Karnataka Cabinet: ರನ್ನ ನಾಡಿನ ತಿಮ್ಮಾಪುರಗೆ ಒಲಿದ ಮಂತ್ರಿಗಿರಿ
ದಲಿತ ಎಡಗೈ ಸಮುದಾಯದ ನಾಯಕ ಆರ್.ಬಿ.ತಿಮ್ಮಾಪೂರ ಅವರಿಗೆ ಮತ್ತೊಮ್ಮೆ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಅದೃಷ್ಟದಾಟದಲ್ಲಿ ಮತ್ತೊಮ್ಮೆ ಯಶಸ್ವಿಯಾಗುವ ಮೂಲಕ ರಾಜಕಾರಣ ನಿಂತ ನೀರಲ್ಲ ಎಂಬುವುದನ್ನು ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈಶ್ವರ ಶೆಟ್ಟರ
ಬಾಗಲಕೋಟೆ (ಮೇ.28) : ದಲಿತ ಎಡಗೈ ಸಮುದಾಯದ ನಾಯಕ ಆರ್.ಬಿ.ತಿಮ್ಮಾಪೂರ ಅವರಿಗೆ ಮತ್ತೊಮ್ಮೆ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಅದೃಷ್ಟದಾಟದಲ್ಲಿ ಮತ್ತೊಮ್ಮೆ ಯಶಸ್ವಿಯಾಗುವ ಮೂಲಕ ರಾಜಕಾರಣ ನಿಂತ ನೀರಲ್ಲ ಎಂಬುವುದನ್ನು ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚುನಾವಣಾ ರಾಜಕೀಯದಲ್ಲಿ ಸತತ ಸೋಲು ಕಂಡು ರಾಜಕೀಯದ ಅಳಿವು ಉಳಿವಿನ ಹಂತದಲ್ಲಿದ್ದ ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಅವರಿಗೆ ಈ ಚುನಾವಣೆ ಗೆಲ್ಲುವ ಮೂಲಕ ಮತ್ತೆ ಮುಂಚೂಣಿ ರಾಜಕಾರಣದಲ್ಲಿ ಸಕ್ರಿಯವಾಗಲು ಸಾಧ್ಯವಾಗಿರುವುದು ನಿಜಕ್ಕೂ ಜಿಲ್ಲಾ ರಾಜಕಾರಣದಲ್ಲಿ ಅಚ್ಚರಿಯ ಜೊತೆಗೆ ಸಂಚಲನಕ್ಕೆ ಕಾರಣವಾಗಿದೆ.
ಬೀದರ್ನ ಜೋಡೆತ್ತುಗಳಿಗೊಲಿದ ಸಚಿವ ಸ್ಥಾನ: ಖಂಡ್ರೆಗೆ ಅರಣ್ಯ, ರಹೀಮ್ ಖಾನ್‌ಗೆ ಪೌರಾಡಳಿತ ಖಾತೆ ಸಾಧ್ಯತೆ
ರಾಜಕೀಯ ಹಿನ್ನೆಲೆ:
1989ರಲ್ಲಿ ಮುಧೋಳ ಮೀಸಲು ಕ್ಷೇತ್ರದಿಂದ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಪಕ್ಷದ ಯುವ ನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಂದು ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆಲಕಾಲ ಕೆ.ಎಚ್.ಡಿ.ಸಿಯ ನಿಗಮ ಮಂಡಳಿ ಅಧ್ಯಕ್ಷರಾಗುವ ಮೂಲಕ ರಾಜಕಾರಣದಲ್ಲಿ ಗಟ್ಟಿಯಾಗಿ ತಳ ಉರುವ ಮುನ್ಸೂಚನೆ ನೀಡಿದ್ದರು. 1994ರಲ್ಲಿ ಜನತಾ ಪರಿವಾರದ ಗೋವಿಂದ ಕಾರಜೋಳ ವಿರುದ್ಧ ಪರಾಭವಗೊಂಡು ನಂತರ 1999ರ ವಿಧಾನಸಭೆ ಚುನಾವಣೆಗೆ ಮತ್ತೆ ಮುಧೋಳ ಮೀಸಲು ಕ್ಷೇತ್ರದಿಂದ ಗೋವಿಂದ ಕಾರಜೋಳ ಅವರನ್ನು ಸೋಲಿಸಿ ವಿಧಾನಸಭೆ ಮೆಟ್ಟಲೇರಿದ್ದರು. 1999ರ ಎಸ್.ಎಂ.ಕೃಷ್ಣ ಅವರ ಮಂತ್ರಿ ಮಂಡಲದಲ್ಲಿ ಯೋಜನೆ ಮತ್ತು ಸಾಂಖ್ಯಿಕ, ಕೃಷಿ ಮಾರುಕಟ್ಟೆಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಅವರದ್ದಾಗಿತ್ತು. 2004ರಲ್ಲಿ ಮತ್ತೆ ಗೋವಿಂದ ಕಾರಜೋಳ ವಿರುದ್ಧ ಸೋಲು, ನಂತರ ನಡೆದ 2008 ಮತ್ತು 2013 ರಲ್ಲಿನ ಚುನಾವಣೆಯಲ್ಲಿಯೂ ಸತತ ಮೂರು ಬಾರಿ ಸೋಲು ಕಂಡಿದ್ದರು. ಆದರೆ, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ರಾಜ್ಯ ಮತ್ತು ರಾಷ್ಟ್ರ ನಾಯಕರಲ್ಲಿ ಸಮುದಾಯದ ನಾಯಕರಾಗಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
2016ರಲ್ಲಿ ವಿಪ ಸದಸ್ಯರಾಗಿ ಆಯ್ಕೆ:
ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್.ಬಿ.ತಿಮ್ಮಾಪೂರ ಅವರು ಪಕ್ಷದ ವಲಯದಲ್ಲಿಯೂ ಕಡೆಗಣನೆಗೆ ಒಳಗಾಗಿದ್ದರು. ಅದೃಷ್ಟವೆಂಬಂತೆ ಅಂದು ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಅವಧಿಯಲ್ಲಿ ದಲಿತ ಸಮುದಾಯದ ಎಡಗೈಯ ಪ್ರತಿನಿಧಿಯಾಗಿ 2016ರ ಜೂನ್‌ನಲ್ಲಿ ವಿಧಾನ ಪರಿಷತ್‌ಗೆ ಆಯ್ಕೆಯಾಗುವ ಮೂಲಕ ರಾಜಕೀಯ ಪುನರ್ಜನ್ಮ ಪಡೆಯುವಲ್ಲಿ ಯಶಸ್ವಿಯಾದರು. ಬದಲಾದ ರಾಜಕೀಯದಲ್ಲಿ ಕಳೆದ ಸಿದ್ದರಾಮಯ್ಯ ಸರ್ಕಾರದಲ್ಲಿ ಕೆಲ ತಿಂಗಳ ಕಾಲ ಮತ್ತೆ ಸಚಿವರಾಗುವ ಅವಕಾಶ ದೊರೆತಿತ್ತು. ಅಬಕಾರಿ ಖಾತೆಯನ್ನು ನಿರ್ವಹಿಸಿದ್ದ ಅವರು ನಂತರದಲ್ಲಿನ ಕುಮಾರಸ್ವಾಮಿ ಸರ್ಕಾರದಲ್ಲಿಯು ಸಹ ಒಂದು ವರ್ಷಗಳ ಕಾಲ ಸಕ್ಕರೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಮುಧೋಳ ಮೀಸಲು ಕ್ಷೇತ್ರದಿಂದ ಮತ್ತೆ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಇವರ ಬದಲಾಗಿ ಸತೀಶ ಬಂಡಿವಡ್ಡರ ಅವರಿಗೆ ಟಿಕೆಟ್ ನೀಡಲಾಗಿತ್ತು. ಅವರು ಗೋವಿಂದ ಕಾರಜೋಳ ವಿರುದ್ಧ ಪರಾಭವಗೊಂಡಿದ್ದರು.
ಮೂಲತಃ ಮುಧೋಳ ತಾಲೂಕಿನ ಉತ್ತೂರ ಗ್ರಾಮದ ಕೃಷಿಕ ಕುಟುಂಬದಲ್ಲಿ 16.09.962ರಲ್ಲಿ ಜನಿಸಿದ ತಿಮ್ಮಾಪೂರ ಎಲ್.ಎಲ್.ಬಿ ಪದವೀಧರರು. 1989ರಲ್ಲಿ ಅಂದಿನ ರಾಜಕೀಯ ಮುತ್ಸದ್ಧಿ ಎಸ್.ಟಿ.ಪಾಟೀಲ ಅವರ ಕಣ್ಣಿಗೆ ಬಿದ್ದು ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡ ಪರಿಣಾಮ ಈ ಮಟ್ಟದ ನಾಯಕತ್ವ ಮತ್ತು ಜನಪ್ರಿಯತೆ ಬರಲು ಸಾಧ್ಯವಾಯಿತು ಎನ್ನಬಹುದು.
ಅದೃಷ್ಟವಂತ:
ಕಾಂಗ್ರೆಸ್ ಪಕ್ಷದ ಘಟಾನುಘಟಿ ರಾಜಕಾರಣಿಗಳೇ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿದರೂ ಸಿಗದ ಸಚಿವ ಸ್ಥಾನ ಆರ್.ಬಿ.ತಿಮ್ಮಾಪೂರ ಅವರಿಗೆ ಒಲಿದ ರೀತಿಯೆ ಹೇಳುತ್ತೆ ಅದೃಷ್ಟವಂತ ರಾಜಕಾರಣಿ ಎಂದು.ಬಾಗಲಕೋಟೆ ಜಿಲ್ಲೆಯ ರಾಜಕಾರಣದಲ್ಲಂತೂ ತಿಮ್ಮಾಪೂರ ಅವರಿಗೆ ಸಚಿವ ಸ್ಥಾನ ನೀಡಿರುವುದು ಸದ್ಯದ ಅಗತ್ಯತೆ ಇತ್ತೆಂದು ಹಲವು ಮುಖಂಡರು ಮಾತನಾಡುತ್ತಿದ್ದಾರೆ. ಸದ್ಯ ಗೆಲವು ಕಂಡಿರುವ ಆರ್.ಬಿ.ತಿಮ್ಮಾಪೂರ ಅವರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ಕ್ಷೇತ್ರದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮಾಡಿರುವ ನೂನ್ಯತೆಗಳನ್ನು ತಿದ್ದಿಕೊಂಡು ಬರುವ ಐದು ವರ್ಷಗಳಲ್ಲಿ ಮತದಾರರ ಆಶೋತ್ತರಗಳಿಗೆ ಧ್ವನಿಯಾಗುವುದು ಸದ್ಯದ ಅವಶ್ಯಕತೆ ಇದೆ.
ಯಾದಗಿರಿ ಜಿಲ್ಲೆಗೆ ಒಲಿದ ಸಚಿವ ಸ್ಥಾನದ ಗರಿ: ಸಣ್ಣ ಕೈಗಾರಿಕಾ ಸಚಿವರಾಗಿ ದರ್ಶನಾಪುರ
ಪರಿಚಯ
- ಹೆಸರು: ರಾಮಪ್ಪ ಬಾಳಪ್ಪ ತಿಮ್ಮಾಪುರ
- ಜನನ- 16.09.1962 (60)
- ಜನನ ಸ್ಥಳ- ಕಾಡರಕೊಪ್ಪ ಗ್ರಾಮ ತಾ.ಬಾದಾಮಿ ಜಿ.ಬಾಗಲಕೋಟೆ
- ಜಾತಿ-ಹಿಂದು
- ಶಿಕ್ಷಣ- ಬಿ.ಎ, ಎಲ್.ಎಲ್.ಬಿ
- ಉದ್ಯೋಗ- ರಾಜಕೀಯ ಮತ್ತು ಸಾಮಾಜಿಕ ಸೇವೆ
- ಪತ್ನಿ- ಶ್ರೀಮತಿ ಶಶಿಕಲಾ ರಾಮಪ್ಪ ತಿಮ್ಮಾಪೂರ
- ತಾಯಿ- ದಿ. ಶ್ರೀಮತಿ ಸತ್ಯವ್ವ ಬಾಲಪ್ಪ ತಿಮ್ಮಾಪೂರ
- ತಂದೆ- ದಿ. ಶ್ರೀ ಬಾಲಪ್ಪ ತಿಮ್ಮಾಪೂರ
- ಮಕ್ಕಳು- ಓರ್ವ ಪುತ್ರ, ಓರ್ವ ಪುತ್ರಿ