ಕಾವೇರಿ ನೀರು ಹರಿಸಿದ್ದು ಸರ್ಕಾರದ ತಪ್ಪು: ಕಾಂಗ್ರೆಸ್‌ ಶಾಸಕ ನರೇಂದ್ರಸ್ವಾಮಿ

ಕಾವೇರಿ ಕಿಚ್ಚು ಭುಗಿಲೇಳುತ್ತಿರುವ ಬೆನ್ನಲ್ಲೇ ಇದೀಗ ಹೋರಾಟದ ಅಖಾಡಕ್ಕೆ ಮಳವಳ್ಳಿ ಕಾಂಗ್ರೆಸ್‌ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಧುಮುಕಿದ್ದಾರೆ. 

Congress Mla PM Narendraswamy Reaction On Cauvery Water issue gvd

ಮಂಡ್ಯ (ಸೆ.25): ಕಾವೇರಿ ಕಿಚ್ಚು ಭುಗಿಲೇಳುತ್ತಿರುವ ಬೆನ್ನಲ್ಲೇ ಇದೀಗ ಹೋರಾಟದ ಅಖಾಡಕ್ಕೆ ಮಳವಳ್ಳಿ ಕಾಂಗ್ರೆಸ್‌ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಧುಮುಕಿದ್ದಾರೆ. ತಮಿಳುನಾಡಿಗೆ ನೀರು ಹರಿಸಿರುವ ರಾಜ್ಯ ಸರ್ಕಾರದ ನಿಲುವಿಗೆ ವಿರೋಧ ವ್ಯಕ್ತಪಡಿಸಿರುವ ಅವರು ನಮಗೇ ತಿನ್ನಲು ಇಲ್ಲದಾಗ ಮತ್ತೊಬ್ಬರಿಗೆ ಅನ್ನ ನೀಡಲಾಗದು. ಸರ್ಕಾರವೂ ಸಂಕಷ್ಟ ಸೂತ್ರ ಅರಿಯದೇ ನೀರು ಹರಿಸಿ ಲೋಪ ಎಸಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ನಗರದಲ್ಲಿ ನಡೆದ ರೈತರ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿ, ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ದೊರಕಿಸುವಲ್ಲಿ ಕಾಂಗ್ರೆಸ್ ಆದಿಯಾಗಿ ಎಲ್ಲ ಸರ್ಕಾರ ಗಳೂ ವಿಫಲವಾಗಿವೆ. ನಾನೂ ಇಂದು ಆಡಳಿತ ಪಕ್ಷದಲ್ಲಿದ್ದೇನೆ. ಆದರೆ ಮಂಡ್ಯದ ಒಬ್ಬ ನಾಗಕರೀಕನಾಗಿ ತಮಿಳುನಾಡಿಗೆ ನೀರು ಹರಿಸುವುದನ್ನು ಸರ್ಕಾರ ನಿಲ್ಲಿಸಬೇಕು ಎಂಬುದು ನನ್ನ ಒತ್ತಾಯ. ನಮ್ಮ ರೈತರ ಸಂಕಷ್ಟಕ್ಕೆ ಯಾವ ಕಾನೂನಾಗಲೀ, ಸರ್ಕಾರವೇ ಆಗಲೀ ಪರಿಹಾರದ ದಾರಿ ತೋರುವಲ್ಲಿ ಈವರೆಗೂ ಸಫಲರಾಗಿಲ್ಲ. ಹಾಗಾಗಿ ನಾನು ಶಾಸಕನೆಂಬುದನ್ನೂ ಮರೆತು ಒಬ್ಬ ರೈತನ ಮಗನಾಗಿ ಇಲ್ಲಿ ಬಂದಿದ್ದೇನೆ. 

ಕಾವೇರಿ ವಿಷಯದಲ್ಲಿ ದೊಡ್ಡ ಕಾನೂನು ಹೋರಾಟ ಅಗತ್ಯ: ದರ್ಶನ್‌ ಪುಟ್ಟಣ್ಣಯ್ಯ

ಮಂಡ್ಯದ ಹಿತಕ್ಕಾಗಿ ಯಾವ ತ್ಯಾಗಕ್ಕೂ ನಾನು ಸಿದ್ಧ ಎಂದು ಇದೇ ವೇಳೆ ಹೇಳಿದರು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ನಾನು ಖಾರವಾಗಿಯೇ ಮಾತನಾಡಿದ್ದೇನೆ. ಅವರೂ ಸುಪ್ರೀಂ ಆದೇಶ ಧಿಕ್ಕರಿಸಿ ನಿಲ್ಲೋಕೆ ಆಗಲ್ಲ ಅಂತಿದ್ದಾರೆ. ಯಾವ ಕಾನೂನು ಕುಣಿಕೆಯಲ್ಲಿ ಸರ್ಕಾರ ಇದೆಯೋ ತಿಳಿಯದು. ಒಟ್ಟಾರೆ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಯಾರಿಂದ ಲೋಪವಾಗಿದೆ ಎನ್ನುವುದಕ್ಕಿಂತ ಸಂಕಷ್ಟ ಸೂತ್ರಕ್ಕೆ ಎಲ್ಲ ರಾಜ್ಯಗಳೂ ಒಪ್ಪಿಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.

ಕಾವೇರಿ ವಿಚಾರದಲ್ಲಿ ಬಿಜೆಪಿ ನಾಯಕರ ಮೊಸಳೆ ಕಣ್ಣೀರು: ಕನ್ನಡ ನೆಲ-ಜಲ, ಭಾಷೆ-ಸಂಸ್ಕೃತಿ ವಿಚಾರದಲ್ಲಿ ನಿರಂತರವಾಗಿ ದ್ರೋಹ ಎಸಗುತ್ತಿರುವ ಬಿಜೆಪಿ, ಇದೀಗ ಕಾವೇರಿ ನೀರಿನ ವಿಚಾರದಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಅಖಿಲ ಭಾರತ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾವೇರಿ ನೀರಿನ ವಿಚಾರವಾಗಿ ಬಿಜೆಪಿ ಕಾರ್ಯಕರ್ತರೊಬ್ಬರು ಬಾಯಿಗೆ ಮಣ್ಣು ಹಾಕಿಕೊಂಡು ಪ್ರತಿಭಟನೆ ನಡೆಸಿದ್ದಾರೆ. ಕಳೆದ 9 ವರ್ಷಗಳಿಂದ ಕೇಂದ್ರ ಸರ್ಕಾರ ಕನ್ನಡಿಗರ ಬಾಯಿಗೆ ಮಣ್ಣು ಹಾಕುವ ಮತ್ತು ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿರುವುದರ ಸಂಕೇತವಾಗಿ ಅವರು ಆ ರೀತಿ ಪ್ರತಿಭಟಿಸಿದ್ದಾರೆ ಎಂದು ಟೀಕಿಸಿದರು.

ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದವರು. ಆದರೆ, ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ತೆಗೆದುಕೊಳ್ಳಬೇಕಾದ ತೀರ್ಮಾನಗಳ ಕುರಿತಂತೆ ದೆಹಲಿಯಲ್ಲಿ ನಡೆದ ಸರ್ವ ಪಕ್ಷದ ಸಂಸದರು ಮತ್ತು ಸದಸ್ಯರ ಸಭೆಗೆ ಭಾಗವಹಿಸಲಿಲ್ಲ. ಕಾವೇರಿ ವಿಚಾರವಷ್ಟೇ ಅಲ್ಲದೆ ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲಿನಲ್ಲಿ, 15ನೇ ಹಣಕಾಸು ಆಯೋಗದಿಂದ ಆದ ಅನ್ಯಾಯ ಸರಿಪಡಿಸುವಲ್ಲಿ ನಿರ್ಮಲಾ ಸೀತಾರಾಮನ್‌ ಇರಲಿ, 25 ಮಂದಿ ಬಿಜೆಪಿ ಸಂಸದರೂ ಬಾಯಿ ಬಿಡಲಿಲ್ಲ ಎಂದು ಆರೋಪಿಸಿದರು.

ಕಾವೇರಿ ವಿಷಯದಲ್ಲಿ ಪ್ರಧಾನಿ ಮೋದಿ ಮೌನ ಸರಿಯಲ್ಲ: ಸಚಿವ ರಾಮಲಿಂಗಾರೆಡ್ಡಿ

ರಾಜ್ಯದಲ್ಲಿ ಬರ, ಪ್ರವಾಹ ಬಂದಾಗ ಬಿಜೆಪಿ ಸಂಸದರು, ಕೇಂದ್ರ ಸಚಿವರು ನೆರವಿಗೆ ಬರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ತೆರಳಿ ರಾಜ್ಯದ ಸಮಸ್ಯೆ ಬಗ್ಗೆ ಚರ್ಚಿಸಿ ನೆರವು ನೀಡುವಂತೆಯೂ ಮಾಡುವ ಧೈರ್ಯವನ್ನೂ ತೋರಲಿಲ್ಲ. ಸಂಸತ್‌ನಲ್ಲೂ ಆ ಬಗ್ಗೆ ಮಾತನಾಡಲಿಲ್ಲ. ನಿರಂತರವಾಗಿ ಜನದ್ರೋಹ ಮಾಡುತ್ತಿರುವ ಬಿಜೆಪಿ ಸಂಸದರು ಮತ್ತು ನಾಯಕರು ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದೆ ಎಂಬ ಕಾರಣಕ್ಕೀಗ ಕಾವೇರಿ ವಿಚಾರದಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ದೂರಿದ್ದಾರೆ.

Latest Videos
Follow Us:
Download App:
  • android
  • ios