ಬಿಜೆಪಿಗೆ ಬಿಎಸ್‌ವೈ-ವಿಜಯೇಂದ್ರ ಅನಿವಾರ್ಯ: ಸಚಿವ ಚಲುವರಾಯಸ್ವಾಮಿ
ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಇಬ್ಬರೂ ಅನಿವಾರ್ಯವಾಗಿದ್ದಾರೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಮಂಡ್ಯ (ನ.17): ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಇಬ್ಬರೂ ಅನಿವಾರ್ಯವಾಗಿದ್ದಾರೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು. ಆ ಸಮಯದಲ್ಲೇ ವಿಜಯೇಂದ್ರ ಅವರಿಗೆ ಉತ್ತಮ ಸ್ಥಾನ ಕೊಡಬೇಕಿತ್ತು. ಕೊಡಲಿಲ್ಲ. ಬಿಜೆಪಿ ಪ್ರಯೋಗಗಳು ನೆಲಕಚ್ಚಿದವು. ಬಿಜೆಪಿಯೊಳಗೆ ಮನಸ್ಸುಗಳೆಲ್ಲಾ ಒಡೆದುಹೋಗಿವೆ. ಅವರೀಗ ಗೊಂದಲದಲ್ಲಿದ್ದಾರೆ. ಕಳೆದ ಆರು ತಿಂಗಳಿಂದ ವಿರೋಧ ಪಕ್ಷದ ನಾಯಕರು ಅವರಿಗೆ ಸಿಕ್ಕಿಲ್ಲ.
ಈಗ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಅಲ್ಲಿಗೆ ಯಡಿಯೂರಪ್ಪ ಮತ್ತು ಅವರ ಕುಟುಂಬ ಬಿಜೆಪಿಗೆ ಅನಿವಾರ್ಯವಾಗಿದೆ ಎಂದು ಕುಟುಕಿದರು. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಯಶಸ್ವಿಯಾಗುವುದು ಕಷ್ಟವಿದೆ. ಅವರೇನು ಪ್ರೀತಿಯಿಂದ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೂರಿಸಿಲ್ಲ. ಅನಿವಾರ್ಯದಿಂದ ಮಾಡಿದ್ದಾರೆ ಅಷ್ಟೆ. ಕುಮಾರಸ್ವಾಮಿ ಅವರೂ ಪ್ರೀತಿಯಿಂದ ಬಿಜೆಪಿಗೆ ಹೋಗಿಲ್ಲ. ಅನಿವಾರ್ಯವಾಗಿ ಹೋಗಿದ್ದಾರೆ. ಇಂತಹ ಸಮಯದಲ್ಲಿ ಬಿಜೆಪಿ ಕಷ್ಟ ನೋಡಿ ಅಯ್ಯೋ ಪಾಪ ಎನಿಸುತ್ತಿದೆ. ಬಿಜೆಪಿಯೊಳಗೆ ಮನಸ್ತಾಪ ದೊಡ್ಡ ಪ್ರಮಾಣದಲ್ಲಿರುವುದರಿಂದ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಯಶಸ್ವಿಯಾಗುವುದು ಕಷ್ಟವಾಗಲಿದೆ ಎಂದು ಭವಿಷ್ಯ ನುಡಿದರು.
ರಾಜ್ಯದ ಸರ್ಕಾರಿ ನೇಮಕಾತಿ ಪರೀಕ್ಷೆ ಅಕ್ರಮ ತಡೆಗೆ ಮಸೂದೆ: ಸಂಪುಟ ಅಸ್ತು
ಯಾವ ವಿಚಾರ ಹೇಳಿದ್ದಾರೋ ಗೊತ್ತಿಲ್ಲ: ಅಧಿಕಾರಿ ವರ್ಗಾವಣೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪವಿರುವ ಬಗ್ಗೆ ಕೇಳಿದಾಗ, ಮೈಸೂರು ಜಿಲ್ಲೆಯಲ್ಲಿ ಹಾಗೂ ಪಕ್ಷದಲ್ಲಿ ಯತೀಂದ್ರ ಪ್ರಮುಖವಾದ ಲೀಡರ್. ಮಾಜಿ ಎಂಎಲ್‌ಎಗಳು ಕೆಲಸ ಮಾಡೋದನ್ನು ತಪ್ಪು ಎನ್ನಲಾಗದು. ಯಾರನ್ನೂ ಟಾರ್ಗೆಟ್ ಮಾಡುವ ನೇಚರ್ ಯತೀಂದ್ರ ಅವರದ್ದಲ್ಲ. ವಿಡಿಯೋದಲ್ಲಿ ಯಾವ ವಿಚಾರ ಹೇಳಿದ್ದಾರೋ ಏನೋ ಗೊತ್ತಿಲ್ಲ. ಯಾರು ಆ ವೀಡಿಯೋ ಕಟ್ ಅಂಡ್ ಪೇಸ್ಟ್ ಮಾಡಿದ್ರೋ ಗೊತ್ತಿಲ್ಲ. ಸೋಶಿಯಲ್ ಮಿಡಿಯಾದಲ್ಲಿ ಕೆಲವರು ಕಟ್ ಅಂಡ್ ಪೇಸ್ಟ್ ಮಾಡುತ್ತಾರೆ.
ಮಾತಾಡಿದ ರೀತಿ ಬೇರೆ ಇರುತ್ತೆ, ತೋರಿಸೋದು ಬೇರೆ ಇರುತ್ತೆ. ಯತೀಂದ್ರ ಒಬ್ಬರು ಒಳ್ಳೆಯ ವ್ಯಕ್ತಿ ಎಂದು ಸಮರ್ಥಿಸಿಕೊಂಡರು. ರಾಜಕೀಯವಾಗಿ ಭಾಗಿಯಾಗೋದು, ಸಾರ್ವಜನಿಕ ಸೇವೆಯಲ್ಲಿ ಇರೋದು ಅಪರಾಧವಲ್ಲ. ವರುಣಾ ಅಲ್ಲ, ಇಡೀ ರಾಜ್ಯದಲ್ಲಿ ಕೆಲಸ ಮಾಡಲಿ ಬಿಡಿ. ಅದರಲ್ಲಿ ತಪ್ಪೇನಿದೆ. ನಮ್ಮ ಕಾಂಗ್ರೆಸ್ ಮುಖಂಡರು ಕೆಲ ಸಮಸ್ಯೆಗಳನ್ನು ಗಮನಕ್ಕೆ ತಂದರೆ ತಪ್ಪೇನಿದೆ. ನಮ್ಮಲ್ಲೂ ಕೆಲ ಕಡೆ ಪಿಡಿಒ ಸರಿಯಿಲ್ಲ. ಬೇರೆ ಹಾಕಿ ಅಂತಾರೆ. ಅದನ್ನು ನಾವು ತಪ್ಪು ಎನ್ನಲಾಗುವುದಿಲ್ಲ. ಸಲಹೆ ಕೊಡುವುದರಲ್ಲಿ ತಪ್ಪೇನಿಲ್ಲ ಎಂದು ನುಡಿದರು.
ನಾವು ಅವರಂತೆ ವಿಚಾರ ಸಿಕ್ಕಿದರೆ ಎಳೆಯೋಲ್ಲ: ಕುಮಾರಸ್ವಾಮಿ ಅವರಂತೆ ವಿಚಾರ ಸಿಕ್ಕಿದರೆ ಎಳೆಯೋಲ್ಲ. ಕುಮಾರಸ್ವಾಮಿ ಎಲ್ಲರನ್ನೂ ಟೀಕೆ ಮಾಡುತ್ತಾರೆ. ನಾನೂ, ಎಚ್‌ಡಿಕೆ ಜೊತೆಯಲ್ಲೇ ಇದ್ದವರು. ಸಪೋರ್ಟ್ ಮಾಡಿದವರನ್ನೇ ಒಂದು ಹೆಜ್ಜೆ ಮುಂದೆ ಹೋಗಿ ಮರೆಯುತ್ತಾರೆ. ಸಹಾಯ ಮಾಡಿದವರನ್ನು ನೆನೆಯುವಂತದ್ದನ್ನು ಎಚ್‌ಡಿಕೆಯಲ್ಲಿ ನಾನು ನೋಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಾವು ಒಬ್ಬ ಮನುಷ್ಯರನ್ನು ಗೌರವಿಸಬೇಕು, ಪ್ರೀತಿಸಬೇಕು. ಆದರೆ, ಅವರು ನಮ್ಮನ್ನ ಪ್ರೀತಿಸಬೇಕು, ಗೌರವಿಸಬೇಕು ಅಂತ ಕಾನೂನೇನಾದರೂ ಇದೆಯಾ?, ಒಬ್ಬರನ್ನು ಗೌರವದಿಂದ ಕಾಣೋದು ನಮ್ಮ ಸಂಸ್ಕೃತಿ ಎಂದರು.
ಕರೆಂಟ್ ಸಪ್ಲೆ ವಿಚಾರದಲ್ಲಿ ತಪ್ಪಾಗಿದೆ. ಆದರೆ, ನಾನು ರೈತರ ಭೂಮಿ ಕಬಳಿಸಿಲ್ಲ ಎಂಬ ಎಚ್‌ಡಿಕೆ ಹೇಳಿಕೆ ಬಗ್ಗೆ ಕೇಳಿದಾಗ, ಯಾರು ಭೂಮಿ ಕಬಳಿಸಿರೋರು. ವೈಟ್ ಪೇಪರ್ ಡಿಕ್ಲೇರ್ ಮಾಡಲಿ ಬಿಡಿ. ಒಬ್ಬ ಮನುಷ್ಯ ಆಸ್ತಿ ಮಾಡೋದಕ್ಕೆ ಇತಿಮಿತಿ ಇರುತ್ತೆ. ರಾಜಕೀಯವಾಗಿ ಬಂದ ಕುಟುಂಬ ಎಷ್ಟು ಆಸ್ತಿ ಮಾಡಿದೆ ಎಂದು ತನಿಖೆ ಆಗಲಿ. ಕೇಂದ್ರ ಸರ್ಕಾರದೊಂದಿಗೆ ಎಚ್‌ಡಿಕೆ ಇದ್ದು, ಅವರೇ ತನಿಖೆ ಮಾಡಿಸಲಿ. ಎಲ್ಲ ಪಕ್ಷದ ಪ್ರಮುಖ ರಾಜಕಾರಣಿಗಳ ಮೇಲೆ ತನಿಖೆ ಆಗಲಿ. ಯಾರ್‍ಯಾರು ಎಷ್ಟು ಆಸ್ತಿ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಅವರಿಂದಲೇ ಜನರಿಗೆ ಗೊತ್ತಾಗಲಿ ಎಂದರು.
Ayodhya ರಾಮಮಂದಿರದಲ್ಲಿ ಸಾಮಾಜಿಕ ಸೇವೆಯೇ ಹರಕೆ: ಪೇಜಾವರ ಶ್ರೀ
ದಿನನಿತ್ಯ ಅಕ್ರಮ ಕರೆಂಟ್ ತೆಗೆದುಕೊಳ್ಳುವುದನ್ನು ನೋಡಿದ್ದೇವೆ. ಅಧಿಕಾರಿಗಳು ದಾಳಿ ಮಾಡುತ್ತಾರೆ, ದಂಡ ವಿಧಿಸುತ್ತಾರೆ. ಎಷ್ಟೇ ಕ್ರಮ ತೆಗೆದುಕೊಂಡರೂ ಅದು ನಿಂತಿಲ್ಲ. ಆದರೆ, ನಾನು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡರೆ ತಪ್ಪು. ಏಕೆಂದರೆ, ನಾನು ಸರ್ಕಾರ ಜನಪ್ರತಿನಿಧಿ, ಒಬ್ಬ ಮಂತ್ರಿ. ಅದೇ ರೀತಿ ಕುಮಾರಸ್ವಾಮಿ ಆಗಿದ್ದರಿಂದ ಹೈಲೆಟ್ ಆಯ್ತು. ಸಾಮಾನ್ಯ ಜನರಾಗಿದ್ದರೆ ದಂಡ ಹಾಕಿ ಸುಮ್ಮನಾಗುತ್ತಿದ್ದರು. ಕುಮಾರಸ್ವಾಮಿ ಕೂಡ ಗೊತ್ತಿಲ್ಲದೆ ಆಗಿದ್ದು ಅಂದಿದ್ದರೆ ಮುಗಿಯುತ್ತಿತ್ತು. ಅದು ಬಿಟ್ಟು ನಾನು ಯಾರ ಆಸ್ತಿಯನ್ನೂ ಹೊಡೆದಿಲ್ಲ ಅಂತಾರೆ. ಅವರೇ ತನಿಖೆ ಮಾಡಿಸಲಿ ಗೊತ್ತಾಗುತ್ತೆ. ಅವರೂ, ನಾನೂ ಸೇರಿದಂತೆ ಒಂದಷ್ಟು ಜನರ ಮೇಲೆ ತನಿಖೆ ಮಾಡಿಸೋಕೆ ಮನವಿ ಮಾಡಲಿ ಎಂದರು.