ಗ್ಯಾರಂಟಿ ಬಗ್ಗೆ ಭಾಷಣದಲ್ಲಿ ಹೇಳಿದ್ರೆ ಸಿಎಂ ಅವರನ್ನೇ ಕೇಳಿ, ನನಗೆ ಗೊತ್ತಿಲ್ಲ: ಸಚಿವ ಶಿವಾನಂದ ಪಾಟೀಲ
ಜಾತಿ-ಆರ್ಥಿಕತೆ ಹೊರತಾಗಿ ಗ್ಯಾರಂಟಿ ಅಸಾಧ್ಯ, ಯಾವುದೇ ಯೋಜನೆಗೆ ಮಾನದಂಡ ಇದ್ದೇ ಇರುತ್ತದೆ: ಸಚಿವ ಶಿವಾನಂದ ಪಾಟೀಲ
ಬಾಗಲಕೋಟೆ(ಮೇ.30): ಸರ್ಕಾರದ ಮಾನದಂಡದ ಪ್ರಕಾರ ಯೋಜನೆಗಳ ಲಾಭ ಪಡೆಯಬೇಕೆಂದರೆ ಜಾತಿ ಮತ್ತು ಆರ್ಥಿಕ ಹಿನ್ನೆಲೆ ಪ್ರಮುಖವಾಗಿರುತ್ತದೆ. ಇವೆರಡನ್ನೂ ಬಿಟ್ಟು ಯಾವ ಯೋಜನೆಯನ್ನೂ ಸರ್ಕಾರದಿಂದ ಸಮಾಜಕ್ಕೆ ಕೊಡಲಿಕ್ಕೆ ಸಾಧ್ಯವಿದೆಯೇ ಎಂದು ಸಕ್ಕರೆ ಮತ್ತು ಜವಳಿ ಸಚಿವ ಶಿವಾನಂದ ಪಾಟೀಲ ಪ್ರಶ್ನಿಸಿದ್ದಾರೆ.
ನಗರದಲ್ಲಿ ನಿನ್ನೆ(ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಈ ಹಿಂದೆ ವೇದಿಕೆ ಮೇಲೆ ಎಲ್ಲರಿಗೂ ಗ್ಯಾರಂಟಿ ಯೋಜನೆಗಳು ಅನ್ವಯ ಆಗುತ್ತವೆ ಎಂದು ಹೇಳಿದ್ದರಲ್ಲ? ಎಂಬ ಪ್ರಶ್ನೆಗೆ ಉತ್ತರಿಸಿ, ಸಹಜವಾಗಿ ಆ ರೀತಿ ಹೇಳಿರಬಹುದು. ಎಲ್ಲರಿಗೂ ಅನ್ವಯವಾಗುತ್ತದೆ ಎಂದಿದ್ದರೆ ಸಿದ್ದರಾಮಯ್ಯ ಅವರಿಗೂ ಅನ್ವಯ ಆಗುತ್ತಾ? ನೀವೇ ಹೇಳಿ? ಅದಕ್ಕೊಂದು ಮಾನದಂಡ ಇದ್ದೇ ಇರುತ್ತದೆ ಅಲ್ಲವೇ? ಎಂದು ಸಮಜಾಯಿಷಿ ನೀಡಿದರು.
ಕಾಂಗ್ರೆಸ್ ಪ್ರಕಟಿಸಿದ ಗ್ಯಾರಂಟಿ ಯೋಜನೆಗಳಿಗೇನಾದರೂ ಮಾನದಂಡಗಳು ಇವೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಸರ್ಕಾರಿ ಯೋಜನೆಗಳನ್ನು ತೆಗೆದುಕೊಂಡರೆ ಮಾನದಂಡ ಇದ್ದೇ ಇರುತ್ತದೆ. ಮಾನದಂಡ ಇಲ್ಲದೇ ಇರುವ ಯೋಜನೆಗಳು ದೇಶದಲ್ಲಿ ಇವೆಯೇ ಎಂದು ಸಚಿವ ಪಾಟೀಲ ಮರು ಪ್ರಶ್ನಿಸಿದರು.
Karnataka Cabinet: ರನ್ನ ನಾಡಿನ ತಿಮ್ಮಾಪುರಗೆ ಒಲಿದ ಮಂತ್ರಿಗಿರಿ
ಭಾಷಣದಲ್ಲಿ ನೀವೇ ಹೇಳಿದ್ದೀರಿ? ಎಂಬುದಕ್ಕೆ ಉತ್ತರಿಸಿದ ಸಚಿವರು, ಭಾಷಣದಲ್ಲಿ ಹೇಳಿದ್ರೆ ಸಿಎಂ ಅವರನ್ನೇ ಕೇಳಿ, ನನಗೆ ಗೊತ್ತಿಲ್ಲ. ಆದರೆ ಎರಡು ಮಾತ್ರ ಪುಕ್ಕಟ್ಟೆ ಕೊಡ್ತೀವಿ. ನೀರು ಮತ್ತು ಕರೆಂಟು ಮಾತ್ರ. ಮಿಕ್ಕಿದ್ದು ಯಾವುದನ್ನು ಕೊಟ್ಟಿದ್ದೀವಿ ನಾವು ಎಂದ ಮರು ಪ್ರಶ್ನೆ ಹಾಕಿದರು.
ಗ್ಯಾರಂಟಿ ಯೋಜನೆಗಳು ಯಾವಾಗಿನಿಂದ ಶುರು ಎಂಬ ಪ್ರಶ್ನೆಗೆ ಜೂನ್ 1ರಿಂದ ಮಾಡ್ತೀನಿ ಅಂತಾ ಸಿಎಂ ಹೇಳಿದ್ದಾರೆ. ಐದು ಪ್ರಣಾಳಿಕೆಯೂ ಒಮ್ಮೆಲೇ ಜಾರಿಗೆ ಬರುತ್ತವೆ. ಗ್ಯಾರಂಟಿ ಯೋಜನೆಗಳು ಜಾರಿಗೆ ಬರುವವರೆಗೂ ಹೋರಾಟ ಮಾಡ್ತೀವಿ ಎಂಬ ಬಿಜೆಪಿಗರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವ್ರು ಕೂಡ ಒಂದು ತಿಂಗಳ ಗಡುವು ಕೊಡ್ತೀವಿ ಅಂದಿದ್ದಾರೆ ಎಂದು ತಿಳಿಸಿದರು.
ಸಚಿವ ಸ್ಥಾನದ ಹಂಚಿಕೆಗಿಲ್ಲ ಅಸಮಾಧಾನ:
ಸಚಿವ ಸ್ಥಾನದ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಇಲ್ಲ. ಹೈಕಮಾಂಡ್ ಮತ್ತು ಡಿ.ಕೆ.ಶಿವಕುಮಾರ್ ಅವರೇ ಈ ಕುರಿತು ಉತ್ತರ ಕೊಟ್ಟಿದ್ದಾರಲ್ಲ, ರಾಮಲಿಂಗಾರಡ್ಡಿ ಅವರು ಸ್ವತಃ ಈ ಬಗ್ಗೆ ಹೇಳಿದ್ದಾರೆ. ಶೆಟ್ಟರ್, ಸವದಿ ಅವರು ಅಸಮಾಧಾನ ಆಗಿಲ್ಲ ಎಂದು ಅವರೇ ತಿಳಿಸಿದ್ದಾರೆ. ನನಗೂ ಅಸಮಾಧಾನವಿಲ್ಲ. ಪಕ್ಷದ ಜೊತೆಗೆ ಹೋಗ್ತೀನಿ ಅಂತಾ ಶೆಟ್ಟರ್ ಹೇಳಿದ್ದಾರೆ. ಏನು ಜವಾಬ್ದಾರಿ ಕೊಡುತ್ತಾರೆ ಅದನ್ನ ನಿರ್ವಹಿಸುತ್ತೇನೆ ಅಂದಿದ್ದಾರೆ ಎಂದು ಸಚಿವರು ಸಮರ್ಥಿಸಿಕೊಂಡರು. ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಯಾವಾಗ? ಎಂಬ ಪ್ರಶ್ನೆಗೆ ಈ ಕುರಿತು ಸಿಎಂ ಹೇಳಬೇಕು. ನಾನು ಹೇಗೆ ಹೇಳೋಕಾಗುತ್ತೆ ಎಂದು ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದರು.
Karnataka Election 2023: 'ವಿಶ್ವಾಸ ದ್ರೋಹದಿಂದ ಕಾಂಗ್ರೆಸ್ ಅಭ್ಯರ್ಥಿಗೆ ಸೋಲು'
ಸುಪ್ರೀಂ ಕೋರ್ಟ್ ವ್ಯಾಜ್ಯ ಮುಗಿಸಲಿ:
ಯುಕೆಪಿ ಯೋಜನೆ ಈ ಸರ್ಕಾರದಲ್ಲಾದರೂ ಕಂಪ್ಲೀಟ್ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದಿನ ಸರ್ಕಾರದಲ್ಲಿ .10 ಸಾವಿರ ಕೋಟಿ ಖರ್ಚು ಮಾಡಿದ್ದೀವಿ. ಈ ಸಾರಿ ಅದಕ್ಕಿಂತ ಹೆಚ್ಚು ಖರ್ಚು ಮಾಡುತ್ತೇವೆ ಅಂತಾ ಸಿಎಂ, ಡಿಸಿಎಂ ಹೇಳಿದ್ದಾರೆ. ಯೋಜನೆ ಕಂಪ್ಲೀಟ್ ಆಗುತ್ತಾ ಎಂಬ ಪ್ರಶ್ನೆಗೆ, ಯೋಜನೆ ಕಂಪ್ಲೀಟ್ ಆಗಬೇಕೆಂದರೆ, ನೀವು ಡಬಲ್ ಇಂಜಿನ್ ಸರ್ಕಾರವನ್ನು ಕೇಳಬೇಕು. ಸುಪ್ರೀಂಕೋರ್ಟ್ ವ್ಯಾಜ್ಯ ಮುಗಿಸಲಿ. ನಾಳೆಯೇ ಯೋಜನೆಯನ್ನು ಕಂಪ್ಲೀಟ್ ಮಾಡಿಸುತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರಾ ಅಥವಾ ಬೇರೆ ಯಾರಾದ್ರೂ ಆಗ್ತಾರಾ? ಎಂಬ ಪ್ರಶ್ನೆಗೆ, ಅದು ವರಿಷ್ಠರಿಗೆ ಬಿಟ್ಟಿದ್ದು. ಬೇಕಾದ್ರೆ ಎಂ.ಬಿ.ಪಾಟೀಲರನ್ನು ಕೇಳಿ ಹೇಳ್ತಾರೆ ಎಂದು ಶಿವಾನಂದ ಪಾಟೀಲ ಮಾರ್ಮಿಕವಾಗಿ ಉತ್ತರಿಸಿದರು.