ಸ್ಥಳೀಯ ಅಭ್ಯರ್ಥಿ ಕೂಗಿಗೆ ವರಿಷ್ಠರು ಸ್ಪಂದಿಸಿ ಯುವ ನಾಯಕ ಸಿದ್ದು ಕೊಣ್ಣೂರಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದ್ದರು. ಪಕ್ಕದಲ್ಲಿಯೇ ಇದ್ದು ವಿಶ್ವಾಸ ದ್ರೋಹವೆಸಗಿ ನಮ್ಮ ಅಭ್ಯರ್ಥಿ ಸೋಲುವಂತೆ ಮಾಡಿದ್ದಾರೆ: ಎಸ್‌.ಜೆ ನಂಜಯ್ಯನಮಠ 

ಮಹಾಲಿಂಗಪುರ(ಮೇ.24): ಸ್ಥಳೀಯ ವ್ಯಕ್ತಿಗೆ ಕಾಂಗ್ರೆಸ್‌ ಟಿಕೆಟ್‌ ದೊರಕಿದರೆ ಎಲ್ಲ ಆಕಾಂಕ್ಷಿಗಳು ಸೇರಿ ಚುನಾವಣೆ ಮಾಡುತ್ತೇವೆ ಎಂದು ಹೇಳಿ ಆನೆ ಪ್ರಮಾಣ ಮಾಡಿಯೂ ಪಕ್ಷದ ವಿರುದ್ಧ ಕೆಲಸ ಮಾಡಿ ಪಕ್ಷಕ್ಕೆ ದ್ರೋಹವೆಸಗಿ ನಮ್ಮ ಅಭ್ಯರ್ಥಿ ಸಿದ್ದು ಕೊಣ್ಣೂರ ಅವರ ಸೋಲಿಗೆ ಕಾರಣರಾಗಿದ್ದಾರೆ. ಇಂತವರ ವಿರುದ್ಧ ವರದಿ ಮಾಡಿ ವರಿಷ್ಠರಿಗೆ ಕಳಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಎಸ್‌.ಜೆ ನಂಜಯ್ಯನಮಠ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಅಭ್ಯರ್ಥಿ ಕೂಗಿಗೆ ವರಿಷ್ಠರು ಸ್ಪಂದಿಸಿ ಯುವ ನಾಯಕ ಸಿದ್ದು ಕೊಣ್ಣೂರಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದ್ದರು. ಪಕ್ಕದಲ್ಲಿಯೇ ಇದ್ದು ವಿಶ್ವಾಸ ದ್ರೋಹವೆಸಗಿ ನಮ್ಮ ಅಭ್ಯರ್ಥಿ ಸೋಲುವಂತೆ ಮಾಡಿದ್ದಾರೆ ಎಂದರು.

'ಮುಂದಿನ ಸಭೆಯಲ್ಲಿ ಐದು ಗ್ಯಾರಂಟಿ ಜಾರಿ'

ಜನ ನಿದ್ದೆಗೇಡಿಸಿದ್ದ ಬಿಜೆಪಿ:

ಬಿಜೆಪಿ ಆಡಳಿತಕ್ಕೆ ಬೇಸತ್ತು ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನ ಅಧಿಕಾರ ನೀಡಿದ್ದಾರೆ. ಕರ್ನಾಟಕದಾದ್ಯಂತ ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆಯಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ 135 ಸ್ಥಾನಗಳಲ್ಲಿ ಅಭೂತಪೂರ್ವ ಗೆಲುವು ಸಿಕ್ಕಿದೆ ಎಂದ ಅವರು, ರೈತ, ನೇಕಾರ, ಜನಸಾಮಾನ್ಯರಿಗೆ ಉಪಯುಕ್ತವಾಗುವ ಒಂದು ಕಾರ್ಯಕ್ರಮವನ್ನು ಬಿಜೆಪಿ ಸರ್ಕಾರ ಮಾಡಲೇ ಇಲ್ಲ. ಬದಲಾಗಿ ಕಾಂಗ್ರೆಸ್‌ ಸರ್ಕಾರ ಮಾಡಿದ್ದ 10 ಕೆಜಿ ಪಡಿತರವನ್ನು 5 ಕೆಜಿಗೆ ಇಳಿಸಿದ್ದಾರೆ. ಬಡವರಿಗೆ ಅನುಕೂಲವಾಗಿದ್ದ ಇಂದಿರಾ ಕ್ಯಾಂಟಿನ್‌ನ್ನು ಸ್ಥಗಿತಗೊಳಿಸಿದ್ದಾರೆ. ಭಾಜಪ ಆಡಳಿತದಲ್ಲಿ ಶೇ.40 ಕಮಿಷನ್‌, ಮೀತಿಮೀರಿದ ಬೆಲೆ ಏರಿಕೆ, ವಿವಿಧ ಹಗರಣಗಳು, ಜನತೆಯ ನಿದ್ದೆಗೇಡಿಸಿವೆ. ಆದರೆ ಸಿದ್ದರಾಮಯ್ಯ ಸರ್ಕಾರ ಜನತೆಗೆ ನೀಡಿದ ಭರವಸೆಗಳನ್ನು ಖಂಡಿತವಾಗಿಯೂ ಈಡೇರಿಸುತ್ತೆ. ಜೊತೆಗೆ ಸಿಎಂ ಸಿದ್ದರಾಮಯ್ಯನವರು ರಾಜ್ಯಾದ್ಯಂತ ಇಂದಿರಾ ಕ್ಯಾಂಟಿನ್‌ ಅನ್ನು ಮರು ಪ್ರಾರಂಭ ಮಾಡುವಂತೆ ಮೊದಲ ಕ್ಯಾಬಿನೆಟ್‌ನಲ್ಲಿಯೇ ಜಾರಿಗೊಳಿಸಬೇಕು ಎಂದರು.

ಪಕ್ಷ ಸಂಘಟನೆ:

ಸ್ಥಳೀಯ ಅಭ್ಯರ್ಥಿ ಸಿದ್ದು ಕೊಣ್ಣೂರ ಸೋಲಿಗೆ ಎದೆಗುಂದದೆ ಇನ್ನೂ ಮುಂದೆಯೂ ಪಕ್ಷದ ಸಂಘಟನೆಯಲ್ಲಿ ತೊಡಗಿರುತ್ತಾರೆ. ಅಲ್ಲದೇ ನಮ್ಮ ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಪ್ರತಿಯೊಬ್ಬರಿಗೂ ಮುಟ್ಟಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾರೆ. ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯನವರ ಸರ್ಕಾರ ಜನಪರ ಯೋಜನೆಗಳನ್ನು ತರುವ ಮೂಲಕ ಎಲ್ಲ ಜನತೆಗೆ ನ್ಯಾಯ ಕೊಡುವ ಕೆಲಸ ಮಾಡಿ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎನ್ನುವ ಭರವಸೆ ನಮಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ ಒಬಿಸಿ ಅಧ್ಯಕ್ಷ ಕಾಶಿನಾಥ ಹುಡೇದ, ಜಿಲ್ಲಾ ಕಾಂಗ್ರೆಸ್‌ ಎಸ್‌.ಸಿ ಅಧ್ಯಕ್ಷ ರಾಜು ಮನ್ನಿಕೇರಿ, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಆನಂದ ಶಿಲ್ಪಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ಕಾಂಗ್ರೆಸ್‌ ಮುಖಂಡ ಹನಮಂತ ಕೊಣ್ಣೂರ ಸೇರಿದಂತೆ ಹಲವರು ಇದ್ದರು.

ಮಹಾಲಿಂಗಪುರ ತಾಲೂಕು ಘೋಷಣೆವರೆಗೂ ನಿಮ್ಮೊಂದಿಗಿರುವೆ

ಸುಮಾರು 405 ದಿನಗಳಿಂದ ನಡೆಯುತ್ತಿರುವ ತಾಲೂಕು ಹೋರಾಟ ಸಮಿತಿಯ ಬೆಂಬಲಕ್ಕೆ ನಾನು ಸದಾಸಿದ್ಧ. ತಾಲೂಕು ಮಾಡಲು ಸಿಎಂ ಸಿದ್ದರಾಮಯ್ಯನವರನ್ನು ಮನವೊಲಿಸಲು ಎಷ್ಟುಬಾರಿಯಾದರೂ, ಕಾಂಗ್ರೆಸ್‌ ಮುಖಂಡ ಸಿದ್ದು ಕೊಣ್ಣೂರ ಅವರೊಂದಿಗೆ ನಾನು ಎಲ್ಲಿ ಬೇಕಾದರೂ ಬರಲು ಸಿದ್ಧ. ಒಟ್ಟಿನಲ್ಲಿ ಮಹಾಲಿಂಗಪುರ ತಾಲೂಕು ಘೋಷಣೆಯಾಗಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಜೆ ನಂಜಯ್ಯನಮಠ ಹೇಳಿದರು.

ಬಾಗಲಕೋಟೆ: ಎಸ್‌.ಆರ್‌.ಪಾಟೀಲಗೆ ಸಿಗುವುದೇ ಉನ್ನತ ಜವಾಬ್ದಾರಿ?

ಮಹಾಲಿಂಗಪುರ ಎಲ್ಲ ರೀತಿಯಿಂದಲೂ ತಾಲೂಕಾಗಲು ಅರ್ಹವಾಗಿದೆ. ಇದು ಈಗಾಗಲೇ ತಾಲೂಕಾಗಬೇಕಿತ್ತು. ಕಾರಣಾಂತರದಿಂದ ಆಗಿಲ್ಲ. ಆದರೆ, ಸಿಎಂ ಸಿದ್ದರಾಮಯ್ಯನವರೊಂದಿಗೆ ಮಾತನಾಡಿ ಈ ಪಟ್ಟಣವನ್ನು ಆದಷ್ಟುಬೇಗ ತಾಲೂಕು ಘೋಷಣೆ ಮಾಡಲು ಎಷ್ಟುಬಾರಿಯಾದರೂ ನಾನು ಬರುತ್ತೇನೆ. ಇಲ್ಲಿನ ಕಾಂಗ್ರೆಸ್‌ ಮುಖಂಡರಾದ ಸಿದ್ದು ಕೊಣ್ಣೂರ ಅವರು ಹೋರಾಟಗಾರರಿಗೆ ಬೆಂಬಲ ನೀಡುವ ಮೂಲಕ ನಮ್ಮ ಸರ್ಕಾರಕ್ಕೆ ಹೆಚ್ಚಿನ ಒತ್ತಡ ತಂದು ಆದಷ್ಟುಬೇಗ ತಾಲೂಕು ಎಂದು ಘೋಷಣೆ ಮಾಡುವವರೆಗೂ ನಾನು ನಿಮ್ಮೊಂದಿಗೆ ಇರುತ್ತೇನೆ. ಇದಕ್ಕೆ ಸಂಬಂಧಪಟ್ಟಎಲ್ಲ ದಾಖಲೆಗಳನ್ನು ತೆಗೆದುಕೊಂಡು ಒಮ್ಮೆ ಮುಖ್ಯಮಂತ್ರಿಗಳಿಗೆ ಭೇಟಿಯಾಗಿ ಮುಂದಿನ ನಿರ್ಧಾರ ತೆಗೆದುಕೊಳ್ಳೋಣ ಎಂದರು.

ಯುವ ನಾಯಕ, ಅನುಭವಿ ರಾಜಕಾರಣಿ, ಭಾಷೆಯ ಮೇಲೆ ಹಿಡಿತ ಹೊಂದಿದ ಉತ್ತಮ ಕೆಲಸಗಾರರಾದ ಯು.ಟಿ.ಖಾದರ ಅವರನ್ನು ವಿಧಾನಸಭೆ ಸ್ಪೀಕರ ಸ್ಥಾನಕ್ಕೆ ನೇಮಕ ಮಾಡಿರುವುದು ಸಂತಸ ತಂದಿದೆ. ಅವರು ಉತ್ತಮವಾಗಿ ಕಾರ್ಯ ಮಾಡಲಿ ಅಂತ ಜಿಲ್ಲಾ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಎಸ್‌.ಜಿ.ನಂಜಯ್ಯನಮಠ ತಿಳಿಸಿದ್ದಾರೆ.