಗಾವಿ ಜಿಲ್ಲೆ ಉಸ್ತುವಾರಿಯನ್ನಾಗಿ ನೇಮಿಸಿದ್ದು, ಮುಂದಿನ ವಾರ ಬೆಳಗಾವಿಯಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆ ಕುರಿತು ಸಭೆ ಕರೆದಿರುವೆ ಎಂದರು.
ಕಾವೇರಿ ವಿಷಯದಲ್ಲಿ ದೊಡ್ಡ ಕಾನೂನು ಹೋರಾಟ ಅಗತ್ಯ: ದರ್ಶನ್ ಪುಟ್ಟಣ್ಣಯ್ಯ
ಇಂದಿರಾ ಕ್ಯಾಂಟೀನ್: ಕಾರಟಗಿ, ಕನಕಗಿರಿ ಪಟ್ಟಣಗಳಿಗೆ ಇಂದಿರಾ ಕ್ಯಾಂಟೀನ್ ಮಂಜೂರಾಗಿದೆ. ಇಷ್ಟರಲ್ಲಿಯೇ ಕ್ಯಾಂಟೀನ್ ಪ್ರಾರಂಭವಾಗಲಿದೆ. ಅದಕ್ಕಾಗಿ ಕಾರಟಗಿಯಲ್ಲಿ ಎಲ್ಲಿ ಸ್ಥಾಪಿಸಬೇಕೆಂಬುದನ್ನು ನಿರ್ಧರಿಸಲು ಸ್ಥಳ ಪರಿಶೀಲನೆ ಮಾಡಿರುವೆ ಎಂದರು. ಇನ್ನು ಕಾರಟಗಿಯಲ್ಲಿ ನೂತನವಾಗಿ ನಿರ್ಮಾಣವಾದ ಬಸ್ ನಿಲ್ದಾಣದ ಕಟ್ಟಡವನ್ನು ಸಚಿವ ತಂಗಡಗಿ ಪರಿಶೀಲಿಸಿದರು. ಸಾರಿಗೆ ಸಂಸ್ಥೆಯ ಅಧಿಕಾರಿಗಳನ್ನು ಕರೆದು ಸಭೆ ನಡೆಸಿ ವಾರದಲ್ಲಿಯೇ ಹೊಸ ಬಸ್ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಾಗುವುದು ಎಂದರು. ಪಟ್ಟಣದ ಮಧ್ಯ ನಿರ್ಮಾಣ ಹಂತದ ಕೆರೆ ಕಾಮಗಾರಿ ಕುರಿತು ಅಧಿಕಾರಿಗಳ ಸಭೆ ಕರೆದು ವಿಚಾರಣೆ ಮಾಡುವುದಾಗಿ ಹೇಳಿದರು. ಈ ವೇಳೆ ಕಾಂಗ್ರೆಸ್ ಮುಖಂಡರು, ಪುರಸಭೆ ಸದಸ್ಯರು ಇದ್ದರು.