ಗೊಂದಲ ಸೃಷ್ಟಿ ಮಾಡಿ ಎಸ್ಸಿ-ಎಸ್ಟಿ ಹಾಗೂ ಹಿಂದುಳಿದ ಸಮದಾಯಕ್ಕೆ ಅನ್ಯಾಯ ಮಾಡುತ್ತಿದೆ. ಇದರ ವಿರುದ್ಧ ಬಿಜೆಪಿ ಉಗ್ರ ಹೋರಾಟ ಮಾಡಲಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಎಚ್ಚರಿಸಿದ್ದಾರೆ.
ಬೆಂಗಳೂರು (ಮಾ.06): ರಾಜ್ಯ ಕಾಂಗ್ರೆಸ್ ಸರ್ಕಾರವು ಸರಿಯಾದ ರೀತಿಯಲ್ಲಿ ಮೀಸಲಾತಿ ಅನುಷ್ಠಾನಗೊಳಿಸದೆ ಗೊಂದಲ ಸೃಷ್ಟಿ ಮಾಡಿ ಎಸ್ಸಿ-ಎಸ್ಟಿ ಹಾಗೂ ಹಿಂದುಳಿದ ಸಮದಾಯಕ್ಕೆ ಅನ್ಯಾಯ ಮಾಡುತ್ತಿದೆ. ಇದರ ವಿರುದ್ಧ ಬಿಜೆಪಿ ಉಗ್ರ ಹೋರಾಟ ಮಾಡಲಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ವರ್ಷಕ್ಕೆ ಒಂದು ಲಕ್ಷ ಹುದ್ದೆ ಭರ್ತಿ ಮಾಡವ ಭರವಸೆ ನೀಡಿದ್ದ ಸರ್ಕಾರ ಈವರೆಗೂ ಭರ್ತಿಗೆ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಸುಮಾರು 2.85 ಲಕ್ಷ ಹುದ್ದೆ ಖಾಲಿ ಇವೆ. ಈ ಬಗ್ಗೆ ಕ್ರಮ ಕೈಗೊಳ್ಳದೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಕಿಡಿಕಾರಿದರು.
ತಾತ್ಕಾಲಿಕ ತಡೆ ಬಳಿಕ 50,000 ಹುದ್ದೆ ಭರ್ತಿ ಮಾತು: ಉದ್ಯೋಗಕ್ಕಾಗಿ ಯುವಕರು ಬೀದಿಗಿಳಿದು ಹೋರಾಡುತ್ತಿದ್ದಾರೆ. ಅವರ ನೋವಿಗೆ ಸ್ಪಂದಿಸದ ದಪ್ಪ ಚರ್ಮದ ಸರ್ಕಾರ ಯುವಕರು ಪ್ರತಿಭಟನೆ ನಡೆಸಿ ಬಾರುಕೋಲಿನಿಂದ ಹೊಡೆದ ಬಳಿಕ 50 ಸಾವಿರ ಹುದ್ದೆ ಭರ್ತಿಗೆ ಮುಂದಾಗಿದೆ. ಮೀಸಲಾತಿಗಾಗಿ ಮೂರು ದಶಕಗಳಿಂದ ಹೋರಾಟ ನಡೆಯುತ್ತಿದೆ. ಈ ಸರ್ಕಾರವು ಮಾನವೀಯತೆಯಿಂದ ಉದ್ಯೋಗಾಕಾಂಕ್ಷಿಗಳ ಬೇಡಿಕೆ ಪರಿಗಣಿಸಲಿಲ್ಲ. ಈಗ ನ್ಯಾಯಾಲಯದಿಂದ ತಾತ್ಕಾಲಿಕ ತಡೆ ಬಂದಿದೆ. ಹೀಗಾಗಿ ಈಗ 50 ಸಾವಿರ ಹುದ್ದೆ ಭರ್ತಿ ಮಾಡುವುದಾಗಿ ಹೇಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯಿಂದ ಹೋರಾಟಕ್ಕೆ ತೀರ್ಮಾನ
ಈ ಸರ್ಕಾರವು ಸರಿಯಾಗಿ ಮೀಸಲಾತಿ ಅನುಷ್ಠಾನಗೊಳಿಸದೆ ಯುವಕರಿಗೆ ಮಹಾದ್ರೋಹ ಮಾಡುತ್ತಿದೆ. ಅಂಬೇಡ್ಕರ್ ನೀಡಿದ್ದ ಮೀಸಲಾತಿಯನ್ನು ಕಾಂಗ್ರೆಸ್ ಕಸಿಯುತ್ತಿದೆ. ಇದರ ವಿರುದ್ಧ ಬಿಜೆಪಿ ಹೋರಾಡಲು ತೀರ್ಮಾನಿಸಿದೆ. ಅಂತೆಯೆ ಈ ಸರ್ಕಾರವು ಎಸ್ಸಿಪಿ-ಟಿಎಸ್ಪಿ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಂಡು ಅನ್ಯಾಯ ಮಾಡಿದೆ. ಈ ಅನ್ಯಾಯವನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಜನರೇ ಉಗ್ರ ಹೋರಾಟ ಮಾಡಲಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮಲು ಎಚ್ಚರಿಸಿದರು.


